ಬರಾಕ್ ಓಬಾಮ: ಇಡೀ ಜಗತ್ತಿಗೇ ಸ್ಪೂರ್ತಿ ನೀಡಬಲ್ಲ ಚರಿತ್ರಾರ್ಹ ಮೈಲಿಗಲ್ಲಿನ ಹೊಸ್ತಿಲಲ್ಲಿ

ಬರಾಕ್ ಓಬಾಮ: ಇಡೀ ಜಗತ್ತಿಗೇ ಸ್ಪೂರ್ತಿ ನೀಡಬಲ್ಲ ಚರಿತ್ರಾರ್ಹ ಮೈಲಿಗಲ್ಲಿನ ಹೊಸ್ತಿಲಲ್ಲಿ

ಈ ದಿನ ಅಮೇರಿಕ ದೇಶದ ಜನ ಒಂದು ಅಸಾಧಾರಣ ಚಟುವಟಿಕೆಯಲ್ಲಿ ಬಹಳ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇಂದು ಈ ದೇಶ ತನ್ನ ಮುಂದಿನ ಅಧ್ಯಕ್ಷನನ್ನು ಆರಿಸುವ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತ ಚಲಾಯಿಸುವ ಸಾಧ್ಯತೆಗಳಿವೆ ಎಂದು ಸುದ್ಧಿ ಮಾಧ್ಯಮಗಳು ಅಂದಾಜು ಮಾಡುತ್ತಿವೆ. ಅನೇಕ ಕಡೆ ಸಾವಿರಾರು ಜನ ಉತ್ಸಾಹದಿಂದ ಸಾಲಲ್ಲಿ ನಿಂತು, ಮೂರು ಅಥವ ನಾಲ್ಕು ಘಂಟೆಗಳಾದರೂ ಧೃತಿಗೆಡದೆ "ಈ ಚರಿತ್ರಾರ್ಹ ಘಟನೆಯಲ್ಲಿ ನಾನು ಭಾಗಿಯಾಗಲೇ ಬೇಕು" ಎಂದು ನಿರ್ಧರಿಸಿ, ಕಾದು, ಮತ ಚಲಾಯಿಸಿ ಹೆಮ್ಮೆಯಿಂದ ಬೀಗುತ್ತಿದ್ದಾರೆ. ಇದೆಲ್ಲವನ್ನು ಟೀವಿಯಲ್ಲಿ ನೋಡಿ ಮತ್ತು ರೇಡಿಯೊದಲ್ಲಿ ಕೇಳಿ ನಾನು ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು ಅನ್ನಿಸುತ್ತಿದೆ.

ಅನೇಕರಿಗೆ ಈಗಾಗಲೆ ತಿಳಿದಿರುವಂತೆ ಈ ಚುನಾವಣೆ ಏಕೆ ವಿಶೇಷವೆಂದರೆ ಬರಾಕ್ ಓಬಾಮ ಈ ಭಾರಿ ಅಭ್ಯರ್ತಿ ಆಗಿರುವುದು. ಐದು ವರುಷದ ಹಿಂದೆ ಇಲಿನಾಯ್ ರಾಜ್ಯದ ಹೊರಗೆ ಈ ವ್ಯಕ್ತಿಯ ಹೆಸರು ಕೇಳಿದ್ದವರೆ ವಿರಳ. ೨೦೦೪ರ ಚುನಾವಣೆಯ ಸಮಯದಲ್ಲಿ ಡೆಮಾಕ್ರೆಟಿಕ್ ಪಕ್ಷದ ಸಮ್ಮೇಳನದಲ್ಲಿ ಕೀ ನೋಟ್ ಭಾಷಣವನ್ನು ನೀಡುವುದರ ಮೂಲಕ ದೇಶದ ರಾಜಕೀಯ ರಂಗಕ್ಕೆ ಧುಮುಕಿದ ಓಬಾಮ ಕೇವಲ ಎರಡೆ ವರುಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸನ್ನಾಹ ನಡೆಸತೊಡಗಿದರೆಂದರೆ ಯಾರಾದರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕಾದ್ದುದೆ! ತನ್ನ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ (ಪ್ರೈಮರಿ) ಈತನ ಎದುರಾಳಿ ಬೇರೆ ಯಾರೂ ಅಲ್ಲ! ಅಪಾರ ಜನಪ್ರೀತಿಗೆ ಪಾತ್ರರಾದ ಬಿಲ್ಲ್ ಕ್ಲಿಂಟನ್ ಪತ್ನಿ ಹಿಲರಿ. ಹಿಲರಿ ಸಹ ಅಪಾರ ಜನ ಮನ್ನಣೆಗೆ ಪಾತ್ರರಾದವರೆ!. ಡೆಮಾಕ್ರೆಟಿಕ್ ಪ್ರಾಥಮಿಕ ಚುನಾವಣೆಗಳು ಪ್ರಾರಂಭವಾಗುವ ಮುನ್ನ ಹಿಲರಿಯ ನೇಮಿಸುವಿಕೆ ಕಟ್ಟಿಟ್ಟ ಬುತ್ತಿ ಎಂದು ಬಹುಪಾಲು ಜನ ನಂಬಿದ್ದರು. ಆದರೆ ಮೊದಲನೆ ರಾಜ್ಯ (ಅಯೊವ) ಚುನಾವಣೆ ಗೆಲ್ಲುವ ಮೂಲಕ ತನ್ನ ಆಗಮನವನ್ನು ಸೂಚಿಸಿದ ಓಬಾಮ ಒಂದಾದ ಮೇಲೆ ಒಂದರಂತೆ ಹೆಚ್ಚಿನ ರಾಜ್ಯ ಚುನಾವಣೆಗಳನ್ನು ಗೆದ್ದು ಅಭ್ಯರ್ತಿ ಆಗುವ ಹಕ್ಕನ್ನು ಗಳಿಸಿದುದಷ್ಟೇ ಒಂದು ಅಭೂತಪೂರ್ವ ಸಾಧನೆ.

ಅಮೇರಿಕ ದೇಶದಂತಹ ಪ್ರಭಲ ದೇಶದಲ್ಲಿ ಬಹುಸಂಖ್ಯಾತರ ಕ್ರೌರ್ಯ, ದ್ವೇಶ ಮತ್ತು ದಬ್ಬಾಳಿಕೆಗೆ ಒಳಗಾದ ಒಂದು ಜನಾಂಗದ ಹೆಮ್ಮೆಯ ಈ ಪುತ್ರ ಬರಾಕ್ ಓಬಾಮ ಇಂದು ಗೆಲುವಿನ ಹೊಸ್ತಿಲಲ್ಲಿದ್ದಾರೆ. ನನಗೆ ತಿಳಿದಿರುವ ಕಪ್ಪು ಜನರೊಡನೆ ಓಬಾಮ ಬಗ್ಗೆ ಮಾತನಾಡುವಾಗ ಅವರ ಸಂತಸ ಹಾಗು ಸಾರ್ಥಕತೆ ನೋಡಲು ಬಹಳ ಸಂತೋಷವಾಗುತ್ತದೆ.

ಇಂದು ಬಹಳ ಸಂಭ್ರಮದಿಂದ ಹಿಂದೆಂದು ಕಾಣದಷ್ಟು ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿರುವ ವಿವಿಧ ವರ್ಣದ ಅಮೇರಿಕನ್ನರ ಮಹದಾಶೆ ಈಡೇರಲಿ ಮತ್ತು ಬರಾಕ್ ಒಬಾಮನಿಗೆ ರಾಜ್ಯ ಲಕ್ಶ್ಮಿ ಒಲಿಯಲಿ ಎಂದು ತುಂಬು ಹೃದಯದ ಹಾರೈಕೆಗಳು.

ಸೂಚನೆ: ಇಲ್ಲಿ ಬಳಸಿರುವ ಚಿತ್ರ ಯಾಹೂ ನ್ಯೂಸ್‍ನಲ್ಲಿ ಪ್ರಕಟವಾದ ಏಪಿ ಸಂಸ್ಥೆಯದು.

Rating
No votes yet

Comments