ಕನ್ನಡ: ಬರೇ ಪುಳಿಚಾರ್ ಭಾಷೆ?

ಕನ್ನಡ: ಬರೇ ಪುಳಿಚಾರ್ ಭಾಷೆ?

ಹಾರುವವುಗಳಲ್ಲಿ ವಿಮಾನವನ್ನೂ, ಎರಡು ಕಾಲಿನವುಗಳಲ್ಲಿ ಮನುಷ್ಯರನ್ನೂ, ನಾಲ್ಕು ಕಾಲಿನವುಗಳಲ್ಲಿ ಕುರ್ಚಿ, ಮೇಜುಗಳನ್ನು ಮಾತ್ರ ತಿನ್ನದೇ ಬಿಟ್ಟಿರುವ ನನ್ನಂಥ ಕನ್ನಡಿಗರಿಗೆ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ. ಹಾಗಾಗಿ ಆಹಾರದ ವಿಷಯದಲ್ಲಿ ನಮ್ಮ ಕನ್ನಡಾಭಿಮಾನ ಸ್ವಲ್ಪ ಕಡಿಮೆಯೇ. ಇಲ್ಲಿ ನಾವು ಕನ್ನಡಾಭಿಮಾನಿಗಳಾಗಿಬಿಟ್ಟರೆ ಕೇವಲ ಮಾಂಸದ ‘ಸಾರು’, ಮಾಂಸದ ‘ಪಲ್ಯ’ ಇಲ್ಲವೇ ಮೀನಿನ ‘ಸಾರು’, ‘ಪಲ್ಯ’ಗಳನ್ನೇ ತಿನ್ನಬೇಕಾಗುತ್ತದೆ.

ಭಿ(ಭೀ?).ಪ. ಕಾಳೆಯವರು ಹಿಂದೊಮ್ಮೆ ತಮ್ಮ ವಿಲನ್ ಒಬ್ಬನಿಗೆ ‘ಮೊಟ್ಟೆ ದೋಸೆ’ಯನ್ನು ತಿನ್ನಿಸಿದ್ದರೂ ಮುಂದಿನ ದಿನಗಳಲ್ಲಿ ಎಲ್ಲರೂ ಆಮ್ಲೆಟ್ ತಿನ್ನಲು ಆರಂಭಿಸಿದ್ದರಿಂದ ನಾನಂತೂ ಕನ್ನಡದಲ್ಲಿಯೂ ಆಮ್ಲೆಟ್ ತಿನ್ನುತ್ತೇನೆ. ಆಗೀಗ ನಾಟಿ ಕೋಳಿ ತಿಂದರೂ ಸಾಮಾನ್ಯವಾಗಿ ಚಿಕನ್ ತಿನ್ನುವುದೇ ಹೆಚ್ಚು. ಆಗೀಗ ಮಂಡ್ಯ ಕಡೆಯ ಗೆಳೆಯರು ಬಾಡೂಡ, ಬಾಡಿನ ಎಸರು ದಯಪಾಲಿಸಿದರೂ ಸಾಮಾನ್ಯವಾಗಿ ನಮ್ಮದು ಇಂಗ್ಲಿಷಿನ ನಾನ್ ವೆಜ್ ಊಟ. ಹಾಸನದ ಗೆಳೆಯರು ‘ಪಿಗ್ ಮಟನ್’ ಊಟಕ್ಕೆ ಕರೆಯುವುದೂ ಇದೆ. ‘ತಂದೂರಿ ಕೋಳಿ’ಯನ್ನಂತೂ ತಿಂದದ್ದೇ ಇಲ್ಲ. ‘ತಂದೂರಿ ಚಿಕನ್’ ತಿಂದದ್ದಕ್ಕಂತೂ ಲೆಕ್ಕವೇ ಇಲ್ಲ. ಟಿಕ್ಕಾ, ಕಬಾಬ್ ಗಳನ್ನಂತೂ ಕೋಳಿ, ಆಡು, ಕುರಿಗಳ ಮಾಂಸದಿಂದ ತಯಾರಿಸುವುದೇ ಇಲ್ಲ. ಇವುಗಳ ತಯಾರಿಗೆ ಚಿಕನ್, ಮಟನ್ ಗಳೇ ಬೇಕು.ಕನ್ನಡವೇ ಉಸಿರಾಗಿರುವವರೂ ಸಿಗಡಿಯ ಬದಲಿಗೆ ಪ್ರಾನ್ ಅಥವಾ ಶ್ರಿಂಪ್ ಗಳನ್ನೇ ತಿನ್ನುತ್ತಾರೆ. ಚಿಕನ್, ಮಟನ್ ಆಸ್ವಾದಿಸುತ್ತಾರೆ. ಹುರಿಯುವ ಬದಲಿಗೆ ಫ್ರೈ ಮಾಡಿದರೂ ಯಾರೂ ಕೇಳುವುದಿಲ್ಲ.

ಹೀಗಿರುವಾಗ ಕಂಪ್ಯೂಟರನ್ನು ಮಾತ್ರ ಗಣಕಯಂತ್ರವಾಗಿಸಿ, ‘ಕಡತ’ ‘ತೆರೆ’ದು ‘ಸಂಪಾದಿಸಿ’ ‘ಉಳಿಸಿ’ ಕನ್ನಡಿಗರಿಗೆ ‘ಸಹಾಯ’ ಮಾಡಿ ‘ನಿರ್ಗಮಿಸು’ವುದಕ್ಕೆ ಏನಾದರೂ ಅರ್ಥವಿದೆಯೇ?

ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ನಾನು ಬರೆದಿದ್ದೇನೆ. ಕನ್ನಡದಲ್ಲಿ ಬರೆಯುವಾಗ ನಾವು ರೂಢಿಸಿಕೊಂಡಿರುವ ಅನಗತ್ಯ ಮಡಿವಂತಿಕೆಯೊಂದು ಅಭಿವ್ಯಕ್ತಿಗೆ ಹೇಗೆ ಅಡ್ಡಿಯಾಗುತ್ತದೆ ಎಂಬುದಕ್ಕೆ ‘ಮಾಂಸದ ಸಾರು’, ‘ಮೀನಿನ ಪಲ್ಯ’ಗಳು ಒಳ್ಳೆಯ ಉದಾಹರಣೆಗಳು. ಪಲ್ಯ, ಸಾರುಗಳಂಥ ಪದಗಳು ಮಾಂಸ ಅಥವಾ ಮೀನಿನಿಂದ ತಯಾರಿಸುವ ಖಾದ್ಯಗಳನ್ನು ವಿವರಿಸಲು ಸಂಪೂರ್ಣವಾಗಿ ಸೋಲುತ್ತವೆ. ಆಶ್ಚರ್ಯ ಹುಟ್ಟಿಸುವಂತೆ ಉರ್ದು ಮತ್ತು ಇಂಗ್ಲಿಷ್ ಪದಗಳ ಸಂಕರವಾದ ‘ಚಿಕನ್ ಕಬಾಬ್’ ಕನ್ನಡಿಗರಿಗೆ ಅರ್ಥವಾಗುತ್ತದೆ.

ತಂತ್ರಜ್ಞಾನಕ್ಕೆ ಸಂಬಂಧಿಸಿದ ಕನ್ನಡದ ಪದಕೋಶವೂ ಹೀಗೆ ಸಹಜವಾಗಿ ಬೆಳೆಯಬೇಕಿತ್ತು. ಆದರೆ ಶಿಷ್ಟ ಸಂದರ್ಭಗಳಲ್ಲಿ ನಾವು ತೋರುವ ಮಡಿವಂತಿಕೆಯಿಂದಾಗಿ ತಂತ್ರಜ್ಞಾನದ ಕುರಿತು ಚೆನ್ನಾಗಿ ತಿಳಿದುಕೊಂಡಿರುವವರೂ ಕನ್ನಡದಲ್ಲಿ ಬರೆಯಲು ಹೆದರುವಂಥ ಸ್ಥಿತಿ ಇದೆ. ಕಬಾಬ್ ನ ಸಂದರ್ಭದಲ್ಲಿ ಕೋಳಿ ಚಿಕನ್ ಆದ ಹಾಗೆ ಕಂಪ್ಯೂಟರ್ ನ ಸಂದರ್ಭದಲ್ಲಿ ಫೈಲ್ ಕಡತವಾಗದೆ ಉಳಿದರೆ ತಪ್ಪಿದೆಯೇ. ಪಾರಿಭಾಷಿಕಗಳ ಸಿಜೇರಿಯನ್ ಹೆರಿಗೆಯ ಬದಲಿಗೆ ಸಹಜ ಪ್ರಸವಕ್ಕೆ ಅನುವು ಮಾಡಿಕೊಡುವುದು ಉತ್ತಮವಲ್ಲವೇ?

ಕಬಾಬ್, ಟಿಕ್ಕಾಗಳ ಮಸಾಲೆಗೇ ಕನ್ನಡ ಜಗ್ಗಲಿಲ್ಲ. ಹಾಗಿರುವಾಗ ಕಂಪ್ಯೂಟರಿನ ಫೈಲುಗಳ ಭಾರಕ್ಕೆ ಕುಸಿಯಲು ಕನ್ನಡವೇನು ರಾಮಾಯಣಗಳ ಭಾರಕ್ಕೆ ಕುಸಿದ ಫಣಿರಾಯನೇ? ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳಾದ ನಮಗೆ ತಂತ್ರಜ್ಞಾನ ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಲ್ಲವೇ ಅಲ್ಲ.
-ಇಸ್ಮಾಯಿಲ್
namismail @ rediffmail.com

Rating
No votes yet

Comments