ಬಾಂಬೆ ಡೈಯಿಂಗ್!

ಬಾಂಬೆ ಡೈಯಿಂಗ್!

ದೇಶದ ವಾಣಿಜ್ಯ ನಗರಿ ಬಾಂಬೆ ಅಲಿಯಾಸ್ ಮುಂಬೈ ವರುಣನ ರೌದ್ರಾವತಾರದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಅನಾಹುತ. ಬೃಹನ್ನಗರದ ಜೀವನಾಡಿ ಲೋಕಲ್ ಟ್ರೇನಿನಲ್ಲಿ ದಿನದ ಕೆಲಸ ಮುಗಿಸಿ ಸಂಜೆ ಮನೆಗೆ ತೆರಳುತ್ತಿದ್ದ ಮುಗ್ಧ ನಾಗರಿಕರ ಮಾರಣಹೋಮ. ಕೇವಲ ಹನ್ನೆರಡೇ ನಿಮಿಷಗಳಲ್ಲಿ ಏಳು ಕಡೆ ಏಕಕಾಲಕ್ಕೆ ಜುಲೈ 11, 2006 ರಂದು ಸಂಭವಿಸಿದ ಸ್ಫೋಟದಲ್ಲಿ ನೂರಾರು ಮುಗ್ಧರು ಮಸಣದ ಹಾದಿ ಹಿಡಿದಿದ್ದಾರೆ.

ಮೊನ್ನೆ ವಾರಾಣಸಿಯಾಯಿತು, ನಿನ್ನೆ ಬೆಂಗಳೂರಿನ ವಿಜ್ಞಾನ ಕೇಂದ್ರ, ಇವತ್ತು ಮುಂಬೈ, ಶ್ರೀನಗರ ನಾಳೆ ಯಾವ ಊರು, ಯಾವ ಸ್ಥಳದ ಮೇಲೆ ಮಾನವರೂಪಿ ರಾಕ್ಷಸರು ಬಲೆ ಹೆಣೆದಿದ್ದಾರೋ ಗೊತ್ತಿಲ್ಲ.

1993ರ ಸರಣಿ ಸ್ಪೋಟದ ಬಳಿಕ ಮುಂಬೈ ಕನಿಷ್ಠ 2-3 ದೊಡ್ಡ ಪ್ರಮಾಣದ ಸ್ಫೋಟ ಕಂಡಿದೆ. ಆದರೆ ಮುಂಬೈಕಾರರು ಧೃತಿಗೆಟ್ಟಿಲ್ಲ. ಅದನ್ನೇ ಅವರ ವೀಕ್‌ನೆಸ್ ಎಂದು ತಿಳಿದಿರುವ ಉಗ್ರಗಾಮಿಗಳ ಮತ್ತೆ ಮತ್ತೆ ಅವರ ಮೇಲೆ ದಾಳಿ ಮಾಡುತ್ತಿದ್ದಾರೆ.

ಬಾಂಬೆಯಲ್ಲಿ ಬಾಂಬ್ ಸ್ಫೋಟವಾಗಿದೆ, ಬಾಗ್ದಾದಿನಲ್ಲಿ ಸ್ಫೋಟಿಸಿದ ಗ್ರೆನೇಡ್ ದಾಳಿಗೆ ನೂರಾರು ಜನ ಸತ್ತಿದ್ದಾರೆ, ಮತ್ತೆಲ್ಲೋ ನಡೆದ ಉಗ್ರರ ಕೃತ್ಯಕ್ಕೆ ಇನ್ನೆಷ್ಟೋ ಜನ ಸತ್ತಿದ್ದಾರೆ ಎಂದು ಟಿವಿ ಸುದ್ದಿ ಕೇಳುತ್ತಿದ್ದರೆ, ನಾವು ಚಹಾ ಕುಡಿಯುತ್ತ ಹತ್ತರ ಜೊತೆಗೇ ಅದೂ ಹನ್ನೊಂದನೇ ಸುದ್ದಿಯಂಬಂತೆ ನೋಡುತ್ತ ಕುಳಿತು ಬಿಡುತ್ತೇವೆ. ಅಷ್ಟರ ಮಟ್ಟಿಗೆ ನಾವು ಭಾವನಾಶೂನ್ಯರಾಗಿಬಿಟ್ಟಿದ್ದೇವೆ.

ಇಂಥ ಸುದ್ದಿಗಳೆಲ್ಲ ನಮಗೆ ಚಹಾದ ಜೋಡಿ ಚೂಡಾದ್ಹಾಂಗ!

ದೇಶ, ಭಾಷೆ, ಗಡಿ, ಅಧಿಕಾರ, ರಾಜಕೀಯ ಎಲ್ಲಾ ಪ್ರತಿಷ್ಠೆಗಳ ಆಚೆ ನಿಂತು ನೋಡಿದರೆ ಮಾನವೀಯತೆಯ ಮೇಲೆ ನಡೆಯುತ್ತಿರುವ ನಿರಂತರ ವ್ಯಭಿಚಾರವಿದು.

ಈ ಮುಜಾಹಿದೀನ್ ಪಿಶಾಚಿಗಳಿಗೆ ಜನರನ್ನು ಕೊಲ್ಲಿ ಎಂದು ಆ ಖುದಾ ಆಜ್ಞಾಪಿಸಿದ್ದಾನಂತೆ. ಉಗ್ರಗಾಮಿ ಕೃತ್ಯದಂಥ ಘೋರ ಅಸ್ತ್ರದ ಮೂಲಕ ಇನ್ನೊಬ್ಬರ ಬದುಕುವ ಹಕ್ಕು ಕಸಿಯುವುದನ್ನು ಯಾವ ಖುದಾ ಮೆಚ್ಚುತ್ತಾನೆ?

ನಮಗೆ ಉಗ್ರರ ಆಕ್ರಮಣ ಇದೇನೂ ಹೊಸದಲ್ಲ. ಅನೇಕ ಬಾರಿ ಇಂಥ ದಾಳಿಗಳನ್ನು ಎದುರಿಸಿದ್ದೇವೆ, ಎದುರಿಸುತ್ತಿದ್ದೇವೆ. ಆದರೂ ನಮಗೆ ಇದರ ವಿರುದ್ಧ ಒಂದು ನಿರ್ಣಾಯಕವಾದಂಥ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರೆ ನಾಚಿಗೆಗೇಡು.

ಇಲ್ಲಿ ಜನ ಸಾಮಾನ್ಯರು ತಮ್ಮದಲ್ಲದ ತಪ್ಪಿಗೆ ರೈಲು ಡಬ್ಬಿಗಳಲ್ಲಿ, ದೇವಸ್ಥಾನದಲ್ಲಿ, ವಿಜ್ಞಾನ ಮಂದಿರದಲ್ಲಿ ಛಿದ್ರ ಛಿದ್ರವಾಗಿ ಸಿಡಿದು ಸಾಯುತ್ತಿದ್ದರೆ ಅತ್ತ ದೆಹಲಿಯಲ್ಲಿ ಎ ಯಿಂದ ಝಡ್‌ವರೆಗಿನ ಏಳು ಸುತ್ತಿನ ಭದ್ರತಾ ಕೋಟೆಯಲ್ಲಿ ಗುಂಡು ನಿರೋಧಕ ಕವಚ ತೊಟ್ಟ ಗೃಹ ಸಚಿವ, ಪ್ರಧಾನಿಯಾದಿಯಾಗಿ ಆಳುವ-ವಿರೋಧ ಪಕ್ಷದ ನಾಯಕರು ಜನರಿಗೆ ಶಾಂತಿಯಿಂದಿರುವಂತೆ, ಇಂಥ ಸಂಕಷ್ಟವನ್ನು ಎದುರಿಸುವಂತೆ ಕರೆ ಕೊಡುತ್ತಾರೆ. ಇಂಥ ಕೆಲಸಕ್ಕೆ ಬಾರದ ಕರೆ ಕೊಡುವುದರಿಂದ ಅವರಪ್ಪನದೇನು ಗಂಟು ಹೋಗುವುದಿಲ್ಲವಲ್ಲ. ಏಕೆಂದರೆ ಇಂಥ ಸ್ಫೋಟಗಳಲ್ಲಿ ಅವರ ಹೆಂಡಿರು-ಮಕ್ಕಳು ಸಾಯುವುದಿಲ್ಲವಲ್ಲ. ಅದಕ್ಕೇ ಅವರಿಗೆ ಶ್ರೀಸಾಮಾನ್ಯನ ತಳಮಳವೂ ಅರ್ಥವಾಗುವುದಿಲ್ಲ.

ಭಾರಿ ಸಂಖ್ಯೆಯ ಭದ್ರತಾ ಪಡೆ, ಅಷ್ಟೇ ಚುರುಕಾದ ಗುಪ್ತಚರ ಪಡೆ ಹೊಂದಿರುವ ನಮ್ಮ ದೇಶಕ್ಕೆ ಇಂಥ ದಾಳಿಗಳನ್ನು ಮಾಡುವವರು ಯಾರು ಎಂಬುದು ಗೊತ್ತಾಗುವುದಿಲ್ಲವೇ? ಈ ಪ್ರಮಾಣದ ಘಟನೆಗಳು ಸ್ಥಳೀಯರ ನೆರವಿಲ್ಲದೇ ಕೇವಲ ವಿದೇಶಿಯರಿಂದ ಮಾತ್ರ ಸಾಧ್ಯ ಎಂದರೆ ನಂಬಲು ಸಾಧ್ಯವೇ ಇಲ್ಲ.
ನಮ್ಮೊಳಗೇ ಇದ್ದು ಎಂಜಲು ಕಾಸಿಗೆ ನಮ್ಮವರ ಮೇಲೇ ಬಾಂಬು ಹಾಕುವ ದುಷ್ಟರನ್ನು ಹಿಡಿಯಲು ಸಾಧ್ಯವಾಗದ ನಮ್ಮ ರಕ್ಷಣಾ ವ್ಯವಸ್ಥೆ ಇದ್ದರೆಷ್ಟು ಬಿಟ್ಟರೆಷ್ಟು. ಒಬ್ಬ ಮಹಾಭ್ರಷ್ಟ ಸಚಿವ ಇಂಥ ಪ್ರದೇಶದಲ್ಲಿ ಹಾಯ್ದು ಹೋಗುತ್ತಾನೆ ಎಂದರೆ ಆತ ಬರುವುದಕ್ಕಿಂತ ಮುನ್ನ ಎಷ್ಟು ಬಾರಿ ರಕ್ಷಣಾ ತಪಾಸಣೆಯಾಗಿರುತ್ತದೋ, ಅದಲ್ಲದೇ ಆತನ ರಕ್ಷಣೆಗೆ ಒಂದು ಪಡೆಯೇ ನಿಯೋಜಿತವಾಗಿರುತ್ತದೆ. ಹಾಗಿದ್ದರೆ ನಮ್ಮ ರಕ್ಷಣಾ ವ್ಯವಸ್ಥೆಯೇನಿದ್ದರೂ ಕೇವಲ ಗಣ್ಯರ-ಅತಿ ಗಣ್ಯರ ರಕ್ಷಣೆಗೆ ಮಾತ್ರ ಮೀಸಲಾಗಿದೆಯೇ? ಶ್ರೀ ಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ನನಗೆ ಸದಾ ಕಾಡುತ್ತದೆ.

ಇತ್ತ ಸ್ನೇಹದ ನಾಟಕವಾಡುವ ನಮ್ಮ ನೆರೆಯ ದೇಶ ಇನ್ನೊಂದೆಡೆ ಗಡ್ಡಧಾರಿ ಹೆ(ಮ)ಡ್ಡರ ಬೆನ್ನುಬಾಗುವಷ್ಟು ಮದ್ದುಗುಂಡು ಹೇರಿ ಇಂಥ ದಾಳಿಗೆ ಪ್ರೇರೇಪಿಸುತ್ತದೆ. ಬಳಿಕ ಸ್ಫೋಟವನ್ನು "ಉಗ್ರವಾಗಿ" ಖಂಡಿಸಿ ಮೊಸಳೆ ಕಣ್ಣೀರು ಸುರಿಸಿ ಪ್ರಚಾರ ಪಡೆಯುತ್ತದೆ.

ಸಮಸ್ಯೆಗೆ ಷಷ್ಠ್ಯಬ್ದಿ:

ನಮಗೆ ಸ್ವಾತಂತ್ರ್ಯ ಸಿಕ್ಕು 60 ವರ್ಷ ಆಗುತ್ತ ಬಂತು. ಕಾಶ್ಮೀರ ಸಮಸ್ಯೆಗೂ ಈಗ ಷಷ್ಠ್ಯಬ್ದಿ! ಆರು ದಶಕಗಳ ಅವಧಿಯಲ್ಲಿ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿರುವುದು ಮಾತ್ರ ಎರಡೂ ದೇಶಗಳ ರಾಜಕೀಯ ನಾಯಕರಲ್ಲಿನ ಇಚ್ಛಾಶಕ್ತಿಯನ್ನೇ ಪ್ರಶ್ನಿಸುವಂತಿದೆ. ಒಂದು ವಾದದ ಪ್ರಕಾರ ಈ ಸಮಸ್ಯೆ ಬಗೆಹರಿಯುವುದು ಉಭಯ ದೇಶಗಳ ನಾಯಕರಿಗೂ ಬೇಕಾಗಿಲ್ಲ. ಏಕೆಂದರೆ ಇದೊಂದು ಚಿನ್ನದ ಮೊಟ್ಟೆಯಿಡುವ ಕೋಳಿ.

ಪ್ರತಿಬಾರಿ ಸ್ಫೋಟವಾದಾಗಲೆಲ್ಲ ಈ ಕೋಳಿ ಮೊಟ್ಟೆಯಿಡುತ್ತದೆ, ಎರಡು ದೇಶಗಳ ಹಪಾಹಪಿಗಳು ಬಾಚಿಕೊಳ್ಳುತ್ತವೆ. ಇವತ್ತು ಮುಂಬೈ, ನಾಳೆ ಬೆಂಗಳೂರು, ನಾಡಿದ್ದು ದೆಹಲಿಯಲ್ಲಿ ಸ್ಫೋಟ ಸಂಭವಿಸುತ್ತಾ ಹೋಗುತ್ತವೆ. ನಾವು ಮಾತ್ರ ತಟ್ಟೆಯಲ್ಲಿ ಅನ್ನ ಕಿವುಚುತ್ತ ಇಂದಿನ ಸ್ಫೋಟಕ್ಕೆ ಇನ್ನೊಂದು ಸೇರ್ಪಡೆ ಎಂದು ಅದೇ ನಿರ್ವಿಣ್ಣ ಭಾವದಲ್ಲಿ ತುತ್ತು ಬಾಯಿಗಿಡುತ್ತೇವೆ.

ಮತ್ತೆ ಆಗಸ್ಟ್ 15 ಬಂದಾಗ ಭಾರತ ಮಾತಾ ಕಿ ಜೈ ಅನ್ನುತ್ತೇವೆ. ಆಗಸ್ಟ್ 15 ಪ್ರತಿವರ್ಷ ಬರುತ್ತದೆ-ಹೋಗುತ್ತದೆ; ಕಾಶ್ಮೀರ, ಸಿಯಾಚಿನ್ ವಿವಾದ ಇದ್ದಲ್ಲೇ ಇರುತ್ತವೆ, ಮಾರಣಹೋಮ ಮುಂದುವರಿಯುತ್ತಾ ಹೋಗುತ್ತದೆ.

ಭಾರತ ಮಾತಾ ಕಿ ಜೈ!

http://vishwaputa.blogspot.com

Rating
No votes yet

Comments