ಬೆಸ್ಟಾದ ಬ್ಯೂಟಿ, ಬೀಸ್ಟೀ ಬೆಸ್ಟ್

ಬೆಸ್ಟಾದ ಬ್ಯೂಟಿ, ಬೀಸ್ಟೀ ಬೆಸ್ಟ್

ಹೆಸರು ಬೆಸ್ಟ್. ಕಾರ್ಯವೈಖರಿ ಬೆಸ್ಟ್. ನೋಡಲು ಬ್ಯೂಟಿ, ಆದರೆ ಬಡವರು, ದಿನಗೂಲಿ ಕಾಯಕ ಬಡಪಾಯಿ ಮುಂಬಯಿಕರರಿಗೆ ಬೀಸ್ಟು.

ಪ್ರಸ್ತುತ ಸಿನೆಮಾ ಹಾಡುಗಳನ್ನು ಕೇಳದ ನನಗೂ ನಿನ್ನೆಯ ದಿನ ಒಂದು ಹಾಡು ಮತ್ತೆ ಮತ್ತೆ ಕೇಳುವಂತೆ ಮಾಡಿತು. ಐತರಾಜ್ ಚಿತ್ರದ ಗಿನಾ ಗಿನಾ ಬಿನ್ ಗುನಾ ಗಿನಾ (ಎಣಿಸು ಎಣಿಸು, ಗೊಣಗದೇ ಎಣಿಸು). ನನ್ನ ಕಾಲುಗಳು ತಿಳಿಯದಂತೆ ತಾಳ ಹಾಕುತ್ತಿತ್ತು. ಇದು ಮುಂಬಯಿಯ ನಗರ ಸಂಚಾರ ಬಸ್ಸಿನಲ್ಲಿ ಎಫ್ ಎಮ್ ಚಾನೆಲ್‍ನಲ್ಲಿ ಬಿತ್ತರವಾಗುತ್ತಿದ್ದ ಹಾಡು.

ಮುಂಬಯಿ ನಗರಿಗೆ ಬೇಕಿರುವ ಎರಡು ಅತ್ಯಾವಶ್ಯಕ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಯ ಹೆಸರು ಬೆಸ್ಟ್, ಎಂದರೆ ಬಾಂಬೇ ಎಲೆಕ್ಟ್ರಿಕಲ್ ಸಪ್ಲೈ ಅಂಡ್ ಟ್ರಾನ್ಸ್‍ಪೋರ್ಟ್. ಇದರಲ್ಲಿ ಎರಡು ವಿಭಾಗಗಳಿವೆ. ಒಂದು ವಿದ್ಯುತ್ ಸರಬರಾಜಿನ ವ್ಯವಸ್ಥೆಯನ್ನು ನೋಡಿಕೊಂಡರೆ ಇನ್ನೊಂದು ನಗರ ಸಂಚಾರಕ್ಕೆ ಬಸ್ಸುಗಳ ವ್ಯವಸ್ಥೆಯನ್ನು ನೋಡಿಕೊಳ್ಳುವುದು. ಎರಡೂ ವ್ಯವಸ್ಥೆಗಳನ್ನು ಸುವ್ಯವಸ್ಥೆಯಾಗಿಟ್ಟಿರುವುದಕ್ಕೆ ಸರಿಯಾಗಿ, ಆಂಗ್ಲದಲ್ಲಿ ಇದನ್ನು ಬೆಸ್ಟ್ ಎಂದು ಕರೆಯುವರೇನೋ ತಿಳಿಯದು.

ಈ ನಗರ ಸಂಚಾರದ ಬಸ್ಸುಗಳ ವಿಭಾಗದ ಬಗ್ಗೆ ನನ್ನ ಕೆಲವು ಮಾತುಗಳನ್ನು ನಿಮ್ಮ ಮುಂದಿಡಬಯಸುವೆ.

ಒಟ್ಟು ೨೫ ಬಸ್ ಡಿಪೋಗಳಿರುವ ಈ ಸಂಸ್ಥೆಯು ೩೩೫ ರೂಟ್‍ಗಳಲ್ಲಿ ೩,೩೮೦ ಬಸ್ಸುಗಳನ್ನು ಓಡಿಸುತ್ತಿದೆ.

ತಮಾಷೆಯಾದ ಒಂದು ವಿಷಯವೆಂದರೆ - ಇಲ್ಲಿ ಓಡುವ ರೂಟ್ ನಂ ೧೬೬ ನೇ ಬಸ್ಸು ಹೆಚ್ಚಿನ ಆಸ್ಪತ್ರೆಗಳನ್ನು ಹಾದು ಹೋದರೆ, ರೂಟ್ ನಂ ೧೬೧ ತೈಲಾಗಾರಗಳು ಮತ್ತು ಮುಂಬಯಿ ಜನನಿಬಿಡ ಪೂರ್ವಪ್ರದೇಶದಲ್ಲಿ ಹಾದು ಹೋಗುವುದು. ಇದೇ ತರಹ ರೂಟ್ ನಂ ೯ ಹೆಚ್ಚಿನ ಶಾಲಾಕಾಲೇಜುಗಳನ್ನು ಹಾಯ್ದುಹೋದರೆ, ರೂಟ್ ನಂ ೧, ೬೬, ಮತ್ತು ೨೦೨ ದಿನದ ೨೪ ಘಂಟೆಗಳೂ ಸೇವಾನಿರತವಾಗಿರುವುದು.

ಇಂತಹ ಬೆಸ್ಟ್ ಬಸ್ಸುಗಳಲ್ಲಿ ಬಹಳ ಮಹಡಿ ಬಸ್ಸುಗಳಿದ್ದವು (ಡಬಲ್ ಡೆಕರ್). ಆದರೆ ಈಗ್ಯೆ ೫-೬ ತಿಂಗಳುಗಳಿಂದ ಡಬಲ್ ಡೆಕರ್‍ಗಳು ಮಾಯವಾಗುತ್ತಿವೆ. ಅದರ ಬದಲಿಗೆ ಹೊಸ ಹೊಸ ಬಸ್ಸುಗಳು ಬಂದಿವೆ. ಅಂಗವಿಕಲರೂ ಬಹಳ ಸುಲಭದಲ್ಲಿ ಹತ್ತುವಂತೆ ಕೆಳಮಟ್ಟದಲ್ಲಿವೆ. ಇವುಗಳಲ್ಲಿ ಎಫ್‍ಎಮ್ ಚಾನೆಲ್ ಸಂಗೀತವನ್ನು ಹಾಕುವರು. ಇಲ್ಲಿ ೩ ಎಫ್ ಎಮ್ ಚಾನೆಲ್‍ಗಳಿದ್ದು, ಎಲ್ಲದರಲ್ಲೂ ಹಿಂದಿ ಹಾಡುಗಳು ಬರುವುದು. ಎಫ್ ಎಮ್ ಚಾನೆಲ್‍ಗಳಿಂದ ಮರಾಠಿ ಹಾಡುಗಳನ್ನು ಕೇಳುವವರೂ ಇಲ್ಲ, ಹಾಕುವುದೂ ಇಲ್ಲ. ಅದಲ್ಲದೇ ಬಸ್ಸಿನಿಂದಲೇ ದೂರವಾಣಿ ಕರೆಯನ್ನೂ ಮಾಡಬಹುದು. ಚಾಲಕರಿಗೆ ಸೂಚನೆ ನೀಡಲು ಕರೆಗಂಟೆಯ ಗುಂಡಿಗಳನ್ನು ಉಪಯೋಗಿಸುವರು. ಈ ಬಸ್ಸುಗಳಿಗೆ ಇಂಜಿನ್ ಹಿಂಭಾಗದಲ್ಲಿರುವುದು. ಗ್ಯಾಸ್ ಮೂಲಕ ಓಡಿಸುವ ಬಸ್ಸುಗಳೂ ಬಹಳ ಇವೆ. ಈ ಮೊದಲು ಮುಂದುಗಡೆಯ ಎಡಭಾಗದಲ್ಲಿರುವ ಮೂರು ಜಂಟಿ ಸ್ಥಾನಗಳನ್ನು ಸ್ತ್ರೀಯರಿಗೆ ಮೀಸಲಿಡುತ್ತಿದ್ದರು. ಅದನ್ನು ಈಗ ಬದಲಾಯಿಸಿ, ಎಡಗಡೆಗೆ ಎರಡು ಜಂಟಿ ಸ್ಥಾನಗಳನ್ನೂ ಮತ್ತು ಬಲಭಾಗಕ್ಕೆ ಒಂದು ಜಂಟಿ ಸ್ಥಾನವನ್ನೂ ಮೀಸಲಿಟ್ಟಿದ್ದಾರೆ. ಆದರೇನು, ಸ್ತ್ರೀಯರು ಮೊದಲಿಗೆ ಪುರುಷರ ಸ್ಥಾನಗಳಲ್ಲೇ ಕುಳಿತುಕೊಳ್ಳುವುದು. ಅಲ್ಲಿ ಜಾಗವಿರದಿದ್ದರೆ ಆಗ ಮೀಸಲಾತಿಯ ಬಗ್ಗೆ ಜಾಗೃತಿ ಮೂಡುವುದು (ತಮಾಷೆಗಾಗಿ ಹೇಳ್ತಿರೋದು).

ಕೆಲವು ಬಸ್ಸುಗಳ ನಂಬರ್ ಕೆಂಪು ಬಣ್ಣದ್ದಿದ್ದರೆ ಇನ್ನು ಕೆಲವದ್ದು ಬಿಳಿ ಬಣ್ಣದ್ದಿರುವುದು. ಬಿಳಿ ಬಣ್ಣದ ಸಂಖ್ಯೆ ಸಾಧಾರಣ ಬಸ್ಸುಗಳದ್ದಾದರೆ, ಕೆಂಪು ಬಣ್ಣಗಳದ್ದು, ವಿಶೇಷ, ನಿಯಮಿತ ಮತ್ತು ಪಾಯಿಂಟ್ ಟು ಪಾಯಿಂಟ್ ಓಡುವ ಬಸ್ಸುಗಳು. ಕೆಲವು ರೂಟ್‍ಗಳಲ್ಲಿ ಹವಾನಿಯಂತ್ರಿತ ಬಸ್ಸುಗಳನ್ನೂ ಓಡಿಸುವರು.

ಬೇರೆಯ ಊರುಗಳಿಗೆ ಹೋಲಿಸಿದರೆ ಇಲ್ಲಿಯ ಬಸ್ಸುಗಳ ದರ ಬಹಳ ಹೆಚ್ಚಿರುವುದು. ಅತಿ ಕಡಿಮೆ ದರ ರೂಪಾಯಿ ೪ ಆದರೆ, ದೂರಕ್ಕೆ ತಕ್ಕಂತೆ ೧೬ ರಿಂದ ಇಪ್ಪತ್ತು ರೂಪಾಯಿಗಳವರೆವಿಗೂ ದರವಿರುವುದು. ಹವಾ ನಿಯಂತ್ರಿತ ಬಸ್ಸುಗಳಲ್ಲಿ ರೂಪಾಯಿ ೩೫ ರಿಂದ ೬೫-೭೦ ರೂಪಾಯಿಗಳವರೆವಿಗೆ ದರವಿರುವುದು.

ಇತ್ತೀಚೆಗೆ ಬಿಂಡಿ ಬಜಾರಿನಲ್ಲಿ ಒಂದು ಬಸ್ಸು ಒಬ್ಬ ಮುದುಕಿಗೆ ಡಿಕ್ಕಿ ಹೊಡೆದು ಅವಳು ಸಾವನ್ನಪ್ಪಿದಳು. ಕೆಲವು ದಿನಗಳ ಹಿಂದೆ ಕೊಲಾಬಾದ ಬದ್‍ವಾರ್ ಪಾರ್ಕಿನ ಬಳಿ ಬೆಳಗಿನ ಜಾವ ಹೋಗುತ್ತಿದ್ದ ಬಸ್ಸೊಂದು ಹಾದಿ ತಪ್ಪಿ ಫುಟ್‍ಪಾತ್ ಹತ್ತಿ ರಸ್ತೆಯಲ್ಲಿ ಮಲಗಿದ್ದ ೪ ಜನಗಳ ಕಾಲುಗಳ ಮೇಲೆ ಹಾದು ಹೋಗಿತ್ತು. ಈ ಸುದ್ದಿಯನ್ನು ಕೇಳಿದ ಕೂಡಲೇ ನನಗೆ ನೆನಪಾದದ್ದು ಶಂಕರನಾಗ್ ಅವರ ಆಕ್ಸಿಡೆಂಟ್ ಚಿತ್ರ. ಹೆಚ್ಚಿನ ವಾಹನ ಸಂಚಾರದಿಂದ ಮತ್ತು ಸಮಯಸಾರಣಿಗೆ ತಕ್ಕಂತೆ ಸಮಯ ಪರಿಪಾಲನೆ ಮಾಡಬೇಕಾದುದರಿಂದ ಬಸ್ಸುಗಳು ವಿಪರೀತ ರಭಸದಲ್ಲಿ ಚಲಿಸುವುವು. ಇದಕ್ಕೆ ತಕ್ಕನಾಗಿ ಆಟೋಗಳು ಮತ್ತು ಟ್ಯಾಕ್ಸಿಗಳೂ ರಭಸದಿಂದ ಚಲಿಸುವುದರಿಂದ ಆಕಸ್ಮಿಕ ಘಟನೆಗಳು ಹೆಚ್ಚಾಗುತ್ತಿವೆ. ಕೆಂಪು ಬಸ್ಸುಗಳಿಂದ ಇದೊಂದು ಕೆಂಪು ಛಾಯೆ ಜನಗಳಲ್ಲಿ ಭಯ ತಂದು ಮನಸ್ಸನ್ನಾವರಿಸಿದೆ. ಇಂತಹ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದರಿಂದಾಗಿ ಬೆಸ್ಟ್ ಅನ್ನು ಬೀಸ್ಟ್ ಎಂದು ಕರೆಯುತ್ತಿರುವೆ.

ಬಿಟಿಎಸ್‍ಗೂ ಮತ್ತು ಬೆಸ್ಟ್‍ಗೂ ಇರುವ ವ್ಯತ್ಯಾಸ ಮತ್ತು ಸಾಮ್ಯತೆ

ಬಿಟಿಎಸ್ ಬಸ್ಸುಗಳಲ್ಲಿ ನಿರ್ವಾಹಕರು ಬಸ್ ಚಾಲನೆಯ ಮಧ್ಯೆ ಮಧ್ಯೆ ತಿಕೀಟುಗಳ ಮಾಹಿತಿಯನ್ನು ಒಂದು ಪ್ರತ್ಯೇಕ ಹಾಳೆಯಲ್ಲಿ ಬರೆಯುವರು. ತಿಕೀಟುಗಳನ್ನು ಹರಿದು ಕೊಡುವರು. ಯಾರು ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದಾರೆಂಬುದನ್ನು ತಿಕೀಟು ನೋಡಿ ಹೇಳಲಸಾಧ್ಯ. ಬಸ್ಸುಗಳ ಚಾಲನೆಗೆ ಚಾಲಕರಿಗೆ ಸೂಚನೆ ನೀಡಲು ಸಿಳ್ಳೆ ಹೊಡೆಯುವರು ಅಥವಾ ಗಟ್ಟಿಯಾಗಿ ಅರಚುವರು. ಕೆಲವೊಮ್ಮೆ ನಿರ್ವಾಹಕರ ಸೂಚನೆ ಇಲ್ಲದೆಯೂ ಚಾಲಕರು ಬಸ್ಸನ್ನು ಚಲಿಸುವರು. ಹೆಣ್ಣುಮಕ್ಕಳು ಮುಂದೆ ಹತ್ತಿದರೆ, ಪುರುಷರು ಹಿಂದುಗಡೆಯಿಂದ ಹತ್ತುವರು. ಇಳಿಯುವವರು ಯಾವ ಕಡೆಯಿಂದ ಬೇಕಾದರೂ ಇಳಿಯಬಹುದು. ಇದಲ್ಲದೇ ನಗರ ಸಂಚಾರ ವ್ಯವಸ್ಥೆ ಸಂಸ್ಥೆಯವರು (ಸಂಸ್ಥೆ ಪಾಸು ಕೊಟ್ಟಿರಬಹುದು) ಎಷ್ಟು ಜನಗಳು ಬೇಕಾದರೂ ಪ್ರಯಾಣಿಸಬಹುದು. ಅಲ್ಲದೇ ಅವರು ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳಗಳಲ್ಲಿ ಕುಳಿತಿರಲೂ ಬಹುದು. ಬಿಟಿಎಸ್ ನಲ್ಲಿ ದಿನದ ಪಾಸ್ ಮತ್ತು ತಿಂಗಳ ಪಾಸುಗಳನ್ನು ಕೊಡುವುದು ಸಾರ್ವಜನಿಕರಿಗೆ ಒಳಿತಾದ ಕೆಲಸ. ಹಾಗೆಯೇ ಮಕ್ಕಳಿಗೆ ವಿಶೇಷ ದರದ ಪಾಸುಗಳನ್ನೂ ವಿತರಿಸುವರು.

ಬೆಸ್ಟ್ ಬಸ್ಸುಗಳಲ್ಲಿ ತಿಕೀಟುಗಳನ್ನು ತೂತು ಮಾಡುವರು. ಚಾಲಕರಿಗೆ ಸೂಚನೆ ನೀಡಲು ಗಂಟೆಯನ್ನು ಬಾರಿಸುವರು. ಚಾಲಕರ ಸೂಚನೆಯಿಲ್ಲದೇ ಬಸ್ಸನ್ನು ಮುಂದುವರೆಸುವುದಿಲ್ಲ. ಆದರೆ ಸಿಗ್ನಲ್‍ಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಕರಾರುವಾಕ್ಕಾದ ಸ್ಥಳಗಳಲ್ಲೇ ವಾಹನಗಳನ್ನು ನಿಲ್ಲಿಸುವರು. ನಿರ್ವಾಹಕ ಸೂಚನೆ ನೀಡುವವರೆವಿಗೆ ನಿಲ್ದಾಣದಿಂದ ಕದಲುವುದಿಲ್ಲ. ಮೂರು-ನಾಲ್ಕು ಬಸ್ಸುಗಳಿಗೆ ಒಂದು ನಿಲ್ದಾಣದಂತೆ ರಸ್ತೆಯಲ್ಲಿ ಉದ್ದಕ್ಕೂ ಬಸ್ ನಿಲ್ದಾಣಗಳನ್ನು ಕಾಣಬಹುದು. ಮತ್ತೊಂದು ವಿಷಯವೆಂದರೆ ನಿರ್ವಾಹಕನು, ಪ್ರಯಾಣಿಕರಿಗೆ ಹತ್ತಬೇಡವೆಂದು ಸೂಚಿಸದರೆ ಅದೇ ಕಡೆ ಮಾತು. ಆತನ ಮಾತನ್ನು ಉಲ್ಲಂಘಿಸುವಂತಿಲ್ಲ. ಇಂತಹ ಸನ್ನಿವೇಶವನ್ನು ಬೆಂಗಳೂರಿನಲ್ಲಿ ಕಾಣಲು ಸಾಧ್ಯವೇ? ಎಷ್ಟೋ ವೇಳೆ ನಿರ್ವಾಹಕನು ಹತ್ತಬೇಡ, ಬಸ್ಸು ತುಂಬಿದೆ ಎಂದರೂ ಕೇಳದೆಯೇ ಮುಂದುಗಡೆಯಿಂದ ಹತ್ತುವರು. ಬಸ್ಸನ್ನು ಹತ್ತಲು ಎಲ್ಲರೂ ಹಿಂದುಗಡೆಯ ಬಾಗಿಲನ್ನೇ ಉಪಯೋಗಿಸಬೇಕು, ಇಳಿಯಲು ಮುಂದುಗಡೆಯ ಬಾಗಿಲನ್ನು ಉಪಯೋಗಿಸಬೇಕು. ಇದರಿಂದ ಆಗುವ ಒಂದು ಅನುಕೂಲವೆಂದರೆ, ನಿರ್ವಾಹಕನು ಹಿಂದುಗಡೆಯ ಬಾಗಿಲಿನ ಹತ್ತಿರವೇ ಇದ್ದರೆ ತಿಕೀಟು ಕೊಡಲೂ ಸುಲಭ ಮತ್ತು ಬಸ್ಸನ್ನು ನಿಯಂತ್ರಿಸಲೂ ಸುಲಭ. ಇಳಿಯುವವರು ಮುಂದುಗಡೆಯ ಬಾಗಿಲನ್ನು ಉಪಯೋಗಿಸುವುದರಿಂದ ಚಾಲಕನೇ ಯಾವಾಗ ಹೊರಡಲು ಸಾಧ್ಯವೆಂದು ನಿರ್ಧರಿಸಬಹುದು. ಆದರೂ ಚಲಿಸಲು ನಿರ್ವಾಹಕನೇ ಅಣತಿ ಕೊಡಬೇಕು. ಸಂಸ್ಥೆಯ ಇಬ್ಬರು ಮಾತ್ರವೇ ಒಂದು ಬಸ್ಸಿನಲ್ಲಿ ಪ್ರಯಾಣಿಸಬಹುದು. ಅದೂ ಅವರುಗಳು ನಿಂತು ಪ್ರಯಾಣಿಸಬೇಕು. ಪ್ರಯಾಣಿಕರು ಕಡಿಮೆ ಇದ್ದಾಗ ಮಾತ್ರವೇ ಅವರು ಕುಳಿತಿರುವುದನ್ನು ಕಾಣಬಹುದು.
ಮುಂಬಯಿಯಲ್ಲಿ ಪಾಸಿನ ಅವಕಾಶವಿಲ್ಲ. ಮಕ್ಕಳಿಗೆ ಶಾಲೆಯಿಂದ ಪತ್ರವನ್ನು ತಂದರೆ ಮಾತ್ರ ಪಾಸನ್ನು ಕೊಡುವರು. ಅದೂ ೧೨ ನೆಯ ತರಗತಿಯವರೆವಿಗೆ ಓದುವವರಿಗೆ ಮಾತ್ರ ಪಾಸಿನ ಸೌಲಭ್ಯವಿರುವುದು. ಪಾಸಿನ ದರವೂ ಬಹಳ ಕಡಿಮೆ ಏನಲ್ಲ. ಸಾಮಾನ್ಯ ದರಕ್ಕಿಂತ ಅರ್ಧದಷ್ಟಿರುವುದಷ್ಟೆ. ನಾನು ಕಂಡ ಒಂದು ಮುಖ್ಯವಾದ ಅಂಶವೆಂದರೆ, ಯಾವುದೇ ಬಸ್ಸಿಗಾಗಿ ೧೦ ರಿಂದ ೧೫ ನಿಮಿಷಕ್ಕಿಂತ ಹೆಚ್ಚಿಗೆ ಕಾಯುವ ಸಂದರ್ಭವಿಲ್ಲ. ನಿಯಮಿತ ಸಮಯಕ್ಕೆ ಸರಿಯಾಗಿ ಬಸ್ಸುಗಳ ಚಲನೆಯನ್ನು ಕಾಣಬಹುದು. ಇದಲ್ಲದೇ ಮುಖ್ಯವಾದ ಒಂದು ವಿಶೇಷ ವಿಷಯವೆಂದರೆ, ಯಾವುದೇ ಸಮಯದಲ್ಲಾದರೂ ಚಿಲ್ಲರೆ ಹಣವನ್ನು ಸರಿಯಾಗಿ ನಿರ್ವಾಹಕರು ಕೊಡುವರು.

ಇಷ್ಟೆಲ್ಲಾ ವಿಷಯಗಳಲ್ಲೂ ಮುಂಬಯಿ ಬಸ್ ವ್ಯವಸ್ಥೆ, ಬೆಂಗಳೂರಿನದ್ದಕ್ಕಿಂತ ಹೆಚ್ಚೇನೂ ಅಲ್ಲ. ಆದರೂ, ಶುಚಿಯಾದ ಬಸ್ಸು, ಜನನಿಬಿಡತೆ ಇರದಿರುವ ಬಸ್ಸು, ಒಂದರ ಹಿಂದೊಂದರಂತೆ ಬರುವ ಬಸ್ಸು, ಚಿಲ್ಲರೆ ಹಣ ಕೊಡಲು ತಕರಾರು ಮಾಡದಿರುವುದು, ಇಂತಹ ಇನ್ನೂ ಹೆಚ್ಚಿನ ವ್ಯವಸ್ಥೆ ಇರುವುದರಿಂದ ಉತ್ತಮ ವ್ಯವಸ್ಥೆ ಎನ್ನಬಹುದು. ಇನ್ನೂ ಹೆಚ್ಚಿನ ವಿಷಯಗಳಿವೆ. ಆದಾಗ ಬರೆದು ಸೇರಿಸುವೆ.

Rating
No votes yet

Comments