ಮೆಜೆಸ್ಟಿಕ್ ನಲ್ಲಿ ಒಂದು ರಾತ್ರಿ....

ಮೆಜೆಸ್ಟಿಕ್ ನಲ್ಲಿ ಒಂದು ರಾತ್ರಿ....

ಮೊಬೈಲು ರಿಂಗಾಗ್ತ ಇತ್ತು... ಎದ್ದು ನೋಡಿದ್ರೆ ಯಾವುದೋ ಲ್ಯಾಂಡ್ ಲೈನ್ ನಂಬರ್ರು 080 ಅಲ್ಲ 0839 ಯಾರಪ್ಪ ಇದು..

’ ಹೇಳಿ’

’ ಅಣ್ಣಾ ನಾನು .. ಸುರೇಶ’

’ ಸುರೇಶನ ..’
ಕಣ್ಣು ಮುಚ್ಚೇ ಇತ್ತು ಯಾವ ಸುರೇಶ ಗೊತ್ತಾಗ್ಲಿಲ್ಲ..

’ ಅಣ್ಣಾ ನಾನು ಸುರೆಶ್ ಮೂರು ವರ್ಷದ ಹಿಂದೆ ಮೆಜೆಸ್ಟಿಕ್ ನಲ್ಲಿ ಸಿಕ್ಕಿದ್ದೆ... ಜಯದೇವ ಹಾಸ್ಪಿಟಲ್.. ನನ್ನ ಡ್ರಾಯಿಂಗ್ ಮಾಡಿದ್ರಿ .. ನೆನಪಾಯ್ತಾ...?’

ಟೈಮ್ ನೋಡ್ದೆ ಸಂಜೆ ಐದು ಮೂರು ದಿನಗಳಿಂದ ನಿದ್ದೆ ಇಲ್ದೀರ ವಿವೇಕನಿಗೆ ಅವನ ಆಫೀಸ್ ಗೆ ಬೇಕಾಗಿದ್ದ ಪೈಂಟಿಂಗ್ಸ್ ಮಾಡಿ ಬೆಳಗ್ಗೆ ಒಂಬತ್ತು ಘಂಟೆಗೆ ಬಂದು ಮಲ್ಗಿದ್ದೋನು ಈಗ ಈ ಫೋನ್ ಬಂದಾಗ ಎಚ್ಚರ ಆಗ್ತಾ ಇರೋದು... ನಿದ್ದೆ ಮೂಡ್ ನಲ್ಲಿ ಸರಿಯಾಗಿ ನೆನಪಾಗ್ಲಿಲ್ಲ... ನನ್ನ ನಂಬರ್ಗೆ ಫೋನ್ ಮಾಡಿದ್ದಾನೆ... ಯಾರೋ ಇರ್ಲಿ..

’ಹೇಳಪ್ಪ ಹೇಗಿದ್ದೀಯ.. ಆರಾಮ...’

’ನಾನು ಚನ್ನಾಗಿದ್ದೀನಿ ನೀವು ಹೇಗಿದ್ದೀರ..’

’ನಾನು ಚನ್ನಾಗಿದ್ದೀನಿ.. ಎನಪ್ಪ ಸಮಾಚಾರ ಫೋನ್ ಮಾಡಿದ್ದ’

’ ಏನಿಲ್ಲಾ ಅಣ್ಣಾ ಇವತ್ತು ರಾತ್ರಿ ಟ್ರೈನ್ ಗೆ ನಾನು ಅಪ್ಪಾ ಬೆಂಗ್ಳೂರ್ ಗೆ ಬರ್ತಾ ಇದೀವಿ ಮತ್ತೆ ಸ್ವಲ್ಪ ಸುಸ್ತಾಗ್ತ ಇದೆ... ಅದಕ್ಕೆ ಹಾಸ್ಪಿಟಲ್ ನಲ್ಲಿ ತೋರಿಸ್ಕೊಂಡ್ ಹೋಗೋಣ ಅಂತ... ’

’ಹೌದಾ ಹಾಗಾದ್ರೆ ಇಲ್ಲಿ ಬಂದು ಫೋನ್ ಮಾಡಪ್ಪ ಸಿಗ್ತೀನಿ..’
’ಆ...ಯ್ತ್...’

ಆ ಪದ ಕೇಳಕ್ ಮೊದಲೇ ಫೋನ್ ಕಟ್ ಆಯ್ತು.. ಅಲ್ಲ ನಾನು ಕಟ್ ಮಾಡ್ದೆ.. ಯಾರೋ ಏನೊ ರಾಂಗ್ ನಂಬರ್ರು.. ಫೋನ್ ಪಕ್ಕಕ್ಕೆ ಬಿಸಾಕ್ದೆ. ಕಣ್ ಹಾಗೆ ಮುಚ್ಚಿದ್ದವು..

ಜಯದೇವ ಹಾಸ್ಪಿಟಲ್ಲಾ..?

ಸು..ರೇ...ಶ...?

ಯಾ..ರು..?
ಡ್ರಾ...ಯಿಂ...ಗ್?

ಓ ಆ ಪುಟ್ಟು ಹುಡುಗಾ..? ಗಕ್ಕನೆ ಎದ್ದು ಕೂತೆ.. ಮನಸ್ಸಲ್ಲಿ ಏನೊ ಒಂಥರಾ ಅನ್ಸೋಕ್ಕೆ ಶುರು ಆಯ್ತು.. ನಿದ್ದೆ ಹಾರೋಯ್ತು.. ಈ ಹುಡುಗ ಈಗ ಏನಕ್ಕೆ ಫೋನ್ ಮಾಡ್ದ... ಮತ್ತೆ ಬಿದ್ಕೊಂಡೆ.. ನಿದ್ದೆ ಬರ್ಲಿಲ್ಲ... ಹಾಗೆ ನೆನಪುಗಳು ಮೂರು ವರ್ಷ ಹಿಂದಕ್ಕೆ ಹೋಯ್ತು... ಆಗಿನ್ನು ಈ ರೂಮ್ ಮಾಡಿರ್ಲಿಲ್ಲಾ... ಆಂಟಿ ಮನೆ ಎಂಬ ಯಾತನೆ ಇಲ್ಲದ ನರಕಕ್ಕೆ ಹೋಗೋದಿಕ್ಕೆ ಇಷ್ಟ ಇಲ್ಲದೆ ಹಗಲೊತ್ತು ಗಿರಿನಗರ ಕಾಲೇಜು.... ರಾತ್ರಿ ಮೆಜೆಸ್ಟಿಕ್ ನಲ್ಲಿ ರಾತ್ರಿ ಮೂರ್ ಘಂಟೆವರೆಗೂ ಸ್ಕೆಚಸ್ ಮಾಡೊದು.. ಮೂರ್ ಘಂಟೆಯಿಂದ ಐದು ಘಂಟೆತನಕ ಅಲ್ಲೇ ಪ್ಲಾಟ್ ಫಾರಂ ಮೇಲೆ ನಿದ್ದೆ... ಮತ್ತೆ ಬಸ್ಸಲ್ಲಿ ಸ್ವಲ್ಪ ನಿದ್ದೆ ಮಾಡ್ಕೊಂಡು ಹಾಗೆ ಕಾಲೇಜ್ ಗೆ ಬಂದು ಅಲ್ಲಿ ಆರ್ ಘಂಟೆಯಿಂದ ಎಂಟು ಘಂಟೆವರೆಗೂ ನಿದ್ದೆ ಮಾಡಿ ಕಾಲೇಜ್ ಬಾತ್ ರೂಮಲ್ಲೇ ಸ್ನಾನ ಮಾಡಿ ಹಾಗೆ ಕಾಲೇಜ್ ಶುರ್.. ಮತ್ತೆ ಸಂಜೆ ಮೆಝೆಸ್ಟಿಕ್ ಸೇರ್ದ್ರೆ ಸ್ಕೆಚ್ ಮಾಡ್ಕೊಂಡು ಬರ್ತಾ ಇದ್ದಿದ್ದು ಮರು ದಿನ ಬೆಳಗ್ಗೆ... ಇಷ್ಟೇ ನನ್ ಟೈಮ್ ಟೇಬಲ್ಲು..

ಆ ದಿನಗಳ ಜನ ಜಂಗುಳಿಯ ನೀರವ ಗದ್ದಲದ ನನ್ನ ಏಕಾಂತ ರಾತ್ರಿಗಳ ಓಂದು ದಿನ ಸಮಯ ಸುಮಾರು ಎರೆಡು ಘಂಟೆ ಎಲ್ಲರೂ ತಮ್ಮ ಸುಖದ ಸುಪ್ಪತ್ತಿಗೆ ಬೇಕಾದ ನ್ಯೂಸ್ ಪೇಪರ್ ಗಳನ್ನ.. ಇನ್ನಿತರ ಹೊದಿಕೆಗಳನ್ನ ರೆಡಿ ಮಾಡ್ಕೊಂಡು ಕನಸಿನ ಪಯಣಕ್ಕೆ ಹೊರಡಲು ಅನುವಾಗುತ್ತಿದ್ದರು...

ಅಲ್ಲಿದ್ದ ಜನಗಳ್ನ ಸ್ಕೆಚ್ ಮಾಡ್ತಾ ಇದ್ದಗ ಒಬ್ಬ ನಡುವಯಸ್ಕ ವ್ಯಕ್ತಿ ಬ್ಯಾಗಿಂದ ಬೆಡ್ಶೀಟು ತೆಗೆದು ಕೆಳ್ಗೆ ಹಾಸಿ ತುಂಬಾ ಸುಸ್ತಾಗಿ ಶಾಲು ಹೊದ್ಕೋಂಡು ಕೂತಿದ್ದ ಸುಮಾರು ಐದು ವರ್ಷವಿದ್ದ ಮಗು ನನ್ನನ್ನೇ ನೋಡ್ತಾ ಇತ್ತು... ನನ್ಗೂ ಅವ್ರಿಗೂ ತುಂಬಾ ದೂರಾನು ಇರ್ಲಿಲ್ಲ.. ನಾನು ಗೀಚ್ತಾ ಇರೋದು ಅವ್ರಿಗೆ ಕಾಣಿಸ್ತಾನೆ ಇತ್ತು.. ಆ ತಂದೆ ಎಷ್ಟೇ ಒತ್ತಾಯ ಮಾಡಿದ್ರೂ ಅದರಲ್ಲೂ ತುಂಬಾ ಸುಸ್ತಾಗಿರೋಥರಾ ಕಾಣಿಸ್ತಾ ಇದ್ದ್ರೂ ಅದು ಮಲಗದೆ ನಾನು ಗೀಚ್ತಾ ಇರೋದನ್ನೆ ನೋಡ್ತಾ ಇತ್ತು.. ಅವ್ರಪ್ಪನ್ನ ಕರೆದು ಸುಸ್ತಾಗಿ ಏನೊ ಕೇಳ್ತು.. ಆ ತಂದೆ ಮಗೂಗೆ ಅದು ಹೊದ್ದಿದ್ದ ಶಾಲು ತೆಗೆದು ಇನ್ನೂ ಸ್ವಲ್ಪ ಬೆಚ್ಚಗೆ ಸುತ್ತಿ ಎತ್ಕೊಂಡು ನಿದಾನವಾಗಿ ನನ್ಹತ್ರ ಬಂದ್ರು..
’ಯಾರಪ್ಪಾ ನೀನು.. ಏನು ಮಾಡ್ತ ಇದೀಯ..’

’ ಡ್ರಾಯಿಂಗ್ ಪ್ರಾಕ್ಟೀಸ್ ಮಾಡ್ತಾ ಇದೀನಿ...”

’ಇಷ್ಟೊತ್ತಿನಲ್ಲಾ..?’

’ನಾನು ಕಾಲೇಜ್ ಸ್ಟೂಡೆಂಟ್.. ನಾನು ಡೈಲಿ ಇಲ್ಲಿ ಬಂದು ಸ್ಕೆಚಿಂಗ್ ಪ್ರಾಕ್ಟೀಸ್ ಮಾಡ್ತಾ ಇರ್ತೀನಿ.’

’ ಹೌದಾ...! ನಾವು ನೋಡ್ಬಹುದಾ.ನನ್ ಮಗಾ ನೋಡ್ಬೇಕಂತೆ...’

’ತಗೊಳ್ಳಿ.. ಇಲ್ಲೇ ಕುಂತ್ ನೋಡಿ.. ’

ನನ್ ಸ್ಕೆಚಿಂಗ್ ಪೇಪರ್ಸ್ ಅವ್ರ ಕೈಗೆ ಕೊಟ್ಟೆ.. ಆ ಮಗುವಿನ ಬಳಲಿದ ಕಣ್ಣಲ್ಲಿ ಒಂಥರಾ ಮಿಂಚಿದಂತಾಯಿತು.... ಅವ್ರು ನೋಡ್ತಾ ಇದ್ದಾಗ ನನಗೂ ಟೈಮ್ ಪಾಸ್ ಆಗ್ ಬೇಕಲ್ಲಾ.. ನಾನೆ ಶುರು ಮಾಡ್ದೆ..

’ಎಲ್ಲಿಯವರು ನೀವು...’

’ ಹೋಸ್ಪೇಟೆ ಹತ್ರ ಕಮಲಾಪುರ...’

’ ಇಲ್ಲಿ ಏನು ಬಂದಿದ್ದು...?’

’ ಮಗೂಗು ಮೈ ಹುಷಾರು ಇರ್ಲಿಲ್ಲಾ.. ಯಾವಾಗ್ಲು ತುಂಬಾ ಸುಸ್ತಾಗಿರ್ತಾನೆ... ಅಲ್ಲಿ ಇರೋ ಎಲ್ಲ ಹಾಸ್ಪಿಟಲ್ಲು ತೋರಿಸ್ ಬಿಟ್ವಿ.. ಏನೂ ಪ್ರಯೋಜನ ಆಗ್ಲಿಲ್ಲ... ಇವತ್ತು ಬೆಳಗ್ಗೆ ಏಳು ಘಂಟೆಗೆ ಎದ್ದೋನು ಮನೆ ಹೊರಗಡೆ ಬಂದ ತಕ್ಷಣ ಬಿದ್ಬುಟ್ಟಾ.. ಸೀದಾ ಹೋಸ್ಪೇಟೆಗೆ ಕರ್ಕೊಂಡು ಹೋಗಿ ತೋರಿಸ್ದ್ವಿ ಅಲ್ಲಿ ಡಾಕ್ಟ್ರು.. ಮಗೂಗೆ ಹಾರ್ಟು ಪ್ರಾಬ್ಲಂ ಇದೆ.. ಬೆಂಗ್ಳೂರ್ ಗೆ ಕರ್ಖೊಂಡು ಹೋಗಿ ಅಲ್ಲಿ ಜಯದೇವ ಹಾಸ್ಪಿಟಲ್ ನಲ್ಲಿ ಚನ್ನಗಿ ನೋಡ್ತಾರೆ.. ಅಂತ ಹೇಳಿದ್ರು.. ಅದಕ್ಕೆ ಸೀದಾ ಬಸ್ಸಲ್ಲಿ ಬಂದ್ರೆ ಬೇಗ ಬರಬಹುದು ಅಂತ ಬಂದ್ರೆ ಇಲ್ಲಿಗೆ ಬರೋ ಹೊತ್ತಿಗೆ ಇಷ್ಟು ಹೋತ್ತಾಯಿತು... ಇಷ್ಟೊತ್ತಿನಲ್ಲಿ ಎಲ್ಲಿಗೆ ಹೋಗೂದು ಅಂತೇಳಿ ಇಲ್ಲೇ ಇದ್ಬಿಟ್ವಿ..’

ಅಪ್ಪಾ ಇಷ್ಟೆಲ್ಲ ಹೇಳ್ತಾ ಇದ್ರೂ ಮಗು ಮಾತ್ರ ನನ್ನ ಸ್ಕೆಚ್ ಗಳನ್ನೆ ನೋಡ್ತಾ ಇತ್ತು...

”ಅಣ್ಣಾ ನನ್ಗೊಂದು ಕೊಡ್ತೀರ”...

ಸಣ್ಣ ಪೀಚಲು ಧ್ವನಿಯಲ್ಲಿ... ಆಯಾಸದಿಂದ ಕೂಡಿದ ಕಂಗಳಲ್ಲಿ ಆಸೆಯಿಂದ ಕೇಳಿತು...

’ಯಾವುದೋ ಯಾಕೆ ..? ನಿಂದೇ ಒಂದು ಮಾಡ್ಕೋಡ್ತೀನಿ ತಗೋ...’

ಅಂತೇಳೀ ಆ ಮಗುವೀಂದೇ ಪೋಟ್ರೇಟ್ ಮಾಡ್ಬಿಟ್ಟು ಕೊಟ್ಟೆ... ಆ ಮಗುವಿನ ಕಣ್ಣಲ್ಲಿ ಕಂಡ ಹರ್ಷ.. ಆಹ್.. ಐದು ವರ್ಷದ ಆ ಪುಟ್ಟ ಕಂಗಳಲ್ಲಿ ವ್ಯಕ್ತವಾದ ಆ ಕಾಂತಿ... ನನ್ನ ಸ್ಮ್ರುತಿ ಯಿಂದ ಈಗಲೂ ಅಳಿಸಿಲ್ಲಾ.

.’ ಅದರ ಮೇಲೆ ನಿಮ್ಮ ಹೆಸರನ್ನು ಬರೆಯಿರಿ.. ಹಾಗೆ ನನ್ನ ಮಗನ ಹೆಸರನ್ನು ಬರೆಯಿರಿ.”

ಅವರ ಅಪ್ಪ ಕೇಳಿಕೊಂಡರು... ನಾನು ನನ್ನ ಹೆಸರನ್ನು ಮತ್ತು ಆಗತಾನೆ ತಗೋಂಡಿದ್ದ ನನ್ನ ಹೊಸ ಮೊಬೈಲ್ ನಂಬರ್ ಬರೆದು..
’ನಿನ್ನ ಹೆಸರೇನಪ್ಪಾ’

ಮಗೂ ನನ್ನನ್ನೇ ನೋಡಿತು..

’ನಿನ್ನ ಹೆಸರೇಳೊ..’

” ಸೂ....ರೇ..ಸ.”

ಅದೇ ಸುರೇಶ ಈಗ ನೆನಪು ಮಾಡ್ಕೊಂಡು ಫೋನ್ ಮಾಡಿದ್ದಾನೆ. ನಾಳೆ ಹೋಗಿ ಮಾತಾಡಿಸ್ಕೋಂಡು ಬರಬೇಕು...

Rating
No votes yet

Comments