ತೇಜೋಮಯ ಚಿಂತನೆಯೊಂದರ ತುಣುಕು

ತೇಜೋಮಯ ಚಿಂತನೆಯೊಂದರ ತುಣುಕು

1999 ಮುಗಿಯುತ್ತಾ ಬಂದಾಗ ‘ಜನವಾಹಿನಿ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ವರ್ಗಾವಣೆಯ ಆದೇಶವೂ ತಲುಪಿತ್ತು. ನನಗೆ ಅರ್ಥವಾಗದ ಕಾರಣಗಳಿಗಾಗಿ ನನ್ನನ್ನು ಚಿಕ್ಕಮಗಳೂರಿಗೆ ವರ್ಗಾಯಿಸಲಾಗಿತ್ತು. 1999ಕ್ಕೆ ವಿದಾಯ ಹೇಳಿದ ಮರುದಿನ ಅರ್ಥಾತ್ 2000ದ ಜನವರಿ ಒಂದನೇ ತಾರೀಕಿನಂದು ನಾನು ‘ಜನವಾಹಿನಿ’ ಪತ್ರಿಕೆಯ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಸೇರಿಕೊಂಡೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಅಕ್ಷರಶಃ ಕೆಲಸವಿರಲಿಲ್ಲ. ಇಲ್ಲಿ ನನಗೊಬ್ಬ ಸಹಾಯಕ ವರದಿಗಾರರೂ ಇದ್ದುದರಿಂದ ಇಲ್ಲದ ಕೆಲಸ ಇಲ್ಲವೇ ಇಲ್ಲ ಎಂಬಂತಾಗಿತ್ತು. ಇಂಥಾ ಹೊತ್ತಿನಲ್ಲಿ ಎಲ್ಲಾ ಪತ್ರಕರ್ತರೂ ಮಾಡುವಂತೆ ನಾನೂ Special storyಗಳ ಹುಡುಕಾಟದಲ್ಲಿ ಮುಳುಗಿದೆ.

ನನ್ನ ಮೂಲವೂ ಮಲೆನಾಡೇ. ಹಾಗಾಗಿ ಮಲೆನಾಡಿನ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಲಿಲ್ಲ. ಏಲಕ್ಕಿಯ ಅವನತಿ, ಕಾಫಿಯ ಬೆಲೆಯ ಕುಸಿತಗಳು ನನಗೆ ಕೇವಲ ಪತ್ರಿಕಾ ವರದಿಗಳಷ್ಟೇ ಆಗಿರಲಿಲ್ಲ. ಇವು ವೈಯಕ್ತಿಕ ಮಟ್ಟದಲ್ಲಿ ಕಾಡುತ್ತಿದ್ದ ಸಂಗತಿಗಳೂ ಆಗಿದ್ದವು. ಈ ವಿಷಯಗಳ ಆಳಕ್ಕಿಳಿದು ಅರ್ಥ ಮಾಡಿಕೊಳ್ಳುವ ಪ್ರಯತ್ನವೊಂದರ ಭಾಗವಾಗಿ ನಾನು ತೇಜಸ್ವಿಯವರನ್ನು ಭೇಟಿಯಾದೆ. ಮಲೆನಾಡಿನಲ್ಲಿ ಸಂಭವಿಸುತ್ತಿರುವ ಸಂಕೀರ್ಣ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳ ಬೇಕಾದ ವಿಧಾನ ಯಾವುದಾಗಿರಬೇಕು ಎಂಬುದು ನನಗೆ ಸ್ಪಷ್ಟವಾಯಿತು.

ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದ ಮೊದಲ ಬಜೆಟ್ಟನ್ನು ಅಂದಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಮಂಡಿಸುತ್ತಿದ್ದರು. ಈ ಹೊತ್ತಿಗೆ ಸರಿಯಾಗಿ ತೇಜಸ್ವಿಯವರ ದೂರವಾಣಿ ಕರೆ.

‘ಬಜೆಟ್ ನೋಡ್ತಿದಿಯಾ?’
‘ಹೌದು... ಸರ್ ’
‘ಮೀಸಲಾತಿ ವಿಷಯ ಅರ್ಥ ಆಯ್ತಾ?’
‘ಅದೇ ಸರ್, ಮೀಸಲಾತಿಯನ್ನು ಮುಂದುವರೆಸಿದ್ದಾರೆ.’
‘ನಾನೂ ಬಜೆಟ್ ನೋಡ್ತಿದೀನಿ. ಅದು ನನ್ಗೂ ಗೊತ್ತು. ಆದರೆ ಯಾವ ರೀತಿ ಮುಂದುವರಿಸಿದ್ದಾರೆ ಅಂತ ಗೊತ್ತಾಯ್ತಾ?’
‘......’
‘ಸರಕಾರೀ ನೇಮಕಾತಿಗೆ ತಡೆ ಒಡ್ಡಿದ್ದಾರೆ. ಪಬ್ಲಿಕ್ ಸೆಕ್ಟರ್ ಇಂಡಸ್ಟ್ರೀಸ್ ಎಲ್ಲಾ ಪ್ರೈವಟೈಸ್ ಮಾಡ್ತಿದ್ದಾರೆ. ಮೀಸಲಾತಿ ಮುಂದುವರಿಸುತ್ತಾರೆ ಅಂದರೆ ಏನರ್ಥ?’
‘…?...’
‘ಅಂದರೆ ಮೀಸಲಾತಿ ನೀತಿ ಮುಂದುವರಿಯುತ್ತೆ. ಆದರೆ ಮೀಸಲಾತಿ ಅನುಸರಿಸಿ ಉದ್ಯೋಗ ಪಡೆಯಲು ಮಾತ್ರ ಅವಕಾಶಗಳಿಲ್ಲ’
‘ಸರ್... ಅದು ಗ್ಲೋಬಲೈಸೇಶನ್,,, ನ್ಯೂ ಇಕನಾಮಿಕ್ ಪಾಲಿಸಿ....’
‘ಹೌದು ಮಾರಾಯ... ಅದೆಲ್ಲಾ ಸರಿ ಇಲ್ಲ ಅಂತ ಭಾಷಣ ಮಾಡಿದ್ರೆ ಅದು ಬರೋದು ನಿಲ್ಲುತ್ತಾ. ಇಡೀ ಜಗತ್ತೇ ಒಂದು ಹೊಸ ವ್ಯವಸ್ಥೆಗೆ ಓಪನ್ ಆಗ್ತಾ ಇದೆ. ಇದು ಬೇಕು ಅಥವಾ ಬೇಡ ಅಂತಾ ಡಿಸೈಡ್ ಮಾಡೋ ಸ್ಥಿತಿಯಲ್ಲಿ ನಮ್ಮ ಎಕಾನಮಿ ಇದೆಯಾ?’
‘….’
‘ಮೀಸಲಾತಿಯನ್ನು ಮುಂದುವರಿಸುತ್ತಲೇ ಅದನ್ನು ಇರ್ರಿಲವೆಂಟ್ ಮಾಡ್ತಿದ್ದಾರೆ. ಮೀಸಲಾತಿ ಇರ್ರಿಲವೆಂಟ್ ಆಗ್ತಾ ಇರೋ ಹೊತ್ತಿನಲ್ಲೂ ನಾವು ಮಾತ್ರ ಮೀಸಲಾತಿ ಇನ್ನೂ ಹತ್ತು ವರ್ಷಕ್ಕೆ ಮುಂದುವರೀತು ಅಂತ ಸಂತೋಷ ಪಡ್ತಿದ್ದೇವೆ.’

ಅಂದು ತೇಜಸ್ವಿ ಮೀಸಲಾತಿಗೆ ಸಂಬಂಧಿಸಿದಂತೆ ತಮ್ಮ ಚಿಂತನೆಗಳನ್ನು ಇನ್ನೂ ವಿವರಾಗಿ ಬಿಡಿಸಿಟ್ಟರು. ನನಗೆ ನೆನಪಿದ್ದುದನ್ನಷ್ಟೇ ಇಲ್ಲಿ ಬರೆದಿದ್ದೇನೆ. ಆದಿನ ತೇಜಸ್ವಿ ಚಿಂತನೆಗಳನ್ನು ನಾನು ಒಂದು ಬಜೆಟ್ ಪ್ರತಿಕ್ರಿಯೆಯ ಸುದ್ದಿಯನ್ನಾಗಿ ಬರೆದೆ. ಅದು ಮುಖಪುಟದಲ್ಲೇ ಪ್ರಕಟವಾಯಿತು. ತಮಾಷೆಯೆಂದರೆ ದಿಲ್ಲಿಯ, ಬೆಂಗಳೂರಿನ, ಮುಂಬೈಯ ಪ್ರತಿಷ್ಠಿತ ಟಿ.ವಿ. ಚಾನೆಲ್ ಗಳ ಬಜೆಟ್ ಚರ್ಚೆಯಲ್ಲೂ ಮೀಸಲಾತಿ ಮುಂದುವರಿಕೆಗೆ ಇರುವ ಮತ್ತೊಂದು ಆಯಾಮದ ಬಗೆಗೆ ಯಾರೂ ಮಾತನಾಡಲಿಲ್ಲ. ಪ್ರಖ್ಯಾತ ದಲಿತ ಚಿಂತಕರಿಗೂ ಇದು ಅರ್ಥವಾಗಿರಲಿಲ್ಲ. ಆಮೇಲಿನ ದಿನಗಳಲ್ಲೂ ಮೀಸಲಾತಿಯ ಈ ಆಯಾಮದ ಬಗ್ಗೆ ಚರ್ಚೆ ನಡೆದುದನ್ನು ನಾನು ಕಂಡಿಲ್ಲ. ತೇಜಸ್ವಿಯವರೇ ಕೆಲವು ವೇದಿಕೆಗಳಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ಇದಾದ ಕೆಲಕಾಲದ ನಂತರ ಆಗ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಡಾ. ರವಿವರ್ಮ ಕುಮಾರ್ ಆಯೋಗ ನಡೆಸುತ್ತಿದ್ದ ಸಮೀಕ್ಷೆಗಾಗಿ ಚಿಕ್ಕಮಗಳೂರಿಗೂ ಭೇಟಿ ನೀಡಿದ್ದರು. ಆಗ ತೇಜಸ್ವಿಯವರು ಅಂತರ್ಜಾತೀಯ ವಿವಾಹವಾದವರೂ ಜಾತಿಯ ಸಂಕೋಲೆಯನ್ನು ಕಳಚಿಕೊಳ್ಳಲಾಗದ ವಿಪರ್ಯಾಸದ ಬಗ್ಗೆ ಅವರ ಗಮನ ಸೆಳೆದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಸುದೀರ್ಘ ಮನವಿಯೊಂದನ್ನು ಆಯೋಗಕ್ಕೆ ಸಲ್ಲಿಸಿದರು. ಅದರ ಕರಡಿನ ಪ್ರತಿಯೊಂದು ಈಗಲೂ ನನ್ನ ಬಳಿ ಇದೆ.

ಇತ್ತೀಚೆಗೆ ಮತ್ತೆ ಹಿಂದುಳಿದ ವರ್ಗಗಳ ಚಳವಳಿಯೊಂದು ಕರ್ನಾಟಕದಲ್ಲಿ ಆರಂಭವಾಗಿದೆ. ‘ಅಹಿಂದ’ ಸಮಾವೇಶದಲ್ಲಿ ಭಾಗವಹಿಸಿದರೆಂಬ ಕಾರಣಕ್ಕೆ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪದವಿಯಿಂದ ಉಚ್ಛಾಟಿಸಲಾಯಿತು ಎಂಬುದನ್ನು ಮುಂದಿಟ್ಟುಕೊಂಡು ಈ ಚಳವಳಿ ನಡೆಯುತ್ತಿದೆ. ಈ ಚಳವಳಿಯನ್ನು ನಡೆಸುತ್ತಿರುವವರು ‘ಪ್ರಬಲ ಮುಂದುವರಿದ ಜಾತಿ’ಗೆ ಸೇರಿದ ಮಾಜಿ ಪ್ರಧಾನಿ ದೇವೇಗೌಡರು ‘ದುರ್ಬಲ ಹಿಂದುಳಿದ ಜಾತಿ’ಗೆ ಸೇರಿದ ಸಿದ್ದರಾಮಯ್ಯನವರನ್ನು ತುಳಿದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ವಿಪರ್ಯಾಸವೆಂದರೆ ದೇವೇಗೌಡರು ಮತ್ತು ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ‘ಜಾತ್ಯತೀತ’ ಜನತಾದಳವನ್ನು ಪ್ರತಿನಿಧಿಸಿದ್ದರು, ಮತ್ತು ಈಗಲೂ ಇವರಿಬ್ಬರೂ ಜಾತ್ಯತೀತತೆ ತಮ್ಮ ಸಿದ್ಧಾಂತ ಎಂದು ಹೇಳಿಕೊಳ್ಳುತ್ತಿರುವುದು.

ಈ ವಿಪರ್ಯಾಸದ ಬಗ್ಗೆ ನಾನು ಈಗ ಕೆಲಸ ಮಾಡುತ್ತಿರುವ ‘ಉದಯವಾಣಿ’ ಪತ್ರಿಕೆಗೆ ಲೇಖನ ತಯಾರಿಸಲು ಅವಶ್ಯವಿರುವ ಮಾಹಿತಿಯನ್ನು ನನ್ನ ಹಳೆಯ ಕಡತಗಳಲ್ಲಿ ಹುಡುಕುತ್ತಿರುವಾಗ ತೇಜಸ್ವಿಯವರು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿದ ಮನವಿಯ ಕರಡು ಪ್ರತಿ ಸಿಕ್ಕಿತು. ಅದನ್ನು ‘ಸಂಪದ’ದಲ್ಲಿ ಪ್ರಕಟಿಸಬಹುದೇ ಎಂದು ತೇಜಸ್ವಿಯವರನ್ನು ಕೇಳಿದಾಗ ಅವರು ತುಂಬು ಮನಸ್ಸಿನ ಒಪ್ಪಿಗೆ ನೀಡಿದರು. ಅವರಿಗೆ ಸಂಪದ ಬಳಗದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಕನಿಷ್ಠ ಐಚ್ಛಿಕವಾದ ರಾಷ್ಟ್ರೀಯ ನಾಗರಿಕ ಸಂಹಿತೆಯೊಂದು ಬೇಕು. ಇಲ್ಲದಿದ್ದರೆ ನಾವು ವೈಯಕ್ತಿಕವಾಗಿ ಜಾತಿ-ಧರ್ಮಗಳನ್ನು ಮೀರಿದರೂ ಕಾನೂನು ಮಾತ್ರ ನಮ್ಮನ್ನು ಅದಕ್ಕೆ ಕಟ್ಟಿ ಹಾಕುತ್ತಲೇ ಇರುತ್ತದೆ.
namismail @ rediffmail. com

Rating
No votes yet

Comments