ಮುಂಬೈನ ಮಳೆಗಾಲ

Submitted by tvsrinivas41 on Sun, 07/24/2005 - 17:52
ಮುಂಬಯಿಯ ಮಳೆಗೆ ಅದರದ್ದೇ ಆದ ಛಾಪಿದೆ. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುವುದು ಜೂನ್ ತಿಂಗಳ ಮೂರನೇ ವಾರದಲ್ಲಿ. ಈ ಮಳೆಗಾಲ ನವಂಬರ್ ತಿಂಗಳ ಮಧ್ಯ ಭಾಗದವರೆಗೂ ನಿರಂತರವಾಗಿರುವುದು. ಮೊದಲ ಮಳೆಯ ಮಣ್ಣಿನ ವಾಸನೆ ಕ್ಷಣಿಕ. ಮೊದಲ ದಿನವೇ ಧೋ ಎಂದು ದಿನಪೂರ್ತಿ ಸುರಿಯುವ ಮಳೆಯನ್ನು ಬೇರೆ ಇನ್ಯಾವ ನಗರದಲ್ಲಿ ಕಾಣುವುದು ಕಷ್ಟಾಸಾಧ್ಯ. ಆ ಮೊದಲ ದಿನ ಮಳೆಯ ನೀರು ಭೋರ್ಗ್ರಗೆಯುತ್ತಾ ಮೋರಿಗೆ ಹೋದಾಗ ಅಲ್ಲಿ ಇಲ್ಲಿ ಬಿದ್ದ ಕಸ, ಕಡ್ಡಿ, ಪ್ಲಾಸ್ಟೀಕು, ಗಲೀಜು ಇತ್ಯಾದಿಗಳು ಮೋರಿಗೆ ಅಡ್ಡವಾಗಿ ಎಲ್ಲೆಲ್ಲಿ ನೋಡಿದರೂ ನೀರು ನಿಲ್ಲುವುದು. ಒಂದು ಕಡೆ ನಿರಂತರವಾದ ಮಳೆ ಇನ್ನೊಂದೆಡೆ ನೀರಿನ ನಿಲ್ಲಾಟ. ಆಗ ಸಂಚಾರ ಸ್ತಬ್ಧವಾಗುವುದು. ಲೋಕಲ್ ಟ್ರೈನ್ ಹಳಿಗಳ ಮೇಲೆ ನೀರು ನಿಲ್ಲುವುದು. ತಗ್ಗಿನ ಪ್ರದೇಶಗಳಲ್ಲೆಲ್ಲಾ ನೀರು ತುಂಬಿ ತಗ್ಗು ಎಲ್ಲಿ ಎತ್ತರ ಎಲ್ಲಿ ಎಂಬುದ ತಿಳಿಯದೇ ಆಕಸ್ಮಿಕಗಳು ಸಂಭವಿಸುವುದು. ಇಂಥಹ ಸ್ಥಿತಿ ಪ್ರತಿವರ್ಷವೂ ಸಾಮಾನ್ಯ. ಮುಂಬಯಿ ಮಹಾನಗರಪಾಲಿಕೆಯವರು ಎಷ್ಟೇ ಎಚ್ಚರ ವಹಿಸಿದರೂ ಇದನ್ನು ತಪ್ಪಿಸಲಾಗದು. ಇದನ್ನು ಸ್ವಚ್ಛಗೊಳಿಸಿದ ನಂತರ ಮಳೆಯ ನೀರಿನ ಪ್ರಯಾಣ ನಿರಂತರವಾಗಿ ಸಮುದ್ರದೆಡೆಗೆ. ಆ ನಂತರ ಇಂತಹ ಪರಸ್ಥಿತಿ ಎದುರು ನೋಡಲು ಸಿಗುವುದು ಮರುವರ್ಷವೇ. ಹೀಗೆ ನೀರು ನಿಂತಾಗ ಲೋಕಲ್ ಟ್ರೈನ್ ಗಳ ಹಳಿಗಳ ಮೇಲೆ ನೀರು ನಿಂತು ಅವು ಓಡಾಡುವುದಿಲ್ಲ. ಲೋಕಲ್ ಟ್ರೈನ್ ಗಳ ಸಂಚಾರ ಈ ದ್ವೀಪದಂತಿರುವ ನಗರಕ್ಕೆ ನರನಾಡಿಯಂತೆ. ಹಾಗೆಯೇ ಬಸ್ ಟ್ಯಾಕ್ಸಿ ಮತ್ತಿತರೇ ವಾಹನಗಳ ಸಂಚಾರವೂ ಸ್ತಬ್ಧವಾಗುವುದು. ಹೀಗಾಗಿ ಜನಜೀವನ ಅಸ್ತವ್ಯಸ್ತವಾಗುವುದು. ಕೆಲವು ಬಾರಿ ಬೆಳಗ್ಗೆ ಕೆಲಸಗಳಿಗೆ ಮಂದಿ ಹೋದ ಮೇಲೆ ಮಳೆ ಬಂದು ಜನಜೀವನ ಅಸ್ತವ್ಯಸ್ತವಾದಾಗ, ಜನಗಳು ಆಫೀಸು ಅಂಗಡಿ ಮುಗ್ಗಟ್ಟುಗಳಲ್ಲೇ ಉಳಿಯಬೇಕಾದ ಪ್ರಮೇಯ ಬರುವುದು. ದೂರದ ಊರಿನಿಂದ ಬಂದ ಜನ ರೈಲ್ವೇ ನಿಲ್ದಾಣಗಳಲ್ಲೇ ಉಳಿಯಬೇಕಾಗುವುದು. ಈ ಮಹಾನಗರಿಗೆ ತರಕಾರಿ, ದವಸ, ದಾನ್ಯ ಮತ್ತಿತರೇ ಸರಕು ರಾಜ್ಯದ ಬೇರೆಯ ಭಾಗದಿಂದ ಬರಬೇಕಾಗಿದ್ದು ಅವುಗಳ ಚಲನೆಯೂ ನಿಂತು ಜನಗಳ ಜೀವನ ಬಹಳ ಕಷ್ಟವಾಗುವುದು. ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾದ ನಂತರ ಜನಜೀವನ ಮಾಮೂಲಿನಂತೆ. ಇಷ್ಟೆಲ್ಲಾ ಮಳೆ ಸುರಿದರೂ ವಾತಾವರಣ ಮಾತ್ರ ತಂಪಾಗಿರುವುದಿಲ್ಲ. ಟ್ರೈನ್ ಗಳಲ್ಲಿ ಇರುವವರು ಧಾರಾಕಾರವಾಗಿ ಬೆವರು ಸುರಿಸುವುದು ಸಾಮಾನ್ಯದೃಶ್ಯ . ಹೊರಗೆ ಜೋರು ಮಳೆ, ಟ್ರೈನಿನ ಒಳಗೆ ನೀರುಬರುವುದೆಂದು ಕಿಟಕಿ ಬಾಗಿಲು ಹಾಕುವರು - ಒಳಗೆ ಬೆವರು ಗಬ್ಬುನಾತ. ಇಲ್ಲಿನ ಹೆಚ್ಚಿನ ಮನೆಗಳಲ್ಲಾ ಫ್ಲಾಟ್ ಗಳು. ಎಲ್ಲ ಕಟ್ಟಡಗಳೂ ಕಡಿಮೆ ಎಂದರೆ ಆರು ಮಹಡಿಗಳು ಇರುವಂತಹವು. ಹಾಗಾಗಿ ಈ ಮಳೆಗಾಲದಲ್ಲಿ ಗಾಳಿಯ ವೇಗವೂ ಹೆಚ್ಚಿದ್ದು, ಮನೆಗಳ ಕಿಟಕಿ ಮತ್ತು ಬಾಲ್ಕನಿ ಬಾಗಿಲುಗಳ ಗಾಜುಗಳು ಒಡೆಯುವುದು ಸರ್ವೇ ಸಾಮಾನ್ಯ. ಮಳೆಗಾಲದಲ್ಲಿ ಇಷ್ಟೆಲ್ಲಾ ಉಪಟಳವೇ ಮುಂಬಯಿಯಲ್ಲಿ ಅಂತ ಅಂದುಕೋಬೇಡಿ. ಇನ್ನೂ ಸ್ವಾರಸ್ಯಕರವಾದ ಹಿತವಾದ ಅನುಭವಗಳು ಸಂಭವಿಸುವುವು. ಅದಕ್ಕೇ ಜನಗಳು ಕಾತುರದಿಂದ ಕಾದಿರುತ್ತಾರೆ. ನೋಡಿ ಇಲ್ಲಿಯ ನಾರಿಮನ್ ಪಾಯಿಂಟ್ ನಿಂದ ಚೌಪಾಟಿಯವರೆಗೆ ಸಮುದ್ರದ ಪಕ್ಕದಲ್ಲೇ ಮರೀನ್ ಡ್ರೈವ್ ರಸ್ತೆ ಇದೆ. ಇಲ್ಲಿ ರಾತ್ರಿಯ ಹೊತ್ತು ಬೀದಿ ದಿಪಗಳನ್ನು ಹಾಕಿದಾಗ ಮೇಲಿನಿಂದ ನೋಡಿದರೆ ನೆಕ್ಲೇಸ್ ಥರ ಕಾಣಿಸುತ್ತದೆ. ಅದಕ್ಕೇ ಈ ರಸ್ತೆಯನ್ನು ಕ್ವೀನ್ಸ್ ನೆಕ್ಲೇಸ್ ಅಂತಲೂ ಕರಿಯುತ್ತಾರೆ. ಮಳೆಗಾಲದಲ್ಲಿ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಮೇಲೆ ಬಂದಾಗ ನೀರು ರಸ್ತೆಗೆ ಬಂದು ಬೀಳುವುದು. ರಸ್ತೆಯ ಬದಿಯಲ್ಲಿ ಜನಗಳು ಹಿಂಡು ಹಿಂಡಾಗಿ ನಿಂತು ನೋಡುತ್ತಿರುತ್ತಾರೆ. ಹಾಗೆ ನೀರು ಬಂದಾಗ ಅವರ ಮೈಯೆಲ್ಲಾ ಉಪ್ಪು ನಿರಿನಿಂದ ತೊಯ್ಯುವುದು. ಇದೇ ಒಂದು ಥರಹದ ಮಜ. ಒಮ್ಮೊಮ್ಮೆ ಆ ಅಲೆಗಳು ರಸ್ತೆಯಿಂದ ೧೦-೧೨ ಅಡಿಗಳ ಎತ್ತರಕ್ಕೆ ಬರುವವು. ಒಮ್ಮೊಮ್ಮೆ ಅಲ್ಲಿ ಮುಂದೆ ನಿಂತಿರುವವರನ್ನು ಎಳೆದೊಯ್ಯುವುವು. ಅದಕ್ಕೆಂದೇ ವಿಶೇಷ ಪೊಲೀಸರು ಕಾವಲು ಕಾಯುತ್ತಿರುತ್ತಾರೆ. ಜನರನ್ನು ಆದಷ್ಟೂ ದೂರ ನಿಂತು ನೋಡಲು ಹೇಳುತ್ತರೆ. ಆ ಸಮಯದಲ್ಲಿ ಸಮುದ್ರದ ಆರ್ಭಟ ಅಬ್ಬರ ನೋಡುತ್ತಾ ನಿಂತರೆ ಇಡೀ ಪ್ರಪಂಚವನ್ನೇ ಮರೆಯುವೆವು. ನಿಸರ್ಗದ ನಾವು ಎಷ್ಟು ಚಿಕ್ಕ ಜಂತು ಎಂದೂ ಅರಿವಾಗುವುದು. ಇನ್ನು ಚೌಪಾಟಿಯ ಬೀಚು ಭೇಲ್ ಪುರಿಗೆ ಬಹಳ ಪ್ರಸಿದ್ಧ. ಹಾಗೇ ಜುಹು ಬೀಚಿನಲ್ಲಿ ಐಸ್ ಕ್ರೀಮ್ ಬಹಳ ಜಾಸ್ತಿ ಮಾರಾಟವಾಗುವ ವಸ್ತು. ಮಳೆಗಾಲದಲ್ಲಿ ಇದೇ ತರಹದ ಸಂದರ್ಭವನ್ನು ಮಹಾಲಕ್ಷ್ಮಿ ದೇವಸ್ಥಾನ-ಹಾಜಿ ಅಲಿ, ವೊರ್ಲಿ, ದಾದರ, ಬಾಂದ್ರಾ, ಜುಹು (ಸಾಂತಾಕ್ರೂಝ್), ಮಾರ್ವೇ (ಮಲಾಡ್) ಮತ್ತು ಎಸ್ಸೆಲ್ ವರ್ಲ್ಡ್ ಇರುವ ಬೊರಿವಿಲಿ ಯಲ್ಲೂ ಇದೇ ತರಹದ ಅನುಭವ ಆಗುವುದು. ಈ ಇಡೀ ಮುಂಬಯಿ ಮಹಾನಗರಕ್ಕೆ ಕುಡಿಯುವ ನೀರಿನ ಸರಬರಾಜು ಸುತ್ತಲಿನಲ್ಲಿ ಇರುವ ಆರು ಅಣೆಕಟ್ಟು ಮತ್ತು ಕೆರೆಗಳಿಂದ ಆಗುವುವು. ಅವುಗಳ್ಯಾವುವೆಂದರೆ ತನ್ಸಾ, ಮೋಡಕ್, ಭಾಟ್ಸ, ಲೋಯರ್ ವೈತರ್ಣ, ತುಲಸಿ, ಅಪ್ಪರ್ ವೈತರ್ಣ ಮತ್ತು ಪೊವೈ. ಒಂದು ತಿಂಗಳ ಮಳೆಯ ನೀರಿನಿಂದ ಇಲ್ಲಿಯ ಅಣೆಕಟ್ಟು ಅಥವಾ ಕೆರೆಗಳು ತುಂಬುವುವು. ಆದ್ದರಿಂದಲೇ ನಮ್ಮ ಬೆಂಗಳೂರಿನಂತೆ ಇಲ್ಲಿ ಕುಡಿಯುವ ನೀರಿನ ಅಭಾವವಿಲ್ಲ. ಇನ್ನು ಇಲ್ಲಿಯ ಮಳೆಗಾಲದಲ್ಲಿ ಕಂಡುಬರುವ ಇನ್ನೊಂದು ದೃಶ್ಯ. ಮಳೆಗಾಲದಲ್ಲಿ ಚರ್ಮದ ಚಪ್ಪಲಿ ಅಥವಾ ಬೂಟುಗಳು ಬಾಳಿಕೆ ಬರಲಾರದು. ಅದಕ್ಕೆಂದೇ ಜನಗಳು ಪ್ಲಾಸ್ಟಿಕ್ಕಿನ ಚಪ್ಪಲಿ ಅಥವ ಬೂಟುಗಳನ್ನು ತೊಡುವರು. ಒಂದೇ ಸಮನೆ ಮಳೆ ಸುರಿಯುವುದರಿಂದ ಕೆಲಸ ಕಾರ್ಯಗಳು ನಡೆಯುತ್ತಲೇ ಇರಬೇಕಾಗಿ, ಪ್ಲಾಸ್ಟಿಕ್ಕಿನ ಅಂಗಿ ಷರಾಯಿಯನ್ನೂ ತೊಡುವವರನ್ನು ಕಾಣಬಹುದು. ಇನ್ನು ಕಛೇರಿಗಳಲ್ಲಿ ಒಂದು ಜೊತೆ ಬಟ್ಟೆ ಮತ್ತು ಷೂಗಳನ್ನೂ ಇಟ್ಟಿರುವರು. ಕಛೇರಿಗೆ ಹೋದ ಮೇಲೆ ಈ ಪ್ಲಾಸ್ಟಿಕ್ಕಿನ ಬಟ್ಟೆಯನ್ನು ಬದಲಿಸುವರು. ಹಾಗೇ ಎಲ್ಲರ ಕೈಗಳಲ್ಲು ಛತ್ರಿಗಳು ಇರುವುವು. ಆದರೆ ಸಮುದ್ರದ ಪಕ್ಕದಲ್ಲಿ ಇರುವವರು ಮಳೆಗೆದುರಾಗಿ ಈ ಛತ್ರಿಗಳನ್ನು ತೆಗೆಯಲಾರರು. ಏಕೆಂದರೆ ಅಲ್ಲಿ ಪಕ್ಕದಲ್ಲಿ ಸಮುದ್ರವಿರುವುದಾಗೆ ಗಾಳಿಯ ತೀವ್ರತೆ ವಿಪರೀತವಾಗಿರುವುದು. ಈ ಛತ್ರಿಗಳನ್ನು ತೆಗೆದರೆ, ಅವುಗಳ ಬಟ್ಟೆ ಮೇಲೆ ಹೋಗಿ ಬರಿಯ ಕಡ್ಡಿ ಕೈಯಲ್ಲಿರುವುದು. ಮತ್ತೆ ಅದನ್ನು ರಿಪೇರಿ ಮಾಡಲೂ ಆಗುವುದಿಲ್ಲ. ಕ್ಷಣದಲ್ಲಿ ನೂರಾರು ರೂಪಾಯಿಗಳ ಛತ್ರಿ ನಿರುಪಯುಕ್ತವಾಗುವುದು. ಕೆಲವೊಮ್ಮೆ ಗಾಳಿಗೆ ಛತ್ರಿ ಮೇಲೆ ಹೋಗುವುದೂ ಉಂಟು. ಆಗ ಅದನ್ನು ಹಿಡಿದವರು ಕೆಲವು ಸಲ ಪ್ಯಾರಾಚೂಟ್ ಹಿಡಿದಿರುವಂತೆ ಕಾಣುವರು. ಹೆಣ್ಣುಮಕ್ಕಳಿಗಂತು ಮೈ ಪೂರಾ ಮುಚ್ಚುವ ಬಟ್ಟೆ ತೊಡದಿದ್ದರೆ ಬಲು ಕಷ್ಟ. ಅದನ್ನು ನೋಡಲೇ ಕೆಲವು ಮಹಾಶಯರು ಕಾಯುತ್ತಿರುತ್ತಾರೆ. ಹೊಸಬರು ಈ ಊರಿಗೆ ಬಂದಾಗ ಪ್ರೇಕ್ಷಣೀಯ ಸ್ಥಳಗಳು ಯಾವುವು ಅಂತ ಕೇಳಿದ್ರೆ ಹಳಬರು ಇಂತಹ ಸನ್ನಿವೇಶಗಳನ್ನೂ ನೋಡಲು ಮರೆಯದಿರಿ ಅಂತ ಹೇಳ್ತಾರೆ. ಇಷ್ಟಾದರೂ ಮುಂಬಯಿಯಲ್ಲಿ ಜನಜೀವನ ಎಂದಿನಂತೆ ಸಾಗುತ್ತಲೇ ಇರುವುದು, ಒಂದು ಸೋಜಿಗದ ಸಂಗತಿ ಅಲ್ಲವೇ? ಅದಕ್ಕೇ ಇಲ್ಲಿಯ ಒಂದು ಉಕ್ತಿ ಎಂದರೆ ಮುಂಬಯಿಯಲ್ಲಿ ಸಲ್ಲುವವರು ಪ್ರಪಂಚದಲ್ಲಿ ಎಲ್ಲಿಯೂ ಸಲ್ಲುವರು. ಈ ಊರು ಬದುಕುವ ಪಾಠ ಕಲಿಸುವುದು. ಹಾಗೆಯೇ ತಾಳ್ಮೆಯನ್ನೂ ಕಲಿಸುವುದು. ಲೋಕಲ್ ಟ್ರೈನ್ ಗಳು ಕೆಲವೊಮ್ಮೆ ಹಾದಿಯ ಮಧ್ಯೆಯಲ್ಲಿ ನಿಂತರೆ ಇಳಿದು ಮುಂದೆ ಹೋಗುವ ಪ್ರಯತ್ನ ಮಾಡಬಾರದು. ಹಳಿಯ ಪಕ್ಕದಲ್ಲಿ ಎಲ್ಲಿ ಹೊಂಡ ಇರುವುದು ಎಂದು ಗೊತ್ತಾಗುವುದಿಲ್ಲ. ಎಲ್ಲವೂ ಜಲಾವೃತ. ಸರಿ ಸುಮಾರು ರಸ್ತೆಗಳನ್ನು ಕಾಂಕ್ರೀಟ್ ಮಾಡಿದ್ದಾರೆ. ಹಾಗಾಗಿ ಅವುಗಳು ಮಳೆಗೆ ಹಾಳಾಗುವುದಿಲ್ಲ. ಟಾರು ರಸ್ತೆಗಳು ಮಳೆಯಲ್ಲಿ ಒಂದೇ ಬಾರಿಗೆ ಕಿತ್ತು ಎಲ್ಲೆಲ್ಲೂ ಹೊಂಡ ಆಗಿ ನೀರು ತುಂಬಿರುವುದು. ಆಗ ರಸ್ತೆಯಲ್ಲಿ ಓಡಾಡುವುದು ಕಷ್ಟ. ಎಷ್ಟೋ ಬಾರಿ ವಾಹನಗಳು ಕೂಡ ಹೊಂಡಗಳಿಗೆ ಬೀಳುವುವು. ಮುಂಬಯಿಯ ಸುತ್ತ ಮುತ್ತಲಿನ ಪ್ರದೇಶಗಳಾದ ಖಂಡಾಲಾ, ಖೋಪೋಲಿ, ಲೋಣಾವಲ, ಮ್ಯಾಥೆರಾನ್, ಮಹಾಬಲೇಶ್ವರ, ಪಂಚಗಣಿ ಇವೆಲ್ಲವೂ ಮಳೆಗಾಲದಲ್ಲಿ ನಿಸರ್ಗದ ರಮಣೀಯತೆಯನ್ನು ಸಾರಿ ತೋರಿಸುವ ಪ್ರೇಕ್ಷಣೀಯ ಸ್ಥಳಗಳು. ಖಂಡಾಲಾ - ಲೋಣಾವಲಾಗಳಲ್ಲಂತೂ ಜಲಪಾತಗಳು ಸಾವಿರಾರು. ಈ ಘಟ್ಟ ಪ್ರದೇಶ ನೋಡಲು ಕಣ್ಣಿಗೆ ಹಬ್ಬ ಉಂಟು ಮಾಡುವವು. ಇದೇ ಕಾಲದಲ್ಲಿ ಬರುವ ಹಣ್ಣುಗಳು ಅಂದ್ರೆ ಆಲ್ಫೊನ್ಸೊ ಮಾವು ಮತ್ತು ಹಲಸಿನ ಹಣ್ಣು. ಆಲ್ಫೊನ್ಸೋ ಮಾವು ವಿಶ್ವಪ್ರಸಿದ್ಧ. ಇಂತಹ ರಸಭರಿತವಾದ ಕೊಂಚವೂ ನಾರಿರದ ಹಣ್ಣು ನಾನೆಲ್ಲೂ ನೋಡಿರಲಿಲ್ಲ. ಇದನ್ನು ಇಡಿಯ ವಿಶ್ವಕ್ಕೇ ರಫ್ತು ಮಾಡುತ್ತಾರೆ. ಹಾಗಾಗಿ ಇದರ ಬೆಲೆ ತುಂಬಾ ದುಬಾರಿ. ಇದೆಲ್ಲವನ್ನೂ ಹೇಳಿ, ಓದುವ ಬದಲು ಅನುಭವಿಸಿದರೇ ಜೀವನ ಸಾಫಲ್ಯವಾಗುವುದು. ಬನ್ನಿ ಒಮ್ಮೆ ನಮ್ಮ ಮುಂಬಯಿಗೆ.
Rating
No votes yet

Comments