ಭಾನುವಾರದ ಹಬ್ಬ

ಭಾನುವಾರದ ಹಬ್ಬ

ಸರಿಯಾಗಿ ನಿದ್ರೆಯಿಲ್ಲದೆ, ಕಣ್ಣು ಸ್ಟ್ರೇಯ್ನ್ ಮಾಡಿಕೊಂಡು - ಇನ್ನು ಗ್ನು/ಲಿನಕ್ಸ್ ಹಬ್ಬ ಮಾಡೋದೇನೆ ಎಂದುಕೊಂಡು ಕುಳಿತಿದ್ದೆ. ಮುಂಜಾನೆ ನಾಲಕ್ಕಾಗಿತ್ತು. ಇನ್ನು ನಿದ್ರೆ ಮಾಡಲಾಗದೆಂದು LHC shutdown ಆದದ್ದರ ಬಗ್ಗೆ ಓದುತ್ತ ಕುಳಿತಿದ್ದೆ. ಒರಿಸ್ಸಾ ಪ್ರವಾಹದ ಬಗ್ಗೆ ಓದುತ್ತ ಕುಳಿತಿದ್ದೆ. ಸರಿಯಾಗಿ ಐದಕ್ಕೆ ಫೋನು ಬಂತು:
"ಎದ್ದಿದೀಯಾ ಹರಿ?"
"ಹೂಂ ಕಣೋ"
"ಸರಿ, ಈಗ ಹೊರಟೆ. ಕಾರು ತಗೊಂಡು ಇನರ್ಧ ಗಂಟೆಯಲ್ಲಿ ಅಲ್ಲಿರ್ತೀನಿ"

ಸರಿ, ರೆಡಿಯಾಗಿ ಬ್ಯಾನರ್ ಕೆಳಗಿಳಿಸಿ ಲ್ಯಾಪ್ಟಾಪ್ ಪ್ಯಾಕ್ ಮಾಡಿ ಹೊರಟೆ. ಕಾರಿನ ಸ್ಪೀಡು, ಡೆಕ್ ನ ವೂಫರ್ ಸದ್ದು ನಿದ್ರೆಯಿಲ್ಲದ ಮನಸ್ಸಿಗೆ ಸವಾಲೆಸೆದಿತ್ತು. ಈ ನಡುವೆ ಮುಂಜಾನೆಯ ಮಂಜಿನಲ್ಲಿ ರೋಡು ಮಿಸ್ ಆಗಿ ಕಳಕೊಂಡ ಕೆಲವು ಘಳಿಗೆಗಳು. ಅಂಕುಡೊಂಕಿನ ಮೈಸೂರು ರಸ್ತೆಯಲ್ಲಿ ರಾಮನಗರದ ಲೋಕರುಚಿ ತಲುಪುವಷ್ಟರಲ್ಲಿ ಎಂಟಾಗಿತ್ತು. ಸುತ್ತ ಹುಸಿ ಜನಪದ ಓಡಾಡಿಕೊಂಡಿದ್ದ ಹೋಟೆಲಿನಲ್ಲಿ ಕಡುಬು, ರಾಗಿ ರೊಟ್ಟಿ (ಅಷ್ಟೊತ್ತಿಗೇ) ನಮ್ಮ ತಿಂಡಿ. ಅತ್ತಿತ್ತ ಕಂಡ ಮೈಸೂರು-ಬೆಂಗಳೂರು ಹುಡುಗಿಯರ ಮುಖಗಳು ನಮ್ಮ ದಂಡಯಾತ್ರೆಯ ಸಿಪಾಯಿಗಳ ಕಣ್ಣುಗಳನ್ನು busy ಇಟ್ಟಿತ್ತು.

ಫ್ಯೂಶನ್, ಭಾವಗೀತೆ, ಹಿಂದಿ ಸಿನೆಮಾ ಹಾಡು, ಮೆಟಲ್, ರಾಕ್ - ಹೀಗೆ ಎಲ್ಲ ಹಾಡುಗಳ ಕಲಸುಮೇಲೋಗರದೊಡನೆ ಮೈಸೂರು ವಿ.ವಿ. ತಲುಪಿದ್ದು ಸರಿಯಾಗಿ ೧೦ಕ್ಕೆ. ಆಡಿಟೋರಿಯಮ್ ಆಗಲೇ ಭರ್ತಿಯಾಗಿತ್ತು!
ಹಲವರು ನಿಂತುಕೊಂಡು ಕೇಳುತ್ತಿದ್ದದ್ದು ಕಾಣಿಸಿತು.

ಗ್ನು/ಲಿನಕ್ಸ್ ಟಿ-ಶರ್ಟ್ ಹಾಕಿಕೊಂಡು ಒಂದೆರಡು ಕೆಲಸಗಳನ್ನು ಕೈಗೆತ್ತಿಕೊಂಡು ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ (Physics) ಡಿಪಾರ್ಟ್ಮೆಂಟ್ ಲ್ಯಾಬಿಗೆ ಹೋದಾಗ ಅಲ್ಲಿರುವ ಹಲವು ಸಿಸ್ಟಮುಗಳಲ್ಲಿ ಗ್ನು/ಲಿನಕ್ಸ್ ಇದ್ದದ್ದು, ಜೊತೆಗೆ ಕನ್ನಡಕ್ಕೆ ಬೇಕಾದ ಸಕಲ ತಂತ್ರಾಂಶಗಳೂ ಅದರಲ್ಲಿದ್ದದ್ದು ನೋಡಿ ಖುಷಿಯಾಯ್ತು.

ಅತ್ತ ಗ್ನು/ಲಿನಕ್ಸ್ ಪರಿಚಯ ಜೋರಾಗಿ ನಡೆದಿತ್ತು. ದಣಿವಾಗಿದ್ದ ಕಾರಣ ಸ್ಟೇಜು ಬಿಟ್ಟು ಸ್ವಲ್ಪ ದೂರ ಉಳಿದೆ. ಒಂದೆರಡು ಬಾರಿ ಮಾತ್ರ ಇಂಗ್ಲಿಷ್ ಬಳಕೆ ಜೋರಾದಾಗ "ಸಂಪೂರ್ಣ ಇಂಗ್ಲೀಷ್ ಬೇಡ, ಕನ್ನಡ ಹೆಚ್ಚಾಗಿ ಇರಲಿ" ಎಂದು ಹೇಳಿ ಬಂದೆ. ಮೈಸೂರಿಗರಲ್ಲಿ ಸ್ವಚ್ಛ ಭಾರತೀಯ ಇಂಗ್ಲೀಷಿಗಿರುವ ಒಲವು ಅಚ್ಚರಿ ಮೂಡಿಸಿತು. ಈ ಬಾರಿ ಮೈಸೂರಿನ ತಂಡದವರ ಬಯಕೆಯಂತೆ ಗ್ನು/ಲಿನಕ್ಸ್ ಹಬ್ಬದ ನಕ್ಷೆ ಸ್ವಲ್ಪ ಬದಲಾಗಿತ್ತು. ಮೊದಲರ್ಧ ದಿನ ಗ್ನು/ಲಿನಕ್ಸಿನಲ್ಲಿರುವ ದಿನನಿತ್ಯದ ಬಳಕೆಯ ತಂತ್ರಾಂಶಗಳನ್ನು ಬಳಸುವುದು ಹೇಗೆ ಎಂಬುದರ ದೃಶ್ಯಾವಳಿ, ಮಾತುಕತೆ. ಉಳಿದರ್ಧ ದಿನ ಗ್ನು/ಲಿನಕ್ಸ್ installationಉ - ಗ್ನು/ಲಿನಕ್ಸ್ ಹಾಕಿಕೊಂಡು ಪ್ರಯತ್ನಿಸುವಲ್ಲಿ ಸಹಾಯ ಮಾಡುವ ಸಮಯ.

ನೂರಾರು ಜನ ಭಾಗವಹಿಸಿ ಗ್ನು/ಲಿನಕ್ಸ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರಿದ್ದು ಖುಷಿ ತಂದಿತು. ಕನ್ನಡದ ಸುತ್ತ ಕೆಲಸ ಮಾಡುತ್ತಿರುವ ಕೆಲವು ಹಿರಿಯರ ಪರಿಚಯ ಮುಖತಃ ಆದದ್ದು ಮತ್ತಷ್ಟು ಖುಷಿ ಕೊಟ್ಟಿತು.
ಪರಿಸರದ ಸುತ್ತ ಕಾಳಜಿವಹಿಸಿ ಕೆಲವು ಚಿಕ್ಕಪುಟ್ಟ ಸಂಶೋಧನೆಗಳನ್ನು ಮಾಡುತ್ತಿರುವ ಹಿರಿಯರೊಬ್ಬರು ಸ್ವತಃ ಮಾತನಾಡಿಸಲೆಂದು ಬಂದು ತಾವು ಮಾಡುತ್ತಿರುವ ಕೆಲಸದ ಬಗ್ಗೆ ತಿಳಿಸಿದರು. ಆಸಕ್ತಿ ಹುಟ್ಟಿಸಿತು.
ಬಂದವರಲ್ಲೊಬ್ಬರು ನನ್ನ ಮುಖ ಗುರುತಿಸಿ ನೀನು ಮೈಸೂರಿನಲ್ಲಿ ನಮ್ಮ ಸ್ಕೂಲಿನಲ್ಲೇ ಓದ್ತಾ ಇದ್ದಿ, ನಮ್ಮ ಜೂನಿಯರ್. ನಾವೆಲ್ಲ ಒಟ್ಟಿಗೇ ಕ್ರಿಕೆಟ್ ಆಡ್ತಾ ಇದ್ವಿ, ನೆನಪಿದೆಯಾ ಎಂದು ಕೇಳಿದ್ದು ನೆನಪಿನ ಪುಟಗಳನ್ನು ಮತ್ತೊಮ್ಮೆ ತಿರುವಿ ಹಾಕುವಂತೆ ಮಾಡಿತು. ನೆನಪು ಮಾತ್ರ ಆಗಲಿಲ್ಲ!

ಹೋದ ಸಾರಿ ಗ್ನು/ಲಿನಕ್ಸ್ ಹಬ್ಬದ ಬಗ್ಗೆ ಪತ್ರಿಕೆಯಲ್ಲಿ ಓದಿ ಗ್ನು/ಲಿನಕ್ಸ್ ಬಗ್ಗೆ ಸಾಕಷ್ಟು ಆಗಲೇ ತಿಳಿದುಕೊಂಡಿದ್ದ ಬ್ರಿಟನ್ ಒಬ್ಬರು ಆ ಸಮಯ ಭಾರತದಲ್ಲಿದ್ದದ್ದರಿಂದ "ನಾನೂ ಭಾಗವಹಿಸಲೆಂದು ಬಂದೆ. ನಿಮಗೆ ಸಹಾಯ ಮಾಡುವೆ. ಲೋಕಲ್ ಭಾಷೆಗೆ ಇಂತಹ ಕಾರ್ಯಕ್ರಮ ಇಟ್ಟುಕೊಂಡಿರುವುದು ರಿಯಲಿ ಗ್ರೇಟ್" ಎನ್ನುತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅವರ ಆಸಕ್ತಿಯ ಬಗ್ಗೆ ಅಚ್ಚರಿ ಹುಟ್ಟಿಸಿತ್ತು. ಈ‌ ಬಾರಿ ಮಡಿಕೇರಿಯಿಂದ ಬಂದ ಫಿನ್ನಿಶ್ ಬ್ರಿಟನ್ ಒಬ್ಬರು ಗ್ನು/ಲಿನಕ್ಸ್ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರೂ ಭಾಗವಹಿಸಿದ್ದರು. "ಇದರ ಬಗ್ಗೆ ಈಗಾಗಲೇ ಇಷ್ಟೊಂದು ತಿಳಿದುಕೊಂಡಿದ್ದೀರಿ, ಎಷ್ಟೊಂದು ಕೆಲಸ ಮಾಡಿದ್ದೀರಿ. ಈ ಕಾರ್ಯಕ್ರಮದಲ್ಲಿ ನಿಮಗಿದ್ದ ಆಸಕ್ತಿ ಏನು" ಎಂದು ಕೇಳಿದೆ. "ಇತ್ತೀಚೆಗೆ ತಾನೆ ಫಿನ್ಲೆಂಡಿನಿಂದ ಬಂದೆ, ಅಪ್ಪ ಅಮ್ಮ ಭಾರತದಲ್ಲೇ ಇದ್ದವರು. ನಾನೂ ಬಂದು ಈ ಕಾರ್ಯಕ್ರಮಕ್ಕೆ ಸಹಾಯ ಮಾಡೋಣಬೇಕೆಂದಿದ್ದೆ, ಆದರೆ ನಿಮ್ಮೆಲ್ಲರ ಪರಿಚಯವಾಗಿರಲಿಲ್ಲ. ಕಾರ್ಯಕ್ರಮ ತುಂಬಾ ಚೆನ್ನಾಗಿ ಮಾಡಿದಿರಿ. ಬಹಳ ಖುಷಿಯಾಯ್ತು. ಮುಂದಿನ ಸಾರಿ ನಾನೂ ನಿಮ್ಮೊಂದಿಗೆ ಕೈ ಸೇರಿಸುವೆ" ಎಂದು ಹೇಳಿ ಇ-ಮೇಯ್ಲ್ ಐಡಿ ಕೊಟ್ಟು ಹೊರಟರು.

ಸಾಯಂಕಾಲ ನಳಪಾಕದ ತಿಂಡಿ ತಿಂದು ಶಿವಮೊಗ್ಗವನ್ನು (ಹಾಗು ಬಸವನಗುಡಿಯನ್ನು) ನೆನಪಿಸುವ ಸ್ಟ್ರಾಂಗ್ ಕಾಫಿ ಕುಡಿದು ಹೊರಟು ಕಾರು ಓಡಿಸುವುದರ ಬಗ್ಗೆ ಹತ್ತಲವು ವಿಷಯಗಳನ್ನು ತಿಳಿದುಕೊಳ್ಳುತ್ತ ಬೆಂಗಳೂರು ಸೇರಿದಾಗ ಸುಮಾರು ಬೀದಿಗಳು ಕಾರುಗಳಿರಲಿ, ನರಪಿಳ್ಳೆಯೂ ನುಸುಳದಂತೆ ಮುಳುಗಲಿರುವ "ಗಣೇಶ ಮಹೋತ್ಸವ"ದ ಗಣೇಶನನ್ನು ಟ್ರಾಕ್ಟರುಗಳ ಮೇಲೆ ಕುಳ್ಳಿರಿಸಿ ಪಟಾಕಿ ಸಿಡಿಸುತ್ತ ಮನಬಂದಂತೆ ಕುಣಿಯುತ್ತಿದ್ದವರಿಂದ ತುಂಬಿಹೋಗಿತ್ತು. ಹಬ್ಬ ಮುಗಿದಿತ್ತು.

Rating
No votes yet

Comments