ಚಿಕ್ಕಂದಿನ ಆಟದ ನೆನಪುಗಳು

ಚಿಕ್ಕಂದಿನ ಆಟದ ನೆನಪುಗಳು

ಇಂದಿನ ಮಕ್ಕಳಿಗೆ" ಅಮ್ಮನ ಆಟ" ಅಂದ್ರೆ ಗೊತ್ತಾ? ಅಮ್ಮನ ಆಟ ಏನು ಕ್ರಿಕೆಟ್ ಬಿಟ್ಟು ಯಾವ ಆಟವೂ ಅನೇಕ ಮಕ್ಕಳಿಗೆ ಗೊತ್ತೇ ಇಲ್ಲ. ನನ್ನ ಬಾಲ್ಯದ ನೆನಪು ಸ್ವಲ್ಪ ಮಾಡಿಕೊಳ್ತೀನಿ. ಶಾಲೆ ಬಿಟ್ಟು ಮನೆಗೆ ಬಂದರೆ ಸಾಕು ನಾವು ಒಂದೈದಾರು ಮಕ್ಕಳು ಒಟ್ಟಿಗೆ ಸೇರಿ ಅಮ್ಮನ ಆಟ ಆಡುತ್ತಿದ್ದೆವು. ಸಾಮನ್ಯವಾಗಿ ನಾನು ಅಪ್ಪ. ಅಮ್ಮನ ಪಾತ್ರಕ್ಕೆ ಮಂಜುಳ. ನಮಗೆ ಮೂರು ಮಕ್ಕಳೂ ಕೂಡ. ನಮ್ಮ ಆಟಕ್ಕೆ ಪರಿಕರ ಅಂದ್ರೆ ನಾಡಹೆಂಚಿನ ಚೂರುಗಳು, ಮಣ್ಣಿನಲ್ಲಿ ಮಾಡಿದ ಸೌದೆ ಒಲೆ[ ಪಾಪ! ಇಂದಿನ ಮಕ್ಕಳು ಸೌದೆ ಒಲೆ, ಬೀಸುಕಲ್ಲು, ಒರಳು, ಮಡಿಕೆ-ಕುಡಿಕೆ, ಇದೆಲ್ಲಾ ನೋಡಿದ್ದಾರೋ ಇಲ್ಲವೋ! ] ನಾನು ಸಾಮಾನು ತಂದರೆ ಮಂಜುಳ ಅಡಿಗೆ ಮಾಡಿ ನಮಗೆಲ್ಲಾ ಬಡಿಸುತ್ತಿದ್ದಳು!! ಅಮ್ಮನ ಆಟದಲ್ಲಿ ದೇವರ ಪೂಜೆ, ಅತಿಥಿ ಸತ್ಕಾರ, ಗಲಾಟೆ ಮಾಡಿದ ಮಕ್ಕಳಿಗೆ ಹೊಡೆತ, ಭಗವದ್ಗೀತಾ ಪಠಣ, ರಾಗಿಬೀಸುವುದು, ಭತ್ತ ಕುಟ್ಟುವುದು, ಎಲ್ಲಾ ಇರುತ್ತಿತ್ತು. ಸಾಮಾನ್ಯವಾಗಿ ನಮ್ಮ ಮನೆಯ ಜಗಲಿಯೇ ನಮ್ಮ ಆಟದ ಜಾಗ,ಅದುವೇ ನಮ್ಮ ಮನೆ, ’ರಾತ್ರಿಯಾಯ್ತು,ಮಕ್ಕಳೆಲ್ಲಾ ಮಲಗಿಕೊಳ್ಳಿ, ಎಂದರೆ ಜಗಲಿಯ ಮೇಲೆ ಮಲಗಿದ್ದೂ ಉಂಟು. ಪಟ್ಟಣಕ್ಕೆ ಹೋಗಿ ಅಂಗಡಿಯಲ್ಲಿ ಸಾಮಾನು ತರಬೇಕೂ ಅಂದ್ರೆ ಗಾಡಿ ಬೇಡ್ವೆ? ಸರಿ ಮಣ್ಣು ಕಲಸಿ ಗಾಡಿ ತಯಾರ್. ಅದಕ್ಕೆ ಚಕ್ರ ಯಾಯುದು ಗೊತ್ತಾ? ಸೋಡಾ ಬಾಟಲ್ ಮುಚ್ಚುಳ ಗಳು.

ಒಮ್ಮೊಮ್ಮೆ ಮಣ್ಣಿನಲ್ಲಿ ಚಕ್ರ ಮಾಡಿ ಅದನ್ನು ಒಣಗಿಸಿ ಗಾಡಿಯ ದೂರಿ[Axle]ಗೆ ಫಿಟ್ ಮಾಡಿ, ಯಾವುದೋ ಎತ್ತಿನಗಾಡಿಯ ಹತ್ತಿರ ಹೋಗಿ ಚಕ್ರದ ಕಡಾಣಿ[ಅಂದ್ರೆ ಚಕ್ರ ದೂರಿಯಿಂದ ಕಳಚಿಕೊಳ್ಳದಂತೆ ತಡೆಯಾಗುವ ಸಾಧನ]ತೆಗೆದು ಒಂದಿಷ್ಟು ಗಾಡಿಎಣ್ಣೆ [ಗಟ್ಟಿಯಾಗಿರುವ ವೇಸ್ಟ್ ಆಯಿಲ್]ತೆಗೆದು ಕೊಂಡು ಅದನ್ನು ನಮ್ಮ ಗಾಡಿಯ ದೂರಿಗೆ ಸವರಿ ಚಕ್ರ ತೊಡಗಿಸಿ, ಅದಕ್ಕೊಂದು ದಾರ ಕಟ್ಟಿಕೊಂಡು ರಸ್ತೆಯಲ್ಲಿ ಉದ್ದಕ್ಕೂ ಎಳೆದುಕೊಂಡು ಹೋಗಿ ಒಂದಿಷ್ಟು ಹಂಚಿಪೊಕ್ರೆ[ಹೆಂಚಿನ ಚೂರು], ಸೀಸೆಯ ಮುಚ್ಚಳ, ಒಂದು ಹಿಡಿ ಮರಳು, ರಸ್ತೆ ಬದಿಯಲ್ಲಿ ಬಿಡುತ್ತಿದ್ದ ಕಾಡು ಟೊಮಟೊ, ಗಣಿಕೆ ಹಣ್ಣು, ಸಿಕ್ಕಿದರೆ ಸೀಬೆ ಕಾಯಿ,ಹುಣಿಸೆ ಕಾಯಿ ಎಲ್ಲಾ ತುಂಬಿಕೊಂಡು ಗಾಡಿ ಎಳೆದುಕೊಂಡು ಬಂದ್ರೆ, ಅದೆಷ್ಟು ಆಯಾಸ ವಾಗಿರುತ್ತಿತ್ತೋ, ಉಸ್ಸಪ್ಪಾ! ಅಂತಾ ಕೂತುಕೊಂಡ್ರೆ, ಮಂಜುಳನ ಕೈಯಲ್ಲಿ ಕಾಫಿ ರಡಿ!!

ಕಾರ್ತೀಕ ಮಾಸ ಬಂದ್ರೆ ಸಾಕು, ಎಲ್ಲರೂ ನಮ್ಮ ತೋಟಕ್ಕೆ ಹೋಗಿ ಮಣ್ಣು ಕಲಸಿ ಗೋಡೆಹಾಕಿ, ಅದರಮೇಲೆ  ಸೋಗೆ ಮುಚ್ಚಿ ದೇವಸ್ಥಾನ ಕಟ್ಟಿ, ಅದರ ಮುಂದೆ ಒಂದು ಚಪ್ಪರ ಬೇಡವೇ? ಅದನ್ನೂ ನಾಲ್ಕು ಕಡ್ಡಿನೆಟ್ಟು, ಅದರ ಮೇಲೆ ಚಪ್ಪರ ಹಾಕುವಂತೆಯೇ ಅಡ್ಡ ಕಡ್ಡಿ ಕಟ್ಟಿ ತೆಂಗಿನ ಸೋಗೆ ಗರಿ ಕಿತ್ತು ,ಅದರಮೇಲೆ ಹಾಕಿ, ನಾಲ್ಕು ಕಂಬ[ಕಡ್ಡಿ]ಗಳಿಗೂ ಯಾವುದಾದರೂ ಗಿಡದ ಎಲೆ ಕಟ್ಟಿ[ಮಾವಿನ ಸೊಪ್ಪು ಎಂದು ಭಾವಿಸಿ] ಗುಡಿ ಒಳಗೆ ಒಂದು ಲಿಂಗ ಕೂಡಿಸಿ, ತುಂಬೆ ಹೂವು ತಂದು ,ಬಾಯಿಗೆ ಬಂದ ಶ್ಲೋಕಗಳನ್ನೆಲ್ಲಾ ಹೇಳುತ್ತಾ  ಈಶ್ವರನಿಗೆ ಬರ್ಜರಿ ಅಭಿಷೇಕ! ನಂತರ ಭಜನೆ! ನೈವೇದ್ಯಕ್ಕೆ ಕೆಲವೊಮ್ಮೆ ಮನೆಯಿಂದ ಅಮ್ಮನ ಹತ್ತಿರ ಕೋಸಂಬ್ರಿ ಮಾಡಿಸಿ ಕೊಂಡು ಬಂದಿದ್ದೂ ಇದೆ, ಸಮಾನ್ಯ ವಾಗಿ ತೆಂಗಿನಕಾಯಿ ಚೂರು ಗ್ಯಾರಂಟಿ.

ಅಮ್ಮನ ಆಟವೇ ಇಷ್ಟೊಂದು ವಿವರಣೆ ತಗೊಂಡು ಬಿಡ್ತಲ್ಲಾ!

ಇನ್ನು ಚಿನ್ನಿ ದಾಂಡು, ಬುಗರಿಆಟ, ಗೋಲಿಆಟ, ಹಾಲ್ಗುಣಿ ಮಣೆ ಆಟ,ಕಲ್ಲಾಟ, ಆನೆ-ಕುರಿ[ ಚೆಸ್ ಗೇನೂ ಕಮ್ಮಿ ಇಲ್ಲದ ಬುದ್ಧಿವಂತಿಕೆ ಆಟ] ಕುಂಟೆಪಿಲ್ಲೆ ,ಲಗೋರಿ, ಮರಕೋತಿ, ರಾಮ್ ಚಂಡ್-ಭೀಮಚೆಂಡ್, ಆಬ್ಬಭ್ಭಾ!! ಒಂದೇ-ಎರಡೇ, ಅದೆಷ್ಟು ಆಟಗಳು!!

ಕುಂಟೆಪಿಲ್ಲೆ ಆಡುವಾಗ ಯಾರದಾದರೂ ಮನೆ ಜಗಲಿಯ ಮೇಲೆ[ ಪಾಪ ಇಂದು ಮನೆಗಳಲ್ಲಿ ಜಗಲಿಯೇ ಮಾಯ! ] ಚೌಕಗಳನ್ನು ಬರೆದು  ಕಣ್ಣಿಗೆ ಬಟ್ಟೆ ಕಟ್ಟಿಕೊಂಡವ ಒಂದು ಚೌಕದಿಂದ ಮ್ತ್ತೊಂದು ಚೌಕಕ್ಕೆ ಹಾರುವಾಗ "ಅಮ್ಮಟೆ?" ಎಂದು ಕೇಳುತ್ತಾನೆ, ಚೌಕದ ಗೆರೆ ತುಳಿಯದೆ ದಾಟಿದ್ದರೆ  ಎದಿರು ಆಟಗಾರ " ಯೆಸ್" ಅನ್ನುತ್ತಾನೆ. ಹೀಗೆಯೇ ಮುಂದಿನ ಚೌಕಗಳನ್ನು ದಾಟುತ್ತಾನೆ. ದಾಟುವಾಗ ಒಂದು ವೇಳೆ ಗೆರೆ ತುಳಿದರೆ ಎದಿರು ಆಟಗಾರ" ನೋ" ಎನ್ನುತ್ತಾನೆ. ಈ ಆಟಕ್ಕೆ ಚೌಕ ದಾಟುವವನಿಗೆ ಎಷ್ಟು ಏಕಾಗ್ರತೆ ಬೇಕು?  ಅಂದಾಜು ಮಾಡುವ ಶಕ್ತಿಎಷ್ಟು ಬೇಕೆಂದರೆ ಮೂರು ನಾಲ್ಕು ಮನೆ ದಾಟುವುದು ಅಷ್ಟು ಸುಲಭದ ಮಾತಲ್ಲ. ಅಂದಹಾಗೆ ಅಮ್ಮಟೆ ಎಂದರೆ ಏನು ಗೊತ್ತಾ? Am I right? ಹೇಗಿದೆ  ಬ್ರಿಟಿಶರ ಕೊಡುಗೆ?

ಇನ್ನೂ ಚಿನ್ನಿ ದಾಂಡು ಆಟದಲ್ಲಂತೂ ಎಲ್ಲವೂ ಇಂಗ್ಳೀಷ್ ಪದಗಳೇ, ನಮ್ಮೂರಿನಲ್ಲಿ ಪ್ರೈಮರಿ ಶಾಲೆ ಮೆಟ್ಟಿಲು ಹತ್ತದವನೂ ಆಟ ಆಡುವುದು ಇಂಗ್ಳೀಷ್ ನಲ್ಲೇ.

ಚಿನ್ನಿದಾಂಡಿನ ಆಟದಲ್ಲಿ ಬಳಸುತ್ತಿದ್ದ ಪದಗಳನ್ನು ನೋಡಿ

ರಡೆ? [Ready?]

ಯೆಸ್ ರಡೆ.[Yes, ready]

ದಬ್ಬಲ್?

ಸಿಂಗಲ್.

ಜಂಪ್?

ನಾಟ್.

ತುರ್ದಾಂಡಲ್ ತುರ್ಚಿಪ್ ನಾಟ್ ಯೆ ವನ್ಸ್ ಕಟ್ ಗೋಲ್[through dhaandal, through it, not a once cut goal?]

ಹೆಂಗೈತೆ ನಮ್ಮ ಹಳ್ಳಿ ಹೈಕ್ಳ ಇಂಗ್ಲೀಸು?

ಅಬ್ಬಭ್ಭಾ!! ಎಷ್ಟು ಆಟ ಮರೆತು ಹೋಗಿವೆಯೋ?

ಕಬ್ಬಡಿ ಆಡುವಾಗ ಕೈಕಾಲೆಲ್ಲ ಕಿತ್ತು ರಕ್ತ ಬಂದರೂ ಮನೆಗೆ ಬಂದು ಗಾಯ ತೊಳೆದು ಸ್ವಲ್ಪ ಅರಿಶಿನ ಮೆಟ್ಟಿದರೆ ಮುಗಿದೇ ಹೋಯ್ತು. ಮಳೆಗಾಲದಲ್ಲಿ ಮಳೆಯಲ್ಲಿ ನೆನೆಯುತ್ತಾ ಬೆಟ್ಟ ಗಾಡಿನಲ್ಲಿ ದನಗಳನ್ನು ಕಾಯುತ್ತಾ, ಬೆಟ್ಟ ಗುಡ್ದಗಳಲ್ಲೇ ಮನೆಯಿಂದ ತೆಗೆದು ಕೊಂಡು ಹೋಗಿದ್ದ ರಾಗಿ ರೊಟ್ಟಿ ತಿನ್ನುತ್ತಾ, ಕೆರೆ ನೀರಲ್ಲಿ ಈಜುತ್ತಾ, ತೋಟದಲ್ಲಿ ಬಿದ್ದ ತೆಂಗಿನಕಾಯಿ ಒಡೆದು ಇಡೀ ಕಾಯಿ ತಿನ್ನುತ್ತಾ, ಸೀಬೆ, ಮಾದಲ,ಮಾವು, ಪಪ್ಪಾಯಿ ಹಣ್ಣು ತಿನ್ನುತ್ತಾ, ಹೊಲಕ್ಕೆ ಹೋದರೆ ರಾಗಿ ತೆನೆ ಕಿತ್ತು ಅದನ್ನು ಹಾಗೆಯೇ ತಿನ್ನುತ್ತಾ, ತಡಗುಣಿ, ಹೆಸರು ಕಾಯಿ ಕಿತ್ತು ತಿನ್ನುತ್ತಾ, ಕಾಡುಟೊಮಟೊ, ಗಣಿಕೆ, ಈಚಲ ಹಣ್ಣು ತಿನ್ನುತ್ತಾ,....ನೆನಪು ಮಾಡಿಕೊಂಡರೆ ಬಾಯಲ್ಲಿ ಈಗಲೂ ನೀರೂರುತ್ತೆ. ರಾಗಿ ಹಿಟ್ಟು ಕಲಸಿ ಅದನ್ನು  ಮುತ್ತುಗದ ಎಲೆಯ ಮೇಲೆ ತಟ್ಟಿ ಅದರ ಮೇಲೊಂದು ಎಲೆ ಅದನ್ನು  ಬಚ್ಚಲು ಮನೆಯ ಒಲೆಯಲ್ಲಿ ಬೆಂಕಿಗೆ ಹಾಕಿ ಬೇಯುಸಿ ತಿಂದ್ರೆ ಅದರ ರುಚಿಯೇ ಬೇರೆ! ರಾಗಿತೆನೆ, ಮುಸುಕಿನ ಜೋಳ ಇವೆಲ್ಲವನ್ನೂ ಬಚ್ಚಲು ಮನೆಯಲ್ಲಿ ಬೆಂಕಿಯಲ್ಲಿ ಸುಟ್ಟು ತಿನ್ನುತ್ತಿದ್ದ ನೆನಪು ...ಈಗ ಬರೀ ನೆನಪು!!! 

Rating
No votes yet

Comments