ಇದೇ ಮಹಾ ಸುದಿನ...

ಇದೇ ಮಹಾ ಸುದಿನ...

ನನ್ನ ಮಟ್ಟಿಗೆ :-) ಕಣ್ಣು ಬಿಟ್ಟೊಡನೆ ಗಂಡನಿಂದ ಹುಟ್ಟುಹಬ್ಬದ ಶುಭಾಶಯ ಮತ್ತು ಮುತ್ತು ಸಿಕ್ತು. ಕಂಬಳಿಯೊಳಗೆ ನುಸುಳಿದ ಪುಟ್ಟ ಮಗನ ಗುಂಗುರು ಕೂದಲಿನ ಎಣ್ಣೆ ವಾಸನೆ ಕುಡಿಯುತ್ತ, ಅವನ ಸೊಂಟದ ಸುತ್ತ ಕೈ ಬಳಸಿ ಅಪ್ಪಿಕೊಂಡು ಮಲಗುವ ಮಜ ಸಿಕ್ತು. ಆಮೇಲೆ, ಅಪ್ಪ ಜ್ಞಾಪಿಸಿದ ಮೇಲೆ ದೊಡ್ಡವನಿಂದಲೂ ಒಂದು ಹ್ಯಾಪಿ ಬರ್ತ್ಡೇ ಅಮ್ಮ ಅನ್ನುವ ಸಂದೇಶ ಸಿಕ್ತು. ಅದನ್ನು ನಾನು ಒಂದು ಅಪ್ಪುಗೆಯಾಗಿ ಕನ್ವರ್ಟ್ ಮಾಡಿದೆ. ಬೆಂಗಳೂರಿನಿಂದ ಮನೆಯವರ ಮತ್ತು ಗೆಳತಿಯರ ಫೋನು, ಇಲ್ಲಿನ ಗೆಳತಿಯರ ಜೊತೆ ಊಟ. ಸಂಜೆ ಗಂಡ, ಮಕ್ಕಳೊಡನೆ ಹೊರಗೆ ಊಟ. ಇಷ್ಟು ಸಾಕು ಈ ಜೀವಕ್ಕೆ ತೃಪ್ತಿ ನೀಡಲು. ನೆನ್ನೆ ನನ್ನ ಮಕ್ಕಳಿಗೆ ನಾನು ಹೇಳಿದೆ, "ನನಗೆ ವಯಸ್ಸಾಗುತ್ತಿರುವ ದುಃಖ ನೀವು ಜೊತೆಯಲ್ಲಿರದಿದ್ದರೆ ಇಮ್ಮಡಿಯಾಗುತ್ತಿತ್ತು." ಅದಕ್ಕವರ ಉತ್ತರ, "ನೀನೆಷ್ಟು ದೊಡ್ಡವಳಾದರೂ ನಾವು ನಿನ್ನನ್ನು ಇಷ್ಟಪಡುತ್ತೇವೆ", ಮನಸ್ಸಿಗೆ ಹಿತ ತಂದಿತು.

ನಾನು, ಗತಿಸಿದ ನಿರರ್ಥಕ ದಿವಸಗಳನ್ನು, ಸಾಧಿಸದ ಮೈಲಿಗಲ್ಲುಗಳನ್ನು ನೆನೆಸಿಕೊಂಡು ಈ ದಿನವನ್ನು ಹಾಳು ಮಾಡಿಕೊಳ್ಳಲಾರೆ. ಅಲ್ಪ ತೃಪ್ತೆ ಇರಬಹುದು, ಆದ್ರೆ ಈ ತನಕ ಸಿಕ್ಕಿರುವ ಸಂಪತ್ತಿಗೆ ಸಂತೋಷಿಸದೆ ಕೃತಘ್ನೆ ಆಗಲಾರೆ. ನನ್ನ ಜೀವನದಲ್ಲಿ ಖುಷಿ ತುಂಬಿದ ಈವರೆಗಿನ ದಿನಗಳಿಗೆ ಒಂದು ತುಂಬು ಹೃದಯದ ನಮಸ್ಕಾರ. ಮುಂಬರುವ ನಿಗೂಢತೆಗೆ ಒಂದು ಬಿಸಿಗುಂಡಿಗೆಯ ಸವಾಲು.

Rating
No votes yet

Comments