ಮಗನ ಪಕ್ಕದಿಂದ ಗುಂಡಿನ ಮಳೆಯತ್ತ

ಮಗನ ಪಕ್ಕದಿಂದ ಗುಂಡಿನ ಮಳೆಯತ್ತ

ಆ ಸುದ್ದಿ ಬಂದಾಗ, ದೆಹಲಿಯ ವಿಶೇಷ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಡೆಂಗೆ ಜ್ವರದಿಂದ ಬಳಲುತ್ತಿದ್ದ ತಮ್ಮ ೧೦ ವರ್ಷದ ಮಗನ ಪಕ್ಕದಲ್ಲಿದ್ದರು. ದೆಹಲಿಯ ಜಾಮಿಯಾನಗರದ ಸ್ಥಳದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಎದ್ದವರೇ ಸೀದಾ ಕಾರ್ಯಾಚರಣೆಗೆ ತೆರಳಿದರು. ಸತತ ೭೫ ಯಶಸ್ವಿ ಕಾರ್ಯಾಚರಣೆ ನಡೆಸಿ ೩೫ಕ್ಕೂ ಹೆಚ್ಚು ಉಗ್ರರನ್ನು ಕೊಂದ ಟಫ್ ಪೊಲೀಸ್ ಅಧಿಕಾರಿ ಅವರು.

ಆದರೆ, ೭೬ನೇ ಕಾರ್ಯಾಚರಣೆಯ ಯಶಸ್ಸನ್ನು ಕಾಣಲು ಅವರೇ ಉಳಿಯಲಿಲ್ಲ. ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ, ನಾಲ್ಕು ಗುಂಡುಗಳು ಅವರ ದೇಹ ಹೊಕ್ಕವು. ವಿಪರೀತ ರಕ್ತಸ್ರಾವವಾಗುತ್ತಿದ್ದ ಶರ್ಮಾ ಅವರನ್ನು ತಕ್ಷಣ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಪರೇಶನ್ ಟೇಬಲ್ ಮೇಲೆಯೇ ಅವರು ಜೀವ ಬಿಟ್ಟರು. ನಾಡಿನ ರಕ್ಷಣೆಗಾಗಿ ಹೋರಾಡುತ್ತ ಹೋರಾಡುತ್ತ ಮತ್ತೊಂದು ಜೀವ ಹುತಾತ್ಮವಾಯಿತು.

ಬದುಕಿದ್ದಾಗ ಉಗ್ರರಿಗೆ ಸಿಂಹಸ್ವಪ್ನವಾಗಿದ್ದವರು ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ. ತಮ್ಮ ೧೯ ವರ್ಷಗಳ ಸುದೀರ್ಘ ಸೇವೆಯಲ್ಲಿ ೭೫ ಕಾರ್ಯಾಚರಣೆ ನಡೆಸಿದ್ದ ಶರ್ಮಾ ೩೫ ಉಗ್ರರನ್ನು ಕೊಂದಿದ್ದರು. ೮೦ಕ್ಕೂ ಹೆಚ್ಚು ಉಗ್ರರನ್ನು ಬಂಧಿಸಿದ್ದರು. ೧೨೬ ಉಗ್ರರ ಬಂಧನಕ್ಕೆ ನೆರವಾಗಿದ್ದರು. ೭೬ನೇ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಾಗಲೇ ಗುಂಡೇಟು ತಿಂದು ತೀವ್ರವಾಗಿ ಗಾಯಗೊಂಡ ಶರ್ಮಾ ಅವರ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥಿಸಿತ್ತು. ಆದರೆ, ಪ್ರಾರ್ಥನೆ ಫಲಿಸಲಿಲ್ಲ. ಮೋಹನ್ ಚಂದ್ ಶರ್ಮಾ ಹುತಾತ್ಮರಾದರು.

43 ವರ್ಷ ವಯಸ್ಸಿನ ಮೋಹನ್ ಚಂದ್ ಶರ್ಮಾ 7 ಶೌರ್ಯ ಚಕ್ರ ಪ್ರಶಸ್ತಿ ಗೆದ್ದ ಅಧಿಕಾರಿ. ಎನ್‌ಕೌಂಟರ್ ಸಂದರ್ಭದಲ್ಲಿ ಅನೇಕ ಸಲ ಅವರಿಗೆ ಗುಂಡೇಟಿನ ಗಾಯಗಳಾಗಿದ್ದವು. ಇನ್ನೊಬ್ಬ ಟಫ್‌ ಕಾಪ್‌ ಎಸಿಪಿ ರಜಬೀರ್ ಸಿಂಗ್ ಅವರ ನಿಕಟವರ್ತಿಯಾಗಿದ್ದ ಇನ್ಸ್‌ಪೆಕ್ಟರ್ ಶರ್ಮಾ, ಪೊಲೀಸ್‌ ವಿಶೇಷ ವಿಭಾಗವನ್ನು ಭಯೋತ್ಪಾದಕ ನಿಗ್ರಹ ಘಟಕವಾಗಿ ಪರಿವರ್ತಿಸಲು ಕಾರಣರಾಗಿದ್ದರು. ಮಾಹಿತಿದಾರರ ಪ್ರಭಾವಶಾಲಿ ಜಾಲವನ್ನು ಸೃಷ್ಟಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶರ್ಮಾ ರಾಷ್ಟ್ರಪತಿ ಪದಕ ಸೇರಿದಂತೆ 7 ಶೌರ್ಯಪ್ರಶಸ್ತಿಗಳನ್ನು ಪಡೆದಿದ್ದರು.

ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿರುವ ಶರ್ಮಾ, ಉಗ್ರರ ವಿರುದ್ಧದ ಹೋರಾಟಕ್ಕೆ ಜೀವ ತುಂಬಿದವರು. ದೆಹಲಿಯ ದ್ವಾರಕಾ ಪ್ರದೇಶದ ನಿವಾಸದಲ್ಲಿ ಇಂದು ಎಲ್ಲೆಡೆ ದುಃಖದ ಮಡು. ಸಂಜೆ ನಡೆದ ಅಂತಿಮಯಾತ್ರೆ ಈ ಸಾಹಸವೀರನ ಬದುಕಿನ ಶ್ರೇಷ್ಠತೆಯನ್ನು ಬಿಂಬಿಸುವಂತಿತ್ತು. ಜಾತಿ, ಧರ್ಮ ಭೇದವಿಲ್ಲದ ಸಾವಿರಾರು ಜನ ಅಲ್ಲಿದ್ದರು. ಅಗ್ನಿದೇವ ಅವರ ಪಾರ್ಥಿವ ಶರೀರವನ್ನು ಜ್ವಲಿಸುತ್ತಿದ್ದಂತೇ ’ಮೋಹನ್ ಚಂದ್ ಶರ್ಮಾ ಅಮರ್ ರಹೇ’ ಘೋಷಣೆ ದೆಹಲಿಯಾದ್ಯಂತ ಅನುರಣಿಸಿದ್ದಲ್ಲದೇ ಟಿವಿಗಳ ಮೂಲಕ ದೇಶದ ಉದ್ದಗಲಕ್ಕೆ ಪ್ರತಿಧ್ವನಿಸಿತು.

ಉಗ್ರರ ವಿರುದ್ಧದ ಈ ನಿರಂತರ ಯುದ್ಧದಲ್ಲಿ ಇನ್ನೂ ಅದೆಷ್ಟು ಶರ್ಮಾರು ಹುತಾತ್ಮರಾಗುತ್ತಾರೋ!

- ಚಾಮರಾಜ ಸವಡಿ

Rating
No votes yet

Comments