ನಾಡೆಲ್ಲ ಹುಡುಕಿದರು ಈಡಾರ ಕಾಣೆ - ಕನಕದಾಸರ ಮೇಲೊಂದು ಪದ
ನವೆಂಬರ್ ೧೫ರಂದು ಕನಕದಾಸರ ಜಯಂತಿ ಎನ್ನುವ ವರದಿ ಓದಿದೆ. ಕನಕದಾಸರನ್ನು ನೆನೆಯಲು ಯಾವ ದಿನವಾದರೂ ಒಳ್ಳೆಯದೇ, ಆದರೆ ಇವತ್ತು ಅವರ ಜಯಂತಿಯಾಗಿದ್ದರೆ ಇನ್ನೂ ಒಳ್ಳೆಯದೇ ಅಲ್ಲವೇ ಎನ್ನಿಸಿತು.
ದಾಸಸಾಹಿತ್ಯವನ್ನೇ ಆಗಲಿ, ವಚನಸಾಹಿತ್ಯವನ್ನೇ ಆಗಲಿ ಬರೀ ಭಕ್ತಿಮಾರ್ಗದ ಮೆಟ್ಟಿಲೆಂದೆಣಿಸದೇ, ಅವರ ಕಾಲಕ್ಕೊಂದು ಕನ್ನಡಿ ಎಂದು ನೋಡುವುದೇ ಒಳ್ಳೆಯದು. ಎಷ್ಟೋ ವಿಷಯಗಳನ್ನು ನಾವು ಅಲ್ಲಿಂದ ತಿಳಿಯಬಹುದಾಗಿದೆ. ಈ ಬಗ್ಗೆ ಹಿಂದೆಯೂ ನಾನು ಬರೆದಿದ್ದೆ. ಈಗ ಕನಕದಾಸರ ಕಥೆ ಎಲ್ಲರಿಗೂ ಗೊತ್ತಿರುವುದೇ. ಕನಕನ ಕಿಂಡಿಯ ಕಥೆ, ’ನಾನು ಹೋದರೆ ಹೋದೇನು’
ಪ್ರಸಂಗಗಳೂ ಜನಜನಿತವಾಗಿವೆ. ಹಾಗೇ, ಬಾಳೇಹಣ್ಣಿನ ಪ್ರಸಂಗವೂ ಕೂಡ.
ಆದರೆ ಪುರಂದರದಾಸರು ಈ ಪ್ರಸಂಗದ ಬಗ್ಗೆ ಬರೆದಿರುವ ದೇವರನಾಮವೊಂದಿದೆ ಎಂದು ನಿಮಗೆ ಗೊತ್ತೇ?
ಗೊತ್ತಿಲ್ಲದಿದ್ದರೆ, ಓದಿ- ಪುರಂದರ ದಾಸರು ಈ ಬಾಳೇಹಣ್ಣಿನ ಪ್ರಸಂಗವನ್ನು ವಿವರಿಸುತ್ತಾ, ಕನಕದಾಸರನ್ನು ಹೊಗಳಿ ಹಾಡಿರುವ ಈ ರಚನೆ:
ಪಲ್ಲವಿ:
ಕನಕದಾಸನ ಮೇಲೆ ದಯೆ ಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬುವರೊ ||
ಚರಣಗಳು:
ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು
ಧೂರ್ತರಾಗಿದ್ದ ವಿದ್ವಾಂಸರೆಲ್ಲ
ಸಾರ್ಥಕವಾ ಇದು ಇವರ ಸನ್ಯಾಸಿತನವೆಲ್ಲ
ಪೂರ್ತ್ಯಾಗಲೆಂದೆನಲು ಯತಿಯು ನಗುತ್ತಿದ್ದನು
ಮರುದಿನ ಅವರವರ ಪರೀಕ್ಷಿಸಬೇಕೆಂದು
ಕರೆದು ವಿದ್ವಾಂಸರ ಕನಕ ಸಹಿತ
ಕರದಲ್ಲಿ ಕದಳಿಯ ಫಲಗಳನೆ ಕೊಟ್ಟು
ಯಾರಿರದ ಸ್ಥಳದಲಿ ಮೆದ್ದು ಬನ್ನಿರೆನಲು
ಊರ ಹೊರಗೆ ಹೋಗಿ ಬೇರೆ ಬೇರೆ ಕುಳಿತು
ತೋರದಲೆ ಎಲ್ಲರು ಮೆದ್ದು ಬರಲು
ತೋರಲಿಲ್ಲವು ಎನಗೆ ಏಕಾಂತ ಸ್ಥಳವೆನುತ
ಸಾರಿ ಕದಳೀಫಲವ ತಂದು ಮುಂದಿಟ್ಟ
ಡಿಂಭದೊಳು ಶಬ್ದ ವಾಗಾದಿ ಶ್ರೋತ್ರಗಳಲ್ಲಿ
ಇಂಬಾಗಿ ತತ್ವೇಶರೆಲ್ಲ ತುಂಬಿಹರೊ
ತಿಂಬುವುದು ಹೇಗೆನುತ ವ್ಯಾಸರಾಯರ ಕೇಳೆ
ಸಂಭ್ರಮದಲವರೆಲ್ಲ ಕುಳಿತು ಕೇಳಿದರು
ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆ
ಕೋಣನಿದಿರಿಗೆ ಕಿನ್ನರಿಯ ಮೀಟಿದಂತೆ
ವೇಣು ಧ್ವನಿ ಬಧಿರನ ಬಳಿ ಮಾಡಿದಂತೆ
ಕಣ್ಣು ಕಾಣದವನಿಗೆ ಕನ್ನಡಿಯ ತೋರಿದಂತೆ
ನೋಡಿದಿರ ಈ ಕನಕನಾಡುವಾ ಮಾತುಗಳ
ಮೂಢ ಜನರರಿಯಬಲ್ಲಿರ ಮಹಿಮೆಯ
ನಾಡಾಡಿಯಂತೆಯೇ ಮಾಡಿ ಬಿಟ್ಟರು ಇವಗೆ
ನಾಡೆಲ್ಲ ಹುಡುಕಿದರು ಈಡಾರ ಕಾಣೆ
ಕರದಲ್ಲಿ ಮೂರ್ತಿಯನು ಪಿಡಿದು ಕೇಳುತಿರಲು
ಅರಿಯದ ಜ್ಞಾನದಲಿ ಪೇಳುತಿರಲು
ದ್ವಾರದಿ ಕನಕನು ಬಂದು ವಾಸುದೇವನ ರೂಪ
ಪರಬೊಮ್ಮ ಪುರಂದರ ವಿಟ್ಠಲನೆಂದು ಪೇಳಿದನು
ಕನಕದಾಸರಂತಹವರನ್ನು ’ನಾಡೆಲ್ಲ ಹುಡುಕಿದರು ಈಡಾರ ಕಾಣೆ’ ಎಂದು ಪುರಂದರದಾಸರೇ ಹೇಳಿದ ಮೇಲೆ, ನಾನು ಹೇಳುವುದಿನ್ನೇನೂ ಉಳಿದಿಲ್ಲ! ಅಲ್ಲವೇ?
-ಹಂಸಾನಂದಿ
Comments
ಉ: ನಾಡೆಲ್ಲ ಹುಡುಕಿದರು ಈಡಾರ ಕಾಣೆ - ಕನಕದಾಸರ ಮೇಲೊಂದು ಪದ
ಉ: ನಾಡೆಲ್ಲ ಹುಡುಕಿದರು ಈಡಾರ ಕಾಣೆ - ಕನಕದಾಸರ ಮೇಲೊಂದು ಪದ
ಉ: ನಾಡೆಲ್ಲ ಹುಡುಕಿದರು ಈಡಾರ ಕಾಣೆ - ಕನಕದಾಸರ ಮೇಲೊಂದು ಪದ