ಮುಂಬಯಿ, ಠಾಕರೆ ಮತ್ತು ಕಿಡಿಗೇಡಿ ಮಾಧ್ಯಮಗಳು... ಭಾಗ ೨.

ಮುಂಬಯಿ, ಠಾಕರೆ ಮತ್ತು ಕಿಡಿಗೇಡಿ ಮಾಧ್ಯಮಗಳು... ಭಾಗ ೨.

ಮಹಾರಾಷ್ಟ್ರದ ರಾಜಕೀಯ ರಂಗದಲ್ಲಿ ಈ ರಾಜ್ ಠಾಕರೆ ಎಂಬಾತ ಮೂಡಿ ಬರುವ ಸುಮಾರು ಐದು ದಶಕಗಳ ಹಿಂದೆ ಬಾಳಾಸಾಹೇಬ ಠಾಕರೆ ಎಂಬ ಕಾರ್ಟೂನಿಸ್ಟ್, ಇದೇ ರೀತಿ
ಮಹಾರಾಷ್ಟ್ರ-ಮುಂಬಯಿ ಮರಾಠಿಗರದು, ಇಲ್ಲಿ ದಕ್ಷಿಣ ಭಾರತೀಯರಿಗೇಕೆ ಸ್ಥಾನ ಎಂಬ ಆಂದೋಲನೆಯನ್ನು ಹುಟ್ಟು ಹಾಕಿ, ಮುಂಬಯಿಯಲ್ಲಿ ನೆಲೆಸಿದ್ದ ಅಸಂಖ್ಯಾತ ದಕ್ಷಿಣ ಭಾರತೀಯರ ಮೇಲೆ ಸಿಡಿದೆದ್ದಿದ್ದ. ಆ ಮೂಲಕ ಶಿವಸೇನೆಯ ಬ್ಯಾನರಿನಡಿಯಲ್ಲಿ ಮರಾಠಿಗರ ವೋಟುಗಳನ್ನು ಬಾಚಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದ. ಆತನ ಆ ಪ್ರಯತ್ನಕ್ಕೆ ಸಾಕಷ್ಟು ಬೆಂಬಲ ಸಿಕ್ಕಿತ್ತು ನಿಜ. ಆರ್ವತ್ತರ-ಎಪ್ಪತ್ತರ ದಶಕದಲ್ಲಿ ಮುಂಬಯಿಯ ಹೋಟಲ್, ಮಿಲ್ ಮುಂತಾದ ಉದ್ಯಮಗಳಲ್ಲಿ ದಕ್ಷಿಣ ಭಾರತೀಯರದ್ದೇ ಕಾರುಭಾರು ಇತ್ತು. ಇಲ್ಲಿನ ಹೋಟಲ್ ಮಾಲಿಕರು, ಇಲ್ಲಿನ ಸ್ಥಳೀಯ ಜನರಿಗೆ ನೌಕರಿಯನ್ನು ನೀಡದೇ, ತಮ್ಮ ಊರಿನಿಂದ ಯುವಕರನ್ನು ತರಿಸಿ ಅವರಿಗೆ ನೌಕರಿ ನೀಡುತ್ತಿರುವುದನ್ನು ನೋಡಿದ, ಬಾಳಾ ಸಾಹೇಬರಂಥ ಹಲವರು ತಿರುಗಿ ಬಿದ್ದರು. ಮಾಡಲು ಬೇರೆ ಕೆಲಸವಿಲ್ಲದಿದ್ದ ತಿರುಬೋಕಿ ಯುವಕರು ಕೈಗೆ ಆಯುಧಗಳನ್ನೆತ್ತಿಕೊಂಡರು. ದಂಗೆಗಳಾದವು. ಕಾಂಗ್ರೆಸ್ ನಂಥ ನಿರ್ವೀರ್ಯ ಪಕ್ಷದ ರಾಜನೀತಿಯಿಂದ ಬೇಸತ್ತ ಅದೆಷ್ಟೋ ಮರಾಠಿಗರು, ಈ ಉತ್ಸಾಹಿ ಬಾಳಾ ಸಾಹೇಬ ಠಾಕರೆಗೆ ಬೆಂಬಲ ನೀಡಿದರು. ಅದಾಗ್ಯೂ ಆತನ Sons of the soil theory, ಆತನಿಗೆ ಮಹಾರಾಷ್ಟ್ರವನ್ನಾಳುವ ಅಧಿಕಾರವನ್ನು ತಂದುಕೊಡಲಿಲ್ಲ ಎಂಬುದನ್ನೂ ಮರೆಯುವಂತಿಲ್ಲ. ಆ ಆಂದೋಲನೆ ಇಡೀ ಮಹಾರಾಷ್ಟ್ರದ ಧ್ವನಿ ಆಗಲಿಲ್ಲ. ಹೊಟ್ಟೆ ತುಂಬಿದ್ದ, ಅಕ್ಷರಸ್ತ ಮರಾಠಿಗರು ಅದರಲ್ಲಿ ಪಾಲ್ಗೊಳ್ಳಲೇ ಇಲ್ಲ. ಮಹಾರಾಷ್ಟ್ರದಲ್ಲಿ ತನ್ನ ರಾಜಕೀಯ ಪಕ್ಷಕ್ಕೆ ಒಂದು ಸ್ಥಾನ ಸಿಗಲೆಂಬ ಏಕೈಕ ಕಾರಣದಿಂದ ’ಹಠಾವೊ ಲುಂಗಿ ಬಚಾವೊ ಪುಂಗಿ’ ಆಂದೋಲನೆಯನ್ನು ಪ್ರಾರಂಭಿಸಿದ್ದ ಠಾಕರೆ, ಶಿವಸೇನೆಗೆ ಅಷ್ಟಿಷ್ಟು ಜನಪ್ರಿಯತೆ ಸಿಗುತ್ತಲೆ, ಆ ಆಂದೋಲನೆಯನ್ನು ಮರೆತು ’ಮುಸ್ಲಿಂ ವಿರುದ್ಧ’ ರಾಗವನ್ನು ಪ್ರಾರಂಭಿಸಿದ್ದ.
ಆದರೆ ಆ ಆಂದೋಲನೆಯಿಂದ ಆದ ಇನ್ನೊಂದು ಮಹತ್ ಪರಿಣಾಮವೆಂದರೆ, ಮುಂಬಯಿಗೆ ವಲಸೆ ಬರುವ ದಕ್ಷಿಣ ಭಾರತೀಯರ ಸಂಖ್ಯೆ ಒಮ್ಮೆಲೆ ಕಡಿಮೆ ಆಯಿತು. ತಮಿಳು ಸರಕಾರ ಎಚ್ಚೆತ್ತುಕೊಂಡಿತು. ತಮಿಳುನಾಡಿನಲ್ಲಿ ನಿರುದ್ಯೋಗಿಗಳಿಗೆ, ಹೊಸ ಹೊಸ ಉದ್ಯೋಗಗಳನ್ನು ಕೊಡುವ ಹಲವಾರು ಯೋಜನೆಗಳು ಪ್ರಾರಂಭವಾದವು. ತಮಿಳುನಾಡು ಒಂದು ಗಟ್ಟಿ ರಾಜ್ಯವಾಗಿ ಬದಲಾಯಿತು. ತಮಿಳರಿಗೆ ಈಗ ಬೇರೆ ಯಾವುದೇ ರಾಜ್ಯಕ್ಕೆ ವಲಸೆ ಹೋಗುವ ಅವಶ್ಯಕತೆಯೇ ಇರಲಿಲ್ಲ.

ಆದರೆ ಮುಂಬಯಿಯ ಇಂದಿನ ಪರಿಸ್ಥಿತಿಗೂ, ಅಂದಿನ ಪರಿಸ್ಥಿತಿಗೂ ಅಜಗಜಾಂತರವಿದೆ. ಆ ಆಂದೋಲನೆ ಕೇವಲ ರಾಜಕೀಯ ಮಹತ್ವಾಕಾಂಕ್ಷಿ ಬಾಳ್ ಠಾಕರೆ ಹಾಗೂ ಹಲವು ನಿರುದ್ಯೋಗಿ, ಕಿಡಿಗೇಡಿಗಳ ನಡೆಯಾಗಿತ್ತು. ಇಂದು ಅದು ರಾಜಕೀಯ ಮಹತ್ವಾಕಾಂಕ್ಷಿ ರಾಜ್ ಠಾಕರೆ ಹಾಗೂ ಪ್ರತಿಯೊಬ್ಬ (ಅಕ್ಷರಸ್ತ-ಸಂತೃಪ್ತ) ಮರಾಠಿಗರ ಹೋರಾಟವಾಗಿ ಹೊರಹೊಮ್ಮುತ್ತಿದೆ. ಇಂದು ಭಾರತದ ಉಳಿದೆಲ್ಲ ಭಾಗದ ಜನರ ಜೊತೆ ಪ್ರೀತಿಯಿಂದ ವರ್ತಿಸುವ ಈ ಮರಾಠಿಗರು, ಉತ್ತರ ಭಾರತೀಯರನ್ನು ಕಂಡ ಕೂಡಲೇ ಸಿಟ್ಟಿಗೇಳುತ್ತಾರೆ.
ಯಾವುದೇ ರಾಜಕೀಯದ ಗಂಧಗಾಳಿ ಇರದ, ತನ್ನ ಪಾಡಿಗೆ ತಾನು ಬದುಕುವ ಅತ್ಯಂತ ಸಾಮಾನ್ಯ ಮರಾಠಿಗನೂ ಉತ್ತರ ಭಾರತೀಯರ ಮೇಲೆ ಸಿಡಿದೇಳುತ್ತಾನೆ. ಯಾವತ್ತೂ ತಮ್ಮ ರಾಜಕೀಯ ಮುಖಂಡರನ್ನೇ, ಅವರ ನೀತಿಗಳನ್ನೇ ಖಂಡಿಸುತ್ತ, ತಮಾಷೆಯ ನಾಟಕಗಳನ್ನು ಮಾಡುವ ಈ ಸುಸಂಸ್ಕೃತರು ಇಂದು ’ಭಯ್ಯಾ ಹಾಥ್ ಪಾಯ್ ಪಸರೇಲ್’ (ಭಯ್ಯಾ ಕೈ ಕಾಲು ಪಸರಿಸುತ್ತಿದ್ದಾನೆ) ಎಂಬ ನಾಟಕವನ್ನು ನೋಡಲು ಮುಗಿಬೀಳುತ್ತಾರೆ. ಎಲ್ಲರ ಜೊತೆ ಒಂದಾಗಿ ಬೆರೆತು ವಿಚಿತ್ರ accent ನ ಹಿಂದಿ ಮಾತಾಡುವ ಮರಾಠಿಗರು, ಈಗ ಒಮ್ಮಿಂದೊಮ್ಮೆಲೆ ಮರಾಠಿಯಲ್ಲೇ ಮಾತಾಡತೊಡಗಿದ್ದಾರೆ. ಯಾಕೆ ಹೀಗೆ? ಯಾಕೆಂದರೆ, ಅವರ ಮಕ್ಕಳಿಗೆ ಸರಕಾರಿ ನೌಕರಿಗಳು ಸಿಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ರೇಲ್ವೇ ಭರ್ತಿ ಪರೀಕ್ಷೆಗೆ, ಮರಾಠಿಯ ಪತ್ರಿಕೆಗಳಲ್ಲಿ ಜಾಹೀರಾತುಗಳೇ ಬರುವುದಿಲ್ಲ. ಮಹಾರಾಷ್ಟ್ರದಲ್ಲಿ ನೌಕರಿ ಮಾಡಲು ಕೇವಲ ಯೂ.ಪಿ, ಬಿಹಾರ ಹಾಗೂ ಝಾರ್ಖಂಡಗಳ ಯುವಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಯಾರು ಈ ಅನ್ಯಾಯವನ್ನು ಸಹಿಸುತ್ತಾರೆ? ಮತ್ತೆ ಯಾಕೆ ಸಹಿಸಬೇಕು?

ರೇಲ್ವೆ ಪರೀಕ್ಷೆಗೆಂದು ಮುಂಬಯಿಗೆ ಬಂದ ಉತ್ತರ ಭಾರತೀಯರನ್ನು ಬಡಿಯಿರಿ ಎಂದು ಹೇಳಿದ ರಾಜ್ ಠಾಕರೆ, ದೇಶವನ್ನು ಓಡೆಯಲು ಪ್ರಯತ್ನಿಸುತ್ತಿದ್ದಾನೆ ಅಂತೀರಾ? ಸರಿ. ಹಾಗಾದ್ರೆ, ಆ ರೇಲ್ವೆ ಪರೀಕ್ಷೆಯ ಜಾಹೀರಾತುಗಳನ್ನು ಕೇವಲ ಯೂ.ಪಿ- ಬಿಹಾರದ ಪತ್ರಿಕೆಗಳಲ್ಲಿ ಮಾತ್ರ ಕೊಟ್ಟು, ತಮ್ಮ ರಾಜ್ಯದ ಯುವಕರಿಗೆ ಮಾತ್ರ ಅವಕಾಶಗಳನ್ನು ಕಲ್ಪಿಸುತ್ತಿರುವ ಲಾಲೂನಂತಹ ರಾಜಕಾರಣಿಗಳು ಮಾಡುತ್ತಿರುವುದೇನು? ಆಜ್ ತಕ್ ಬಳಿ ಇದಕ್ಕೆ ಉತ್ತರವಿದೆಯೆ?

ಛಟ್ ಪೂಜೆಯ ಸಬೂಬು ಹೇಳಿ ಬಿಹಾರದ ರಾಜಕಾರಣಿಗಳು ಇಲ್ಲಿಗೆ ಬಂದರೆ ನಾವು ನಮ್ಮ ಯುವಕರ ಕೈಗೆ ’ತಲವಾರ್’ ನೀಡುತ್ತೇವೆ ಎಂದು ರಾಜ್ ಠಾಕರೆ ಹೇಳಿದರೆ, ಆತನನ್ನು ಹಿಟ್ಲರ್ ನಿಗೆ ಹೋಲಿಸುತ್ತೀರೊ? ಸರಿ. ಆದರೆ ಅದರ ಮೊದಲು, ಮುಂಬಯಿಯಲ್ಲಿ ಉತ್ತರ ಪ್ರದೇಶದ ಜನರಿಗೆ ತೊಂದರೆ ಆದರೆ ನಾವು ನಮ್ಮ ಯುವಕರ ಕೈಗೆ ಲಾಠಿಗಳನ್ನು ನೀಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದ ಅಬೂ ಅಸಿಂ ಆಜ್ಮಿಯಂಥ ಉತ್ತರ ಭಾರತೀಯ ನೇತಾರರ ಮಾತುಗಳನ್ನು ಯಾವುದೇ ಚಾನೆಲ್ಲು ಯಾಕೆ ಬಿತ್ತರಿಸುವುದಿಲ್ಲ?
ಈ ಅಬೂ ಅಸೀಂ ಆಜ್ಮಿ ಎಂಬವನ ಬಗ್ಗೆ ಕರ್ನಾಟಕದ ನಿಮಗೆ ಬಹುಶ: ಹೆಚ್ಚು ಗೊತ್ತಿರಲಿಕ್ಕಿಲ್ಲ. ಮೂಲತ: ಉತ್ತರ ಪ್ರದೇಶದ ಆಜಮಗಢದಿಂದ ಮುಂಬಯಿಗೆ ಬರಿಗೈಯಲ್ಲಿ ವಲಸೆ ಬಂದ ಈತ ನೋಡ ನೋಡುತ್ತಿದ್ದಂತೆ ಕೋಟ್ಯಾಧಿಪತಿಯಾಗಿ ಬೆಳೆದ. ಆ ಪರಿ ಹಣ ಎಲ್ಲಿಂದ ಗಳಿಸಿದ ಎನ್ನುವುದು, ಇಂದಿಗೂ ಮುಂಬಯಿ ಪೋಲೀಸರನ್ನು ಕಾಡುತ್ತಿರುವ ಪ್ರಶ್ನೆ. ೧೯೯೩ ರ ಮುಂಬಯಿ ಬಾಂಬ್ ಬ್ಲಾಸ್ಟ್ ನಲ್ಲೂ ಈತನ ಕೈವಾಡವಿದೆ ಎಂದೇ ಈಗಲೂ ಪೋಲೀಸರು ನಂಬುತ್ತಾರೆ. ಆದರೆ ಸಮಾಜವಾದಿ ಪಾರ್ಟಿಯ ಮುಖಂಡನಾಗಿ, ಅದೇ ಆಜಮಗಢದಿಂದ ಸ್ಫರ್ಧಿಸಿ ಎಂ ಪಿ ಆಗಿರುವ ಈತನ ಮೇಲೆ ಕೈ ಹಾಕುವುದು ಹೇಗೆ? ನೀವೇ ನೋಡಿ, ಈತನಿಗೆ ಎಲ್ಲವನ್ನೂ ಕೊಟ್ಟ ಮುಂಬಯಿಯಲ್ಲಿ ಈತ ಇಲೆಕ್ಷನ್ ಗೆ ನಿಲ್ಲಲಿಲ್ಲ. ಬದಲಿಗೆ ಆಜಮಗಢದಿಂದ
ಸ್ಪರ್ಧಿಸಿದ. ಇಂದಿಗೂ ಈತ "RAW ಹಾಗೂ CBI ಗಳ ಅಧಿಕಾರಿಗಳಿಗೆ ನನ್ನ ಮೇಲೆ ಸಂಶಯವಿದ್ದರೆ, ಅವರು ಬಾರ್ಬರ್ ಶಾಪ್ ತೆರೆಯಲಿ" ಎಂಬ ಅಸಭ್ಯ ಮಾತುಗಳನ್ನಾಡುತ್ತಲೇ ಇರುತ್ತಾನೆ. ಅಂತಹ ಒಬ್ಬ ವ್ಯಕ್ತಿ ನಮ್ಮ ದೇಶವನ್ನು ಒಡೆಯುತ್ತಿದ್ದಾನೆ ಎಂದು ಯಾವುದೇ ಚಾನೆಲ್ಲು ಇದುವರೆಗೆ ಹೇಳಿಲ್ಲ. ಏಕೆಂದರೆ, ನಮ್ಮ ಚಾನೆಲ್ಲುಗಳಲ್ಲಿ ಇಂದು ಕೇವಲ ಉತ್ತರ ಭಾರತೀಯರದ್ದೇ (ಅವರನ್ನು ಬಿಟ್ಟರೆ ಬಂಗಾಳಿಗಳದ್ದು) ಮೇಲುಗೈ. ಅಷ್ಟೇ ಅಲ್ಲ, ಅವರು pseudo secularist ಗಳೂ ಹೌದು.

ಅಮಿತಾಭ ಬಚ್ಚನ್ ಬಗ್ಗೆ ರಾಜ್ ಠಾಕರೆ ಕೆಲವು ಮಾತುಗಳನ್ನಾಡಿದಾಗಲಂತೂ ಈ ಚಾನೆಲ್ಲುಗಳಿಗೆ ಹಬ್ಬವೋ ಹಬ್ಬ. ರಾಜ್ ಠಾಕರೆಯನ್ನು ಜರಿದದ್ದೇ ಜರಿದದ್ದು. ’ಇಸ್ ಸದಿ ಕಾ ಮಹಾನಾಯಕ್ ಕಾ ಅಪಮಾನ್’ (ಈ ಶತಮಾನದ ಮಹಾನಾಯಕನ ಅಪಮಾನ) ಎಂಬಂಥ ಶೀರ್ಷಿಕೆಗಳನ್ನಿಟ್ಟು, ಇಡೀ ಉತ್ತರ ಭಾರತದ ಅವನತಿಗೆ ರಾಜ್ ಠಾಕರೆ ಕಾರಣ ಎಂಬಂತೆ ಈ ಚಾನೆಲ್ಲುಗಳು ದಿನಕ್ಕೆಂಟು ಪ್ರೊಗ್ರಾಮುಗಳನ್ನು ತೋರಿಸಿದರು. ಆ ನಿಮ್ಮ ಕೋಟ್ಯಾಧಿಪತಿ ಸದೀ ಕಾ ಮಹಾನಾಯ್ಕ, ’ತಾನು ಒಬ್ಬ ರೈತ’ ಎಂಬ ಸುಳ್ಳು ಕಾಗದಗಳನ್ನು ಸೃಷ್ಟಿಸಿ ಯೂಪಿಯಲ್ಲಿ ಅತ್ಯಂತ ಬೆಲೆ ಬಾಳುವ ಕೃಷಿ ಜಮೀನನ್ನು, ಕವಡೆ ಬೆಲೆಗೆ ಖರೀದಿಸಿದ್ದು ಗೊತ್ತಾದಾಗ, ಅದನ್ನು ದೊಡ್ಡ ಸುದ್ದಿಯಾಗಿ ತೋರಿಸಿದವರೆಷ್ಟು ಜನ? ಯಾಕೆ ಇಂಥದ್ದೊಂದು ಮೋಸ, ಸುದ್ದಿಯಾಗಲೇ ಇಲ್ಲ? ಏಕೆ ಅಂದರೆ, Simple...ಈ ಮಹಾನಾಯ್ಕ ಯೂಪಿಯವನು. ಮುಂಬಯಿಗೆ ಬಂದು, ಇಲ್ಲಿ ಈ ಪರಿ ಎತ್ತರಕ್ಕೆ ಬೆಳೆದ ಈ ನಾಯ್ಕನಿಗೆ ಶಾಲೆಯೊಂದನ್ನು ತೆಗೆಯಬೇಕೆನಿಸಿದಾಗ ಯೂಪಿ ಯ ಹಳ್ಳಿಯೊಂದರ ನೆನಪಾಗುತ್ತೆ. ಅರೆ, ನಿಮಗೆ ಇಷ್ಟೆಲ್ಲ ಕೊಟ್ಟ ಮುಂಬಯಿಗೆ ನೀವು ಕೊಟ್ಟದ್ದೇನ್ರೀ ನಾಯಕರೆ ಅಂತ ಕೇಳುವ ನೈತಿಕ ಸ್ಥೈರ್ಯ ಯಾವ ಚಾನೆಲ್ಲು ತೋರಿಸಿದೆ? ಇಂದಿಗೂ ಈ ನಾಯ್ಕರು ಹಾಗೂ ಅವರ ಹೆಂಡತಿ-ಮಗ, ಹೊಸ ಚಲನಚಿತ್ರಕ್ಕೆ ಸೈನ್ ಮಾಡೋಕಿದ್ದರೆ, ಮುಂಬಯಿಯಲ್ಲಿ ಅಲ್ಲ, ಯೂಪಿಗೆ ಹೋಗಿ ಸೈನ್ ಮಾಡ್ತಾರೆ ಎಂಬುದನ್ನು ಚಿತ್ರೋದ್ಯಮದಲ್ಲಿರುವ ಗೆಳೆಯನೊಬ್ಬ ನನಗೆ ಹೇಳುತ್ತಾನೆ. Tax ತುಂಬುವುದೇ ಇದ್ದರೆ, ಮಹಾರಾಷ್ಟ್ರಕ್ಕೆ ಯಾಕೆ? ಬಡ ರಾಜ್ಯವಾದ ಯೂಪಿಗೆ ಕೊಡೋಣ ಎಂಬ ಸ್ವ-ರಾಜ್ಯ ಪ್ರೀತಿ ಸ್ವಾಮಿ. ಈ ಪ್ರಶ್ನೆಯನ್ನೇ ರಾಜ್ ಠಾಕರೆ ಕೇಳಿದರೆ, ಆತ ರೆಡಿ ಮೇಡ್ ವಿಲನ್. ಯಾರ್ರೀ ದೇಶ ಒಡೆಯುತ್ತಿರುವುದು?

ಮುಂಬಯಿಯಲ್ಲಿ, ಇಂದು ರಿಕ್ಷಾ ಚಾಲಕರಲ್ಲಿ ಬಹುಜನರು ಉತ್ತರ ಭಾರತೀಯರು ಅವರನ್ನು ಬಿಟ್ಟರೆ ಮರಾಠಿಗರು. ಎರಡು ವರ್ಷಗಳ ಹಿಂದೆ ಮುಂಬಯಿಯಲ್ಲಿ ಭಯಂಕರ ಮಳೆಯಾಗಿ, ಇಡೀ ಮುಂಬಯಿ ಮೂರು ದಿನಗಳವರೆಗೆ ಸ್ಥಬ್ಧವಾಗಿದ್ದು ನಿಮಗೆ ನೆನಪಿದೆ ತಾನೆ? ಆ ದಿನಗಳಲ್ಲಿ ಎಲ್ಲೆಲ್ಲೊ ಸಿಕ್ಕಿಕೊಂಡು ಒದ್ದಾಡುತ್ತಿದ್ದ ಮುಂಬಯಿಕರರನ್ನು ತಮ್ಮ ರಿಕ್ಷಾದಲ್ಲಿ ಕೂಡಿಸಿ ಆದಷ್ಟು ಸಹಾಯ ಮಾಡಿದವರು ಅಂದರೆ ಕೇವಲ ಮರಾಠಿ ರಿಕ್ಷಾ ಚಾಲಕರು. ಯಾವುದೇ ಉತ್ತರ ಭಾರತೀಯ ರಿಕ್ಷಾ ಚಾಲಕರು ಆ ಮೂರು ದಿನ ರಿಕ್ಷಾ ಹೊರಗೆ ತೆಗೆಯಲಿಲ್ಲ. ರಿಕ್ಷಾ ಹೊರತೆಗೆದ ಕೆಲವು ಉತ್ತರ ಭಾರತೀಯ ಚಾಲಕರು, ಆ ದಿನಗಳನ್ನು ಹಬ್ಬದಂತೆ ಆಚರಿಸಿದ್ದರು. ಗೋರೆಗಾಂವ್ ಎಂಬಲ್ಲಿ ಸಿಕ್ಕಿಹಾಕಿಕೊಂಡ ನನ್ನ ಗೆಳೆಯನೊಬ್ಬ, ಎದುರು ಕಂಡ ರಿಕ್ಷಾವನ್ನೇರಲು ಹೊರಟಿದ್ದ. ಆ ರಿಕ್ಷಾ ಚಾಲಕ ಯೂಪಿಯವ. ಆ ಗೋರೇಗಾಂವ್ ನಿಂದ, ಬೋರಿವಿಲಿಗೆ ಬರಲು ಆತ ಕೇಳಿದ್ದು ಒಂದು ಸಾವಿರ ರೂಪಾಯಿ. (ಸಾಮಾನ್ಯವಾಗಿ ೬೦ ರೂಪಾಯಿಗಿಂತ ಹೆಚ್ಚಾಗುವುದಿಲ್ಲ.) ಆದರೆ ಅಷ್ಟು ಹಣ ಆತನಲ್ಲಿ ಇರಲಿಲ್ಲ. ಆತನನ್ನು ಆತನ ಮನೆಯವರೆಗೆ ಬಿಟ್ಟದ್ದು ಒಬ್ಬ ಮರಾಠಿ ಚಾಲಕ. ಒಂದೇ ಒಂದು ರೂಪಾಯಿಯನ್ನು ಪಡೆಯದೇ. "ಇರಲಿ ಬಿಡಿ ಸ್ವಾಮಿ, ಇಂಥ ಸಮಯದಲ್ಲಿ ನಿಮ್ಮಲ್ಲಿ ಹಣ ಕೇಳಲೆ? ನೀವು ಮನೆ ತಲುಪಿ, ನಾನೂ ಮನೆ ತಲುಪುವಂತೆ ದೇವರಲ್ಲಿ ಕೇಳಿಕೊಳ್ಳಿ" ಎಂಬ ತಮಾಷೆಯ ಮಾತಾಡುತ್ತ ಆ ಚಾಲಕ ಅವನನ್ನು ಮನೆವರೆಗೆ ಬಿಟ್ಟು ಹೊರಟರೆ, ನನ್ನ ಆ ಗೆಳೆಯ ಈ ವಿಷಯವನ್ನು ನನಗೆ ಹೇಳಿ ಕಣ್ಣಲ್ಲಿ ನೀರು ತಂದುಕೊಂಡಿದ್ದ. ಮಧುಮೇಹ ರೋಗಿಯಾಗಿರುವ ಆ ನನ್ನ ಗೆಳೆಯ ಒಬ್ಬ ಗುಜರಾತಿ.

ಈ ರೀತಿಯ, ಉತ್ತರ ಭಾರತೀಯರ ಅಮಾನವೀಯತೆಯ ಹಾಗೂ ಮರಾಠಿಗರ ಮನುಷ್ಯತ್ವದ ಹಲವಾರು ಕತೆಗಳನ್ನು ನಾವು ಮುಂಬಯಿಯಲ್ಲಿ ಕೇಳುತ್ತಲೇ ಇರುತ್ತೇವೆ. ಇಂಥದ್ದನ್ನೆಲ್ಲ ಮರಾಠಿಗರು ಅನುಭವಿಸಿದ್ದಾರೆ. ನಾಲ್ಕು ಜನರ ತಂಡ ಕಟ್ಟಿಕೊಂಡು ಈ ಉತ್ತರ ಭಾರತೀಯರು ಒಂದು ಟ್ರೇನಿನಲ್ಲಿ ಹೊರಟರೆ ಸಾಕು, ಅದು ಅವರದೇ ರಾಜ್ಯ. ಅಸಹ್ಯ ಮಾತುಗಳು, ಬೈಗಳು, ಕುಳಿತಲ್ಲಿಯೇ ಪಾನ್ ತಿಂದು ಉಗುಳುವುದು, ಟ್ರೇನಿನ ಟ್ರಾಕ್ ಮೇಲೆ ಶೌಚ ಇತ್ಯಾದಿ ಇತ್ಯಾದಿಗಳನ್ನು ನೋಡಿ ಮರಾಠಿಗರ ಮನಸ್ಸು ರೋಸಿ ಹೋಗಿದೆ. ಕೆಲವೇ ವರ್ಷಗಳ ಹಿಂದೆ, ಮುಂಬಯಿಯ ಖ್ಯಾತ ಜುಹೂ ಬೀಚಿನಲ್ಲಿ ಮರಾಠಿಗನೊಬ್ಬ ’ಭೇಲ್ ಪುರಿ’ ಅಂಗಡಿಯನ್ನು ತೆರೆಯಲು ಹೋದರೆ, ಅಲ್ಲಿನ ಉತ್ತರ ಭಾರತೀಯ ವ್ಯಾಪಾರಿಗಳೆಲ್ಲ ಸೇರಿ ಆತನನ್ನು ಥಳಿಸಿದ್ದು, ಯಾವುದೋ ಸಣ್ಣ ಪತ್ರಿಕೆಯ ಮೂರನೆ ಪುಟದ ಸುದ್ದಿಯಾಗಿ ಹೋಯಿತೇ ಹೊರತು, ಆಜ್ ತಕ್ ನ ಮಟ್ಟಕ್ಕೆ ಬೆಳೆಯಲೇ ಇಲ್ಲ. ಇವೆಲ್ಲ ಸಣ್ಣ ಸಣ್ಣ ಘಟನೆಗಳೇನೋ ನಿಜ. ಆದರೆ ಇಂಥ ಸಣ್ಣ ಸಣ್ಣ ಘಟನೆಗಳೇ ತಾನೆ ಪ್ರಚಂಡ ಬಿರುಗಾಳಿಯನ್ನೆಬ್ಬಿಸುವುದು.

ಕೈಯಲ್ಲಿ ಬಂದೂಕನ್ನು ಹಿಡಿದು ಜನರನ್ನು ಬೆದರಿಸುತ್ತ, ನಾನು ರಾಜ್ ಠಾಕರೆಯನ್ನು ಕೊಲ್ಲುತ್ತೇನೆ ಎಂದು ಕೂಗುತ್ತ ಉನ್ಮತ್ತನಾಗಿರುವ ಯುವಕನೊಬ್ಬನನ್ನು ಇಲ್ಲಿನ ಪೋಲೀಸರು ಕೊಂದು ಹಾಕಿದರೆ, ಈ ಚಾನೆಲ್ಲಿನವರಿಗೆ ಅದೊಂದು ಹತ್ಯೆಯಾಗಿ ಕಾಣಿಸುತ್ತದೆ. ಯಾಕೆಂದರೆ ಬಹುಶ: ಯೂಪಿ-ಬಿಹಾರ್ ನಲ್ಲಿ ಬೆಳೆದ ಇವರಿಗೆ ಅದೊಂದು ಸಾಮಾನ್ಯ ವಿಷಯ. ಅರಾಜಕೀಯತೆಯಲ್ಲಿಯೇ ಹುಟ್ಟಿ ಬೆಳೆದವರಿಗೆ, ಮಕ್ಕಳ ಕೈಯಲ್ಲಿ ಗನ್ನು-ಬಾಂಬು ಕಾಣಿಸಿಕೊಂಡರೆ ಅದೊಂದು ಮಹತ್ವದ ಸಂಗತಿ ಅನ್ನಿಸುವುದೇ ಇಲ್ಲ. ಆದರೆ ಅಂಥ ಜನರನ್ನು ಮುಂಬಯಿಯ ದಕ್ಷ ಪೋಲೀಸರು ಸಾಯಹಾಕಿದರೊ, ಆಗ ಇವರಲ್ಲಿ ಒಮ್ಮೆಲೆ ಎಚ್ಚರವಾಗುತ್ತೆ ಮಾನವೀಯತೆ. ಆ ಹುಡುಗನನ್ನು ಜೀವಂತವಾಗಿ ಹಿಡಿಯಬಹುದಿತ್ತು, ಸುಮ್ಮ ಸುಮ್ಮನೆ ಒಂದು ಮನೆಯ ’ಘರ್ ಕಾ ಚಿರಾಗ್’ ನನ್ನು ಬಲಿ ತೆಗೆದುಕೊಂಡರು ಪೋಲೀಸರು ಎಂಬ ವಾದ ಇವರದು. ಮತ್ತೇನು ಮಾಡಬೇಕಿತ್ತು? ಆ ಹುಡುಗ ಒಂದಿಬ್ಬರನ್ನು ಕೊಂದು ಹಾಕುವವರೆಗೆ ಕಾಯಬೇಕಿತ್ತೆ?

ಇಂದು ನಿಜವಾಗಿಯೂ ನಮ್ಮ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿರುವವರು ಈ ರಾಜ್ ಠಾಕರೆಯಂಥ ರಾಜಕಾರಣಿಗಳಲ್ಲ. ಯೂಪಿ-ಬಿಹಾರದಿಂದ ವಲಸೆ ಬರುವ ಪರಿವಾರಗಳೂ ಅಲ್ಲ. ಯಾಕೆಂದರೆ, ಅವರಿಗೆ ಸೂಕ್ತವಾದ ವ್ಯವಸ್ಥೆಗಳನ್ನು, ಉದ್ಯೋಗಾವಕಾಶಗಳನ್ನು ಈ ಲಾಲೂ-ಮಾಯಾ-ನಿತೀಶ್ ರಂಥ ನೇತಾರರು ಕಲ್ಪಿಸಿಯೇ ಇಲ್ಲ. ಅವರೆಲ್ಲ ಸೇರಿ ತಮ್ಮ ತಮ್ಮ ಜೇಬುಗಳನ್ನೇ ತುಂಬಿಸಿಕೊಳ್ಳುತ್ತಿದ್ದಾರೆ. ಅವರ ರಾಜ್ಯಗಳ ಅಭ್ಯುದಯ ಸಾಧ್ಯವೇ ಆಗದಷ್ಟು ಹೀನಾಯ ಪರಿಸ್ಥಿತಿ ಇದೆ. ಸಹಜವಾಗಿ ಅಲ್ಲಿಯ ಜನ ನಗರಗಳ ಕಡೆಗೆ ಓಡುತ್ತಿದ್ದಾರೆ. ಇಂಥ ಜನರಿಗೆ ಸಿಗುವ ಅತ್ಯಂತ ಸುಲಭದ punching bag...ಮುಂಬಯಿ. ಇಂದು ನಮ್ಮ ದೇಶವನ್ನು ಯಾರಾದರೂ ಒಡೆಯುತ್ತಿದ್ದರೆ, ಅವು ನೈತಿಕತೆಯನ್ನು ಗಾಳಿಗೆ ತೂರಿಬಿಟ್ಟ ಇಂಥ ನಿಕೃಷ್ಟ ಚಾನೆಲ್ಲುಗಳು. ಇವರು ತೋರಿಸುವ ’ವಾರ್ತೆಗಳು’ ಎಂಬ ಮನೋರಂಜನಾ-ಮೆಲೋಡ್ರಾಮಾ ನಾಟಕವನ್ನು ನೋಡಿ, ಆವೇಶಕ್ಕೆ ಒಳಗಾಗಿ, ಸುಮ್ಮ ಸುಮ್ಮನೆ ಬಲಿಯಾಗುತ್ತಿದ್ದಾರೆ ಯುವಕರು.

ಇಂಥ ಕಿಡಿಗೇಡಿ ಚಾನೆಲ್ಲುಗಳಿಂದ ನಮ್ಮ ದೇಶವನ್ನು ಆ ದೇವರೇ ರಕ್ಷಿಸಬೇಕು.

Rating
No votes yet

Comments