ಗಾಂಧೀಸ್ಮರಣೆ

ಗಾಂಧೀಸ್ಮರಣೆ

ಪ್ರತಿವರುಷದ ಹಾಗೆ ಈ ವರುಷವೂ ಅಕ್ಟೋಬರ್ 2, ಅಂದರೆ ಗಾಂಧೀ ಜಯಂತಿ ಬಂತು ಹೋಯ್ತು. ಅದರಲ್ಲೇನು ವಿಶೇಷ ಎಂದು ನಾವು ಕೇಳಿಕೊಳ್ಳಬಹುದು. ಕೆಲ ತಿಂಗಳ ಹಿಂದೆ ಕನ್ನಡವಾಹಿನಿಯೊಂದರಲ್ಲಿ ಕನ್ನಡ ನಾಡಿನ ಪ್ರಮುಖ ಬುದ್ಧಿಜೀವಿಗಳು, ಅಧಿಕಾರಿಗಳು, ರಾಜಕಾರಣಿಗಳು, ಕಲಾವಿದರು ಹೀಗೆ ಸಮಾಜದ ಪ್ರತಿಯೊಂದು ಪ್ರಮುಖ ಕ್ಷೇತ್ರವನ್ನು ಪ್ರತಿನಿಧಿಸುವಂತಹ ಗಣ್ಯರನ್ನು ಒಂದೆಡೆ ಕಲೆ ಹಾಕಿ ಚರ್ಚೆ ನಡೆಸಲಾಯಿತು. ಅದರಲ್ಲಿ ನಾಡಿನ ಪ್ರಮುಖ ಚಿಂತಕರಾದ ಡಾ.ಯು.ಆರ್.ಅನಂತಮೂರ್ತಿ ಹಾಗೂ ತಮ್ಮ ನೇರ ನಡೆ ನುಡಿ ಹಾಗೂ ಪ್ರಾಮಾಣಿಕತೆಗಳಿಂದ ಹೆಸರುವಾಸಿಯಾಗಿರುವ ಲೋಕಾಯುಕ್ತರಾದ ಸಂತೋಷ್ ಹೆಗ್ಡೆಯವರನ್ನು ಒಳಗೊಂಡಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ತುಂಬಾ ಸ್ವಾರಸ್ಯಕರವಾಗಿದ್ದ ಆ ಚರ್ಚೆಯ ಕಡೆಗೆ ಒಂದು ಪ್ರಶ್ನೆ ಕೇಳಲಾಯಿತು. ಈ ಹೊತ್ತು ನಮ್ಮ ದೇಶಕ್ಕೆ ಅತಿ ಮುಖ್ಯವೆನಿಸುವಂತಹ ಯಾವುದಾದರೂ ವ್ಯಕ್ತಿಯ ಹೆಸರು ಹೇಳಿ ಎಂದು ಕೇಳಲಾಯಿತು. ಆಗ ನಿರೀಕ್ಷೆಯಂತೆ ಅನಂತಮೂರ್ತಿಯವರು ರಾಷ್ಟ್ರಪಿತ ಗಾಂಧೀಜಿಯ ಹೆಸರು ಹೇಳಿದರು.

ಅನಂತಮೂರ್ತಿಯವರು ಯಾಕೆ ಗಾಂಧೀಜಿಯ ಹೆಸರು ಹೇಳಿದರು, ಯಾತಕ್ಕಾಗಿ ನಮಗೆ ಸ್ವಾತಂತ್ರ್ಯ ಬಂದು 60 ವರುಷಗಳನ್ನು ಪೂರೈಸಿರುವ ಪ್ರಜಾಸತ್ತಾತ್ಮಕ, ಗಣರಾಜ್ಯ, ಸಮಾಜವಾದಿ, ಜಾತ್ಯತೀತ ಭಾರತ ಇಂದು ವಿಶ್ವದ ಅತ್ಯಂತ ಬಲಾಢ್ಯ ರಾಷ್ಟ್ರಗಳಲ್ಲಿ ಒಂದಾಗಿರುವ, "ಇಡೀ ವಿಶ್ವವೇ ಒಂದು ಗ್ರಾಮ" ಎಂಬ ಸೋ ಕಾಲ್ಡ್ ಉದಾರವಾದವನ್ನು ಬಿಂಬಿಸುವ ಜಾಗತೀಕರಣದಂತಹ ಕಾಲದಲ್ಲೂ ತುಂಡು ಬಟ್ಟೆ ಉಟ್ಟು, ಇಡೀ ವಿಶ್ವವನ್ನೇ ಸಂಚರಿಸಿದ ಆ "ಅರೆಬೆತ್ತಲೆ ಫಕೀರ"(ಪ್ರಸಿದ್ಧ British ಪ್ರಧಾನಿಗಳಲ್ಲೊಬ್ಬರಾದ ವಿನ್ಸ್ಟನ್ ಚರ್ಚಿಲ್ ಗಾಂಧಿ ಬಗ್ಗೆ ಹೀಗೆ ಹೀಗಳೆದಿದ್ದರು!) ಮುಖ್ಯವಾಗ್ತಾರೆ ಎನ್ನುವುದಕ್ಕೆ ಅನಂತಮೂರ್ತಿಯವರ ಇತ್ತೀಚಿನ ಪುಸ್ತಕ "ಮಾತು ಸೋತ ಭಾರತ"ದಲ್ಲಿರುವ "ಇಂದೂ ಇರುವ ಗಾಂಧಿ" ಹಾಗೂ "ಗಾಂಧಿ ಮತ್ತು ಟಾಲ್‌ಸ್ಟಾಯ್" ಲೇಖನಗಳನ್ನು ಓದಿದರೆ ತಿಳಿಯುತ್ತದೆ.

ಇನ್ನೂ ಮುಂದುವರಿದು ಹೇಳುವುದಾದರೆ, ನಾನು ಕೆಲ ತಿಂಗಳ ಹಿಂದೆ ಹೀಗೆಯೇ ಮನೆಯಲ್ಲಿ ಪುಸ್ತಕಗಳನ್ನು ಜೋಡಿಸುತ್ತಿದ್ದಾಗ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದವರು ತಮ್ಮ ಜನಪ್ರಿಯ ಪುಸ್ತಕ ಮಾಲೆಯಡಿ ಪ್ರಕಟಿಸಿದ್ದ ಚಂದ್ರಶೇಖರ ಪಾಟೀಲರ "ಗಾಂಧೀ ಸ್ಮರಣೆ"(1976) ಎನ್ನುವ ಕವನ ಸಂಕಲನ ಕಣ್ಣಿಗೆ ಬಿತ್ತು. ಚಂಪಾರವರು ಆಕರ್ಷಕ ಬರೆಯುತ್ತಾರೆನ್ನುವುದು ಅವರ ಕೆಲ ಬಿಡಿ ಲೇಖನಗಳು, ಪದ್ಯಗಳನ್ನು ಓದಿ ತಿಳಿದಿದ್ದ ನನಗೆ ಈಗಲೂ ಚಂಪಾ ಎಂದಾಕ್ಷಣ ಬಾಯಿಗೆ ಬರುವುದು ಅವರ "ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು..." ಭಾವಗೀತೆ. ಯಾಕೆಂದರೆ, ಅದು ನನ್ನ ಅಚ್ಚುಮೆಚ್ಚಿನ ಗೀತೆಗಳಲ್ಲೊಂದು. ಹಾಗೆಯೇ ಓದುತ್ತಾ ಹೋದೆ. ಎಲ್ಲಾ ಕವನಗಳೂ ಒಂದಲ್ಲಾ ಒಂದು ರೀತಿಯಲ್ಲಿ ವಿಶಿಷ್ಟವೂ, ಆಪ್ತವೂ, ಮೆಚ್ಚುಗೆಯೂ ಆದವು. ಆದರೆ, ಅವರ "ಗಾಂಧೀ ಸ್ಮರಣೆ" ಕವನವನ್ನು ಓದಿದಾಕ್ಷಣವೇ ಅಂದುಕೊಂಡೆ. ಗಾಂಧೀ ಜಯಂತಿಗೆ ಈ ಕುರಿತು ಏನಾದರೂ ಬರೆಯಬೇಕೆಂದು. ಹಾಗನಿಸಿದ್ದು 2-3 ತಿಂಗಳ ಹಿಂದೆ. ಆದರೆ, ಗಾಂಧೀ ಜಯಂತಿಯಂದು ಆ ಪುಸ್ತಕ ಕಣ್ಣಿಗೆ ಬೀಳದ ಕಾರಣ ಅಂದು ಆ ಕುರಿತ ಈ ನನ್ನ ಲೇಖನವನ್ನು ಪ್ರಕಟಿಸಲಾಗದೆ ಈಗ ಹಾಕುತ್ತಿದ್ದೇನೆ. ಚಂಪಾರವರು ಈ "ಗಾಂಧೀ ಸ್ಮರಣೆ" ಕವನ ಬರೆದು 32 ವರುಷಗಳೇ ಕಳೆದಿವೆ. ಆದರೂ, ಇಂದೂ ಕೂಡ ಅವರ ಈ ಕವನ ಸೋಜಿಗ ಹುಟ್ಟಿಸುವಷ್ಟು ಪ್ರಸ್ತುತವೆನಿಸಿಕೊಳ್ಳುತ್ತದೆ. ಆ ಕಾರಣದಿಂದಾಗಿಯೇ ಆ ಕವನವನ್ನು ಇಲ್ಲಿ ಬಳಸಿಕೊಳ್ಳುತ್ತಿದ್ದೇನೆ. ನನ್ನೆಲ್ಲಾ ಸಂಪದಿಗ ಮಿತ್ರರೂ ಓದಲೆಂಬ ಸದುದ್ದೇಶದಿಂದ. ಎಲ್ಲಾ ಕವನಗಳನ್ನು ಓದಿದ ನಂತರ ಅಚ್ಚರಿಯಾಗಿ ಹಿನ್ನುಡಿಯ ರೂಪದಲ್ಲಿ ಕಾಣಿಸಿಕೊಂಡದ್ದು ಚಂಪಾ ಹಾಗೂ ಗಾಂಧಿ ಕುರಿತ ಪಿ.ಲಂಕೇಶರ ಮಾತುಗಳು. ಇಡೀ ಹಿನ್ನುಡಿಯೇ ಒಂದು ಅರ್ಥಪೂರ್ಣ ಲೇಖನದ ರೂಪವನ್ನು ಪಡೆದಿದೆ. ಈ ಲೇಖನದ ಆರಂಭದಲ್ಲಿ ಹೇಳಿದ ಹಾಗೆ ಗಾಂಧಿ ಈಗಲೂ ಯಾಕೆ ನಮಗೆ ಅಷ್ಟು ಮುಖ್ಯ, ಈಗಿನ ಕಾಲಕ್ಕೂ ಅವರು ಹೇಗೆ ಪ್ರಸ್ತುತ ಎಂಬುದನ್ನು 32 ವರುಷಗಳ ಹಿಂದೆ ಲಂಕೇಶರು ಆಡಿದ ಮಾತುಗಳಲ್ಲೇ ಓದಿ ಸಂತೋಷಪಡಲು ಹಿನ್ನುಡಿಯ ಆಯ್ದ ಸಾಲುಗಳನ್ನು ಯಥಾವತ್ತಾಗಿ ಇಲ್ಲಿ ಹಾಕುತ್ತಿದ್ದೇನೆ. ಕನ್ನಡದ ಪ್ರಮುಖ ಸೂಕ್ಷ್ಮ ಚಿಂತಕ ಮನಸ್ಸುಗಳು ಹಿಡಿದಿಟ್ಟಿರುವ ನಮ್ಮ "ಗಾಂಧೀ ಬಾಪೂ"ವನ್ನು ಈ ಸಂದರ್ಭಧಲ್ಲಿ atleast ಸ್ಮರಿಸೋಣ ಬನ್ನಿ.

ಮೊದಲಿಗೆ, ಚಂದ್ರಶೇಖರ ಪಾಟೀಲರ "ಗಾಂಧೀ ಸ್ಮರಣೆ" ಕವನ ಸಂಕಲನದ ಕಡೇ ಕವನ "ಗಾಂಧೀ ಸ್ಮರಣೆ" ಓದೋಣ ಬನ್ನಿ.

ಗಾಂಧೀಸ್ಮರಣೆ
--------------
ಖಾಲೀ ಗದ್ದಲದ ಈ ನಾಡಿನ ಉದ್ದಗಲಕ್ಕೂ
ಈಗ ಶಾಂತಿ ನೆಲೆಸಿದೆ.
ನರನಾಡಿಯೆಲ್ಲ ನಿಂತೇ ಹೋದಂತಾಗಿ
ನಾವೆಲ್ಲ ಯೋಗಿಗಳಾಗಿದ್ದೇವೆ.
ಹಾದಿ ಮಾತು, ಬೀದಿ ಭಾಷಣಗಳ ಸದ್ದಡಗಿ
ಕಿವಿ ತುಂಬ ಹುಲುಸಾಗಿ ಕೂದಲು ಬೆಳೆಯುತ್ತಿದೆ.

ಅನಾಚಾರ ಅತ್ಯಾಚಾರ ಭ್ರಷ್ಟಾಚಾರಗಳ ಬದಲು
ಪತ್ರಿಕೆಗಳ ತುಂಬ ಶುದ್ಧ ಸಮಾಚಾರ ತುಂಬಿದೆ,
ಎಲ್ಲಾ ಸಾಮಾನುಗಳ ಬೆಲೆ ಇಳಿದೂ ಇಳಿದೂ
ಈಗ ಕೈಗೆ ಸಿಗದಂತಾಗಿವೆ.
ಬಿಡಾಡಿ ನಾಯಿಗಳ ನಿರ್ಬೀಜೀಕರಣವಾಗಿದೆ.
ಭಾರತದ ಜನಸಂಖ್ಯೆ ಇಳಿಯುತ್ತಿದೆ.

ನಾಳಿನ ನಾಗರಿಕರಾಗಿ ಇಂದಿನ ಮಕ್ಕಳೆಲ್ಲ
ಸರಿಯಾಗಿ ಸಾಲೆಗೆ ಹೋಗಿ
ಒಂದು ಎರಡು ಬಾಳೆಲೆ ಹರಡು
ಕಲಿಯುತ್ತಿದ್ದಾರೆ.
ಹಸಗಂಡು ಮನೆಗೆ ಬಂದು
ಮಣ್ಣಿನ ವಾಸನೆಯ ತಾಜಾ ಊಟ ಮಾಡುತ್ತಾರೆ.

ಜಾಣ ಬಾಬಾಗಳಿಗೆ ಹುಚ್ಚುಗೌಡರ ಬೆನ್ನು ಸಿಕ್ಕು
ಧರ್ಮೋದ್ಧಾರದ ಸವಾರಿ ಮುನ್ನಡೆದಿದೆ.
ಅಸ್ಪೃಶ್ಯ ದೇವರಿಗೆ ಹರಿಜನರ ದರ್ಶನವಾಗಿ
ಅವರ ಉದ್ಧಾರವೂ ಆಗುತ್ತಿದೆ.

ಸರಕಾರದ ಕೆಲಸ ದೇವರ ಕೆಲಸವಾಗಿ
ತುಪ್ಪದ ದೀಪ ಢಾಳಾಗಿ ಉರಿಯುತ್ತಿವೆ
ವಿಶೇಷ ಪ್ರಾರ್ಥನೆಗಳಿಂದಾಗಿ ದೇಶದ ತುಂಬ
ಜಿಟಿ ಜಿಟಿ ಮಳೆ ಹಿಡಿದಿದೆ.
ನಮ್ಮ ತ್ರಿವರ್ಣ ಧ್ವಜ ತೊಯ್ದು ತಪ್ಪಡಿಯಾಗಿ
ಅಶೋಕ ಚಕ್ರ ಸ್ಥಿರವಾಗಿದೆ.

ಹೆದ್ದಾರಿಯ ಮೇಲೆ ಕೆಟ್ಟು ನಿಂತ ಟ್ರಕ್ಕು ಕೂಡ
ನಾಡು ಮುನ್ನಡೆದಿದೆ-ಎಂಬ ಸಂದೇಶ ಹೊತ್ತಿದೆ.
ರೇಡಿಯೋದ ಗಿಳಿವಿಂಡು, ಅದೋ,
ಒಕ್ಕೊರಲಿಂದ ಅದೇ ಹಾಡು ಹಾಡುತ್ತಿದೆ.

ಧನ್ಯತೆಯ ಈ ಕ್ಷಣದಿ, ಓ ಮುದ್ದುರಂಗ,
ಕಿವಿ ಮುಚ್ಚಿ, ಕಣ್ಣು ಮುಚ್ಚಿ,
ನೆನೆ ಗಾಂಧಿಯನು.
(ಯಾವ ಗಾಂಧಿ? ಅಂತ ತಿಳಿಯದೇ ಪೆದ್ದುಲಿಂಗ?)
ಬಾಯಿ ಮುಚ್ಚಿ,
ನೆನೆ ನೆನೆ ಗಾಂಧಿಯನು.

ಮುಂದುವರಿಯುತ್ತದೆ...

Rating
Average: 4 (5 votes)

Comments