ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು. ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ. ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ. ಅಲ್ಯಾವ್ದೂ ದೇವಸ್ಥಾನ ಇಲ್ದಿದ್ರೂ,ಅಲ್ಲಿ ಆ ಮಂಟಪ ಯಾಕೆ ಕಟ್ಟಿದ್ರೋ? ಅಥವಾ ಮನೆ ಮಠ ಇಲ್ಲದೇ ಇರೋವ್ರಿಗೇ ಅಂತಲೇ ಯಾರಾದ್ರೂ ಪುಣ್ಯಾತ್ಮರು ಕಟ್ಟಿಸಿದ್ರೋ ಗೊತ್ತಿಲ್ಲ - ಅಂತೂ ಅಲ್ಲಿ ಪಾಪ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳೋ ಎಷ್ಟೋ ಸಂಸಾರಗಳು ನೆಲೆ ನಿಂತಿದ್ರು.ಅವರಿಗೆ ವರ್ಷಕ್ಕೆ ಮುನ್ನೂರಅರವತ್ತೆರಡು ದಿನ ಆ ಮಂಟಪವೇ ಮನೆ. ಒಂದುವೇಳೆ ಮನೆಯಲ್ಲಿ ಏನೋ ಸಮಾರಂಭವೋ ಏನೋ ಆದಾಗ ಊಟ ತಿಂಡಿ ಮಿಕ್ಕರೆ ಅಲ್ಲಿಗೆ ಹೋಗಿ ಕರೆದು, ಮತ್ತೆ ಮಾಡಿದ ಅಡುಗೆಗೆ ಆಗೋ ದಂಡವನ್ನ ತಪ್ಪಿಸ್ತಿದ್ವಿ. ಒಂದೊಂದ್ಸಲ ಕಲಾಯ ಮಾಡೋ ಮನುಷ್ಯ ಬಂದರೂ ಅಲ್ಲೇ ಮಂಟಪದ ಪಕ್ಕದಲ್ಲೇ ಅವನ ಅಗ್ಗಿಷ್ಟಿಕೆ ಹೂಡ್ಕೋತಿದ್ದ. ಸುತ್ತ ಮುತ್ತಲಿನ ಮನೆಯವರೆಲ್ಲ ಅವರ ಕೊಡವೋ, ಕೊಳದಪ್ಪಲೆಯೋ, ಯಾವುದಕ್ಕಾದ್ರೂ ಕಲಾಯ ಮಾಡಿಸ್ಬೇಕಾಗಿದ್ರೆ ಅಲ್ಲಿಗೇ ತರ್ತಿದ್ರು. ಹಾಗೇನಾದ್ರೂ ಕೊಟ್ಟಾಗ, ನಾನೂ ಕಲಾಯದ ಮನುಷ್ಯ ತವರ ಕಾಸೋದು, ತಿದಿ ಒತ್ತೋದು ಇದೆಲ್ಲ ನೋಡ್ತಾ ಕೂತಿರ್ತಿದ್ದೆ. ಒಂದೊಂದು ಸಲ ಸಂಜೆ ಹೋಗಿ ಆ ಮಂಟಪದ ಹಿಂದಿನ ಬಯಲಲ್ಲಿ ಗೆಳೆಯರ ಜೊತೆ ಆಡ್ತಿದ್ದಿದ್ದೂ ಉಂಟು.

ವರ್ಷಕ್ಕೆ ಮುನ್ನೂರರ್ವತ್ತೆರಡು ದಿನ ಮನೆಯಿಲ್ಲದವರ ಮನೆ ಆಗಿತ್ತು ಆ ಮಂಟಪ ಅಂದೆನಲ್ಲ - ಅದು ಹೇಗೋ ವಿಜಯ ದಶಮಿ ಎರಡು ದಿನ ಇದೇ ಅನ್ನೋವಾಗ ಅಲ್ಲಿದ್ದೋರನ್ನೆಲ್ಲ ಜಾಗ ಖಾಲಿ ಮಾಡಿಸಿ, ಮಂಟಪಕ್ಕೆ ಸುಣ್ಣ ಬಳಿಸಿ ಸುತ್ತ ಮುತ್ತ ಚೊಕ್ಕಟ ಮಾಡೋರು. ಯಾರು ಮಾಡ್ತಿದ್ರೋ ಈಗಂತೂ ನೆನಪಿಲ್ಲ. ಮುನ್ಸಿಪಾಲ್ಟೀಯವ್ರಾ? ಇರಬಹುದು. ಮತ್ತೆ ಮಹಾನವಮಿಯ ದಿನ ಮತ್ತೆ ವಿಜಯದಶಮಿ ದಿನ ಅಲ್ಲೊಂದು ಸಣ್ಣ ಜಾತ್ರೆ ನಡೆಯೋದು. ಒಂದ್ಕಡೆ ದೇವ್ರ ಮೂರ್ತಿ ಇಟ್ಟು ಪೂಜೆ ಇರ್ತಿತ್ತು. ರಾಟವಾಳ ಬಂದ್ರೂ ಬರ್ತಿತ್ತು. ಅದರ ಜೊತೆಗೆ ಬಲೂನು ಪೀಪಿ ಮಾರೋರು, ಅದು ಇದು ತಿಂಡಿ ತಿನಿಸು ಮಾರೋವ್ರು, ಹಾಗೇ ಒಂದು ಜಾತ್ರೆ ಅಂದ್ರೆ ಏನೇನಿರ್ಬೇಕೋ ಅಂತಹದ್ದೆಲ್ಲ ಬರ್ತಿತ್ತು. ವಿಜಯದಶಮಿದಿನ ದೇವರ ಮುಂದೆ ಅಲ್ಲೊಂದು ಬನ್ನಿ ಮರ ಕಡಿಯೋವ್ರು. ಬನ್ನಿ ಮರದ ಬದಲು ಅದು ಸಿಗ್ದೇ ಇದ್ರೆ, ಬಾಳೇ ಕಂದನ್ನೇ ಕಡೀತಿದ್ರು ಅನ್ಸತ್ತೆ. ಆಮೇಲೆ ಎಲ್ಲರಿಗೂ ಒಂದೊಂದು ಚೂರು ಬನ್ನೀ ಎಲೆ ಕೊಡ್ತಿದ್ರು. ಇದಕ್ಕೇ ಆ ಮಂಟಪಕ್ಕೆ ಮಾರನೋಮಿ ಮಂಟಪ ಅಂತಲೇ ಕರೀತಿದ್ರು ಎಲ್ಲರೂ.

ವಿಜಯ ದಶಮಿ ಮಾರನೇ ದಿನ, ಅಲ್ಲಿದ್ದ ಸಂಸಾರಗಳೆಲ್ಲ ಮತ್ತೆ ಯಥಾಸ್ಥಿತಿ ಅಲ್ಲಲ್ಲೇ ಅವರವರ ಜಾಗ ತೊಗೊಂಡಿರ್ತಿದ್ರು - ಮತ್ತೆ ಅವರ ಭಿಕ್ಷಾಟನೆ ಶುರುವಾಗ್ತಿತ್ತು ಅನ್ಸತ್ತೆ.

ಈ ಸಲ ಊರಿಗೆ ಹೋದಾಗ, ಆ ಮಂಟಪ ಅಲ್ಲಿದೆಯೋ ಇಲ್ಲವೋ ನೋಡಕ್ಕಾಗ್ಲಿಲ್ಲ. ಆದ್ರೆ ಭಿಕ್ಷುಕರು ಮುಂಚೆ ತರಹ ಅಷ್ಟಾಗಿ ಕಾಣಿಸ್ಕೊಳೋದಿಲ್ಲ ಅಂತ ಕೇಳಿದೆ. ಎಲ್ಲರಿಗೂ ಹೊಟ್ಟೆ ಹೊರೆಯೋದಕ್ಕೆ ಒಂದು ಕೆಲಸ, ಇರೋದಕ್ಕೆ ಒಂದು ಮನೆ ಇರ್ತಿದ್ರೆ ಸಾಕು ಅಲ್ವಾ - ಅದು ನಮ್ಮ ಊರು ಉದ್ಧಾರವಾಗ್ತಿದೆ ಅನ್ನೋದರ ಸೂಚನೆ. ನಿಜವಾಗ್ಲೂ ಮನಸ್ಸಿಗೆ ಸಮಾಧಾನ ತರೋ ವಿಷಯ ಇದು.

ಅಂತೂ ನನ್ನ ಮಾರ್ನೋಮಿ ಪುರಾಣ ಎಲ್ಲಿಂದ ಎಲ್ಲೆಲ್ಲಿಗೂ ಹೋಯ್ತು. ಹಾಡಿದ್ದೇ ಹಾಡೋ ಕಿಸ್ಬಾಯ್ದಾಸ ಅನ್ನಿಸ್ಕೊಳೋ ಬದಲು, ಸ್ವಲ್ಪ ಬದ್ಲಾವಣೆ ಇರ್ಲಿ ಅಂತ ನೆನಪುಗಳನ್ನ ಸ್ವಲ್ಪ ಹರ್ಯೋದಕ್ಕೆ ಬಿಟ್ಟೆ. ಅಷ್ಟೇ. ಬೈಕೋಬೇಡೀ!

ಮೈಸೂರಿನ ಕಡೆಯ ಅರಸರಾದ ಜಯಚಾಮರಾಜ ಒಡೆಯರು ೨೦ನೇ ಶತಮಾನದ ಒಬ್ಬ ಹಿರಿಯ ವಾಗ್ಗೇಯಕಾರರು. ಅವರ ಬಗ್ಗೆ ಈ ಮೊದಲೂ ನಾನು ಬರೆದಿದ್ದೆ. ಅವರು ಮಾಡಿದ ೯೪ ರಚನೆಗಳಲ್ಲಿಯೂ ಬೇರೆ ಬೇರೆ ರಾಗಗಳನ್ನುಪಯೋಗಿಸಿರುವುದೂ, ಮತ್ತೆ ಪ್ರತಿ ರಚನೆಯಲ್ಲೂ ರಾಗಮುದ್ರೆ ಇಟ್ಟಿರುವುದೂ ಎರಡೂ ಸ್ವಲ್ಪ ಹೆಚ್ಚಾಯದ ವಿಷಯಗಳೇ. ಅವರಿಗಿಂತ ಹಿಂದಿನ ವಾಗ್ಗೇಯಕಾರರು ಪ್ರಯತ್ನಿಸದ (ಅಥವಾ ಬಹಳ ಕಡಿಮೆ ರಚನೆಗಳಿದ್ದ) ಹಲವಾರು ರಾಗಗಳಲ್ಲಿ ಕೃತಿ ರಚಿಸಿರುವುದು ವಿಶೇಷ ಸಂಗತಿ. ಇವರ ಎಲ್ಲ ರಚನೆಗಳೂ ಸಂಸ್ಕೃತದಲ್ಲಿವೆ.

ಮೈಸೂರರಮನೆಯಲ್ಲಿ ಇವತ್ತು ಆಯುಧ ಪೂಜೆ. ಅದರ ಜೊತೆಗೆ ನಮ್ಮ ನಮ್ಮ ಮನೆಗಳಲ್ಲೂ ಆಯುಧ ಪೂಜೆ ನಡೆಯುವಾಗ, ಒಡೆಯರ ಈ ರಚನೆ ಕೇಳೋದು ಚೆನ್ನ ಅಲ್ವಾ? ಬ್ರಹಾಂಡ ವಲಯೇ ಮಾಯೇ ಅನ್ನೋ ಈ ಕೃತಿಯ ಮೊದಲ ಪದದಲ್ಲೇ ರಾಗದ ಹೆಸರು ಬರುತ್ತೆ. ಮಾಂಡ್ ಎಂಬ ಈ ಹಿಂದೂಸ್ತಾನಿ ರಾಗವನ್ನ ಬಳಸಿ ಕರ್ನಾಟಕ ಸಂಗೀತದಲ್ಲಿ ರಚನೆ ಮಾಡಿದವರಲ್ಲಿ ಬಹುಶಃ ಒಡೆಯರೇ ಮೊದಲಿಗರಿದ್ದರೂ ಇರಬಹುದು.

ಈಗ ನೋಡೋಣ್ವಾ ಮಹಾನವಮಿ ಪ್ರಯುಕ್ತ ಮಹಾಮಾಯೆಯ ಸ್ತುತಿ?

 

 

-ಹಂಸಾನಂದಿ

Rating
No votes yet

Comments