ಕನ್ನಡಕ್ಕೊಂದು CMS
ಕನ್ನಡ ಹಾಗೂ ತಂತ್ರಜ್ಞಾನವನ್ನು ಬೆಸೆಯುವುದರ ಬಗ್ಗೆ ಈಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ಚರ್ಚೆಗಳೂ ಒಂದು ಕೃತಿಸ್ವರೂಪವನ್ನು ಪಡೆಯುವಲ್ಲಿ ಮುಂದಡಿಯಿಟ್ಟಿವೆ. ಅಂತರ್ಜಾಲ ತಾಣಗಳನ್ನು ನಿರ್ವಹಿಸಲು ಅಗತ್ಯವಾದ 'Content Management System(CMS)' ....ಕನ್ನಡವೂ ಸೇರಿದಂತೆ ಇತರ ಯಾವುದೇ ಭಾಷೆಗೂ ಕಸ್ಟಮೈಸ್ ಮಾಡಿಕೊಳ್ಳಬಹುದಾದಂತಹ ಒಂದು ಸಿಎಂಎಸ್ ಪೂರ್ಣಕಾರ ಪಡೆಯುವ ಹಂತದಲ್ಲಿದೆ. ಇದನ್ನು ಸಾಧ್ಯವಾಗಿಸಲು 'ಸಂಪೂರ್ಣ' ಶ್ರಮ ಮೀಸಲಿರಿಸುವವರು, ಕನ್ನಡಸಾಹಿತ್ಯ.ಕಾಂ ನ ಶೇಖರ್ ಪೂರ್ಣ ಹಾಗೂ ತಂತ್ರಜ್ಞ ರಾಘವ ಕೋಟೇಕಾರ್. ಅದರ ಪ್ರಾರಂಭಿಕ ಪುಟಗಳನ್ನು www.sampoorna.kannadasaahithya.com ತಾಣದಲ್ಲಿ ಕಾಣಬಹುದು.
ಇದನ್ನು ಪರಿಷ್ಕರಿಸಲು ಮತ್ತಷ್ಟು ತಂತ್ರಜ್ಞರು ಹಾಗೂ ಸ್ವಯಂ-ಆಸಕ್ತರ ಅಗತ್ಯವಿದೆ. ಕೈ ಜೋಡಿಸಲಿಚ್ಛಿಸುವವರು sampoorna_ksc@yahoo.com ಸಂಪರ್ಕಿಸಬಹುದು.
ಈಚೆಗೆ ಶೇಖರ್ ತಮ್ಮ ಈ ಪ್ರಯತ್ನದ ಬಗ್ಗೆ ಬರೆದ ಒಂದು ತುಣುಕನ್ನು ಇಲ್ಲಿ ಸೇರಿಸುತ್ತಿದ್ದೇನೆ.....
ಸಂಪೂರ್ಣ (ಕಂಟೆಂಟ್ ಮೇನೇಜ್‌ಮೆಂಟ್ ಸಿಸ್ಟಂ- ಕೃತಿಗಳ ನಿರ್ವಹಣೆಯ ವ್ಯವಸ್ಥೆ)
ಇದರ ಹಿನ್ನೆಲೆಯಲ್ಲಿರುವ ಚಿಂತನೆ
ಭಾಷೆ ಹಾಗು ಭಾವ ಎರಡನ್ನೂ ನಿರ್ವಹಿಸುವುದು ಅತ್ಯಂತ ಕಠಿಣವಾಗುತ್ತಿರುವ ತಾಂತ್ರಿಕ ಹಿನ್ನೆಲೆಯನ್ನು ಹೇಗೆ ನಿರ್ವಹಿಸಬೇಕು ಎಂದು ನಮ್ಮ ಮುಂದೆ ಇರುವ ದೊಡ್ಡ ಸವಾಲು. ಸವಲತ್ತುಗಳು, ಆರ್ಥಿಕವಾಗಿ ಪ್ರಬಲಾಗಿರುವವರ ಸ್ವತ್ತಾಗುತ್ತಿರುವ ಹಿನ್ನೆಲೆಯಲ್ಲಿ, ಬರಿ ಮೆರಿಟೋಕ್ರಸಿಯ ಸ್ವತ್ತಾಗಿರುವ ಹಿನ್ನೆಲೆಯುಳ್ಳ ಭಾರತದಂತಹ ಸಾಮಾಜಿಕ ಪರಿಸರದಲ್ಲಿ, ಇಂತಹುದೇ ಪರಿಸರವಿರುವ ಯಾವುದೇ ದೇಶಕ್ಕೂ, ಈ ಸವಾಲನ್ನು ಎದುರಿಸುವುದು ದಿನೇ ದಿನೇ ಕಠಿಣವಾಗುತ್ತ ಹೋಗುತ್ತಿದೆ. ಇದಕ್ಕೆ ಕಾರಣಗಳು ಬರಿಯ ಅರ್ಥಿಕ-ರಾಜಕೀಯ ಸಂಗತಿಗಳು ಮಾತ್ರವೇ ಕಾರಣವಾಗಿಲ್ಲ. ಯಾವುದನ್ನೂ ಆಲೋಚಿಸದೆ, ಪ್ರಶ್ನಿಸದೆ ಸಿಕ್ಕುವುದಕ್ಕೆ ಹೊಂದಿಕೊಂಡು ಹೋಗಿ ಬಿಡುವ, ನಾನ್ಯಾಕೆ ಮೈಮೇಲೆ ಎಳೆದುಕೊಳ್ಳಲಿ ಎಂದೆನ್ನುವ ಸ್ವ-ಕೇಂದ್ರಿತ ಮನಸ್ಸುಗಳು, ಸೋಮಾರಿತನ ಹಾಗು `ನಾನು ಅದ್ಭುತವಾದದ್ದನ್ನೂ ಮಾಡಿದ್ದೇನೆ' ಎಂಬ ಹುಂಬತನಗಳೂ ಸಹ ಕಾರಣಗಳೆ. ಇವುಗಳನ್ನು ಸಮಷ್ಟಿಯಾಗಿ ನೋಡಿದಾಗ ಸಾಮಾಜಿಕ- ಬಿಡಿಸಿನೋಡಿದಾಗ ವೈಯಕ್ತಿಕ. ಈ ಹಿನ್ನೆಲೆಯಲ್ಲೇ ಐಟಿ ಒದಗಿಸುತ್ತಿರುವ ಸವಲತ್ತುಗಳನ್ನೂ ಗ್ರಹಿಸಿ ನೋಡಬೇಕು.
ಐಟಿ ಒದಗಿಸುತ್ತಿರುವ ಸಾಧನಗಳು ಇನ್ನೂ "ಉಳ್ಳವರ-ಪ್ರತಿಭಾನ್ವಿತರಿಗೆ (ಮೆರಿಟ್)' ಸೀಮಿತವಾಗಿರುವುದು ಭಾರತ ದೇಶದ ದುರಂತ. ಇದರಿಂದಾಗಿ, ಡಿಜಿಟಲ್ ಕಂದರ ಮತ್ತೂ ಹೆಚ್ಚಾಗುತ್ತಾ ಹೋಗುವ ಸನ್ನಿವೇಶಗಳು ಮಾತ್ರವೇ ಕಾಣುತ್ತಿದೆಯಾಗಲಿ, ತಳಮಟ್ಟದವರನ್ನು ತಲುಪುವ ಯಾವುದೇ ಕಾರ್ಯಕ್ರಮಗಳು ಕಣ್ಣಿಗೆ ಕಾಣಿಸುತ್ತಿಲ್ಲ. ಉದಾಹರಣೆಗೆ: ಅಂತರ್ಜಾಲದ ನಿರ್ವಹಣೆ.
ಡಿಜಿಟಲ್ ಕಂದರ: ಭಾರತದ ಸಮಾಜವನ್ನು ಈ ಡಿಜಿಟಲ್ ಕಂದರ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಮೂರು ರೀತಿಯಲ್ಲಿ ವಿಂಗಡಿಸಬಹುದು:
೧. ಮಹಾ ನಗರಗಳು (ಸುಖಾ-ಭೋಗ ವಲಯ=ಕಂಫರ್ಟಬಲ್ ಜೋನ್)
ಈ ಪ್ರದೇಶಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚು ವಿನ್ ಎಕ್ಸ್ ಪಿ ಹಾಗು ಲೈನೆಕ್ಸ್ ಆಧರಿಸಿರುತ್ತದೆ. ಸಾಮಾನ್ಯರಿಗೆ, ಇವೆರಡೂ ದುರ್ಲಭ. ಹೆಚ್ಚು ಹಣ ಅಥವ ಹೆಚ್ಚು ಬುದ್ಧಿವಂತಿಕೆಯನ್ನು ಇವೆರಡೂ ಬೇಡುತ್ತದೆ. ಬಹಳ ಕಾಲದಿಂದಲೂ ಬಳಕೆಯಾಗಿರುವ ವಿಂಡೋಸ್ ಅತಿ ವ್ಯಾಪ್ತಿ ಪಡೆದುಕೊಂಡಿದೆ. ಹೆಚ್ಚು ಬಳಸುತ್ತಿರುವುದರಿಂದ ಅದು ಮೇಲ್ವರ್ಗದ ಬುದ್ಧಿವಂತ ಜನರಿಂದ ಕೆಳ ಮಟ್ಟದವರಿಗೂ ಬಳಕೆ ಸರಳವಾಗಿದೆ ಎಂದನ್ನಿಸಿಬಿಟ್ಟಿರುವುದರಿಂದ ಅದರ ವ್ಯಾಪ್ತಿ ಹೆಚ್ಚಿನದ್ದಾಗಿದ್ದರೆ ಆಶ್ಚರ್ಯವೇನಿಲ್ಲ. ಲೈನೆಕ್ಸ್ ಎನ್ನುವ ಚಳುವಳಿ ಒಂದು ಅಧ್ಭುತವಾದದ್ದು. ಅದರ ಆಶಯದ ಬಗೆಗೆ ಯಾವುದೇ ಅನುಮಾನಗಳಿಲ್ಲ. ಆದರೆ, ಭಾರತೀಯ ಲೈನೆಕ್ಸ್ ಎನ್ನುವುದು ನನಗೆ ಈಗಿನ ಸಂದರ್ಭದಲ್ಲಿ (ನೆನಪಿಡಿ: ಈಗಿನ ಸಂದರ್ಭದಲ್ಲಿ) ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಅದರೊಂದಿಗೆ ಗುರುತಿಸಿಕೊಂಡಿರುವ ಯುವಕ ಯುವತಿಯರು ಭಾರತೀಯ ಲೈನೆಕ್ಸ್ ಅನ್ನು ಪ್ರಾದೇಶಿಕಗೊಳಿಸದ ತನಕ ಅವರ ಎಲ್ಲ ಚಟುವಟಿಕೆಗಳನ್ನು ಅನುಮಾನದಿಂದಲೇ ನೋಡಬೇಕಾಗುತ್ತದೆ. ಬರಿಯ ಅಂತಹ ಒಂದು ಚಳವಳಿಯೊಂದಿಗೆ ಗುರುತಿಸಿಕೊಳ್ಳುವುದು `ನಾನು ಸಾಮಾಜಿಕವಾಗಿ-ರಾಜಕೀಯವಾಗಿ ಭ್ರಷ್ಟಗೊಳ್ಳದೆ' ಇದ್ದೇನೆ ಎಂದೆನ್ನುವ ಭಾವಶಮನಕ್ಕೆ ಮಾತ್ರವೇ-ಎಂದೆನ್ನಿಸಿಬಿಡುತ್ತದೆ. ಲೈನೆಕ್ಸ್ ಪ್ರಾದೇಶಿಕವಾಗದವರೆಗೆ, ಲೈನೆಕ್ಸ್ ಚಳವಳಿ ಒಂದು ಡೋಂಗಿತನವೆನ್ನದೆ ಬೇರೆ ದಾರಿಯೇ ಇಲ್ಲ. ಲೈನೆಕ್ಸ್ ಬಳಕೆ ಹೆಚ್ಚಾಗಬೇಕಾದರೆ, ಅದನ್ನು ಎಲ್ಲ ವರ್ಗದವರಿಗೂ ತಲುಪಿಸುವಂತೆ (ಕನಿಷ್ಟ ಮಟ್ಟದ ಕಂಪ್ಯೂಟರನ್ನೂ ಅದು ಸಪೋರ್‍ಟ್ ಮಾಡಬೇಕಾಗುತ್ತದೆ-ಇಲ್ಲದಿದ್ದರೆ ಇವರ ಧೋರಣೆಗೂ, ಮೈಕ್ರೋಸಾಫ್ಟ್‌ನ ನಿರ್ದಯಿ ವ್ಯಾಪಾರಿ ಧೋರ್‍ಅಣೆಗೂ ಹೆಚ್ಚು ವ್ಯತ್ಯಾಸವೇನಲ್ಲ, ಇದು ಸದ್ಯದ ಪರಿಸ್ಥಿತಿ.
ಅಂತರ್ಜಾಲದ ಜಾಲಾಟಕ್ಕೆ ಬೇಕಾದ ಬ್ಯಾಂಡ್‌ವಿಡ್ತ್ , ಕಚೇರಿಗಳಲ್ಲಿ ಅನೌಪಚಾರಿಕವಾಗಿ ಇರಬಲ್ಲ ವಾತಾವರಣ, ಬುದ್ಧಿವಂತಿಕೆ, ತಾಂತ್ರಿಕ ಪರಿಣತಿ-ಅನುಭವ ಇತ್ಯಾದಿಗಳು ಇವರ ಶಕ್ತಿ.
ಹೀಗಾಗಿ ಈ ವರ್ಗದವರನ್ನು ದೂರವಿಡುವುದರಲ್ಲಿ ಅರ್ಥವಿಲ್ಲ. ನಮ್ಮ ಆಲೋಚನೆಗಳು, ಕೃತಿಗಳು, ವಿಚಾರಗಳು ಇವರನ್ನೂ ತಲುಪಬೇಕು. ಏಕೆಂದರೆ ಇವರಿಗೆ ಮಾತ್ರ ಸದ್ಯಕ್ಕೆ "ಎಲ್ಲವನ್ನೂ" ಮುನ್ನಡೆಸುವ ಶಕ್ತಿ ಇರುವುದು.
ಸ್ಥೂಲವಾಗಿ ಈ ವರ್ಗದವರಿಗೆ ಎಕ್ಸ್ ಪಿ ಬಳಕೆಯಿಂದಾಗಿ ಎಲ್ಲ ತೆರನಾದ ಬೆಂಬಲವೂ ಸಿಕ್ಕಂತಾಗುತ್ತದೆ. ಲೈನೆಕ್ಸ್‌ನಲ್ಲಾದರೆ, ಬರಿಯ ಯುನಿಕೋಡ್ ಮಾತ್ರ.
ಯುನಿಕೋಡ್ ಹೊರತಾಗಿ ಲೈನೆಕ್ಸ್‌ನಲ್ಲಿ ಬೇರೆ ವ್ಯವಸ್ಥೆ ಇದ್ದರೆ ತಿಳಿಸಬೇಕಾಗಿ ಮನವಿ.
೨. ಅರೆ ನಗರಗಳು ಅಥವ ಅರೆ ಪಟ್ಟಣಗಳು (ಅರೆ ಸುಖಾಭೋಗ ವಲಯ)
ಮೇಲೆ ವಿವರಿಸಿರುವ ವರ್ಗಕ್ಕೆ ಇರುವ ಸವಲತ್ತುಗಳು ಪೂರ್ಣ ಪ್ರಮಾಣದಲ್ಲಿ ಇವರಿಗೆ ಇಲ್ಲ. ಈ ಪ್ರದೇಶಿಗರು ಮೇಲಿನ ವರ್ಗ ಹಾಗು ಕೆಳಾಗಿನ ವರ್ಗದವರ ಮಧ್ಯೆ ಇದ್ದಾರೆ. ಉದಾಹರಣೆಗೆ, ಮೈಸೂರು, ಹುಬ್ಬಳ್ಳಿ-ಧಾರವಾಡ ಮುಂತಾದೆಡೆ, ಸರ್ಕಾರ ಐಟಿಗೆ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಇಲ್ಲಿ ಎರಡು ವರ್ಗದವರೂ ಕಾಣ ಸಿಗುತ್ತಾರೆ.ಆದರೆ, ಇದನ್ನೇ ನಾವು, ಕೋಲಾರ, ಬೀದರ್ ಮುಂತಾದ ಪ್ರಾಂತ್ಯಗಳಿಗೆ ಅನ್ವಯಿಸಲಾಗುದಿಲ್ಲ. ಆದುದರಿಂದ ಇಲ್ಲೆಲ್ಲ ಹೆಚ್ಚೂ ಕಡಿಮೆ ವಿಂಡೋಸ್-೯೮ ಮಾತ್ರ ಬಳಕೆಯಲ್ಲಿದೆ. ವಿಂಡೋಸ್-೯೮ ಯುನಿಕೋಡನ್ನು ಬೆಂಬಲಿಸುವುದಿಲ್ಲ. ಲೈನೆಕ್ಸ್ ಇದ್ದೂ ಇಲ್ಲದಂತೆ ಬಳಕೆಯಾಗುತ್ತಿರುವುದರಿಂದ ಇನ್ನೂ ಯುನಿಕೋಡ್ ಬಳಕೆ ಹೆಚ್ಚಾಗಿ ಇರುವುದಕ್ಕೆ ಸಾಧ್ಯವಿಲ್ಲ ಎಂದು ಅಂದಾಜಿಸಬಹುದು.
೩. ಗ್ರಾಮಾಂತರ ಪ್ರದೇಶ (ಐಟಿ ವಂಚಿತ ವಲಯ)
ಕಂಪ್ಯೂಟರ್, ಸಾಫ್ಟ್‌ವೇರ್, ಕಿಯೋಸ್ಕ್‌ಗಳು ಇತ್ಯಾದಿಗಳ ಪ್ರವೇಶದಿಂದಾಗಿ ಉಂಟಾಗಬಹುದಾದ ತಾತ್ಕಾಲಿಕ ಸಾಂಸ್ಕೃತಿಕ ಪಲ್ಲಟಗಳ ಕಂಪ್ಯೂಟರ್ ಬಳಸಲು ಬೇಕಾದ ವಿದ್ಯುತ್, ಟೆಲಿಫೋನ್, ಇಂಟರ್‌ನೆಟ್ ಸಂಪರ್ಕ ಮುಂತಾದ ಮೂಲಭೂತ ಅಗತ್ಯಗಳ ಅಪಾರ ಕೊರತೆ. ಈ ನಡುವೆ ಅಲ್ಲೊಬ್ಬರು ಇಲ್ಲೊಬ್ಬರು ಬಳಸುವವರೂ ಇದ್ದಾರೆ. ಹೀಗೆ ಬಳಸುವ ಇವರನ್ನೂ ದೂರ ಇಡಲೇ ಬಾರದು. ಏಕೆಂಡರೆ, ಮುಂದಿನ ದಿನಗಳಲ್ಲಿ ಚಿಂತನೆಗಳ-ಪ್ರಕಟಣೆಯ ಮಾಧ್ಯಮಾವಾಗಿ ಅಂತರ್ಜಾಲ ಬೆಳೆಯಲಿದೆ. ಇಂತಹವರ ತಾಂತ್ರಿಕ ದೌರ್ಬಲ್ಯಗಳ ನಡುವೆಯೂ ನಾವು ತಲುಪಬೇಕು. ಇವರನ್ನು ಮಾಹಿತಿ ವಂಚಿತರನ್ನಾಗಿ ಇಡುವುದು ಬಹಳ ದೊಡ್ಡ ಪಾಪ (ಸಿನ್) ಇಲ್ಲಿಗೆ ಎಕ್ಸ್ ಪಿ ತಲುಪಲು, ಲೈನೆಕ್ಸ್ ತಲುಪಲು, ಯುನಿಕೋಡ್ ಬಳಕೆಗೆ ಬರುವಂತಾಗಲು ಇನ್ನೂ ಅನೇಕ ವರ್ಷಗಳಾದರೂ ಆಗುತ್ತದೆ. ಮೈಕ್ರೋಸಾಫ್ಟ್‌ನವರೇನೋ ಕಡಿಮೆ ದರದ ಎಕ್ಸ್ ಪಿ ಬಿಡುಗಡೆ ಮಾಡುತ್ತಾರಂತೆ- ಅಂದರೆ ಇದರಲ್ಲಿ ಮೂರೇ ಮೂರು "ಅಪ್ಲಿಕೇಶನ್"ಗಳನ್ನು ಬಳಸಬಹುದಂತೆ-ಕಾಸಿಗೆ ತಕ್ಕ ಕಜ್ಜಾಯವೆನ್ನುವ ನಿರ್ದಯಿ ವ್ಯಾಪಾರ ಮನೋಭಾವದ ಮೈಕ್ರೋಸಾಫ್ಟ್‌ನವರೇನು "ಸಾಮಾಜಿಕ ಬದಲಾವಣೆ'ಗೆ ಹೊರಟಿಲ್ಲವಲ್ಲ. ಅಂತಹ ಕಡಿಮೆದರದ ಎಕ್ಸ್ ಪಿ ಬಂದರೂ ಸಹ ಅದು ವ್ಯಾಪಕವಾಗುವುದಕ್ಕೆ ಇನ್ನೂ ಬಹಳ ಕಾಲವೇ ಬೇಕಾಗುತ್ತದೆ. ಇಂತಹ, ವಾತಾವರಣದಲ್ಲಿ ಕಂಪ್ಯೂಟರ್ ಬಳಸುತ್ತಿರುವವರನ್ನೂ ತಲುಪಬೇಕಾದ ಒಂದು ವ್ಯವಸ್ಥೆಯನ್ನಂತೂ ಈ ಸನ್ನಿವೇಶ ಆಗ್ರಹಿಸುತ್ತದೆ. ಇವರನ್ನು ಕಡೆಗಣಿಸಿದರೆ, ಮೇಲಿನ ವರ್ಗಕ್ಕಷ್ಟೇ ಎಲ್ಲ ಸವಲತ್ತುಗಳು ಸೀಮಿತವಾದರೆ, ಅದು ಸಾಮಾಜಿಕವಾದ ಅನ್ಯಾಯ ಮಾತ್ರವಲ್ಲದೆ ಮತ್ತೊಂದು ಬಗೆಯ ಅಪ್ರಾಮಾಣಿಕತೆ, ಶೋಷಣೆ.
- ಈ ಮೇಲಿನ ಚಿಂತನೆಯ ಹಿನ್ನೆಲೆಯಲ್ಲಿ ಅಂತರ್ಜಾಲದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ತಾಂತ್ರಿಕತೆ ಕುರಿತಂತೆ ಹೊಸದೇ ಆದ ವ್ಯವಸ್ಥೆ ಬೇಕಾಗಿದೆ. ಇದರ ಮನವರಿಕೆಯನಂತರ ಸುತ್ತಮುತ್ತಲೂ ಕಣ್ಣು ಹಾಯಿಸಿದಾಗ, ಸಿಗುವುದು ಅಂತರ್ಜಾಲದ ವ್ಯಾಪ್ತಿ ಹಳೆಯದು ಹಾಗು ಹೊಸದರ ಮಧ್ಯೆ ಕೆಟ್ಟದಾಗಿ ಹಂಚಿ ಹೋಗಿದೆ. ಛಿದ್ರ ಛಿದ್ರವಾಗಿದೆ. ಒಂದೋ ಹಳೆಯ ವ್ಯವಸ್ಥೆಗೆ ಅಥವ ಹೊಸ ವ್ಯವಸ್ಥೆಗೆ ಮಾತ್ರ ಸೀಮಿತಗೊಂಡು ಸೀಮಿತ ವರ್ಗವನ್ನು ಮಾತ್ರ ತಲುಪುತ್ತಿರುವುದು ಕಠೋರವಾದ ಸತ್ಯ. ಇದು, ಕನ್ನಡದ ಮಟ್ಟಿಗಂತೂ ಹೆಮ್ಮೆಯ ಸಂಗತಿಯಲ್ಲ. ಹೀಗಾಗಿ ಒಂದು ಹೊಸದೇ ಆದ ವ್ಯವಸ್ಥೆಯ ಕಲ್ಪನೆ ಇಂದಿನ ಜರೂರು. ಈ ಜರೂರಿಗೆ ತಕ್ಕಂತೆ ಕನ್ನಡಸಾಹಿತ್ಯ.ಕಾಂ ಸಜ್ಜಾಗಲು, ಇತರರನ್ನೂ ಸಜ್ಜುಗೊಳಿಸಲು ಮೊದಲನೆ ಹೆಜ್ಜೆ ಇಟ್ಟಿದೆ. ಅದರ ಪರಿಣಾಮವೇ ಈ "ಸಂಪೂರ್ಣ".
`ಸಂಪೂರ್ಣ'ದ ಬಗೆಗೆ ವಿವರಿಸುವ ಮುನ್ನ ಮುಕ್ತವಾಗಿ ದೊರೆಯುವ ಸ್ಕ್ರಿಪ್ಟ್‌ಗಳತ್ತ ನೋಡಿದಾಗ ಯುನಿಕೋಡ್ (ಯುಟಿಏಫ್-೮) ಹಾಗು ವಿಂಡೋಸ್-೧೨೫೨ (ಬರಹ, ನುಡಿ ಮುಂತಾದ ಫಾಂಟ್‌ಗಳು) ಕ್ಯಾರೆಕ್ಟರ್ ಎನ್‌ಕೋಡಿಂಗ್ ಎರಡನ್ನೂ ಒಂದೇ ಕೇಂದ್ರದಲ್ಲಿ ನಿರ್ವಹಣೆ ಮಾಡುವ ಒಂದಾದರೂ ಸ್ಕ್ರಿಪ್ಟ್ ಸಿಗಲಿಲ್ಲ ಎನ್ನುವುದು ಬಹುತೇಕ ನಿಜ. ಇರುವುದೆಲ್ಲ ಒಂದೋ ಯುಟಿಎಫ್-೮ ಅನ್ನು ಬೆಂಬಲಿಸುತ್ತದೆ ಅಥವ ವಿಂಡೋಸ್-೧೨೫೨ ಕ್ಯಾರೆಕ್ಟರ್ ಎನ್‌ಕೋಡಿಂಗನ್ನು ಮಾತ್ರ ಬೆಂಬಲಿಸುತ್ತದೆ. ಹೀಗಾಗಿ, ಕೃತಿಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವುದೆಂದರೆ ಯಾವುದಾದರೂ ಒಂದಕ್ಕೆ ಅಂಟಿಕೊಳ್ಳಬೇಕಾಗಿದೆ. ಈಗ ಈ `ಸಂಪೂರ್ಣ' ವ್ಯವಸ್ಥೆಯಡಿಯಲ್ಲಿ ಜಗತ್ತಿನ ಯಾವುದೇ ಭಾಷೆಯನ್ನಾಗಲಿ, ಕ್ಯಾರೆಕ್ಟರ್ ಎನ್‌ಕೋಡಿಂಗ್ ಅನ್ನಾಗಲಿ ಬೆಂಬಲಿಸುವ ವ್ಯವಸ್ಥೆಯನ್ನು (ಸ್ಕ್ರಿಪ್ಟ್) ವಿನ್ಯಾಸ ಮಾಡಿ ರಚಿಸಲಾಗುತ್ತಿದೆ. ಸದ್ಯಕ್ಕೆ ಇದು ವಿನ್ಯಾಸದ ಹಂತವನ್ನು ದಾಟಿದ ಒಂದು ಹೆಜ್ಜೆಯಾಗಿ ಪರಿಣಮಿಸಿದೆ. ಆದರೆ, ಇನ್ನೂ ಎಲ್ಲರ ಬಳಕೆಗೆ ಬಿಡುಗಡೆ ಮಾಡುವ ಹಂತ ಮುಟ್ಟಿಲ್ಲ. ಹೀಗಾಗಿ, ಪರೀಕ್ಷಾರ್ಥವಾಗಿ ಈ ಸ್ಕ್ರಿಪ್ಟನ್ನು ಕನ್ನಡಸಾಹಿತ್ಯ.ಕಾಂ ಅಡಿಯಲ್ಲಿ ಸ್ಥಾಪಿಸಿದ್ದೇವೆ. ಆಸಕ್ತಿ ಇರುವವರು, ರಿಜಿಸ್ಟರ್ ಮಾಡಿಕೊಂಡು ಪರೀಕ್ಷಿಸಬಹುದು. ತಮ್ಮ ಪ್ರತಿಕ್ರಿಯೆಗಳನ್ನು ಬರೆದು ತಿಳಿಸಬಹುದು. ಮತ್ತೆ, ಈ ಯೋಜನೆಯಲ್ಲಿ ಪಾಲ್ಗೊಂಡು, ಇದನ್ನು ಮತ್ತಷ್ಟು ದೃಢಪಡಿಸಲು ನೆರವಾಗಬಹುದು.
ಆದರೆ ನೆನಪಲ್ಲಿಡಿ. ಈಗಿನ ವ್ಯವಸ್ಥೆ ಪರೀಕ್ಷಾರ್ಥವಾಗಿರುವುದು, ಹಾಗು ಅಪೂರ್ಣಗೊಂಡಿರುವುದು. ಆದರೆ, ದಿನಕಳೆದಂತೆ ಇದನ್ನು ಹೆಚ್ಚು ಬಳಕೆಗೆ ಯೋಗ್ಯವೆನ್ನಿಸುವಂತೆ ಮಾಡುವಲ್ಲಿ ಶ್ರಮಿಸುತ್ತಿದ್ದೇವೆ. ಇದರಲ್ಲಿ ಭಾಗಿಯಾಗಲು ಇಚ್ಛಿಸುವವರು ಕೆಳಗಿನ ವಿಳಾಸಕ್ಕೆ ಬರೆಯಬಹುದು-ಅಂದರೆ ಈ ಮೈಲ್ ಕಳಿಸಬಹುದು. ನಿಮ್ಮ ಆಸಕ್ತಿ, ಅಂದರೆ ಪರೀಕ್ಷಿಸಲು ಕುತೂಹಲಿಗಳಾಗಿದ್ದೀರ ಅಥವ ಈ ಯೋಜನೆಯಲ್ಲಿ ನೀವೂ ಪಾಲ್ಗೊಳ್ಳಲು ಇಚ್ಛಿಸಿದ್ದೀರ, ನಿಮ್ಮ ಪರಿಣತಿ ಇತ್ಯಾದಿ ವಿವರಗಳೊಂದಿಗೆ
sampoorna_ksc AT yahoo.com ವಿಳಾಸಕ್ಕೆ ಈಮೈಲ್ ಮಾಡಿ.
ಕಲ್ಪನೆ-ವಿನ್ಯಾಸ: ಶೇಖರ್‌ಪೂರ್ಣ. ಕನ್ನಡಸಾಹಿತ್ಯ.ಕಾಂ ನ ಮುಂಚೂಣಿಯಲ್ಲಿದ್ದಾರೆ.
ತಾಂತ್ರಿಕ-ಪರಿಣತಿ: ರಾಘವ್ ಕೋಟೇಕಾರ್, ವೆಬ್‌ಡಿಸೈನಿಂಗಿನಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಇರುವವರು.
-ಶೇಖರ್‌ಪೂರ್ಣ
-ರಾಘವ್ ಕೋಟೇಕಾರ್
ದಿನಾಂಕ: ೨೩-೦೫-೨೦೦೬
http://www.sampoorna.kannadasaahithya.com
we pledge ourself for the cause of http://www.kannadasaahithya.com
Comments
ಲಾಗಿನ್ ಆಗಿ ಪರೀಕ್ಷಿಸಿ
`ಸಂಪೂರ್ಣ' ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ
ಹೊಸ ಸಿಎಂಎಸ್ ಜಿಪಿಎಲ್ ನಲ್ಲಿ ದೊರೆಯುತ್ತದೆಯೇ?
In reply to ಹೊಸ ಸಿಎಂಎಸ್ ಜಿಪಿಎಲ್ ನಲ್ಲಿ ದೊರೆಯುತ್ತದೆಯೇ? by tksbhat
ವಾಸ್ತವವಲ್ಲ
In reply to ವಾಸ್ತವವಲ್ಲ by Rohit
ಏನಿದು CMS
In reply to ಏನಿದು CMS by anjali
CMS - ಕಂಟೆಂಟ್ ನಿರ್ವಹಣಾ ವ್ಯವಸ್ಥೆ
In reply to CMS - ಕಂಟೆಂಟ್ ನಿರ್ವಹಣಾ ವ್ಯವಸ್ಥೆ by Rohit
ತಪ್ಪು ಮಾಹಿತಿ ನೀಡದಿರಿ... ಕಾಮೆಂಟುಗಳಲ್ಲಿ ದೂಷಣೆ ಬೇಡ
In reply to ತಪ್ಪು ಮಾಹಿತಿ ನೀಡದಿರಿ... ಕಾಮೆಂಟುಗಳಲ್ಲಿ ದೂಷಣೆ ಬೇಡ by hpn
ನಿಂತ ನೆಲ ನೋಡಿಕೊಳ್ಳೋಣ
In reply to ನಿಂತ ನೆಲ ನೋಡಿಕೊಳ್ಳೋಣ by ismail
ಧನ್ಯವಾದಗಳು - ದೂಷಣೆಯ ಆಶಯವಿಲ್ಲ
In reply to ಏನಿದು CMS by anjali
ಮ + ಊ ಬಗ್ಗೆ
In reply to ವಾಸ್ತವವಲ್ಲ by Rohit
ಜಿಪಿಎಲ್ ಯಾಕೆ ಬೇಕು?
In reply to ಜಿಪಿಎಲ್ ಯಾಕೆ ಬೇಕು? by tksbhat
ಯೋಗ್ಯತೆ ಕಡಿಮೆಯೇ
In reply to ಯೋಗ್ಯತೆ ಕಡಿಮೆಯೇ by Rohit
ಇದೆಂಥ ಚರ್ಚೆ?