ನಮ್ಮ ಅಣ್ಣನ ಮಗನ ಕ್ಲಾಸ್ ಅಲ್ಲಿ ಹೀಗೊಂದು ಪ್ರಸಂಗ

ನಮ್ಮ ಅಣ್ಣನ ಮಗನ ಕ್ಲಾಸ್ ಅಲ್ಲಿ ಹೀಗೊಂದು ಪ್ರಸಂಗ

ಶಿಕ್ಷಕಿ: ಏನ್ ತಲೆ ಹರಟೆ ಮಾಡ್ತಾ ಇದಿಯಾ ? ಹಿಂದಿ ರಾಷ್ಟ್ರ ಭಾಷೆ ಅನ್ನೋದು ಸುಳ್ಳು ಅಂತಿಯಲ್ಲ..                                                      

ಅಣ್ಣನ ಮಗ: ಇಲ್ಲ ಮಿಸ್, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ನಮ್ಮ ದೇಶಕ್ಕೆ ರಾಷ್ಟ್ರ ಭಾಷೆ ಇಲ್ಲ. ಕನ್ನಡಾನೂ ಸೇರಿ ಎಲ್ಲ ರಾಜ್ಯದ ಭಾಷೆಗಳು ರಾಷ್ಟ್ರ ಭಾಷೆಗಳೇ, ಹಾಗಂತ ನಮ್ಮ ಸಂವಿಧಾನದಲ್ಲೇ ಬರ್ದಿದೆ.

ಶಿಕ್ಷಕಿ: ಏನ್ ಹುಚ್ಚು ಗಿಚ್ಹು ಹಿಡದಿದ್ಯಾ? ಚೋಟುದ್ದ ಇದಿಯಾ,, ದೊಡ್ಡದಾಗಿ ಸಂವಿಧಾನ ಓದಿರೋ ತರಹ ಮಾತಾಡ್ತಿಯಾ? ಮನೆಗೆ ಹೋಗಿ ನಿಮ್ಮ ತಂದೆ ತಾಯಿನ ಕೇಳು, ಅವರು ಹೇಳ್ತಾರೆ, ಹಿಂದಿ ರಾಷ್ಟ್ರ ಭಾಷೆ ಹೌದೊ, ಅಲ್ವೊ ಅಂತ.

ಅಣ್ಣನ ಮಗ: ಸಂವಿಧಾನ ನಾನು ಓದಿಲ್ಲ ಮಿಸ್, ಇದರ ಬಗ್ಗೆ ನಮ್ಮ ತಂದೆ ಓದಿದ್ದಾರೆ, ಅವರೇ ಹೇಳಿರೋದು.

ಶಿಕ್ಷಕಿ: ಏನೇನೋ ಮಾತಾಡಬೇಡ, ಹಿಂದಿ ರಾಷ್ಟ್ರ ಭಾಷೆ ಅಲ್ಲದಿದ್ದರೆ, ನಾವೆಲ್ಲ ಅದನ್ನ ಶಾಲೆಲಿ ಯಾಕೆ ಕಲಿತಿದ್ವಿ? ನಮ್ಮ ಸರ್ಕಾರ ಶಾಲೆಲಿ ಯಾಕೆ ಹಾಕ್ತಿತ್ತು.

ಅಣ್ಣನ ಮಗ: ಅದೆಲ್ಲ ನಂಗೆ ಗೊತ್ತಿಲ್ಲ ಮಿಸ್, ಆದ್ರೆ ನಮ್ಮ ತಂದೆ ಹೇಳಿದ್ದಾರೆ, ಸಂವಿಧಾನದ ಪ್ರಕಾರ ನಮಗೆ ಯಾವುದೇ ರಾಷ್ಟ್ರ ಭಾಷೆ ಇಲ್ಲ. ಹಿಂದಿ ಕೂಡ ಕನ್ನಡದ ತರಹ ಒಂದು ಪ್ರದೇಶದಲ್ಲಿ ಮಾತಾಡೋ ಭಾಷೆ.

ಶಿಕ್ಷಕಿ: ಸುಮ್ಮನೆ ತಲೆ ಹರಟೆ ಮಾಡಬೇಡ. ಕುತ್ಕೊ ಸುಮ್ಮನೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಅನ್ನೋ ಬಗ್ಗೆ ಫ್ರೂಫ್ ತಗೊಂಡು ಬಾ ನಾಳೆ

ಅದೇ ದಿನ ಸಂಜೆ ನನ್ನ ಅಣ್ಣನ ಮಗ, ಅಣ್ಣನ ಹತ್ರ ಈ ವಿಷ್ಯ ಹೇಳಿದಾಗ, ನಮ್ಮಣ್ಣ, ಭಾರತದ ಭಾಷಾ ನೀತಿ ಬಗ್ಗೆ, ಹಿಂದಿ ರಾಷ್ಟ್ರ ಭಾಷೆ ಅಲ್ಲದೇ ಇರೋ ಬಗ್ಗೆ, ಹಿಂದಿ ಹೇರಿಕೆ ಬಗ್ಗೆ ತಮಿಳರಿಂದ ನಡೆದ ಹೋರಾಟದ ಇತಿಹಾಸದ ಬಗ್ಗೆ, ಭಾಷಾವಾರು ಪ್ರಾಂತ್ಯಗಳಾದ ನಮ್ಮ ದೇಶದ ಒಗ್ಗಟ್ಟಿಗೆ ಹಿಂದಿ ಹೇರಿಕೆ ಹೇಗೆ ಮಾರಕ ಅನ್ನೊದನ್ನ ಅವನಿಗೆ ವಿವರಿಸಿದ್ದಾನೆ. ಒಂದಿಷ್ಟು ಮಾಹಿತಿ ಇಂಟರನೆಟ್ ಇಂದ ತೆಗೆದು ಪ್ರಿಂಟ್ ತಗೆದು ಅವನಿಗೆ ಕೊಟ್ಟಿದ್ದಾನೆ.
ಮಾರನೇ ದಿನ ಶಾಲೆಶುರು ಆದಾಗ, ಆ ಶಿಕ್ಷಕಿಯ ಕ್ಲಾಸ್ ಇದ್ದಾಗ,

ಶಿಕ್ಷಕಿ: ಏನಪ್ಪ ಪಂಡೀತ,, ತಂದ್ಯಾ ಫ್ರೂಫ್ ?

ಅಣ್ಣನ ಮಗ: ತಂದಿದಿನಿ ಮಿಸ್.

ಅವನು ಅದನ್ನ ಅವರಿಗೆ ಕೊಟ್ಟಿದ್ದು ಅಲ್ಲದೇ, ಕ್ಲಾಸ್ ಅನ್ನು ಉದ್ದೇಶಿಸಿ ೧೦ ನಿಮಿಷ ಹಿಂದಿ ಹೇರಿಕೆಯ ಇತಿಹಾಸದ ಬಗ್ಗೆ ಮಾತಾಡಿದ್ದಾನೆ. ಶಿಕ್ಷಕಿ ಅಷ್ಟೆಲ್ಲ ವಿರೋಧ ಮಾಡಿದವರು, ಕಡೆಗೆ ಇವನ ನೇರ ನುಡಿಗೆ, ಇವನ್ನು ಕೊಟ್ಟ ಆಧಾರ ನೋಡಿ ಪೆಚ್ಚಾದ್ರಂತೆ, ಆದ್ರೆ ಹುಡುಗನ ಸತ್ಯ ಹುಡುಕೋ ಸಾಮರ್ಥ್ಯ, ನೇರ ನುಡಿ ಅವರಿಗೆ ಇಷ್ಟ ಆಗಿದೆ. ಆಮೇಲೆ ಸ್ಟಾಫ್ ರೂಮಲ್ಲಿ ಈ ಹುಡುಗನ ಬಗ್ಗೆ, ಅವನ ವಾದದ ಬಗ್ಗೆ ಮಾತಾಡಿ, ಇವನನ್ನು ಸ್ಟಾಫ್ ರೂಮಿಗೆ ಕರೆಸಿ, ಎಲ್ಲ ಶಿಕ್ಷಕ/ಕಿಯರ ಮುಂದೆ ಪರಿಚಯ ಮಾಡಿಸಿದ್ರಂತೆ. ಪುಣ್ಯಕ್ಕೆ ಇದೆಲ್ಲ ನಡೆದದ್ದು ಎನ್.ಆರ್ ಕಾಲೋನಿಯಲ್ಲರುವ ಕನ್ನಡ ಮಾಧ್ಯಮ ಶಾಲೆಯಲ್ಲಿ. ಅಲ್ಲಿರುವ ಅಚ್ಚ ಕನ್ನಡದ ಶಿಕ್ಷಕರು ಹುಡುಗನ ವಾದಕ್ಕೆ ಸೈ ಅಂದ್ರು, ಬೇರೆಲ್ಲಾದ್ರೂ ಆಗಿದ್ರೆ, ಶಾಲೆಯಿಂದಾನೇ ಕಿತ್ತಾಕಿರೋರು ಅನ್ಸುತ್ತೆ.

ಇದು ಮೊನ್ನೆ ಶುಕ್ರವಾರ, ಎನ್.ಆರ್ ಕಾಲೋನಿಯಲ್ಲಿರುವ ಕನ್ನಡ ಮಾಧ್ಯಮ ಶಾಲೆಯಲ್ಲಿ ನನ್ನ ಅಣ್ಣನ ಮಗನ ಕ್ಲಾಸ್ ಅಲ್ಲಿ ನಡೆದದ್ದು. ಇವತ್ತು ಅವರನ್ನ ಭೇಟಿ ಆದಾಗ ಇದನ್ನ ಹೇಳಿದ್ರು, ಕೇಳಿ, ಅವರ ಮಗನ ಬಗ್ಗೆ ಸಕತ್ ಅಭಿಮಾನ ಮೂಡಿತು. ಅಂಜದೇ, ಅಳುಕದೇ ಸತ್ಯ ಹೇಳೋ ಧೈರ್ಯ ತೋರಿದ್ದ ಅವನಿಗೆ ನನ್ನ ಅಭಿನಂದನೆ ತಿಳಿಸಿ ಮನೆಗೆ ಬಂದೆ.

 

Rating
No votes yet

Comments