ನನ್ನ ಪುಟ್ಟ ಗೂಡು

ನನ್ನ ಪುಟ್ಟ ಗೂಡು

ಹಲೋ !!! ನಮಸ್ಕಾರ ಮೇಡಂ, ನಾನು ಪ್ರಶಾಂತ್, ನೆನ್ನೆ ಮನೆವಿಚಾರಕ್ಕೆ ಫೋನ್ ಮಾಡಿದ್ನಲ್ಲ....

ಇಲ್ಲ, ಅದನ್ನ ಕೊಟ್ಟಾಯ್ತು, ನೀವು ಲೇಟ್ ಮಾಡ್ಬಿಟ್ರಿ... ಹಾಗಂತ ಅತ್ತಕಡೆಯಿಂದ ಬಂದ ಧ್ವನಿ ನನ್ನ ಕನಸುಗಳಿಗೆ ಕತ್ತರಿಹಾಕಿತ್ತು.

ನೆನ್ನೆಯಷ್ಟೇ ನಾನು ಆಕೆಗೆ ದೂರವಾಣಿ ಕರೆನೀಡಿ ಮಾತನಾಡಿದ್ದೆ.  ಇಂದು ಆ ಮನೆಯತ್ತ ಹೋಗುವ ದಾರಿಯನ್ನ ಬಲ್ಲವರಿಂದ ತಿಳಿದುಕೊಂಡು ಆಕೆಗೆ ನಾನು ಬರುವ ವಿಷಯವನ್ನ ತಿಳುಸುವ ಸಲುವಾಗಿ ಕರೆ ನೀಡಿದ್ದೆ. ಆದರೆ ನನ್ನ ಅದೃಷ್ಟವೋ ದುರಾದೃಷ್ಟವೋ ತಿಳಿಯದು.  ನನಗೆ ಆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಕೈ ತಪ್ಪಿ ಹೋಯಿತು.  ಇದು ಒಂದು ಮನೆಯ ಕಥೆಯಾದರೆ ಇಂತಹಾ ಕಥೆಗಳು ಹಲವಾರು. ನಾನು ಮನೆಗಾಗಿ ಅಂತರ್ಜಾಲದಲ್ಲೂ ಹುಡುಕಾಟ ಆರಂಭಿಸಿದ್ದೆ.  ಆದರೂ ಅದು ಫಲ ನೀಡಲಿಲ್ಲ. "ನೀವು bachelorಆ, sorry, ನಾವು bachelorಗಳಿಗೆ ಮನೆ ಕೊಡೋದಿಲ್ಲ" ಇದೇ ಉತ್ತರ ನನಗೆ ಬಹಳಷ್ಟುಕಡೆ ಸಿಕ್ಕಿದ್ದು.  bachelorಗಳಿಗೆ ಮನೆ ಕೊಡದಿರಲು ಕಾರಣ ?? ಹಿಂದೆಂದೋ ಆ ಮನೆಯನ್ನು ಯಾವುದೋ bachelorಗೆ ಕೊಟ್ಟು ಆ ಪುಣ್ಯಾತ್ಮ ಮನೆಯನ್ನ ಚೊಕ್ಕಟವಾಗಿಡದಿದ್ದದ್ದೋ, ಅಥವಾ ಅವನ ಕೆಟ್ಟ ಹವ್ಯಾಸಗಳೋ... ಕಾರಣಗಳು ನೂರ್‍ಆರು. ಆದರೆ ಅದರ ಪರಿಣಾಮದಿಂದ ನನಗೆ ಮನೆ ಸಿಕ್ಕುತ್ತಿರಲಿಲ್ಲ.  ಸಾಧ್ಯವಾದಷ್ಟು ಬೇಗ ನಾನು ನನ್ನ ಕಾಲಮೇಲೆ ನಿಲ್ಲಬೇಕೆಂಬ ಆಸೆ, ಆದರೆ ಆ ಸಂಧರ್ಭ ನನಗೆ ಹತ್ತಿರದಲ್ಲಿಲ್ಲ ಎಂದು ತೋರುತ್ತಿತ್ತು.

ಅಂತೂ ಇಂತೂ ಅಂತರ್ಜಾಲದ ಸಹಾಯದಿಂದ ಒಂದು ಮನೆಯನ್ನ ನೋಡಿ, ಆ ಮನೆಗೆ ಭೇಟಿನೀಡಲು ಅಣಿಯಾದೆ.  ಆ ಮನೆ ಇದ್ದದ್ದು ಜೆ.ಪಿ ನಗರ ೬ನೇ ಹಂತದಲ್ಲಿ.  ಕೆಲಸ ಬೇಗ ಮುಗಿಸಿ ರಾತ್ರಿ ಸರಿ ಸುಮಾರು ೭ ಘಂಟೆಯ ಹೊತ್ತಿಗೆ ಅಲ್ಲಿ ತಲುಪಿದ್ದೆ.  ಮನೆಯ ಯಜಮಾನ ತುಸು ಮುಂಗೋಪಿಯಂತೆ ಕಂಡರೂ ನನಗೆ ಯಜಮಾನನಿಂದ ಏನೂ ನಷ್ಟವಾಗದೆಂದು ಮನೆಯ ಒಳಗಡೆ ಯಜಮಾನನ ಕಾವಲಿನಲ್ಲಿ ಕಾಲಿಟ್ಟೆ.  ಮನೆಯೇನೋ ಚಿಕ್ಕದಾಗಿ ಚೊಕ್ಕವಾಗಿತ್ತು. ಅಮೃತಶಿಲೆಯ ಹಾಸುಗಲ್ಲು ಮನೆಯ ಅಂದವನ್ನು ಹೆಚ್ಚಿಸಿತ್ತು. ಒಂದು ಕೊಠಡಿಯ ಮನೆಯಲ್ಲಿ ಬಚ್ಚಲುಮನೆ ಕೊಠಡಿಗೆ ಹೊಂದಿಕೊಂಡಂತೆ ಇತ್ತು. ಆದರೂ ಪರವಾಗಿಲ್ಲ ಬಾಡಿಗೆ ವಿಚಾರಿಸಿ ಕಡಿಮೆಯಾದಲ್ಲಿ ಇಲ್ಲಿಯೇ ಇರಬಹುದೆಂದು ಆಲೋಚಿಸಿ ಆ ಯಜಮಾನನೊಡನೆ ಮಾತನಾಡೋಣ ಎಂದುಕೊಂಡರೆ ಆತನಿಗೆ ಮಾತನಾಡಲು ಪುರುಸೊತ್ತೂ ಇರಲಿಲ್ಲದ ಕಾರಣ ನಂತರ ನನಗೆ ಕರೆ ನೀಡುವುದಾಗಿ ಹೇಳಿದರು.  ಬಂದದಾರಿಗೆ ಸುಂಕವಿಲ್ಲ ಎಂದುಕೊಂಡು ಮನೆಗೆ ಮರಳಿದೆ.  ಸರಿಸುಮಾರು ೯ ಘಂಟೆಗೆ ಆತನಿಂದ ಕರೆ ಬಂದಿತು. ಮನೆಯ ಬಾಡಿಗೆ ವಿಚಾರ ತಿಳಿಸಲು ಆತ ಕರೆ ನೀಡಿದ್ದರು.  ಆತ ಹೇಳಿದ ಬಾಡಿಗೆ ಕೇಳಿ ಮೈ ನಡುಕ ಬಂದಿತ್ತು.

ಬಾಡಿಗೆ ೫.೦೦೦/- ಮತ್ತೆ ಮುಂಗಡ ಹಣ ೭೦.೦೦೦/- ಉಸ್ಸಪ್ಪಾ !!! ಬೆಂಗಳೂರಿನ ಜನರಿಗೆ ಹಣದ ಬೆಲೆ ತಿಳಿಯದೇನೋ ಅಂದೆನಿಸಿಬಿಟ್ಟಿತು.  ಕಾಸು ಕಾಸು ಸೇರಿಸಿ ಜೋಡಿಸಿಟ್ಟ ಹಣವನ್ನೆಲ್ಲಾ ಈ ಮನೆಯಸಲುವಾಗಿ ನೀಡಬೇಕಾಗುವುದಲ್ಲ ಎಂದು ಮನಸ್ಸಿನಲ್ಲಿಯೇ ಯೋಚಿಸಿ ಈ ಮನೆಯ ಸಹವಾಸವೇ ಬೇಡವೆಂದುಕೊಂಡು ಮತ್ತೊಮ್ಮೆ ನನ್ನ ಅಮ್ಮ, ಅಣ್ಣನ ಅಭಿಪ್ರಾಯ ಕೇಳಿ ಆತನನ್ನು ಸಂಪರ್ಕಿಸುವೆನೆಂದು ಹೇಳಿದೆ.  ಅಲ್ಲಿಂದ ಮತ್ತೆ ಬೇರೆ ಬೇರೆ ಮನೆಯ ಭೇಟೆ ಮುಂದುವರಿಸಿದೆ.  ನನ್ನ ಮೈಸೂರಿನ ಮನೆಯ ಎದುರಿನಲ್ಲಿರುವ ಪರಿಚಯಸ್ಥರೊಬ್ಬರ ಮಗನಿಗೆ ಬೆಂಗಳೂರಿನಲ್ಲೇ ಕೆಲಸ.  ಆತ ಮೈಸೂರಿಗೆ ಬಂದಿದ್ದಾಗ ನನ್ನ ಅಣ್ಣನೊಡನೆ ಮಾತನಾಡಿ ನನ್ನ ಮನೆಯ ಭೇಟೆಯ ಬವಣೆಯನ್ನು ಪರಿಹರಿಸುವ ಸಲುವಾಗಿ ಆತನೂ ಈ ಕೆಲಸಕ್ಕೆ ಕೈ ಜೋಡಿಸಿದ.  ಆತ ತೋರಿಸಿದ ಮನೆಗಳು ನನಗೆ ಸ್ವಲ್ಪ ದೂರ ಎನಿಸಿತು.  ಅದೂ ಅಲ್ಲದೇ ಅಮ್ಮನ್ನನ್ನು ಒಪ್ಪಿಸಿ ನನ್ನಜೊತೆ ಇರಿಸಿಕೊಳ್ಳುವುದು ಎಂದು ತೀರ್ಮಾನಿಸಿದ್ದೆ.  ಹಾಗಾಗಿ ಮನೆಯ ಸುತ್ತ ಮುತ್ತ ಸ್ವಲ್ಪ ಅಚ್ಹುಕಟ್ಟಾಗಿರಬೇಕು, ಮನೆಯಿರುವ ಸ್ಥಳ ಪ್ರಶಾಂತವಾಗಿರಬೇಕೆಂದು ನಾನು ಎಣಿಸಿದ್ದೆ.  ನನ್ನ ಈ ಮನೆ ಭೇಟೆ ಮುಂದುವರಿಸುವ ಭರದಲ್ಲಿ ಸಿಕ್ಕ ಮನೆಯನ್ನ ಬಿಡುವುದು ಬೇಡವೆಂದು ಮತ್ತೆ ೫.೦೦೦/- ಬಾಡಿಗೆಯ ಮನೆಗೆ ಬಂದು ಆ ಮನೆಯ ಯಜಮಾನನಿಗೆ ೧೦೦೦/- ಮುಂಗಡ ಹಣ ನೀಡಿ ಮತ್ತೆ ನನ್ನ ಹುಡುಕಾಟವನ್ನ ಮುಂದುವರಿಸಲು ನಿರ್ಧರಿಸಿದೆ.

ಮೊದಲೇ ನಿರ್ಧರಿಸಿದಂತೆ ಮುಂಗಡ ಹಣ ನೀಡಲು ಆ ಮನೆಯತ್ತ ಹೊರಟೆ.  ಅಂದು ಆ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು.  ಇದು ಒಳ್ಳೆಯ ಲಕ್ಷಣವೆಂದುಕೊಂಡು ಮನೆಯ ಯಜಮಾನನಿಗೆ ೧೦೦೦/- ಮುಂಗಡ ಹಣವನ್ನು ನೀಡಿ ಪ್ರಸಾದವನ್ನು ಪಡೆದು ಮರಳಿ ನನ್ನ ಹಳೇ ಮನೆಗೆ ಬರುವಾಗ ದಾರಿಯಲ್ಲಿ ನನ್ನ ಮಿತ್ರ ಸೋಮ ಸಿಕ್ಕಿದ.  ಆತನಿಗೆ ಮನೆಯ ವಿಚಾರವನ್ನೆಲ್ಲಾ ಹೇಳಿದಮೇಲೆ ಹತ್ತಿರದಲ್ಲೇ ಕಡಿಮೆ ಬಾಡಿಗೆಗೆ ಮನೆಗಳು ದೊರೆಯುತ್ತವೆ ಅನ್ನುವುದು ತಿಳಿಯಿತು.  ಆತನಿಗೆ ಯಾವುದಾದರೂ ಇದ್ದರೆ ತಿಳಿಸೆಂದು ಹೇಳಿ ಮನೆಗೆ ಬಂದೆ.  ಮನೆಗೆ ಬಂದು ಅಡುಗೆಗೆ ಸಿದ್ಧತೆ ಮಾಡುತ್ತಿದ್ದಾಗ ಸೋಮನ ಮಿತ್ರನಿಂದ ಕರೆಬಂತು.  ಒಂದು ಮನೆಇರುವುದಾಗಿ ತಕ್ಷಣ ಬಂದು ನೋಡಬೇಕಾಗಿ ಹೇಳಿದರು.  ಅಡುಗೆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಆ ಮನೆಯನ್ನ ನೋಡಲು ಹೊರಟೆ.

ಆ ಮನೆ ನಾನಿದ್ದ ಸ್ಥಳದಿಂದ ೩ ಕಿಮೀ ದೂರದಲ್ಲಿತ್ತು.  ಒಂದು ಕೊಠಡಿಯ ಮನೆ ಮೊದಲ ಮಹಡಿಯಲ್ಲಿದ್ದರೂ ಚೊಕ್ಕಟವಾಗಿತ್ತು.  ಆ ತಕ್ಷಣವೇ ಆ ಮನೆಯ ಯಜಮಾನರಿಗೆ ೫೦೦೦ ಮುಂಗಡ ಹಣ ನೀಡಿ ೧ನೇ ತಾರೀಖು ಬರುವುದಾಗಿ ಹೇಳಿ ಮನೆಗೆ ಬಂದೆ.  ಮನೆಗೆ ಬಂದು ಅಮ್ಮ, ಅಣ್ಣನಿಗೆ ಕರೆ ಮಾಡಿ ಹಾಲು ಉಕ್ಕಿಸುವ ಕಾರ್ಯಕ್ರಮವನ್ನ ಅಮ್ಮನಿಂದಲೇ ಮಾಡಿಸುವುದಾಗಿ ತಿಳಿಸಿ ಅಂತೂ ಇಂತೂ ೧ನೇ ತಾರೀಖು ಅಮ್ಮ, ಅಕ್ಕ, ಅಣ್ಣ ಮತ್ತು ಕುಟುಂಬದೊಡನೆ ನನ್ನ ಜೀವನದ ಮೊದಲ ಮನೆಯಲ್ಲಿ ಬಾಳುವೆ ನಡೆಸಲು ಪ್ರಾರಂಭಿಸಿದೆ.  ಆ ಮನೆಯಲ್ಲಿ ಅಣ್ಣನ ಮಗಳು ೧ ವರುಷದ "ವಿಸ್ಮಯ" ತನ್ನ ಅಂಬೇಗಾಲಿನಲ್ಲಿ ಮನೆಯತುಂಬಾ ಓಡಾಡುವುದನ್ನ, ಅಕ್ಕನ ಮಗಳು "ಸ್ಪೂರ್ತಿ"ಯ ಆಟಪಾಟಗಳನ್ನ ಕಂಡು ಏನೋ ಒಂದು ರೀತಿಯ ಸಂತಸವಾಗುತ್ತಿತ್ತು. :)

Rating
No votes yet

Comments