ಬದುಕೇ, ನಿನಗೊಂದು ಥ್ಯಾಂಕ್ಸ್
ಎರಡು ದಿನ ಯೋಗಾಸನ, ವ್ಯಾಯಾಮ ಬಿಟ್ಟರೆ ಮನಸ್ಸಿಗೆ ಏನೋ ತಹತಹ. ಛೇ, ಹೀಗಾದರೆ, ಕ್ರಮೇಣ ನಾನು ಸೋಮಾರಿಯಾಗುತ್ತೇನೆ. ನಸುಕಿನಲ್ಲಿ ಏಳಲು ಆಗುವುದಿಲ್ಲ. ಆರೋಗ್ಯ ಕೆಡುತ್ತದೆ. ತಿಂದು ತಿಂದು ಡುಮ್ಮಣ್ಣನಾಗುತ್ತೇನೆ ಎಂದು ಅಂದುಕೊಂಡು, ಹೆದರಿಸಿ, ಹದ ಮೀರಿದ ದಿನಚರಿಯನ್ನು ಮತ್ತೆ ಹಳಿಗೆ ಹತ್ತಿಸುತ್ತೇನೆ. ಊಟ ಮಾಡುವಾಗಲೂ ಅಷ್ಟೇ. ಮೊದಲಿನಿಂದ ಸರಳ ಆಹಾರ ಇಷ್ಟ. ಅನಗತ್ಯವಾಗಿ ಏನನ್ನೂ ತಿನ್ನಲು ಹೋಗುವುದಿಲ್ಲ. ಒಂದೊಮ್ಮೆ ಆಸೆಪಟ್ಟು ತಿಂದೆನಾದರೂ, ದೇಹದ ಮೇಲೆ ಅದರ ಪರಿಣಾಮ ಆಗುವುದಕ್ಕೂ ಮುನ್ನ ಮನಸ್ಸಿಗೆ ಕಸಿವಿಸಿ ಶುರುವಾಗುತ್ತದೆ. ’ಛೇ ಛೇ ಇಷ್ಟೊಂದು ತಿನ್ನಬಾರದಿತ್ತು’ ಎಂದು ಅಂದುಕೊಳ್ಳುತ್ತ ಒಂದು ಮಿನಿ ಉಪವಾಸ ಮಾಡಿ ಅದನ್ನು ಸರಿದೂಗಿಸಿಕೊಳ್ಳುತ್ತೇನೆ.
ರೇಖಾ ಬೈಯುತ್ತಾಳೆ. ಯಾಕೆ ಇಷ್ಟೊಂದು ಕಟ್ಟು ಮಾಡಿಕೊಳ್ಳುತ್ತೀರಿ? ಒಂದಿಷ್ಟು ಶಿಸ್ತು ತಪ್ಪಿದರೆ ಏನು ಮಹಾ ಆಗುತ್ತದೆ? ಎನ್ನುತ್ತಾಳೆ.
ಆದರೆ, ಆಕೆ ಕೂಡ ಅಂಥದೊಂದು ಕಟ್ಟುಪಾಡನ್ನು ರೂಢಿಸಿಕೊಂಡಿದ್ದಾಳೆ. ಬಹುಶಃ ನಮ್ಮಿಬ್ಬರ ಮನಸ್ಸಿನೊಳಗೆ ಅಂಥದೊಂದು ಶಿಸ್ತು ಇಳಿದುಬಿಟ್ಟಿದೆ.
ಅದು ಅನಿವಾರ್ಯವೂ ಹೌದು. ನಾವು ಕಾಯಿಲೆ ಬೀಳಲಾರೆವು. ಅಂದರೆ, ಕಾಯಿಲೆ ಬೀಳುವಂತಿಲ್ಲ. ನೌಕರಿಯ ಹಂಗಿಗೆ ಸಿಲುಕಿ, ಊರು ತೊರೆದು ಬಂದಾಗಿನಿಂದ ಇಂಥದೊಂದು ಕಟ್ಟುಪಾಡು ನಮಗೆ ಸಹಜ ದಿನಚರಿಯಾಗಿದೆ. ಹಾಗಂತ, ಮುಂಚೆ ತೀರಾ ಅಶಿಸ್ತಿನಿಂದ ಇದ್ದೆವೆಂದೇನೂ ಅರ್ಥವಲ್ಲ. ಆದರೆ, ಗೌರಿ ಹುಟ್ಟಿದ ನಂತರ ಅಂಥದೊಂದು ಶಿಸ್ತು ಸಹಜವಾಗಿ ಬಂದಿದೆ.
ಏಕೆಂದರೆ, ನಾನು ಕಾಯಿಲೆ ಬಿದ್ದರೆ, ಕೆಲಸಕ್ಕೆ ಹೋಗಲು ಆಗುವುದಿಲ್ಲ. ನನ್ನ ನಿತ್ಯದ ಚಟುವಟಿಕೆಗಳು ಮೂಲೆ ಹಿಡಿಯುತ್ತವೆ. ಕಾಯಿಲೆ ಬಿದ್ದರೂ ಡಾಕ್ಟರ್ ಹತ್ತಿರ ನಾನೇ ಹೋಗಬೇಕು. ಏಕೆಂದರೆ, ಮಗುವನ್ನು ಕರೆದುಕೊಂಡು, ಕಾಯಿಲೆ ಬಿದ್ದ ನನ್ನನ್ನೂ ಸಂಭಾಳಿಸಲು ಆಕೆಗೆ ಕಷ್ಟ. ಎರಡನೇ ಮಗು ಹುಟ್ಟಿದ ನಂತರ, ಮನೆಯೇ ಆಕೆಯ ಕಾರ್ಯಕ್ಷೇತ್ರವಾಗಿದೆ. ಹೋದರೆ ಎಲ್ಲರೂ ಒಟ್ಟಿಗೇ ಹೋಗಬೇಕು. ಇಲ್ಲದಿದ್ದರೆ ನಾನೊಬ್ಬನೇ ಹೋಗಬೇಕು. ಅದರಲ್ಲೂ ಗೌರಿಯನ್ನು ಬಿಟ್ಟು ಹೋಗಲು ಆಗದು.
ಏಕೆಂದರೆ, ಗೌರಿ ವಿಶಿಷ್ಟಚೇತನ ಮಗು. ಆಕೆಯ ಬುದ್ಧಿ ಬೆಳವಣಿಗೆ ತೀರಾ ನಿಧಾನ.
ಬಹುಶಃ ಇದು ವಿಶಿಷ್ಟಚೇತನ ಮಕ್ಕಳನ್ನು ಹೊಂದಿದ ಎಲ್ಲಾ ಕುಟುಂಬಗಳ ದಿನಚರಿ ಎಂದು ನಾನು ಅಂದುಕೊಂಡಿದ್ದೇನೆ. ವಿಶಿಷ್ಟಚೇತನ ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಬೇಕೇ ಬೇಕು. ಅದು ನಿರಂತರ ಕರ್ತವ್ಯ. ಅದರಲ್ಲಿ ಯಾಮಾರುವಂತಿಲ್ಲ. ನಿತ್ಯದ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಗೌರಿಯನ್ನು ವಾಕಿಂಗ್ ಕರೆದುಕೊಂಡು ಹೋಗದಿರಲು ನೆಪಗಳನ್ನು ಹುಡುಕುವಂತಿಲ್ಲ. ಅವರಿಗೆ ಫಿಜಿಯೋಥೆರಪಿ ಮಾಡಿಸುವುದರಲ್ಲಿ ಲೋಪ ಮಾಡುವಂತಿಲ್ಲ. ನಾವು ಬೇಕಾದರೆ ಊಟ ಬಿಡಬಹುದು, ಟಿವಿ ನೋಡದಿರಬಹುದು. ಹರಟೆ ಕೊಚ್ಚದಿರಬಹುದು. ಅನಗತ್ಯ ಮೊಬೈಲ್ ಕರೆಗಳನ್ನು ಮಾಡದಿರಬಹುದು. ಆದರೆ, ಗೌರಿಯ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ.
ಹೀಗಾಗಿ, ನಾವು ಕಾಯಿಲೆ ಬೀಳಲಾರೆವು. ನಮಗೆ ಅದು ತೀರಾ ದುಬಾರಿ ಸಂಗತಿ. ನಾನು ಕಾಯಿಲೆ ಬಿದ್ದರೆ ಹೇಗೋ ನಿಭಾಯಿಸಬಹುದು. ಆದರೆ, ರೇಖಾ ಮಲಗಿಕೊಂಡರೆ ಮುಗೀತು. ಕಚೇರಿಗೆ ರಜೆ ಹಾಕುವುದು ಅನಿವಾರ್ಯ. ಪೇಪರ್ ಕೂಡಾ ನೋಡಲಾಗುವುದಿಲ್ಲ. ಎಷ್ಟೋ ಸಾರಿ ಮೊಬೈಲ್ ಬಡಿದುಕೊಳ್ಳುತ್ತಿದ್ದರೂ ಮಾತನಾಡುವುದಿರಲಿ, ಅದರ ಮುಖ ನೋಡಲೂ ಆಗುವುದಿಲ್ಲ. ಮಕ್ಕಳ ಜೊತೆಗೆ ಕಾಯಿಲೆ ಬಿದ್ದ ಹೆಂಡತಿಯನ್ನೂ ನೋಡಿಕೊಳ್ಳಬೇಕು. ಒಂದು ದಿನ ತಳ್ಳಬಹುದು. ಎರಡನೇ ದಿನ ಹೇಗೋ ನಿಭಾಯಿಸಬಹುದು. ಅದಕ್ಕಿಂತ ಹೆಚ್ಚಿಗೆ ಆಕೆ ಮಲಗಿದರೆ, ಊರಿನಿಂದ ಯಾರಾದರೂ ಒಬ್ಬರನ್ನು ಕರೆಸುವುದು ಅನಿವಾರ್ಯವಾಗುತ್ತದೆ.
ಅವರಾದರೂ ಎಷ್ಟು ಸಾರಿ ಬಂದಾರು? ಊರಿನಲ್ಲಿ ಅವರಿಗೂ ತಮ್ಮದೇ ಆದ ತಾಪತ್ರಯಗಳಿರುತ್ತವೆ. ಕಾಯಿಲೆ ಮಲಗಿದವಳ ಆರೈಕೆಗೆಂದು ಅಷ್ಟು ದೂರದಿಂದ ಹೇಗೆ ಬಂದಾರು? ನಮ್ಮದು ನಿತ್ಯದ ಗೋಳು. ಒಂದು ಸಾರಿ ಬರಬಹುದು, ಇನ್ನೊಂದು ಸಾರಿ ಬರಬಹುದು. ಅದಕ್ಕಿಂತ ಹೆಚ್ಚು ಬರಲು ಅವರಿಗೂ ಕಷ್ಟ. ಅದು ಗೊತ್ತಿದ್ದೂ ಅವರನ್ನು ಬರ ಹೇಳುವುದು ನಮಗೂ ಕಷ್ಟ.
ಹೀಗಾಗಿ, ನಾವು ಕಾಯಿಲೆ ಬೀಳದಂತೆ ನೋಡಿಕೊಳ್ಳುವುದನ್ನು ಕಲಿತಿದ್ದೇವೆ. ಮಕ್ಕಳಿಗೆ ಫಿಜಿಯೋಥೆರಪಿ ಮಾಡಿಸುವಾಗ ನಮ್ಮ ವ್ಯಾಯಾಮವೂ ಆಗುತ್ತದೆ. ಅವರಿಗೆ ವಾಕಿಂಗ್ ಮಾಡಿಸುತ್ತ ನಾವೂ ವಾಕ್ ಮಾಡಿ ಗಟ್ಟಿಯಾಗುತ್ತೇವೆ. ಅವರಿಗೆ ಕೊಡುವ ಉತ್ತಮ ಗುಣಮಟ್ಟದ ಆಹಾರ ಸೇವಿಸುತ್ತ ನಾವೂ ಉತ್ತಮವಾಗಿದ್ದೇವೆ. ಮಕ್ಕಳಿಗೆ ವರ್ಜ್ಯವಾದ ಬಹುತೇಕ ತಿನಿಸುಗಳು ನಮಗೂ ವರ್ಜ್ಯವೇ.
ಇದನ್ನು ನಾನು ತ್ಯಾಗ ಎಂದು ಕರೆಯುವುದಿಲ್ಲ. ಇದು ಒಂಥರಾ ರೂಢಿ. ಮೊದಮೊದಲು ಕಷ್ಟವಾಯಿತಾದರೂ, ಕ್ರಮೇಣ ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ನಾವು ಬೆಳೆದಷ್ಟೂ, ನಮ್ಮ ಮಕ್ಕಳು ಬೆಳೆಯುತ್ತಾರೆ ಎಂಬುದನ್ನು ಕಂಡುಕೊಂಡಿದ್ದೇವೆ. ನಾವು ಹಸನ್ಮುಖಿಯಾದಷ್ಟೂ ನಮ್ಮ ಮಕ್ಕಳು ಹಸನ್ಮುಖಿಗಳಾಗುತ್ತಾರೆ, ನಾವು ಬೆಳೆದಷ್ಟೂ ನಮ್ಮ ಮಕ್ಕಳೂ ಬೆಳೆಯುತ್ತವೆ ಎಂಬುದನ್ನು ಕಂಡುಕೊಂಡಿದ್ದೇವೆ.
ಹೀಗಾಗಿ, ನಾವು ಆರೋಗ್ಯವಾಗಿರಲು ಯತ್ನಿಸುತ್ತೇವೆ. ಹಸನ್ಮುಖಿಗಳಾಗಲು ಪ್ರಯತ್ನಿಸುತ್ತೇವೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ. ಈ ಅನಿವಾರ್ಯತೆ, ಈ ರೂಢಿ ನಮಗೆ ಬದುಕಿನ ಹಲವಾರು ಉತ್ತಮಾಂಶಗಳನ್ನು ನೀಡಿದೆ. ನಮ್ಮನ್ನು ನಿತ್ಯ ಪ್ರಬುದ್ಧರನ್ನಾಗಿಸುತ್ತಿದೆ. ಮಾಗಿಸುತ್ತಿದೆ. ಬೆಳೆಸುತ್ತಿದೆ. ಹೊಸ ಹೊಸ ಅನುಭವಗಳಿಗೆ ಒಡ್ಡುತ್ತಿದೆ.
ಇಂಥದೊಂದು ಮನಃಸ್ಥಿತಿಯನ್ನು ನಮಗೆ ನೀಡಿದ್ದಕ್ಕಾಗಿ, ಬದುಕೇ ನಿನಗೊಂದು ಥ್ಯಾಂಕ್ಸ್.
- ಚಾಮರಾಜ ಸವಡಿ
Comments
ಉ: ಬದುಕೇ, ನಿನಗೊಂದು ಥ್ಯಾಂಕ್ಸ್
In reply to ಉ: ಬದುಕೇ, ನಿನಗೊಂದು ಥ್ಯಾಂಕ್ಸ್ by ASHOKKUMAR
ಉ: ಬದುಕೇ, ನಿನಗೊಂದು ಥ್ಯಾಂಕ್ಸ್
ಉ: ಬದುಕೇ, ನಿನಗೊಂದು ಥ್ಯಾಂಕ್ಸ್
In reply to ಉ: ಬದುಕೇ, ನಿನಗೊಂದು ಥ್ಯಾಂಕ್ಸ್ by ASHMYA
ಉ: ಬದುಕೇ, ನಿನಗೊಂದು ಥ್ಯಾಂಕ್ಸ್
ಉ: ಬದುಕೇ, ನಿನಗೊಂದು ಥ್ಯಾಂಕ್ಸ್
In reply to ಉ: ಬದುಕೇ, ನಿನಗೊಂದು ಥ್ಯಾಂಕ್ಸ್ by raghud
ಉ: ಬದುಕೇ, ನಿನಗೊಂದು ಥ್ಯಾಂಕ್ಸ್