ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

ಮೊನ್ನೆ ಶನಿವಾರ ಒಂದು ಸೊಗಸಾದ ಸಂಗೀತ ಕಚೇರಿಗೆ ಹೋಗುವ ಅವಕಾಶ ದೊರೆತಿತ್ತು. ಒಂದು ಒಳ್ಳೇ ಉದ್ದೇಶಕ್ಕಾಗಿ ಆಯೋಜಿತವಾಗಿದ್ದ ಕಾರ್ಯಕ್ರಮ ಅದು. ಹಾಡುಗಾರ್ತಿ ಹಾಡಲು ಕರ್ನಾಟಕದ ವಾಗ್ಗೇಯಕಾರ ರಚನೆಗಳನ್ನೇ ಆಯ್ದಿದ್ದರು. ಮೈಸೂರು ಸಂಗೀತದ ಒಂದು ಪ್ರಮುಖ ಕೇಂದ್ರವಾದ್ದರಿಂದ ಮೈಸೂರಿನ ವಾಗ್ಗೇಯಕಾರರ ರಚನೆಗಳೇ ಅದರಲ್ಲಿ ಹೆಚ್ಚಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಅವರು ಹಾಡಿದ ರಚನೆಗಳಲ್ಲಿ ಮೊದಲ ರಚನೆಯನ್ನು ನವರಾತ್ರಿಯ ಮೊದಲ ದಿನವಾದ ಇಂದು ನಿಮಗೆ ಕೇಳಿಸೋಣ ಎನ್ನಿಸಿತು. ಅದಕ್ಕೆ ಎರಡು ಮೂರು ಕಾರಣಗಳಿವೆ. ಒಂದು ದಸರ ಅಂದರೆ ಮೈಸೂರು, ಮೈಸೂರು ಅಂದರೆ ದಸರಾ ಅನ್ನಿಸುವ ಈ ನವರಾತ್ರಿ ಹಬ್ಬದಲ್ಲಿ, ಮೈಸೂರಿನಲ್ಲಿ ರಚನೆಯಾದ ಇದು ಒಳ್ಳೇ ಆರಂಭವನ್ನು ತರುತ್ತೆ ಎನ್ನುವುದು. ಎರಡನೆಯದು, ಸಂಗೀತ ಕಚೇರಿಯನ್ನು ವರ್ಣದೊಂದಿಗೆ ಆರಂಭಿಸಿದಾಗ ಅದು ಸೊಗಸುತ್ತೆಂಬ ನಂಬಿಕೆಯಂತೆ, ಈ ಹಾಡನ್ನು ಕೇಳುತ್ತ ನವರಾತ್ರಿ ಹಬ್ಬವೂ ಎಲ್ಲರಿಗೂ ಸೊಗಸಲಿ ಎನ್ನುವುದು ನನ್ನ ಆಸೆ. ಮೂರನೆಯ ವಿಷಯಕ್ಕೆ
ಮತ್ತೆ ಬರುವೆ.

ಈ ರಚನೆ ಒಂದು ದರು ವರ್ಣ. ವರ್ಣ ಎನ್ನುವುದು ಸಂಗೀತದಲ್ಲಿ ಒಂದು ಸಂಗೀತಕ್ಕೆ ಪ್ರಾಮುಖ್ಯತೆ ಕೊಡುವಂತಹ ರಚನೆ. ಅಂದರೆ ಸಾಹಿತ್ಯದ ಅಂಶ ಕಡಿಮೆ ಇದ್ದು, ರಾಗಗಳ ವಿವಿಧ ಸಂಚಾರಗಳನ್ನು ಚೆನ್ನಾಗಿ ತೋರಿಸಿಕೊಡಲು ಇರುವಂತಹ ರಚನೆ ಇದು. ಪಲ್ಲವಿ ಅನುಪಲ್ಲವಿ ಆದನಂತರ ಚಿಟ್ಟೆಸ್ವರವೂ, ಮತ್ತೆ ಚರಣವಾದ ನಂತರ ಹಲವಾರು ಎತ್ತುಗಡೆ ಸ್ವರಗಳು ಇರುವುದೂ ಇದರ ಲಕ್ಷಣ.ವರ್ಣಗಳಲ್ಲಿ ದರು ಎನ್ನುವುದು ಒಂದು ವಿಧ. ದರು ವರ್ಣದಲ್ಲಿ
ಸಾಹಿತ್ಯಕ್ಕೆ ಬೇರೆ ವರ್ಣಗಳಿಗಿದ್ದಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆ ಇದ್ದು, ನೃತ್ಯಕ್ಕೆ ಅನುಕೂಲವಾಗುವಂತೆ ಜತಿಗಳೂ ಇರುತ್ತವೆ. ಚಿಟ್ಟೆಸ್ವರಕ್ಕೂ ಸಾಹಿತ್ಯ ಜತಿಗಳಿರುವುದು ನರ್ತನ ಮಾಡುವವರಿಗೆ ಅವರ ಅಭಿನಯವನ್ನೂ, ಹೆಜ್ಜೆ ಹಾಕುವ ಕುಶಲತೆಯನ್ನೂ ಎತ್ತಿಹಿಡಿಯಲು ಒಳ್ಳೇ ಅವಕಾಶ ಕೊಡುತ್ತದೆ.

ಇವತ್ತು ನಾನು ಮಾತಾಡುತ್ತಿರುವುದು ಖಮಾಚ್ ರಾಗದಲ್ಲಿರುವ ಮುತ್ತಯ್ಯ ಭಾಗವತರ "ಮಾತೇ ಮಲಯ ಧ್ವಜ ಪಾಂಡ್ಯ ಸಂಜಾತೆ" ಎಂಬ ದರುವಿನ ಬಗ್ಗೆ. ಪಾಡ್ಯ ದ ದಿನ ’ಪಾಂಡ್ಯ’ ರಾಜಕುಮಾರಿಯನ್ನು ನೆನೆಯುವ, ಹೊಗಳಿ ಆರಾಧಿಸುವ ಈ ಈ ರಚನೆಯನ್ನು ಸಂಗೀತಪ್ರಿಯ ತಾಣಕ್ಕೆ ಇಲ್ಲಿರುವ ಕೊಂಡಿಗಳಿಂದ ಕೇಳಬಹುದು:

ಎಂ.ಎಸ್. ಸುಬ್ಬುಲಕ್ಷ್ಮಿಯವರ ಕೊರಳಲ್ಲಿ ಮಾತೆ ಮಲಯಧ್ವಜ ಪಾಂಡ್ಯ ಸಂಜಾತೆ

ಟಿ.ಎನ್. ಶೇಷಗೋಪಾಲನ್ ಅವರ ದನಿಯಲ್ಲಿ ಮಾತೆ ಮಲಯಧ್ವಜ ಪಾಂಡ್ಯ ಸಂಜಾತೆ

(ಈ ಕೊಂಡಿಗಳು ನನಗೇಕೋ ಫೈರ್ ಫಾಕ್ಸ್ ನಲ್ಲಿ ತೊಂದರೆ ಕೊಟ್ಟವು - ಆದರೆ ಇಂಟರ್ನೆಟ್ ಎಕ್ಸ್‍ಪ್ಲೋರರ್ ನಲ್ಲಿ ಚೆನ್ನಾಗಿ ಕೇಳಿದವು :)

ಮೇಲೆ ಹೇಳಿರುವ ಅಂಶಗಳನ್ನು ಹಾಡು ಕೇಳುವಾಗ ಗಮನಿಸಿ. ಸ್ವರಾಕ್ಷರ ಪ್ರಯೋಗಗಳೇ ತುಂಬಿದ ಈ ರಚನೆ ಹಬ್ಬದ ಹುರುಪಿಗೆ ಒಂದು ಒಳ್ಳೇ ಹಾಡೆಂದು ನನ್ನೆಣಿಕೆ.

ಈ ದರುವು ಸಂಸ್ಕೃತ ಪದಗಳೇ ಹೆಚ್ಚಿರುವ ಶೈಲಿಯ ಕನ್ನಡದಲ್ಲಿದೆ:

ಪಲ್ಲವಿ:

ಮಾತೇ ಮಲಯಧ್ವಜ ಪಾಂಡ್ಯ ಸಂಜಾತೆ ಮಾತಂಗ ವದನ ಗುಹ ||

ಅನುಪಲ್ಲವಿ:
ಶಾತೋದರಿ ಶಂಕರಿ ಚಂದ್ರಕಲಾಧರಿ ತಾಯೆ ಗೌರಿ! ||

ಚಿಟ್ಟೆಸ್ವರ ಸಾಹಿತ್ಯ:

ದಾತಾ ಸಕಲಕಲಾ ನಿಪುಣ ಚತುರ ದಾತಾ ವಿವಿಧಮತ ಸಮಯ ಸಮರಸ
ದಾತಾ ಸುಲಭ ವಚನಮಧುರ ವಚನದಾತಾ ಸರಸ ರುಚಿರತರ ಸ್ವರಲಯ
ಗೀತ ಸುಖದ ನಿಜಭಾವ ರಸಿಕ ವರದಾತ ಮಹಿಶೂರನಾಥ ನಾಲ್ವಡಿ ಶ್ರೀಕೃಷ್ಣ ರಾಜೇಂದ್ರ-
ರ ತಾಯೆ ಸದಾ ಪೊರೆ ಮಹಿತೆ ಹರಿಕೇಶ ಮನೋಹರೆ ಸದಯೆ! ||

ಚರಣ:
ಶಾಮೇ ಸಕಲಭುವನ ಸಾರ್ವಭೌಮೇ! ಶಶಿ ಮಂಡಲ ಮಧ್ಯಗೆ! ||

ಮೈಸೂರರಸರಾದ ನಾಲ್ವಡಿ ಶ್ರೀಕೃಷ್ಣರ ಆಸ್ಥಾನದಲ್ಲಿದ್ದ ಮುತ್ತಯ್ಯಭಾಗವತರು ಆ ದೊರೆಯನ್ನು ಎಲ್ಲ ಬಗೆಯ ಕಲೆಗಳಿಗೆ ಪೋಷಕ, ಸಂಗೀತ ನಾಟಕಗಳಲ್ಲಿ ರಸಿಕ, ಕಲಾವಿದರಿಗೆ ಕೊಡುಗೈದೊರೆ ಎಂದೆಲ್ಲ ಹೊಗಳುತ್ತ "ವಿವಿಧ ಮತ ಸಮಯ ಸಮರಸ ದಾತಾ" - ಎಲ್ಲ ಮತಗಳಲ್ಲೂ, ಎಲ್ಲ ಅಭಿಪ್ರಾಯಗಳಲ್ಲೂ, ಎಲ್ಲ ರೀತಿಯ ಸಮಯಗಳಲ್ಲಿಯೂ ಸಮರಸವನ್ನು ಕಂಡುಕೊಳ್ಳುವಂತಹ ದೊರೆ ಎಂದು ಹೊಗಳಿರುವಾದ, ಅದೇ ಪರಂಪರೆಯಲ್ಲಿರುವ ನಮ್ಮ ರಾಜ್ಯ ಹಾಗೇ ಮುಂದುವರೆದರೆ ಸೊಗಸಲ್ಲವೇ ಎನ್ನಿಸದಿರದು.

ನವರಾತ್ರಿ ಹಬ್ಬವು ನಿಮ್ಮೆಲ್ಲರಿಗೂ ಒಳ್ಳಿತನ್ನು ತರಲಿ ಎಂಬ ಹಾರೈಕೆ ನನ್ನದು.

-ಹಂಸಾನಂದಿ

Rating
No votes yet

Comments