ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್

ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್

ಸ್ವಾತಂತ್ರ್ಯ ಚಳವಳಿ ಕಾವೇರಿದ ದಿನಗಳವು. ಶಿಕ್ಷಕ, ಸಾಹಿತಿ, ವಕೀಲ, ಕಾರ್ಮಿಕರನ್ನೊಳಗೊಂಡು ಎಲ್ಲರೆದುರಿಗಿದ್ದದ್ದು ಒಂದೇ ಮಂತ್ರ; ಸ್ವಾತಂತ್ರ್ಯಕ್ಕಾಗಿ ಹೋರಾಟ - ಇನ್-ಕ್ವಿಲಾಬ್ ಜಿಂದಾಬಾದ್ ಘೋಷಣೆಗಳ ಮೊರೆತ.

ಸರಿಸುಮಾರು ಇದೇ ಸಮಯದಲ್ಲಿ ಸಾವಿರದಾ ಒಂಬೈನೂರಾ ನಲ್ವತ್ತರಡನೇ ಇಸ್ವಿಯಲ್ಲಿ ಉತ್ತರ ಪ್ರದೇಶದ ಮಧ್ಯಮ ವರ್ಗದ ಕುಟುಂಬದಲ್ಲಿ ಕವಿ ಹರಿವಂಶರಾಯ್ ಬಚ್ಚನ್ ಮತ್ತು ತೇಜಿ ಅವರಿಗೆ ಅಲಹಾಬಾದಿನಲ್ಲಿ ಜನಿಸಿದ ಚೊಚ್ಚಲ ಮಗುವಿಗೆ ಇಟ್ಟ ಹೆಸರು ಇನ್ ಕ್ವಿಲಾಬ್ ರಾಯ್. ನಂತರ ಅದೇ ಮಗು ಅಮಿತಾಬ್ ಬಚ್ಚನ್ ಆಯಿತು!

ಅಮಿತಾಬ್ ಎಂದರೆ ಹಿಂದಿಯಲ್ಲಿ "ಮಿತಿಯಿಲ್ಲದ ಪ್ರತಿಭಾವಂತ" ಎಂದರ್ಥ. ಅಮಿತಾಬ್ ತಮ್ಮ ಹೆಸರಿಗೆ ಅನ್ವರ್ಥವಾದವರು. ಅನೇಕ ಸಿನಿಮಾ ಕಲಾವಿದರು ಸಿನಿಮಾ ಡೈಲಾಗ್‌ಗಳನ್ನು ಹೊರತುಪಡಿಸಿ ಮಾತನಾಡುವುದನ್ನು ಗಮನಿಸಿದರೆ ಶಬ್ದಗಳಿಗಾಗಿ ಅವರು ತಡಬಡಾಯಿಸುವುದನ್ನು ನಾವು ನೋಡಬಹುದು. ಆದರೆ ಅಮಿತಾಬ್ ಅವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುವ ವ್ಯಕ್ತಿ. ಟಿವಿ ಸಂದರ್ಶನವಿರಲಿ, ಕೌನ್ ಬನೇಗಾ ಕರೋಡ್‌ಪತಿ‌ಯಂಥ ಕಾರ್ಯಕ್ರಮವಿರಲಿ ಅಥವಾ ಔಪಚಾರಿಕ ಮಾತುಕತೆಯಿರಲಿ ಅಲ್ಲಿ ಅವರ ಗಡಸು ಧ್ವನಿಯಷ್ಟೇ ಅವರ ವಿಚಾರವೂ ಸ್ಪಷ್ಟವಾಗಿರುತ್ತದೆ.

ಆರಡಿಗೂ ಎತ್ತರದ, ವಿಶಿಷ್ಠ ಹೇರ್ ಸ್ಟೈಲಿನ, ತೀಕ್ಷ್ಣ ಕಣ್ಣುಗಳ, ಗಡಸು ದನಿಯ ನಟ ಬಾಲಿವುಡ್‌ನ ಶೆಹನ್‌ಶಾಹ್ ವೃತ್ತಿ ಜೀವನದಲ್ಲಿ ತಮ್ಮ ಎತ್ತರಕ್ಕಿಂತಲೂ ಎತ್ತರವಾಗಿ ಬೆಳೆದವರು. ಅಮಿತಾಬ್ ಇಂದು ಕೇವಲ ಸೂಪರ್ ಸ್ಟಾರ್ ಅಷ್ಟೇ ಅಲ್ಲ ಒಂದು ಸೂಪರ್ ಬ್ರಾಂಡ್ ಕೂಡ.

ಇಂದು ಬಿಗ್ ಬಿ ಗೆ ಜ್ವರ ಬಂದರೂ ಸುದ್ದಿ, ಹೊಟ್ಟೆ ನೋವಾದರೂ ಸುದ್ದಿ, ಇನ್‌ಕಂ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ನೋಟಿಸ್ ಕಳಿಸಿದರೂ ಸುದ್ದಿಯೇ... ಒಟ್ಟಿನಲ್ಲಿ ಅವರು ಬಾಯಿ ಬಿಟ್ಟಿದ್ದು, ಬಿಡದೇ ಇದ್ದಿದ್ದಕ್ಕೆಲ್ಲ ನ್ಯೂಸ್ ವ್ಯಾಲ್ಯೂ!

ಹ್ಯಾಂಗ್ರಿ ಯಂಗ್ ಮ್ಯಾನ್?:

ಜಂಜೀರ್, ಲಾವಾರಿಸ್, ಕೂಲಿ, ಶೋಲೆ ಚಿತ್ರಗಳಲ್ಲಿ ಸಿಡುಕ ಯುವಕನ ಪಾತ್ರಧಾರಿ "ಯಾಂಗ್ರಿ ಯಂಗ್ ಮ್ಯಾನ್" ಇವತ್ತು "ಹ್ಯಾಂಗ್ರಿ ಯಂಗ್ ಮ್ಯಾನ್" ಎಂದು ನೀವು ಕೇಳುವಂತಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡಿರುವವರಂತೆ ಇಂದು ಮುಂಬೈ, ನಾಳೆ ಬೆಂಗಳೂರು ಇನ್ನೊಂದು ದಿನ ದುಬೈ ಹೀಗೆ ಯಂಗ್ ಮ್ಯಾನ್‌ಗಳೂ ನಾಚುವಂತೆ ದುಡಿಮೆಯ ಹಿಂದೆ ತಿರುಗುತ್ತಾ ಇರುತ್ತಾರೆ. ಹೋರ್ಡಿಂಗುಗಳಲ್ಲಿ ಅಮಿತಾಬ್, ಪೆಪ್ಸಿ ಬಾಟಲಿನಲ್ಲಿ ಅಮಿತಾಬ್, ಕನ್ನಡ ಚಿತ್ರದಲ್ಲೂ ಅಮಿತಾಬ್...

ಯಶಸ್ಸಿನ ಉತ್ತುಂಗಕ್ಕೇರಿದ ಅಮಿತಾಬ್ ಜೀವನದಲ್ಲಿ ಸದಾ ಸವಿಯನ್ನೇ ಉಂಡರೇ ಎಂದು ಕೇಳಿದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಒಂದು ಕಾಲದಲ್ಲಿ ಅಮಿತಾಬ್ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡವರು. ನೌಕರಿಗಾಗಿ ಅಲಹಾಬಾದಿನ ಬೀದಿ ಬೀದಿಗಳಲ್ಲಿ ಅಲೆದವರು, ಗಡಸು ಧ್ವನಿಯಿಂದಾಗಿ ಆಕಾಶವಾಣಿಯ ಧ್ವನಿ ಪರೀಕ್ಷೆಯಲ್ಲಿ ಫೇಲಾದವರು, ಸಿನಿಮಾ ಕ್ಷೇತ್ರಕ್ಕೆ ಹೋದರೆ ಇವರ ಎತ್ತರಕ್ಕೆ ಯಾವ ಅವಕಾಶವೂ ಇಲ್ಲ ಎಂದು ಚಾನ್ಸ್ ತಪ್ಪಿಸಿಕೊಂಡವರು. ನೀವು ನಂಬುತ್ತೀರೋ ಬಿಡುತ್ತೀರೋ, ಅಮಿತಾಬ್ ಬಚ್ಚನ್ ಜೊತೆಗಿನ ಮೊದಲ ಚಿತ್ರದಲ್ಲಿ ನಟಿಸಲು ನಟಿ ರೇಖಾ ನಿರಾಕರಿಸಿದ್ದಳಂತೆ.

ಇಂದು ಮುಂಬೈನ ಜುಹುವಿನಲ್ಲಿರುವ ಅವರ ಮನೆ "ಅಮಿತಾಬ್ ಮನೆ" ಎಂದೇ ಲ್ಯಾಂಡ್‌ಮಾರ್ಕ್ ಆಗಿ ಗುರುತಿಸಲ್ಪಟ್ಟಿದೆ. 1999ರಲ್ಲಿ ಅವರು ಈ ಮನೆಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿತ್ತು. ಅಮಿತಾಬ್ ಬಚ್ಚನ್ ಕಾರ್ಪರೇಶನ್ ಲಿಮಿಟೆಡ್ (ಎಬಿಸಿಎಲ್) ಹುಟ್ಟುಹಾಕಿ ಕೈಸುಟ್ಟುಕೊಂಡ ಬಚ್ಚನ್, ಈ ಸಂಸ್ಥೆಯ ನಿರ್ಮಾಣಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸದೇ ಇದ್ದುದರಿಂದ ಕೆನರಾ ಬ್ಯಾಂಕ್ ಕೋರ್ಟಿನ ಮೂಲಕ ಈ ಮನೆಯನ್ನು ಅಟ್ಯಾಚ್ ಮಾಡಿಸಿತ್ತು.

ಅಮಿತಾಬ್‌ಗೆ ವಯಸ್ಸಾಯಿತು ಇನ್ನು ಅವರ ಕತೆ ಮುಗಿದೇ ಹೋಯಿತು ಎಂದವರು ಅನೇಕರು. ಆದರೆ ಅದೇ ಅಮಿತಾಬ್ ಮತ್ತೆ ಸಾಲದ ಶೂಲದಿಂದ ಹೊರಬಂದು "ಕೌನ್ ಬನೇಗಾ ಕರೋಡ್‌ಪತಿ" ಕಾರ್ಯಕ್ರಮದ ಮೂಲಕ ಫೀನಿಕ್ಸ್‌ನಂತೆ ಕೊಡವಿಕೊಂಡು ಎದ್ದರು. "ಅಮಿತಾಬ್ ಬನ್ ಗಯಾ ಕರೋಡ್ ಪತಿ" ಆದರು.

ರಾಜೀವ್ ಗೆಳೆತನ:

ಇಂದಿರಾ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದ ಬಿಗ್ ಬಿ, ರಾಜೀವ್ ಗಾಂಧಿ ಅವರ ಆಪ್ತ ಸ್ನೇಹಿತರ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಮಿತಾಬ್ ಬಚ್ಚನ್ ಅವರು ಮೊದಲ ಸಿನಿಮಾದಲ್ಲಿ ಅಭಿನಯಿಸಲು ಇಂದಿರಾ ಗಾಂಧಿ ಅವರು ಕೊಟ್ಟ ಶಿಫಾರಸು ಪತ್ರವೇ ಕಾರಣವಂತೆ. ವ್ಯಕ್ತಿಯೊಬ್ಬನಿಗೆ ಕೇವಲ ಪ್ರತಿಭೆಯಿದ್ದರಷ್ಟೇ ಸಾಲದು ಅದೃಷ್ಟ ಮತ್ತು ಶಿಫಾರಸಿನ ಬೆಂಬಲವೂ ಬೇಕು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ಗಡಸು ಧ್ವನಿಯಿಂದಾಗಿಯೇ ಸಿನಿಮಾದಲ್ಲೇ ಅನೇಕ ದಿನಗಳ ಕಾಲ ಅವಕಾಶ ವಂಚಿತನಾಗಿದ್ ವ್ಯಕ್ತಿಯೊಬ್ಬ ಮುಂದೆ ಇಡೀ ಜಗತ್ತೇ ಮೆಚ್ಚುವ ಮಹಾನ್ ತಾರೆಯಾಗಿದ್ದು ನಿಜಕ್ಕೂ ಮೆಚ್ಚತಕ್ಕದ್ದೇ. ಇಂಗ್ಲೆಂಡಿನ ಮ್ಯಾಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಯಲಯದಲ್ಲಿನ ಅಮಿತಾಬ್ ಮೇಣದ ಪ್ರತಿಮೆ ಹಾಗೂ ಇವರನ್ನು ಸಹಸ್ರಮಾನದ ತಾರೆ ಎಂದು ಬಿಬಿಸಿ ಆಯ್ಕೆ ಮಾಡಿದ್ದು, ಕೊಲ್ಕೊತ್ತಾದಲ್ಲಿ ಅಭಿಮಾನಿಗಳಿಂದ ದೇವಾಲಯ... ಚಿತ್ರರಂಗದ ಈ ದೊಡ್ಡಣ್ಣನ ಸಾಧನೆಗೆ ಸಾಕ್ಷಿ.

ಇಂದು ಬಚ್ಚನ್ ಅವರಿಗೆ ವಯಸ್ಸು ಅರವತ್ನಾಲ್ಕಾದರೂ ಭಾರತದ ಜನಪ್ರಿಯ ಬ್ರಾಂಡ್‌ಗಳ ಪೈಕಿ ಮೊದಲ ಸ್ಥಾನ. ಅಮಿತಾಬ್ ಭಾಗವಹಿಸುವ ಹತ್ತು ಸೆಕೆಂಡುಗಳ ಜಾಹೀರಾತಿಗೆ ಇಂದು ಎರಡು ಲಕ್ಷ ರೂಪಾಯಿ ಬೆಲೆ. ದಿನಕ್ಕೆ ಎಂಟು ಗಂಟೆ ದುಡಿಯುವ ಅಮಿತಾಬ್ ಅದರ ಪೈಕಿ ಕೇವಲ ಹತ್ತೇ ನಿಮಿಷವನ್ನು ಜಾಹೀರಾತಿಗೆ ಅಂತ ಇಟ್ಟರೂ ಅವರ ದುಡಿಮೆ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ.

ನಿಜಕ್ಕೂ ಈತ "ಕೋಟಿಗೊಬ್ಬ!"

ಚಿತ್ರರಂಗಕ್ಕೂ ಗಾಸಿಪ್‌ಗೂ ಎಡೆಬಿಡದ ನಂಟು. ಅಮಿತಾಬ್ ಕೂಡ ಇದರಿಂದ ಹೊರತಲ್ಲ. ಅನೇಕ ವರ್ಷಗಳ ಹಿಂದೆ ಒಂದು ಕಾಲದ ಬಾಲಿವುಡ್‌ನ ಬೆಡಗಿನ ತಾರೆ ರೇಖಾ ಹಾಗೂ ಇನ್ನೊಬ್ಬ ಮಾದಕ ನಟಿ ಪರ್ವಿನ್ ಬಾಬಿ ಜೊತೆ ಅಮಿತಾಬ್ ಹೆಸರು ತಳುಕು ಹಾಕಿಕೊಂಡಿತ್ತು. ಅನೇಕ ಸಂದರ್ಭಗಳಲ್ಲಿ ಜಾಣ ಅಮಿತಾಬ್ ಇದನ್ನು ಒಪ್ಪಿಕೊಳ್ಳಲೂ ಇಲ್ಲಿ ನಿರಾಕರಿಸಲೂ ಇಲ್ಲ.

ಒಬ್ಬ ವ್ಯಕ್ತಿಯಾಗಿ ನೀವು ಜೀವನದಲ್ಲಿ ಎಷ್ಟು ಯಶಸ್ವಿಯಾಗಿದ್ದೀರಿ ಎಂದು ಪತ್ರಕರ್ತರೊಬ್ಬರು ಈಚೆಗೆ ಟಿವಿ ಸಂದರ್ಶನದಲ್ಲಿ ಕೇಳಿದಾಗ,

मन का हो ता अच्छा और मन का ना हो तो और भी अच्छा, क्योंकि ओ भगवान कि मर्जि है

(ಮನಸ್ಸಿನಲ್ಲಿರುವುದು ಆದರೆ ಒಳ್ಳೆಯದು, ಮನಸ್ಸಿನಲ್ಲಿರುವುದು ಆಗದೇ ಇದ್ದರೆ ಅದು ಇನ್ನೂ ಒಳ್ಳೆಯದು, ಏಕೆಂದರೆ ಅದು ದೇವರ ಇಚ್ಛೆ) ಎಂದು ಅಮಿತಾಬ್ ಉತ್ತರಿಸಿದ್ದರು.

ಅದೇ ಮಂತ್ರವೇ ಅವರನ್ನು ಯಶಸ್ಸಿನ ತುಟ್ಟ ತುದಿಗೆ ತಂದು ನಿಲ್ಲಿಸಿರಬಹುದು.

ಭಾರತೀಯ ಚಿತ್ರರಂಗದ ಸಹಸ್ರಮಾನದ ತಾರೆ ಇನ್ನೂ ಬೆಳಗಲಿ, ಪ್ರಕಾಶ ನಿರಂತರವಾಗಲಿ.

ಅಮಿತಾಬ್ ಜಿ- कभि अल्विदा ना कहना!

Rating
No votes yet

Comments