ಲಿನಕ್ಸಾಯಣ - ೨೫ - ಲಿನಕ್ಸ್ ನಲ್ಲಿ ಕನ್ನಡ. ಹ್ಯಾಗೆ?

ಲಿನಕ್ಸಾಯಣ - ೨೫ - ಲಿನಕ್ಸ್ ನಲ್ಲಿ ಕನ್ನಡ. ಹ್ಯಾಗೆ?

ಈಗ ತಾನೆ ಉಬುಂಟು ಇನ್ಸ್ಟಾಲ್ ಮಾಡ್ಕೊಂಡೆ ಆದ್ರೆ ಇದರಲ್ಲಿ ಕನ್ನಡ ಹ್ಯಾಗೆ ಟೈಪ್ ಮಾಡೋದು. ಕನ್ನಡ ವೆಬ್ ಸೈಟ್ ಗಳೇ ನೆಟ್ಟಗೆ ಕಾಣ್ತಿಲ್ಲವಲ್ಲ ಅಂತ ತಲೆ ಮೇಲೆ ಕೈ ಇಟ್ಕೊಂಡು ಕುಂತ್ಕೊಂಡಿದೀರಾ? 

ಬನ್ನಿ ಹ್ಯಾಗೆ ಕನ್ನಡನ ಲಿನಕ್ಸ್ ನಲ್ಲಿ ಎನೇಬಲ್ ಮಾಡ್ಕೊಳ್ಳೋದು ಅನ್ನೊದನ್ನ ತಿಳಿಸ್ತೇನೆ.

ಇದಕ್ಕು ಮುಂಚೆ, ಉಬುಂಟುನಲ್ಲಿ ಕನ್ನಡವನ್ನ ಹೇಗೆ ತರಿಸೋದು ಅಂತ ಒಂದು ಲೇಖನ ಬರೆದಿದ್ದೆ.

ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ? ಇದನ್ನ ನೋಡಿದ್ರೆ ನೀವು ಮಾಡಬೇಕಿರೋ ಮೊದಲನೆ ಕೆಲಸ ನೆನಪಾಗತ್ತೆ.  ಇಲ್ಲಿಂದಲೇ ನಾನು ಕನ್ನಡದ ಫಾಂಟು ಇತ್ಯಾದಿಗಳನ್ನ ಇನ್ಸ್ಟಾಲ್ ಮಾಡ್ಲಿಕ್ಕೆ ಶುರು ಮಾಡೋದು.

ಈ ಲೇಖನ ನಿಮ್ಮನ್ನ ಇಲ್ಲಿಂದ ಮುಂದಕ್ಕೆ ಕರೆದು ಕೊಂಡು ಹೋಗ್ತಿದೆ. ಲಿನಕ್ಸ್ ನಲ್ಲಿ ಕನ್ನಡ ಬಂದರಷ್ಟೇ ಸಾಲದು, ಅದರಲ್ಲಿ ಕನ್ನಡವನ್ನ ಬರೀಲಿಕ್ಕೆ, ಓದ್ಲಿಕ್ಕೆ ಕೂಡ ಆಗ್ಬೇಕು ಅಲ್ವೇ? ಹಾಗಿದ್ರೆ ಮುಂದೆ ಓದಿ. ನಿಮಗೇನಾದ್ರೂ ಸಂಶಯಗಳು, ಪ್ರಶ್ನೆಗಳು ಅಥವಾ ಇತರರಿಗೆ ಬೇಕಾಗ ಬಹುದಾದ ಉತ್ತರಗಳ ನೆನಪಾದರೆ ಅದನ್ನ ಕಾಮೆಂಟ್ ರೂಪದಲ್ಲಿ ಎಲ್ಲರಿಗೂ ತಲುಪಿಸುವುದನ್ನ ಮಾತ್ರ ಮರೀಬ್ಯಾಡಿ ಮತ್ತೆ. 

ಚಿತ್ರ -೧

ಈಗ ಮೇಲಿನ ಚಿತ್ರ ನೋಡಿ. ಇಲ್ಲಿ ನಾನು ನಿಮಗೆ ಕನ್ನಡ ದಲ್ಲಿ ಟೈಪ್ ಮಾಡ್ಲಿಕ್ಕೆ ಬೇಕಾದ SCIM (Smart Common Input Method) ಅನ್ನೋ ತಂತ್ರಾಂಶವನ್ನ ನಿಮ್ಮ ಡೆಸ್ಕ್ಟಾಪ್ನೊಂದಿಗೆ ಹೊಂದಿಸಿ ಕೊಳ್ಳಲಿಕ್ಕೆ ಬೇಕಿರುವ ಮುಖ್ಯ ಸಲಕರಣೆಯನ್ನ ತೋರಿಸ್ತಿದ್ದೇನೆ.

System -> Administration -> Language Support ಈ ಸಲಕರಣೆಯಲ್ಲಿ ನೀವು ಎರೆಡು ಕೆಲಸವನ್ನ ಮಾಡಬಹುದು. ಮೊದಲನೆಯದನ್ನ ನನ್ನ ಹಿಂದಿನ ಲೇಖನವೇ ಹೇಳತ್ತೆ. ಹೌದು, ಅದು ಲ್ಯಾಂಗ್ವೇಜ್ ಸಪೋರ್ಟ್. ಅಂದ್ರೆ ಕನ್ನಡದಲ್ಲಿ ಮೆನು ಇತ್ಯಾದಿಗಳನ್ನ ತಂತ್ರಾಂಶಗಳ ಜೊತೆ ಹೊಂದಿಸಿ ಕೊಂಡು ಎಲ್ಲವನ್ನ ಲಿನಕ್ಸ್ ನಲ್ಲಿ ಕನ್ನಡಮಯ ಮಾಡೋದು. 

ಎರಡನೆಯದು ಏನಂತಂದ್ರೆ, ಲಿನಕ್ಸ್ ನಲ್ಲಿರುವ ಪ್ರತಿಯೋಂದೂ ತಂತ್ರಾಂಶಕ್ಕೆ ನೀವು ಕೀ ಬೋರ್ಡ್ ನ ಮೂಲಕ ಸಂದೇಶ ಕಳಿಸ್ತೀರಲ್ವಾ? ಉದಾಹರಣೆಗೆ, ನಾನೀಗ ಬರೆಯುತ್ತಿರುವ ಈ ಲೇಖನ. ಇದನ್ನ ಫೈರ್ ಫಾಕ್ಸ್ ಬ್ರೌಸರಿನ ಮೂಲಕ ನೇರವಾಗಿ ನನ್ನ ಸಂಪದದ ಬ್ಲಾಗಿಗೆ ಸೇರಿಸ್ತಿದ್ದೇನೆ. ಇದು ಸಾಧ್ಯವಾಗಿದ್ದು ಯುನಿಕೋಡ್ ನ ಕ್ಲಿಷ್ಟ (complex) ಪದಗಳನ್ನ ಇತರೆ ತಂತ್ರಾಂಶಗಳು ಪಡೆಯೋ ಸೌಲಭ್ಯವನ್ನ ನನ್ನ ಡೆಸ್ಕ್ಟಾಪಿಗೆ ಕೊಡುವ SCIM ತಂತ್ರಾಂಶವನ್ನ ಹಾಕಿ ಕೊಂಡಿರೊದ್ರಿಂದ (ನಿಮ್ಮ ಕಂಪ್ಯೂಟರಿಗೆ ASCII ಅಂತಂದ್ರೆ ತುಂಬಾ ಸುಲಭದ ಮಾತು. ಆದ್ರೆ ಯುನಿಕೋಡ್ ಇತರೆ ಅಂತಂದ್ರೆ ಸ್ವಲ್ಪ ಕಬ್ಬಿಣದ ಕಡಲೆ. ಈ ತೊಂದರೆಯನ್ನ ತಪ್ಪಿಸೋದು SCIM). ಇದನ್ನ ನೀವೂ ಸಾಧ್ಯಮಾಡಿಕೊಳ್ಳಲಿಕ್ಕೆ, ಮೇಲಿನ ಚಿತ್ರದಲ್ಲಿ ಕಂಡಂತೆ "Enable support to enter complex characters" ಅನ್ನೋ ಅಯ್ಕೆಯನ್ನ ಸೆಲೆಕ್ಟ್ ಮಾಡ್ಕೊಬೇಕು. ನಂತರ ಓಕ ಕ್ಲಿಕ್ ಮಾಡಿ. ಇದು ಸ್ಕಿಮ್ ಇತ್ಯಾದಿಗಳನ್ನ ನಿಮಗೆ ಇನ್ಸ್ಟಾಲ್ ಮಾಡಿ ಕೊಡತ್ತೆ. 

ಸೂಚನೆ: ನಿಮ್ಮಲ್ಲಿ ಇಂಟರ್ನೆಟ್ ಕನೆಕ್ಷನ್ ಇಲ್ಲದಿದ್ರೆ ನೀವು ಈ ಕೆಲ ಕಾನ್ಫಿಗರೇಷನ್ಗಳನ್ನ ಮಾಡ್ಲಿಕ್ಕಾಗಲ್ಲ. ನೀವೇನಾದ್ರೂ ಗ್ನು/ಲಿನಕ್ಸ್ ಹಬ್ಬಕ್ಕೆ ಬಂದು, ನಾವು ಕೊಟ್ಟ apt-on ಸಿ.ಡಿ ಯನ್ನ ತೆಗೆದು ಕೊಂಡಿದ್ರೆ ಇಂಟರ್ನೆಟ್ ಇಲ್ಲದೇನೂ ಇಲ್ಲಿ ಕೊಟ್ಟಿರುವ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡ್ಕೊಳ್ಳಲಿಕ್ಕೆ ಸಾಧ್ಯ ಅಗತ್ತೆ.

ಇನ್ಟಾಲೇಷನ್ ಮುಗಿಸಿದ ನಂತರ ನಿಮ್ಮ ಕಂಪ್ಯೂಟರ್ ಅನ್ನ ರೀಸ್ಟಾರ್ಟ್ ಮಾಡ್ಲಿಕ್ಕೆ ಅದು ನಿಮ್ಮನ್ನ ಕೇಳತ್ತೆ. ಮಾಡಿದ ನಂತರ ನಿಮ್ಮ ತೆರೆಯ ಮೇಲಿನ ಬಾರನ್ನು ಒಮ್ಮೆ ಗಮನಿಸಿ.

ಚಿತ್ರ - ೨

ಮೇಲೆ ನೀಡಿರುವಂತೆ ಕೀಬೋರ್ಡನ ಆಕಾರದ ಒಂದು ಚಿನ್ಹೆ ನಿಮ್ಮ ಕಣ್ಣಿಗೆ ಬೀಳತ್ತೆ. ಇದೇ SCIM.

ಈಗ ನನಗೆ ಇನ್ನೊಂದು ಸಣ್ಣ ತಂತ್ರಾಂಶ ಬೇಕಿದೆ. ಬರದಲ್ಲಿರುವ ಐಟ್ರಾನ್ಸ್ ಕೀಮ್ಯಾಪ್ ಇತ್ಯಾದಿ. ಅದು "M17N Input Method Engine for SCIM " ಅನ್ನೋ  scim-m17n ತತ್ರಾಂಶ ಪ್ಯಾಕೇಜಿನಿಂದ ಸಿಗತ್ತೆ. ಅದನ್ನ ಇನ್ಸ್ಟಾಲ್ ಮಾಡ್ಕೊಳ್ಬೇಕು. ಅದಕ್ಕೆ ಕೆಳಗೆ ಕೊಟ್ಟಿರುವ ಕಮ್ಯಾಂಡನ್ನ ಟರ್ಮಿನಲ್ ನಲ್ಲಿ ಟೈಪಿಸಿ. (Applications -> Accessories -> Terminal)

sudo aptitude install scim-m17n

ಈಗ ಕನ್ನಡ ಫಾಂಟನ್ನ ಇನ್ಸ್ಟಾಅಲ್ ಮಾಡ್ಕೊಳ್ಳೋಣ "Free TrueType fonts for the Kannada language" ನಿಮಗೆ ttf-kannada-fonts ತಂತ್ರಾಂಶ ಪ್ಯಾಕೇಜ್ನಲ್ಲಿ ಸಿಗತ್ತೆ. ಅದನ್ನೂ ಇನ್ಸ್ಟಾಲ್ ಮಾಡ್ಕೊಳ್ಳಿ.

sudo aptitude install ttf-kannada-fonts

ಲಿನಕ್ಸಾಯಣ - ೬ - ಪ್ರೊಗ್ರಾಮ್ ಇನ್ಸ್ಟಾಲೇಶನ್ ನಿಮಗೆ ಮೆಲ್ಕಂಡ ತಂತ್ರಾಂಶಗಳನ್ನ ಇನ್ನೂ ಸುಲಭವಾಗಿ ಹೇಗೆ ಇನ್ಸ್ಟಾಲ್ ಮಾಡ್ಕೊಬಹುದು ಅನ್ನೋದನ್ನ ತಿಳಿಸತ್ತೆ. 

ಈಗ ಮುಂದಿನ ಕೆಲಸ ಸ್ಕಿಮ್ ಅನ್ನ ಕಾನ್ಫಿಗರ್ ಮಾಡೋದು.  ಚಿತ್ರ ಎರಡಲ್ಲಿ ಕಾಣುವ ಕೀಬೋರ್ಡ್ ಚಿನ್ಹೆಯ ಮೇಲೆ Right ಕ್ಲಿಕ್ ಮಾಡಿ "SCIM Setup" ಆಯ್ಕೆ ಮಾಡಿಕೊಳ್ಳಿ. ಅದು ನಿಮಗೆ ಮತ್ತೊಂದು ಸಣ್ಣ ಸಲಕರಣೆಯನ್ನ ನಿಮ್ಮ ಮುಂದಿಡುತ್ತದೆ. ಇಲ್ಲಿ Global Setup ನಲ್ಲಿ ಕನ್ನಡವನ್ನ ಸೆಲೆಕ್ಟ್ ಮಾಡಿಕೊಂಡು, ಓಕೆ ಪ್ರೆಸ್ ಮಾಡಿ.

 ಚಿತ್ರ - ೩

ನೀವೀಗ ಕನ್ನಡ ಟೈಪ್ ಮಾಡ್ಲಿಕ್ಕೆ ತಯಾರು. ಒಮ್ಮೆ ಲಾಗ್-ಔಟ್ ಆಗಿ ಮತ್ತೆ ಲಾಗಿನ್ ಆಗಿ. ಇದು ಸ್ಕಿಮ್ ಟೂಲನ್ನ ರೀಲೋಡ್ ಮಾಡಿ ನಿಮ್ಮ ಹೊಸ ಕಾನ್ಫಿಗರೇಷನ್ ಕೆಲಸ ಮಾಡುವಂತೆ ಮಾಡುತ್ತೆ.

ಈಗ ಫೈರ್ ಫಾಕ್ಸ್ ನಲ್ಲಿ ಸಂಪದ ಬ್ರೌಸ್ ಮಾಡಿ. ಕನ್ನಡ ಸರಿಯಾಗಿ ಕಾಣ್ತಿರಬೇಕಲ್ಲ. ಓಪನ್ ಟೈ ಫಾಂಟಿದ್ದರಾಯಿತು ಎಲ್ಲ ಯುನಿಕೋಡ್ ವೆಬ್ ಸೈಟ್ಗಳು ನಿಮ್ಮ ತೆರೆಯ ಮೇಲೆ ಚೆನ್ನಾಗಿ ಮೂಡಿಬರುತ್ತವೆ. ಸರಿ ಈಗ ಕನ್ನಡ ಟೈಪಿಸೋಣ. ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ "ಹೊಸ ಬರಹ ಸೇರಿಸಲಿಕ್ಕ" ಅಣಿಯಾಗಿ.

ಏನಾದರೂ ಟೈಪ್ ಮಾಡಿ. ಇಂಗ್ಲೀಷ್ ನಲ್ಲಿ ಟೈಪಾಗ್ತಿದೆ ಅಲ್ವಾ? ಸರಿ ಈಗ ಒಂದು ಮ್ಯಾಜಿಕ್ ಮಾಡೋಣ. 

CTRL ಬಟನ್ ಒಂದು ಬೆರಳಿನಲ್ಲಿ ಹಿಡ್ಕೊಂಡು Space ಪ್ರೆಸ್ ಮಾಡಿ ನಿಮ್ಮ ಕೀಬೋರ್ಡ್ನಲ್ಲಿ. ಕೆಳಗೆ ಕಂಡಂತೆ ಒಂದು ಸಣ್ಣ ಟೂಲ್ ನಿಮ್ಮ ಪರದೆಯಲ್ಲಿ ಬಂದಿರಬೇಕಲ್ಲ. 

 ಚಿತ್ರ - ೪

ಸಾಮಾನ್ಯವಾಗಿ ಇಲ್ಲಿ ನಿಮಗೆ ಇಂಗ್ಲೀಷ್ ಕಾಣಿಸತ್ತ. ಭಾಷೆಯ ಮೇಲೆ ಕ್ಲಿಕ್ ಮಾಡಿ ಕನ್ನಡ ಸೆಲೆಕ್ಟ್ ಮಾಡಿಕೊಳ್ಳಿ. ಇವು ನಿಮಗೆ ಬೇರೆ ಬೇರೆ ಕನ್ನಡ ಕೀಮ್ಯಾಪ್ಗಳನ್ನ ಸೆಲೆಕ್ಟ್ ಮಾಡ್ಕೊಳ್ಲಿಕ್ಕೆ ಸಹಾಯ ಮಾಡುತ್ತೆ. 

ಮೇಲಿನ ಚಿತ್ರದಲ್ಲಿ ನಾನು kn-itrans ಅನ್ನ ಸೆಲೆಕ್ಟ್ ಮಾಡಿಕೊಂಡಿದ್ದೇನೆ. ಇದು ಬರಹ ರೂಪದ ಕೀಬೋರ್ಡ್ ಲೇಔಟ್. ಸುಲಭವಾಗಿ ನನಗೆ ಕನ್ನಡ ಟೈಪ್ ಮಾಡ್ಲಿಕ್ಕೆ ಇಂದರಿಂದಲೇ ಸಾಧ್ಯವಾಗಿದ್ದು.  ಈಗ "ಅ" ಬರೆಯಿರಿ ನೋಡೋಣ. ಹೌದು ಸಾರ್. ಬರೆ a ಟೈಪ್ ಮಾಡಿ. ನಿಮ್ಮ ತೆರೆಯ ಮೇಲೆ ನಮ್ಮೆಲ್ಲರ ನಾನ್ನುಡಿ ಕನ್ನಡ ರಾರಾಜಿಸುವುದನ್ನ ನೋಡಿ.

ಈಗ ಮತ್ತೆ ಇಂಗ್ಲೀಷ್ ಟೈಪಿಸಲಿಕ್ಕೆ CTRL ಬಟನ್ ಒಂದು ಬೆರಳಿನಲ್ಲಿ ಹಿಡ್ಕೊಂಡು Space ಪ್ರೆಸ್ ಮಾಡಿ ಮತ್ತೆ. ಇಲ್ಲ ನೇರವಾಗಿ ಭಾಷೆಯ ಬದಲಾವಣೆಯನ್ನ ಸ್ಕಿಮ್ ಟೂಲ್ ನಲ್ಲೇ ಮಾಡಬಹುದು.

ಸುಲಭವಾಯಿತಲ್ಲ ಈಗ ಲಿನಕ್ಸ್ ನಲ್ಲಿ ಕನ್ನಡ. ನಿಮಗೆ ಮತ್ತಷ್ಟು ಪ್ರಶ್ನೆಗಳಿದ್ದರೆ, ಸಂಕೋಚವಿಲ್ಲದೆ ನನಗೆ ತಿಳಿಸಿ. ನಿಮ್ಮ ಲಿನಕ್ಸ್ ಸಂದೇಹಗಳನ್ನ ನಿವಾರಿಸ್ತೇನೆ 

 ಹೆಚ್ಚಿನ ಮಾಹಿತಿ : ಸಿನಾಪ್ಟೆಕ್  ಪ್ಯಾಕೇಜ್ ಮ್ಯಾನೇಜರ್

scim-m17n ಮತ್ತು  ttf-kannada-fonts  ಇನ್ಸ್ಟಾಲ್ ಮಾಡೋದು ಕಷ್ಟ ಆಯ್ತೇ?

ಹಾಕಿದ್ರೆ ಸಿನಾಪ್ಟೆಕ್ ಪ್ಯಾಕೇಜ್ ಮ್ಯಾನೇಜರ್ ನೋಡಿ

ಮೆನು : System -> Administration -> Synaptic Package Manager
ಇದು ವಿಂಡೋಸ್ ನಲ್ಲಿನ Add/Remove Program ಇದ್ದ ಹಾಗೆ.

ಚಿತ್ರ - ೫

ನಿಮಗೆ ಬೇಕಿರುವ ತಂತ್ರಾಂಶದ ಹೆಸರನ್ನ ಸರ್ಚ್ ಮಾಡಿ ಅದನ್ನ ಸೆಲೆಕ್ಟ್ ಮಾಡಿ ಕೊಂಡು Apply ಪ್ರೆಸ್ ಮಾಡಿ.

ನಿಮಗೆ ಕೆಲ ತಂತ್ರಾಂಶಗಳು ಸರ್ಚ್ ಮಾಡಿದಾಗ ಸಿಗಲಿಲ್ಲ ಅಂದ್ರೆ, ನೀವು ಸಿನಾಪ್ಟೆಕ್ ನ ಕೆಲ ರೆಪೋಸಿಟರಿಗಳನ್ನ ಎನೇಬಲ್ ಮಾಡಿಲ್ಲ ಅಂತಾಯ್ತು.

Settings -> Repositories ಸೆಲೆಕ್ಟ್ ಮಾಡಿಕೊಳ್ಳಿ ಅಲ್ಲಿ ಕೆಳಗಿನ ಚಿತ್ರದಲ್ಲಿ ಕಂಡಂತೆ ಎಲ್ಲ ಸೋರ್ಸ್ಗಳನ್ನ ಸೆಲೆಕ್ಟ್ ಮಾಡಿ ವಿಂಡೋ ಕ್ಲೋಸ್ ಮಾಡಿ. ಅದು ನಿಮ್ಮನ್ನ "Reload" ಮಾಡ್ಲಾ ಪ್ಯಾಕೇಜ್ ಇನ್ಪಾರ್ಮೇಶನ್ ಅನ್ನತ್ತೆ. ಸರಿ ಅಂತೇಳಿ ಅದು ಮುಗಿದ ನಂತರ ನಿಮಗೆ ಬೇಕಾದ ತಂತ್ರಾಂಶಗಳು ಸಿಗ್ತವೆ.

ಚಿತ್ರ - ೬

 

Rating
No votes yet

Comments