ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
ಬೆಂಗಳೂರು ವಿನಾ ಕಾರಣ ಇಷ್ಟವಾಗುತ್ತದೆ. ಒಮ್ಮೊಮ್ಮೆ ವಿನಾಕಾರಣ ಬೇಸರವನ್ನೂ ಹುಟ್ಟಿಸುತ್ತದೆ.
ದೂರದ ಊರಿನಿಂದ ರಾತ್ರಿ ಬಸ್ಸಿಗೆ ಬಂದು, ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ಇಳಿದಾಗ ಕಾಣುವ ಬೆಂಗಳೂರು ಮೊದಲು ಹುಟ್ಟಿಸುವುದು ದಿಗಿಲನ್ನು. ಸಿಟಿ ಬಸ್ ಹುಡುಕುವುದರೊಳಗೆ ಬಿಟ್ಟು ಬಂದ ಊರು ನೆನಪಾಗುತ್ತಿರುತ್ತದೆ. ಗೆಳೆಯನ ರೂಮು ಸೇರಿ, ತಾತ್ಕಾಲಿಕ ವಸತಿ ಕಂಡುಕೊಂಡು, ದರ್ಶಿನಿಯಲ್ಲಿ ಪಲಾವ್ ತಿನ್ನುವಾಗ ಅಮ್ಮ ನೆನಪಾಗುತ್ತಾಳೆ. ಆಕೆಯ ಕಮ್ಮನೆಯ ಅಡುಗೆ ನೆನಪಾಗುತ್ತದೆ.
ಮುಂದೆ ಕೆಲಸದ ಬೇಟೆ ಶುರು. ಹೆಜ್ಜೆ ಹೆಜ್ಜೆಗೂ ಬೆಂಗಳೂರು ತನ್ನ ಬಿಗು, ಬಿನ್ನಾಣ, ಕುರೂಪ ಮತ್ತು ಸೊಗಸನ್ನು ತೋರುತ್ತಲೇ ಸಾಗುತ್ತದೆ. ನಾಲ್ಕೈದು ಕಡೆ ’ಕೆಲಸ ಇಲ್ಲ’ ಅನ್ನಿಸಿಕೊಂಡು, ರೂಮು ಸೇರಿ, ಊಟ ಮಾಡದೇ ಅಂಗಾತವಾದಾಗ ನಿರಾಶೆ ಹುಟ್ಟಿಸುವ ನೂರೆಂಟು ನೆನಪುಗಳು. ಈಗಲೇ ಚೀಲ ತುಂಬಿಕೊಂಡು ವಾಪಸ್ ಊರಿಗೆ ಹೋಗಿಬಿಡಲೇ ಎಂಬ ಭಾವನೆ ಎದೆ ತುಂಬಿದರೂ, ಅಲ್ಲಿ ನಿರೀಕ್ಷೆಯಿಟ್ಟುಕೊಂಡು ಕಾಯುತ್ತಿರುವ ಅಪ್ಪ, ಅಮ್ಮ, ತಂಗಿ, ತಮ್ಮ ನೆನಪಾದಾಗ ಮನಸ್ಸು ನಿಡುಸುಯ್ಯುತ್ತದೆ.
ಆದರೆ ಬೆಂಗಳೂರು ಬಲು ಬೇಗ ಪರಿಚಯದ ಹುಡುಗಿಯಂತಾಗಿಬಿಡುತ್ತದೆ. ವಾರದೊಳಗೆ ಸಿಟಿ ಬಸ್ಗಳ ನಂಬರುಗಳು ಬಾಯಿಪಾಠವಾಗುತ್ತವೆ. ಹತ್ತು ದಿನದೊಳಗೆ ಮೊದಲ ಕೆಲಸ ಸಿಕ್ಕುಬಿಡುತ್ತದೆ. ಸಂಜೆ ಸಂಭ್ರಮದಿಂದ ಫೋನ್ ಮಾಡಿದಾಗ ಅತ್ತ ಅಪ್ಪ ಹರ್ಷ ಪಡುತ್ತಾನೆ. ಅಮ್ಮ ಸಂತಸದಿಂದ ಕಣ್ಣೀರಿಡುತ್ತಾಳೆ. ತಮ್ಮ, ತಂಗಿಯರು ಯಥಾಪ್ರಕಾರ ’ಯಾವಾಗ ಬರುತ್ತಿ? ಏನು ತರುತ್ತಿ?’ ಎಂದು ಕೇಳುತ್ತಾರೆ. ಮೊದಲ ಬಾರಿ ಬೆಂಗಳೂರು ಅಪಾರ ಭರವಸೆ ಹುಟ್ಟಿಸತೊಡಗುತ್ತದೆ.
ಕೆಲಸದ ಮೊದಲ ದಿನದ ಸಡಗರ ಏನು ಹೇಳುವುದು! ಗೆಳೆಯ ತನ್ನ ಅತ್ಯುತ್ತಮ ಅಂಗಿಯನ್ನು ಕೊಡುತ್ತಾನೆ. ಕನ್ನಡಿ ಎರಡು ನಿಮಿಷ ಹೆಚ್ಚು ಕೇಳುತ್ತದೆ. ಮೂಲೆಯ ತಿರುವಿನಲ್ಲಿ ಕೂತ ಹುಡುಗ ಎರಡೇ ರೂಪಾಯಿಗಳಿಗೆ ಪಳಪಳ ಹೊಳೆಯುವಂತೆ ಷೂಗಳನ್ನು ಉಜ್ಜಿಕೊಡುತ್ತಾನೆ. ಅವತ್ತು ಸಿಟಿ ಬಸ್ನ ಸಂದಣಿ ಬೇಸರ ತರುವುದಿಲ್ಲ. ಕಂಡಕ್ಟರ್ ಟಿಕೆಟ್ ಹಿಂದೆ ಬರೆದುಕೊಟ್ಟ ಚಿಲ್ಲರೆ ಕೇಳುವುದು ನೆನಪಾಗುವುದಿಲ್ಲ. ಆಫೀಸ್ ಹತ್ತಿರ ಇಳಿದವನ ಮನಸ್ಸಿನಲ್ಲಿ ಇಡೀ ಬೆಂಗಳೂರನ್ನೇ ಗೆದ್ದ ಉತ್ಸಾಹವಿರುತ್ತದೆ.
ಹೊಸ ಆಫೀಸ್. ಹೊಸ ವಾತಾವರಣ. ಗೇಟಿನಲ್ಲಿ ನಿಂತ ಸೆಕ್ಯುರಿಟಿಯವನು ಸಂದರ್ಶನಕ್ಕೆ ಬಂದಾಗ ಇದ್ದಷ್ಟು ಒರಟಾಗಿರದೇ ಮುಗುಳ್ನಗುತ್ತಾನೆ. ನೇಮಕಾತಿ ಪತ್ರವನ್ನು ಗಮನವಿಟ್ಟು ನೋಡಿದ ರಿಸೆಪ್ಷನಿಸ್ಟ್ ತುಟಿಯನ್ನು ಚೂರೇ ಚೂರು ಅರಳಿಸಿ ಬಾಸ್ ಹತ್ತಿರ ಕಳಿಸುತ್ತಾಳೆ. ಕ್ಷಣಕ್ಷಣಕ್ಕೂ ಧನ್ಯತೆ, ಅಳುಕು ಅನುಭವಿಸುತ್ತಲೇ ಕೆಲಸದ ಮೊದಲ ದಿನ ಮುಗಿಯುತ್ತದೆ. ರಾತ್ರಿ ಗೆಳೆಯನ ಮುಂದೆ ಹೊಸ ಆಫೀಸಿನ ವರ್ಣನೆ. ಅಲ್ಲಿಯ ಜನಗಳ ಬಗ್ಗೆ ವಿವರಣೆ. ಮರುದಿನ ಬೇಗ ಹೋಗಬೇಕೆನ್ನುವ ಉತ್ಸಾಹ. ರಾತ್ರಿ ನಿದ್ದೆ ಕೂಡ ಸರಿಯಾಗಿ ಬರುವುದಿಲ್ಲ. ಎಂಥದೋ ಧನ್ಯತೆ ಮನಸ್ಸನ್ನು ಎಚ್ಚರವಾಗಿಡುತ್ತದೆ.
ಕೆಲಸದ ಮೊದಲ ದಿನಗಳು ಹೀಗೇ ಕಳೆಯುತ್ತವೆ. ಕ್ರಮೇಣ ಗೆಳೆಯನ ರೂಮು ಆಫೀಸಿನಿಂದ ತುಂಬ ದೂರ ಇದೆ ಅನ್ನಿಸತೊಡಗುತ್ತದೆ. ’ಇಲ್ಲೇ ಹತ್ತಿರದಲ್ಲಿ ಒಂದು ಫಸ್ಟ್ಕ್ಲಾಸ್ ರೂಮಿದೆ ಸಾರ್. ಟ್ವೆಂಟಿ ಫೋರ್ ಅವರ್ಸೂ ನೀರು ಬರುತ್ತದೆ. ಓನರ್ ಕಿರಿಕಿರಿಯಿಲ್ಲ. ಬಾಡಿಗೆಯೂ ಕಡಿಮೆ...’ ಎಂದು ಆಫೀಸ್ ಹುಡುಗ ಆಮಿಷ ಹುಟ್ಟಿಸುತ್ತಾನೆ. ಮೊದಲ ಸಂಬಳ ಕೈಗೆ ಬರುವ ಹೊತ್ತಿಗೆ ಸ್ವಂತ ರೂಮು ಮಾಡಿಕೊಳ್ಳುವ ತವಕ.
ಬೆಂಗಳೂರು ಕನಸು ಹುಟ್ಟಿಸುವುದೇ ಹೀಗೆ. ಕೆಲಸವಾಯಿತು. ಸ್ವಂತ ರೂಮಾಯಿತು. ಬೆಳಿಗ್ಗೆ ರೂಮಿನಲ್ಲೇ ಬಿಸಿ ಬಿಸಿ ಕಾಫಿ ಮಾಡಿಕೊಂಡು ಪತ್ರಿಕೆ ಓದುತ್ತ ಕಾಫಿ ಕುಡಿಯುವಾಗ ಜೀವನದ ಧನ್ಯತೆ ಬೆಚ್ಚನೆಯ ಹನಿಗಳಾಗಿ ಮೈ ಮನಸ್ಸುಗಳನ್ನು ಅರಳಿಸುತ್ತದೆ. ಸ್ನಾನ ಮಾಡಿ ತಯಾರಾಗಿ, ಬಾಗಿಲಿಗೆ ಬೀಗ ಹಾಕಿಕೊಂಡು ಆಫೀಸಿಗೆ ಹೋಗುವಾಗ. ’ನಾನೂ ಏನಾದರೂ ಮಾಡಬಲ್ಲೆ’ ಎಂಬ ಆತ್ಮವಿಶ್ವಾಸ ಹಾಕುವ ಪ್ರತಿಯೊಂದು ಹೆಜ್ಜೆಯಲ್ಲೂ ಎದ್ದು ಕಾಣುತ್ತದೆ.
ದಿನಗಳೆದಂತೆ ನಾವು ಬೆಂಗಳೂರಿನ ತಾಪತ್ರಯಗಳನ್ನು ಸಹಿಸಿಕೊಳ್ಳುತ್ತ, ಅದು ನೀಡುವ ಅವಕಾಶಗಳಿಗೆ ಮುಖ ಒಡ್ಡುತ್ತ, ರಜೆಗೊಮ್ಮೆ ಮಾತ್ರ ಊರಿಗೆ ಹೋಗುತ್ತ, ಕಾಫಿ ತಡವಾದರೆ ರೇಗುತ್ತ, ನೀರು ಬಾರದಿದ್ದರೆ ಶಪಿಸುತ್ತ, ಕೇಬಲ್ನವನು ಏಕಾಏಕಿ ರೇಟ್ ಹೆಚ್ಚಿಸಿದಾಗ ಪ್ರತಿಭಟಿಸದೇ ಕಾಸು ಕೊಡುತ್ತ, ತಳ್ಳು ಗಾಡಿಯಲ್ಲಿ ತರಕಾರಿ ಮಾರುವವನ ಹತ್ತಿರ ಸೊಪ್ಪಿಗಾಗಿ ಚೌಕಾಸಿ ಮಾಡತೊಡಗುತ್ತೇವೆ.
ಕ್ರಮೇಣ ಬೆಂಗಳೂರಿನವರೇ ಆಗಿಬಿಡುತ್ತೇವೆ.
- ಚಾಮರಾಜ ಸವಡಿ
(ಬೆಂಗಳೂರಿನಲ್ಲಿ ಮೊದಲ ಬಾರಿ ಕೆಲಸ ಗಿಟ್ಟಿಸಿದಾಗಿನ ಬರವಣಿಗೆ. ಪ್ರಜಾವಾಣಿಯಲ್ಲಿ ಅಚ್ಚಾಗಿತ್ತು.)
Comments
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by hariharapurasridhar
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by nekkar_guru
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by ASHOKKUMAR
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by nekkar_guru
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by Chamaraj
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by anil.ramesh
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by Chamaraj
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by savithasr
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by baktavarbaba
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by palachandra
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by manjunath s reddy
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by harshab
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by hamsanandi
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by Smi
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by hamsanandi
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...
In reply to ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ... by shreekant.mishrikoti
ಉ: ನಮ್ಮದಲ್ಲದ ಊರಿನಲ್ಲಿ ನೆಮ್ಮದಿ ಹುಡುಕುತ್ತ...