ಬೇಂದ್ರೆ: ಸಖೀಗೀತ: ಭಾಗ ಎರಡು
ಇದು ಸಖೀಗೀತದ ಎರಡನೆಯ ಭಾಗವನ್ನು ಕುರಿತು.
೧
ಮಾಂದಳಿರ ತೋರಣ ಹೂಮಿಡಿ ಗುಡಿಗಟ್ಟಿ
ಮಧುಮಾಸ ಹೊರಟಿತ್ತು ನಿಬ್ಬಣಕೆ
ಚಂದಿರದೇವನಮುಗಿಲ ಮಂದಿರದಲ್ಲಿ
ಕಣ್ಣಿದಿರು ಕೌಮುದಿ ಕುಣಿಯುತಿರೆ
ಮಾವಿನ ಹೊಸ ಚಿಗುರು, ಹೊಸ ಹೂ, ಇವುಗಳ ಬಾವುಟ ಹಿಡಿದು (ಗುಡಿಗಟ್ಟಿ), ಮಧುಮಾಸದ ನಿಬ್ಬಣ ಹೊರಟಿದೆ. ಚಂದ್ರದೇವನಿಗೆ ಸೇರಿದ ಮೋಡಗಳ ಮಂದಿರದಲ್ಲಿ ಕೌಮುದಿಯ ನರ್ತನ ಸಾಗಿದೆ. ಸ್ವಲ್ಪ ಗಮನಿಸಿದರೆ ಈ ಸ್ಟಾಂಜಾದಲ್ಲಿ ಋತು ವೈಭವ, ಶೃಂಗಾರ ಮತ್ತು ದೈವೀಭಾವಗಳೆಲ್ಲ ಮೇಳೈಸಿರುವುದು ತಿಳಿಯುತ್ತದೆ. ಚಂದ್ರದೇವ, ಮಂದಿರ ಈ ಪದಗಳೊಡನೆ ಗುಡಿಗಟ್ಟಿ ಎಂಬುದು ಸುಂದರ ಪವಿತ್ರ ದೇವಾಲಯದ ಕಲ್ಪನೆ ಮೂಡಿಸೀತು. ಅದು ಮೋಡದ್ದಾದ್ದರಿಂದ ಹಾಗೆ ದೇಗುಲ ಅನ್ನಿಸುತ್ತಿರುವಾಗಲೇ ಹುಣ್ಣಿಮೆಯ ಬೆಳದಿಂಗಳಲ್ಲಿ ಕಾಣುವ ಹೂಬಿಟ್ಟ ಮಾಮರದ ಚಿತ್ರ ಮೂಡಿ ಆಹಾ ಸೌಂದರ್ಯವೇ ಅನಿಸೀತು. ಕೌಮುದಿ ಎಂಬುದು ಆಶ್ವಯುಜದ ಅಥವ ಕಾರ್ತಿಕದ ಹುಣ್ಣಿಮೆಯ ದಿನ. ಕೌಮುದೀ ಮಹೋತ್ಸವಗಳ ಬಗ್ಗೆ ಹಳೆಯ ಕವಿಗಳು ಹೇಳಿರುವ ಮಾತುಗಳೂ ನೆನಪಿಗೆ ಬಂದು ಸ್ವಂಚ್ಛಂದ ಶೃಂಗಾರದ ಭಾವವೂ ಹೊಳೆದೀತು. ಸುಸ್ಥಿರವೆನ್ನಿಸುವ ಪದ್ಯ ಬಂಧದೊಳಗೆ ಮೋಡದಂಥ ಕ್ಷಣಕ್ಕೊಂದು ಮೂಡುವ ಭಾವಗಳ ಅಚ್ಚರಿ ಇಲ್ಲಿದೆ.
೨
ಮಂತ್ರ ತಂತ್ರದ ಮಂದಿವಾಳದ ಮದುವೆ
ಸಂದಣಿಯಲಿ ಹೇಗೊ ಮೆರೆಯುತಿರೆ
ಅಂತಃಪಟದಾಚೆ ವಿಧಿ ತಂದ ವಧು ನೀನು
ಮಾಲೆಯ ಸಾವರಿಸಿ ನಿಂತಿದ್ದೀಯೆ
ಮಂದಿವಾಳದ ಮದುವೆ. ಮಂದಿವಾಳ ಎಂದರೆ ಸಲುಗೆ ಎಂಬರ್ಥವಂತೆ. ಸಲುಗೆ ಮದುವೆಯ ಜನಸಂದಣಿ. ಮದುಮಗಳು, ಮದು ಮಗ ಇಬ್ಬರೂ ಎಳೆಯರು. ಸಲುಗೆಯ ಆಟವೆಂಬಂಥ ಮದುವೆ. ಆದರೂ ಅದು ಮದುವೆಯೇ. ಅಂತಃಪಟದಾಚೆ ಮಾಲೆಯ ಸಾವರಿಸಿನಿಂದಿರುವಳು ವಿಧಿ ತಂದ ವಧು. ಸಖಿ ಮತ್ತು ಆಕೆಯ ಸಖ್ಯ ಎರಡೂ ವಿಧಿಯೋ, ಪೂರ್ವ ನಿರ್ಧರಿತವೋ, ಅವರಿಗೂ ಅದು ಗೊತ್ತೋ ಇಲ್ಲವೋ, ಬರಿಯ ವಾಡಿಕೆಯ ಮಾತೋ? ಈಗ ಅಂಟುತ್ತಿರುವ ನಂಟಿನ ಕೊನೆ ಬಲ್ಲವರಾರು ಅನ್ನುವ ಪಲ್ಲವಿಯ ನುಡಿಯೊಡನೆ ನೋಡಿದರೆ ಈಗ ಚಿಗುರುತ್ತಿರುವ ಸಖ್ಯ ಜನ್ಮಾಂತರದ್ದೋ? ಸಾವರಿಸಿ ನಿಂತಿರುವ ಬಾಲೆ ವಿಧಿ ತಂದ ವಧು ಈ ನುಡಿಗಳ ಕನ್ನಡ ಸಂಸ್ಕೃತ ನುಡಿಗಳು ಸಲುಗೆ ಮತ್ತು ಗಾಂಭೀರ್ಯ, ಆಟ ಮತ್ತು ವಿಧಿ ಇವನ್ನೆಲ್ಲ ಈ ಪದ್ಯ ಹಿಡಿದಿರುವ ಅಚ್ಚರಿ ಗಮನಕ್ಕೆ ಬರುತ್ತದೆ.
೩
ಮುತ್ತಿಗು ಮಿಗಿಲಾಗಿ ಹೂವೀಗು ಹಿರಿದಾಗಿ
ಬೆವರ್ಹನಿ ಬಾಸಿಂಗ ತುಳುಕುತಿರೆ
ನತ್ತನು ನಾಚಿಸಿ ಬೆವರಿನ ಹನಿಯೊಂದು
ಮೂಗುಬಟ್ಟಿನ ಅಂದ ಮಿನುಗುತಿರೆ
ವಿವರಿಸಿದರೆ ಹಾಳಾಗುವುದೆನಿಸುವಷ್ಟು ನವಿರಾದ ವರ್ಣ ಚಿತ್ರ ಇಲ್ಲಿ ಮತ್ತು ಮುಂದಿನ ಸ್ಟಾಂಜಾದಲ್ಲಿದೆ.
೪
ಆಟದ ಕನ್ನಿಕೆ ಮಂಗಳ ಲಗ್ನಕೆ
ಮಾಲೆಯನಿಕ್ಕುತ ಮಡದಿಯಾದೆ;
ನಾಟಿಸಿ ಕಣ್ನೋಟ ಸೋಕಿಸಿ ಕೈ ಬೆರಳು
ಮರವಟ್ಟ ಮನ-ಬನ ಚಿಗುರಿಸಿದೆ.
ಆಟದ ಕನ್ನಿಕೆಯೊಡನೆ ಮಂಗಳದ ಲಗ್ನ. ಮಂಗಳ ಮತ್ತು ಲಗ್ನ ಎಂಬ ಪದಗಳ ಅರ್ಥವೂ ತಿಳಿಯದ ಬಾಲೆ. ಅದಕ್ಕೆಂದೇ ಸಲುಗೆ ಮದುವೆ, ಮದುವೆಯಾಟ. ಈ ಸ್ಟಾಂಜಾದ ಕೊನೆಯ ಎರಡು ಸಾಲುಗಳು ಆದಿಪುರಾಣದಲ್ಲಿ ಬರುವ ಶ್ರೀಮತಿ ಮತ್ತು ವಜ್ರಜಂಘರ ಪಾಣಿಗ್ರಹಣದ ಚಿತ್ರ ನೆನಪಿಗೆ ತರುತ್ತವೆ. ಅಲ್ಲಿಯೂ ಪರಸ್ಪರ ಸ್ಪರ್ಷಿಸುವ ಗಂಡು ಹೆಣ್ಣು ಕೈಗಳ ಅನುಭವ, ಮನದಲ್ಲಿ ಮೂಡುವ ಕಾಮದೇವನ ವ್ಯಾಪಾರ ಇವನ್ನು ಪಂಪ ಅನನ್ಯವೆಂಬಂತೆ ಮೂಡಿಸಿದ್ದಾನೆ. ಅಲ್ಲಿನ ಮದುವೆಯೂ ಜನ್ಮಾಂತರಗಳ ಸಖ್ಯದ ಗೀತವೇ ಅಲ್ಲವೇ? ಇಲ್ಲಿ ಹೆಣ್ಣಿನ ಕೈತಾಗಿ ಸಖನ ಒಣಗಿದ ಮನಸ್ಸಿನ ತೋಪು ತಟ್ಟನೊಮ್ಮೆ ಚಿಗುರಿದೆ. ಈ ಭಾಗದ ಮೊದಲಲ್ಲಿ ಬಂದ ಮಾಂದಳಿರು ಎಂಬ ಮಾತು ನೆನಪಾಗುತ್ತಿದೆ. ನಿಸರ್ಗಸಹಜ ಶೃಂಗಾರ ಮನುಷ್ಯ ಮನಸ್ಸಿನಲ್ಲಿ ಮೂಡುತ್ತದೋ, ಮನಸ್ಸಿನ ಶೃಂಗಾರ ನಿಸರ್ಗವನ್ನು ಹಾಗೆ ಕಾಣುವಂತೆ ಮಾಡುತ್ತದೋ? ಆಟದ ಕನ್ನಿಕೆಯಾದರೂ ಅವಳು ಕಣ್ಣ ನೋಟ ನಾಟಿಸಿ ಕೈ ಬೆರಳ ಸೋಕಿಸಿ ಅದರಿಂದ ತನ್ನಲ್ಲಾದ ಪರಿಣಾಮವನ್ನು ವ್ಯಾಖ್ಯಾನ ಮಾಡುತ್ತಿರುವ ಕುಸುರಿಯಲ್ಲಿ “ಕನ್ನೆಯ ಸ್ನೇಹದಂತೆ” ಅನ್ನುವ ನುಡಿಯ ದನಿಯೂ ಕೇಳೀತೇ?
೫
ದೈವದ ಪುತ್ಥಳಿ ಮನ ತೆತ್ತ ಮೈವೆತ್ತ
ಮೈಮೆಯ ನಿನ್ನೊಡ ತಂದಿರುವೆ
ಜೀವದ ಭೂಮಿ ನೀ ಮರಿಮಕ್ಕಳನು ಪಡೆದು
ಮನೆತನ ಮುಂದರಿಸ ಬಂದಿರುವೆ
ಆಟದ ಕನ್ನಿಕೆ ಇಲ್ಲಿ ದೈವದ ಪುತ್ಥಳಿಯಾಗಿದ್ದಾಳೆ. ದೈವಿಕ ಹೌದು, ಆದರೆ ಬರೀ ಬೊಂಬೆಯಂತೆಯೇ ಈ ಕವಿತೆಯುದ್ದಕ್ಕೂ ಅಕೆ ಕಾಣುತ್ತಾಳೆ. ಅದನ್ನು ಕೊನೆಗೆ ನೋಡೋಣ. ಮುಟ್ಟಿ ಮನದ ಬನ ಚಿಗುರಿಸಿರುವ ಮಹಿಮೆ, ಕಣ್ನೋಟ ನಾಟಿಸುತ್ತಾ ಮನ ತೆರುವ ಮೈತೆರುವ ಮಹಿಮೆ; ಅವಳು ಕಾಮಾಕ್ಷಿಯೆಂದು ಪ್ರತಿ ಖಂಡದ ಕೊನೆಯಲ್ಲೂ ಕರೆಯುವುದುಂಟಲ್ಲವೇ! ಸಖನ ನೆನಪು ಬಿಚ್ಚಿಕೊಳ್ಳುತ್ತಿರುವಾಗ ದೈವದ ಪುತ್ಥಳಿ ಜೀವದ ಭೂಮಿಯಾಗಿ ಕಂಡಿದ್ದಾಳೆ, ಮಕ್ಕಳು ಮರಿಮಕ್ಕಳನ್ನು ಪಡೆದು ಮನೆತನ ಮುಂದುವರೆಸಬಂದವಳಾಗಿ ಕಂಡಿದ್ದಾಳೆ. ಸದಾ ಮುಂದುವರೆಯುತ್ತಿರಲೇಬೇಕೆಂಬುದು ವಿಧಿಯೋ ಹಂಬಲವೋ...
೬
ತನುಮನಧನದಲ್ಲಿ ಪಾಲುಗಾರತಿಯಲ್ಲ
ನೀನೇನೊ ಹಿಗ್ಗಲಿಸ ಬಯಸಿರುವೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!
ಬಾಲೆ, ಇನ್ನೂ ಮೈನೆರೆದು ನೆರೆಯವಳಾಗದವಳು. ಅದಕ್ಕೆಂದೇ ಮೈ ಮನಸ್ಸು ಸಂಪತ್ತುಗಳ ಪಾಲುಗಾರ್ತಿಯಲ್ಲ. ಆದರೂ ತಾನು ಮಾಡಬೇಕಾದ ಕರ್ತವ್ಯ (ವಿಧಿ) ಹೆಣ್ಣಿಗೆ ಹುಟ್ಟಿನೊಡನೆಯೇ ಇರುತ್ತದೋ ಏನೋ. ಹಿಗ್ಗು ಸಿಕ್ಕಿತೋ ಅಥವ ಹಿಗ್ಗಲಿಸುವ ವಿಧಿಯಷ್ಟೇ ಅವಳದೋ, ಅದು ಮುಂದಿನ ಸಖ್ಯದ ಕಟುವೋ ಮಧುರವೋ ಆದ ಕಥನ. ಈಗಿನ್ನೂ ವಿಸ್ಮಯದ ಆರಂಭ. ನಮ್ಮ ನಂಟು ಎಲ್ಲಿಗೆ ಮುಟ್ಟೀತು, ಮುಟ್ಟಿಸೀತು.
Comments
ಬೇಂದ್ರೆಯವರ ಬಗ್ಗೆ ಎಷ್ಟು ಓದಿದರೂ, ಬರೆದರೂ ಕಡಿಮೆಯೇ!