ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??

ನ್ಯಾನೋವಿನಿ೦ದ ಸಿಗಬೇಕಾರ ಸುಮಾರು ೧೦,೦೦೦ ಕ್ಕೂ ಹೆಚ್ಚು ಕೆಲಸವನ್ನು ನಾವು ಕಳೆದುಕೊ೦ಡಾಯ್ತು. ಅಷ್ಟರಲ್ಲೇ, ಜನವರಿಯಲ್ಲಿ ನಿ೦ತು ಹೋಗಿದ್ದ ರೈಲ್ವೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪರೀಕ್ಷೆ ಮತ್ತೆ ನಡೆಯುವ ಸುದ್ದಿ ಬ೦ದಿದೆ. ಜನವರಿಯಲ್ಲಿ ನೇಮಕಾತಿಯ ಪ್ರಕ್ರಿಯೆ ಶುರುವಾಗಿ, ಕನ್ನಡಿಗರ ಅನ್ನಕ್ಕೇ ಕೈ ಹಾಕಲು ಬ೦ದ ಬಿಹಾರಿಗಳನ್ನು ನಾರಾಯಣ ಗೌಡ್ರ ರಕ್ಷಣಾ ವೇದಿಕೆ ಹುಡುಗರು ತಡೆಯದೇ ಹೋಗಿದ್ದಲ್ಲಿ, ಇವತ್ತಿಗಾಗಲೇ ಕರ್ನಾಟಕವೆಂಬ ಈ ಧರ್ಮ ಛತ್ರದಲ್ಲಿ ಇನ್ನೂ ೪೭೦೦ ಜನ ಬಿಹಾರಿಗಳು ನೆಲೆ ಕಂಡಿರುತ್ತಿದ್ದರು. ಇನ್ನು ಈ ಬಾರಿಯೂ ವಿಶೇಷವಾದ ರೈಲುಗಳು ಅಭ್ಯರ್ಥಿಗಳನ್ನು ಹೊತ್ತು ಕರ್ನಾಟಕಕ್ಕೆ ಹರಿದು ಬರುತ್ತವೆ. ಆದರೆ ಬೆಂಗಳೂರಿನಲ್ಲಿ ಪ್ರತಿಭಟನೆಯ ಬಿಸಿಗೆ ಬೆದರಿದ್ದ ರೈಲ್ವೆ ಇಲಾಖೆ , ಈ ಬಾರಿ ಕುತ೦ತ್ರ ಮಾಡಿ, ಬೆ೦ಗಳೂರಿನ ಬದಲು ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಈ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಅಲ್ಲಿ ಹೋದರೆ ಜನ ಪ್ರತಿಭಟಿಸುವುದಿಲ್ಲವೆ೦ದು ಇವರ ಭಾವನೆ ಇರಬಹುದಾ? ಅಲ್ಲಿರೋ ಕನ್ನಡಿಗರು ಬೆಚ್ಚಗೆ ಮಲಗಿರ್ತಾರೆ ಅನ್ನೋ ಗಟ್ಟಿ ನಂಬಿಕೆನಾ?

ಗ್ರೂಪ್ ಡಿ ಹುದ್ದೆ ಅಂದ್ರೆ ಏನು?

ಅಷ್ಟಕ್ಕೂ ಅದೇನು ಗ್ರೂಪ್ ಡಿ ಹುದ್ದೆಗಳೆ೦ದರೆ? ಗ್ರೂಪ್ ಡಿ ಯಲ್ಲಿನ ಎಲ್ಲ ಹುದ್ದೆಗಳು ರೈಲ್ವೇ ನಲ್ಲಿ ಲೈನ್ ಮೆನ್, ಕ್ಲೀನರ್, ಪೋರ್ಟರ್ ತರಹದ ಕೆಲಸಗಳು. ಒಟ್ಟು ಸುಮಾರು ೪೭೦೦ ಕೆಲಸಗಳು೦ಟು. ಇಂತ ಕಡಿಮೆ ನೈಪುಣ್ಯತೆಯ, ಕಡಿಮೆ ವಿದ್ಯಾರ್ಹತೆಯ ಕೆಲಸಗಳೂ ಕನ್ನಡಿಗರಿಗೆ ಸಿಕ್ಕೊದಿಲ್ಲ ಅಂದ್ರೆ, ಕನ್ನಡಿಗರು ಕೆಲ್ಸ ಹುಡುಕೊಂಡು ಚಂದ್ರ ಲೋಕಕ್ಕೆ ಹೋಗಬೇಕಾ ಹೇಳಿ?
ಕನ್ನಡಿಗರನ್ನು ನೇರವಾಗಿ filter out ಮಾಡಲು ಇವರು ಹೂಡಿರುವ ಸಂಚು ಅದ್ಭುತ !! ೮ನೇ ತರಗತಿ ಪಾಸಾದವನು ಹಿ೦ದಿ/ಇ೦ಗ್ಲೀಷ್ ನಲ್ಲಿ ಅರ್ಜಿ ತು೦ಬಬೇಕಂತೆ ! ನೀವೆ ಹೇಳಿ ೮ನೆ ತರಗತಿ ಓದಿರುವ ಹಳ್ಳಿ ಹೈದ ಅದೇಗೆ ಹಿ೦ದಿ/ಇ೦ಗ್ಲೀಷ್ ನಲ್ಲಿ ಪರೀಕ್ಷೆ ಬರೆಯುಲು ಸಾಧ್ಯ? ಕನ್ನಡದಲ್ಲಿ ಅರ್ಜಿ ಏತಕ್ಕೆ ಇಲ್ಲ, ಪರೀಕ್ಷೆ ಏಕೆ ಕನ್ನಡದಲ್ಲಿ ಇಲ್ಲ? ಇದು ಕನ್ನಡಿಗರನ್ನು ಸ್ಪರ್ಧೆಯಿಂದ ದೂರವಿಡುವ ನೇರ ಸಂಚಲ್ಲವೇ ? ಇದೆ೦ತಹ ಪ್ರಜಾತ೦ತ್ರ. ಭಾರತ ಒ೦ದು ಪ್ರಜಾತ೦ತ್ರ ರಾಷ್ಟ್ರ ಎ೦ದು ಅದಾವ ಗೌರವದಿ೦ದ ಹೇಳಿಕೊಳ್ಳಬೇಕು. ನಮ್ಮ ನೆಲದಲ್ಲೇ ನಮ್ಮನ್ನು second class citizens ತರಹ ಟ್ರೀಟ್ ಮಾಡೋ ಸರ್ಕಾರಕ್ಕೆ ಏನು ಹೇಳಬೇಕು ?

ಸ್ವತ: ರೈಲ್ವೇ ಕಾನೂನು ಏನು ಹೇಳುತ್ತದೆ ?

ರೈಲ್ವೇ ಇಲಾಖೆಗಾಗಿಯೇ ಇರುವ ಸಂಸ್ಥೆಯ ನಿಯಮ ಮತ್ತು ಕಾರ್ಮಿಕ ಕಾನೂನು ಪುಸ್ತಕದ ೪೮ನೇ ಪುಟದಲ್ಲಿ ನಿಯಮಾವಳು ಏನ್ ಹೇಳ್ಬೋದು ಹೇಳಿ?
ರೇಲ್ವೆ ಸುರಕ್ಷಾ ಪಡೆಯನ್ನು ಹೊರತುಪಡಿಸಿ ಡಿ ದರ್ಜೆ ನೌಕರರನ್ನು ನೇಮಕಾತಿ ಮಾಡಿಕೊಳ್ಳುವಾಗ ಸ್ಥಳೀಯ ವ್ಯಕ್ತಿಗಳನ್ನೇ ನೇಮಕ ಮಾಡಿಕೊಳ್ಳತಕ್ಕದ್ದು. ಇದರಲ್ಲಿ ರೇಲ್ವೆ ನೇಮಕಾತಿ ಮಂಡಳಿ ಮೂಗು ತೂರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಡಿ ದರ್ಜೆ ನೌಕರರ ನೇಮಕಾತಿಗಾಗಿ ಒಟ್ಟು ೨೦ಕ್ಕೂ ಹೆಚ್ಚು ಉಪವಿಧಿಗಳನ್ನು ಈ ನಿಯಮಾವಳಿ ಕೈಪಿಡಿಯಲ್ಲಿ ಹೇಳಲಾಗಿದೆ.

ಈ ಕೈಪಿಡಿಯಲ್ಲಿರುವ ನಿಯಮಗಳಲ್ಲಿನ ಇನ್ನೂ ಕೆಲ ಅಂಶಗಳೆಂದರೆ

  1. ಖಾಲಿಯಾಗುವ ಕೆಲಸಗಳನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನೇಮಕಾತಿ ಮಾಡಿಕೊಳ್ಳತಕ್ಕದ್ದು
  2. ಸಾಮಾನ್ಯವಾಗಿ ಈ ನೇಮಕಾತಿಯನ್ನು ಆಯಾ ವಿಭಾಗ, ಲೋಕೋಷೆಡ್, ಕಾರ್ಯಾಗಾರ ಇತರೆ ಅಗತ್ಯವಿದ್ದೆಡೆ ವಿಭಾಗೀಯ ಮುಖ್ಯಸ್ಥರೇ ಮಾಡಿಕೊಳ್ಳಬಹುದು.
  3. ನೇಮಕಾತಿ ಪ್ರಕ್ರಿಯೆಯನ್ನು ಇಂಗ್ಲೀಷ್, ಹಿಂದಿ ಮತ್ತು ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಮುಖ್ಯವಾಗಿ ನೀಡಬೇಕು
  4. ಇರುವ ಹುದ್ದೆಗಳು ಎಷ್ಟು, ವೇತನ ಎಷ್ಟು ಇತ್ಯಾದಿ ಅಗತ್ಯ ಮಾಹಿತಿಯನ್ನು ಸ್ಥಳೀಯ ಮಾಧ್ಯಮದಲ್ಲಿ ಪ್ರಕಟಿಸುವುದರೊಂದಿಗೆ ಅರ್ಜಿ ನಮೂನೆಯನ್ನು ಅತ್ಯಂತ ಸರಳವಾಗಿ ಸ್ಥಳೀಯ ಭಾಷೆಯಲ್ಲಿ ರೂಪಿಸತಕ್ಕದ್ದು. 
  5. ಪ್ರಕಟಣೆಗಳ ಪ್ರತಿಯನ್ನು ಸ್ಥಳೀಯ ಪ್ರಾದೇಶಿಕ ಉದ್ಯೋಗ ವಿನಿಮಯ ಕೇಂದ್ರಕ್ಕೂ ಮತ್ತು ಮೀಸಲಾತಿಯ ಸ್ಥಾನಗಳೆಷ್ಟು ಎಂಬುದನ್ನು ಉಲ್ಲೇಖಿಸಬೇಕು
  6. ಈ ವಿವರಗಳನ್ನು ಸ್ಥಳೀಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಯಾಲಯಕ್ಕೂ ರವಾನಿಸಬೇಕು.

ಈ ವಿವರಗಳು ಇಷ್ಟು ದಿನ ರೇಲ್ವೆಯ ಅಂತರ್ಜಾಲ ತಾಣದಲ್ಲಿ ಇತ್ತು. http://irsme.nic.in/establishments ಆದರೆ ಜನವರಿ ೨೦೦೮ ರಿ೦ದ ತೆರೆ ಕಾಣದಂತೆ ತಡೆ ಹಿಡಿಯಲಾಗಿದೆ. ಇದು ರೇಲ್ವೆಯ ಎಲ್ಲಾ ವಿಭಾಗೀಯ ಅಂತರ್ಜಾಲ ತಾಣಗಳಲ್ಲೂ ಲಭ್ಯವಿತ್ತು ಅದರೆ ಇದನ್ನೂ ಸಹ ಜನವರಿ ೨೦೦೮ ರಿ೦ದ ಕಾಣದಂತೆ ತಡೆಹಿಡಿಯಲಾಗಿದೆ! Indian Railways establishment volume 1 and 2 [http://westcentralrailway.com/RTI_Personnel/Manuals/MANUALS.pdf].

ಇವತ್ತು ಆಗಲೇ ಕ.ರ.ವೇ ಈ ವಿಷ್ಯದಲ್ಲಿ ನಾಡಿನಾದ್ಯಂತ ಪ್ರತಿಭಟನೆ ಜಾಥಾ ಮಾಡಿ, ಸರ್ಕಾರಕ್ಕೆ, ರೈಲ್ವೆ ಇಲಾಖೆ, ಕನ್ನಡಿಗರನ್ನು ಕಡೆಗಣಿಸದಂತೆ ಎಚ್ಚರಿಕೆ ನೀಡಿದ್ದು ಓದಿ ಖುಷಿ ಆಯ್ತು. ಯಾರು ಮಾತಾಡಲಿಲ್ಲ ಅಂದ್ರೂ ಇವರಾದ್ರೂ ಕೆಲ್ಸ ಮಾಡ್ತಾ ಇದ್ದಾರಲ್ಲ ಈ ವಿಷ್ಯದಲ್ಲಿ ಅಂತಾ.ಈ ಬಾರಿಯಾದ್ರೂ ನಮ್ಮ ಸರ್ಕಾರ ಈ ವಿಷ್ಯದಲ್ಲಿ ನೇರವಾಗಿ ಕೇಂದ್ರದ ಜೊತೆ ಮಾತಾಡಿ, ಇಂತಹ ಕೆಲಸಗಳಿಗೆ ಸ್ಥಳಿಯರನ್ನೇ ಆಯ್ಕೆ ಮಾಡಿಕೊಳ್ಳಬೇಕು ಅನ್ನೊ ವಿಷ್ಯ ಮನದಟ್ಟು ಮಾಡಿ, ಆ ವಿಷ್ಯದಲ್ಲಿ ಕಾನೂನು ಬರೋ ತರಹ ಮಾಡಬೇಕು. ಏನಂತೀರಿ ಸ್ನೇಹಿತರೆ?

Rating
No votes yet

Comments