ನೀಲ ಕಡಲ ಬಾನು

ನೀಲ ಕಡಲ ಬಾನು

ಸಂಪದ ಸ್ನೇಹಿತರಿಗೆಲ್ಲ ನಮಸ್ಕಾರ. ನನ್ನ ಪುಸ್ತಕ ’ನೀಲ ಕಡಲ ಬಾನು’ವಿನ ಬಿಡುಗಡೆಗೆ ಒಂದಿಷ್ಟು ಜನ ಸಂಪದ ಸ್ನೇಹಿತರು ಬಂದಾರು ಅನ್ನೊ ನಿರೀಕ್ಷೆ ಇದ್ದದ್ದು ಸುಳ್ಳಲ್ಲ. ಒಂದಿಷ್ಟು ಜನ ಅಲ್ಲದಿದ್ದರೂ ಸಂಪದ ಬಳಗದಲ್ಲಿರುವ ಮುಂಬೈನ ಅವಿನಾಶ್ ಕಾಮತ್ (ಅಷ್ಟು ದೂರದಿಂದ ನನಗಾಗಿ ಬಂದ ಅವಿ ನಿಮಗೆ ನನ್ನ ಡಬಲ್ ಸೆಲ್ಯೂಟ್) ಹಾಗೂ ಬೆಂಗಳೂರಿನ ದೀಪಾ ರವಿಶಂಕರ್ ಬಂದು ನನ್ನ ಸಂಭ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಾರೈಸಿದರು. ಕಾರ್ಯಕ್ರಮದ ಒಂದು ಭಾಗವಾಗಿ ’ಕವಿತಾಭಿನಯ’ವನ್ನು ಹಮ್ಮಿಕೊಳ್ಳಲಾಗಿತ್ತು. ಆ ಕವಿತಾಭಿನಯದ ರಚನೆ ಅವಿನಾಶ್ ಕಾಮತ್ ಅವರದ್ದಾಗಿತ್ತು. ಅದನ್ನು ಮನೋಜ್ಞವಾಗಿ ದೀಪಾ ಅಭಿನಯಿಸಿದರು. ಅವರಿಬ್ಬರಿಗೂ ಈ ಸಂಪದದ ಮೂಲಕ ನನ್ನ ಮನದಾಳದ ನನ್ನಿ. ನಿಮ್ಮಲ್ಲಿ ಯಾರಾದರು ನನ್ನ ಸಂಭ್ರಮದಲ್ಲಿ ಸದ್ದಿಲ್ಲದೆ ಭಾಗವಸಿ ಹಾರೈಸಿ ಹೋದಿರಾ...? ತಿಳಿಯದು.ಹಾಗೆ ಬಂದವರಾಗಿದ್ದರೆ ಭೇಟಿಯಾಗಬೇಕಿತ್ತು. ನನ್ನ ಸಂಭ್ರಮ ಇಮ್ಮಡಿಯಾಗುತ್ತಿತ್ತು.
’ಅನೇಕ’ ಸಾಂಸ್ಕೃತಿಕ ಸಂಸ್ಥೆ ಈ ಕೃತಿ ಬಿಡುಗಡೆಯ ಜವಾಬ್ದಾರಿಯನ್ನು ಪ್ರೀತಿಯಿಂದ ವಹಿಸಿಕೊಂಡಿತ್ತು.’ಅನೇಕ’ದ ನಿರ್ವಾಹಕರಾದ ಖ್ಯಾತ ರಂಗ ನಿರ್ದೇಶಕ ಶ್ರೀ ಸುರೇಶ್ ಆನಗಳ್ಳಿ, ನನ್ನ ಪುಸ್ತಕ ಬಿಡುಗಡೆಯ ಸಮಾರಂಭವನ್ನು ತಮ್ಮ ಮನೆಯ ಸಂಭ್ರಮ ಎಂಬಂತೆ ನಿರ್ವಹಿಸಿದ ನನ್ನ ಸ್ನೇಹಿತರಾದ, ಅಪೇಕ್ಷಾ,ವಿಶ್ವಾಸ್,ಅಶೋಕ,ಮಲ್ಲಿಕಾರ್ಜುನ,ಸುರಭಿ, ಸುಶ್ಮಿತ,ರಂಜಿತಾ, ರವಿಶಂಕರ್, ಶಾರದ, ಐ.ಎಮ್.ದುಂಡಶಿ, ಭಾಸ್ಕರ್, ಮುಸ್ತಫಾ, ಪ್ರಶಾಂತ್ ಹಾಗೂ ಮುನಿರಾಜು ಅವರುಗಳ ಪ್ರೀತಿ ಅಮೂಲ್ಯ. ಮನೆಯವರೆಲ್ಲರ ಸಹಕಾರ ಅನನ್ಯ...
ನಿಮಗಾಗಿ ಕವನ ಸಂಕಲನದ ಶೀರ್ಷಿಕೆಯ ಕವನ...

"ನೀಲ ಕಡಲ ಬಾನು"

ಕಡಲ ಬಯಕೆಯ
ಹುಡುಗನಿಗೆ ಈಜಲು
ಗೊತ್ತಿಲ್ಲ
ಬೀಳುತ್ತಾನೆ ನೀರಿಗೆ

ಕಡಲು ಗಂಡಲ್ಲ ಹೆಣ್ಣು
ಎಂದವಳ ಮಾತನ್ನು
ಒಪ್ಪಿದವನದು ಈಗ
ಅದರ ಗರ್ಭ
ಶೋಧಿಸುವ ಬಯಕೆ

ಕಪ್ಪೆ ಚಿಪ್ಪಿನ ತುಟಿಗಳ
ಮಧ್ಯೆ ಅಡಗಿರುವ ಮುತ್ತು
ಹವಳಗುಚ್ಛದ ಹೊಕ್ಕುಳಲ್ಲಿ
ಆಡುವ ಬಣ್ಣದ ಮೀನು
ನೀರಿನ ಕಮಾನು
ತಳದಲ್ಲಿ ಚಿತ್ತ ಬಿದ್ದು
ನೋಡಿದರೆ ಕಡಲು ಹೊದ್ದ
ನೀಲಿ ನೀಲಿ ಬಾನು
ಹೆದರಿಸುವುದಿಲ್ಲ ಪಾಚಿ
ತಿಮಿಂಗಲು ಅವನನ್ನು
ಬೇಯಿಸುವುದಿಲ್ಲ ಕುದಿ
ಅವಕ್ಕೂ ಗೊತ್ತು
ತಮ್ಮಂತೆ ಅವನೂ
ಪ್ರೀತಿಸುತ್ತಾನೆ ಕಡಲನ್ನು.

Rating
No votes yet

Comments