ದೊಡ್ಡವರ ದೊಡ್ಡತನ

ದೊಡ್ಡವರ ದೊಡ್ಡತನ

ಮೊನ್ನೆ ಒಂದು ಒಳ್ಳೇ ಅವಕಾಶ ಸಿಕ್ಕಿತು. ಇಲ್ಲಿ ಕಚೇರಿಯೊಂದಕ್ಕೆ ಬಂದಿದ್ದ ಒಬ್ಬ ಸಂಗೀತಗಾರರು ನಮ್ಮ ಗೆಳೆಯರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಆ ನೆವದಲ್ಲಿ ನಾವು ಕೆಲವು ಸಂಗೀತಾಸಕ್ತ ಕುಟುಂಬಗಳು ನಮ್ಮ ಗೆಳೆಯರ ಮನೆಯಲ್ಲಿ ಒಟ್ಟು ಸೇರಿ ಅವರೊಡನೆ ಹರಟೆ ಹೊಡೆಯುತ್ತಾ - ಊಟ ಮಾಡುವ ಅವಕಾಶ ಸಿಕ್ಕಿತು.

ಊಟ ಮಾಡಿದ ಮೇಲೆ ನಾವೆಲ್ಲ ಅವರಿಗೆ ಒಂದು ಹಾಡು ಹೇಳಬೇಕೆಂದು ದುಂಬಾಲು ಬಿದ್ದೆವು. ಎರಡು ಮೂರು ದಿನ ಸಾಲಾಗಿ ಮೂರು -ನಾಕು ಗಂಟೆ ಕಚೇರಿಯಲ್ಲಿ ಹಾಡಿ ಗಂಟಲು ಒಳ್ಳೇ ಸ್ಥಿತಿಯಲ್ಲಿಲ್ಲ ಎನ್ನಬೇಕೇ ಅವರು! ನಾವೂ ಬಿಡದೇ ಮತ್ತೆ ಕಾಡುತ್ತಲೇ ಇದ್ದೆವು. ಮತ್ತೆ ಅವರು ನಮಗೆಲ್ಲ ನೀವೆಲ್ಲ ಒಂದೊಂದು ಹಾಡಿ, ಕಡೆಯಲ್ಲಿ ನಾನೂ ಒಂದು ಹಾಡುವೆ ಎಂದರು.

ಸರಿ - ಸೇರಿದವರಲ್ಲಿ ಹಾಡಲು ಬರುವವರೆಲ್ಲ - ಒಂದೈದಾರು ಜನ ಹಾಡಿದೆವು. ನನಗೆ ಬಹಳ ಆಶ್ಚರ್ಯ ಹಾಗೂ ಸಂತೋಷವಾಗಿದ್ದು  ಈ ಕಲಾವಿದರು ನಾವು ಹಾಡಿದ್ದಕ್ಕೆ ಕೊಟ್ಟ ಪ್ರೋತ್ಸಾಹ.ಹಾಡುವಾಗ ಒಳ್ಳೆಯ ಸಂಗತಿಯೊಂದು ಬಂದರೆ ಭಲೆ! ಭೇಷ್!! ಎಂದು ಹುರಿದುಂಬಿಸಿ ಒಳ್ಳೇ ಮಾತಾಡಿದರು. ಅವರೋ ಹಲವು ದಶಕಗಳಿಂದ ಸಾವಿರಾರು ಕಚೇರಿ ಕೊಟ್ಟಿರುವ ಕಲಾವಿದರು. ನಮ್ಮಲ್ಲಿ ಹೆಚ್ಚಿನವರು (ಎಂದೆಂದಿಗೂ ಅದೇ ಮಟ್ಟದಲ್ಲೇ ಇರುವ ;) ) ಸಂಗೀತ ವಿದ್ಯಾರ್ಥಿಗಳು! ಈ ರೀತಿಯ ಕಲಾವಿದರು ಕಡಿಮೆಯೇ ಎನ್ನಬಹುದು.

ಕಡೆಗೆ ನಮ್ಮೆಲ್ಲರ ಆಸೆಯಂತೆ ಅವರು - ತಾವು ಕನ್ನಡದವರಲ್ಲದಿದ್ದರೂ- ಬಂದವರಲ್ಲಿ ಹೆಚ್ಚಿಗೆ ಕನ್ನಡದವರಿದ್ದರಿಂದ ಒಂದು ಒಳ್ಳೇ ಕನ್ನಡ ಹಾಡನ್ನು ಹಾಡಿದರು.

ಒಬ್ಬರ ಬಗ್ಗೆ ಒಂದು ಒಳ್ಳೆ ಮಾತಾಡಲು ಕೂಡಾ ಹಿಂದೆಮುಂದೆ ನೋಡುವ ಈ ಕಾಲದಲ್ಲಿ, ಈ ರೀತಿಯ ಜನರು ಅಪರೂಪವೆನ್ನಿಸಿ ಹೀಗೆ ನಾಲ್ಕು ಸಾಲು ಬರೆದೆ.

-ಹಂಸಾನಂದಿ

Rating
No votes yet

Comments