ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ

ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ

ಅತಿ ಹೆಚ್ಚು ಮಾರಾಟವಿರುವ ಪತ್ರಿಕೆಯಾದ ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ ಕೆಲವು ದಿನಗಳಿಂದ ಕಾಣುತ್ತಿಲ್ಲ. ಇವತ್ತು ಅನೇಕ ದಿನಗಳ ನಂತರ ಆ ಕೊಂಡಿ ಸರಿಯಾಗಿ ಕೆಲಸ ಮಾಡಿ ಅಂತರ್ಜಾಲ ಪುಟ ಸರಿಯಾಗಿ ಕಾಣಿಸಿತು, ಆದರೆ ಪುಟಗಳ ಮೇಲೆ ಕ್ಲಿಕ್ಕಿಸಿದರೆ ಮೇಲೆ ಬರುವ ಪುಟಗಳಲ್ಲಿ ಏನು ಕಾಣ್ತಾ ಇಲ್ಲ. ಹಿಂದಿನ ಕೆಲವು ದಿನಗಳ ಪತ್ರಿಕೆಗಳು ಸಹ ಇಲ್ಲ. ಪುಟಗಳು ಸರಿಯಾಗಿ ಕಾಣಲಿಲ್ಲ ಅಂದರೆ ಯಾವ ದಿನದ ಪತ್ರಿಕೆಗಳು ಇವೆಯೋ ಇಲ್ಲವೋ ಎಂಬುದು ಮುಖ್ಯವಾಗುವದಿಲ್ಲ ಆದ್ರೆ ಈ ಅಂತರ್ಜಾಲ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲವೇ ಎಂಬ ಪ್ರಶ್ನೆಯನ್ನು ಮಾತ್ರ ತರುತ್ತದೆ. ಈ ವಿಷಯದ ಬಗ್ಗೆ ನಾನು ವಿಶ್ವೇಶ್ವರ ಭಟ್ಟರಿಗೆ ವಿ-ಅಂಚೆಯನ್ನು ಕೂಡ ಬರೆದಿದ್ದೆ, ಆದರೂ ಯಾವುದೆ ಕ್ರಮ ಕೈಗೊಂಡ ಹಾಗೇ ಕಾಣುವದಿಲ್ಲ. ಕರ್ನಾಟಕದಿಂದ ಹೊರಗಿರುವ ಕನ್ನಡಿಗರಿಗೆ ಅಂತರ್ಜಾಲದ ಆವೃತ್ತಿ ಕರ್ನಾಟಕದ ಹೆಚ್ಚಿನ ಪ್ರಸಾರವಿರುವ ಕನ್ನಡ ದಿನಪತ್ರಿಕೆಯನ್ನು ಓದಲು ಇರುವ ಒಂದೇ ಸಾಧನ, ಪ್ರತಿದಿನದ ಮುದ್ರಣಕ್ಕೆ ಎಷ್ಟು ಕಾಳಜಿ ಇರುತ್ತದೋ ಅಂಥದೇ ಕಾಳಜಿ ಅಂತರ್ಜಾಲ ತಾಣ ನಿರ್ವಹಣೆಯಲ್ಲಿಯೂ ತೋರಿದರೆ ಹೊರನಾಡ ಕನ್ನಡಿಗರೂ ಕೂಡ ವಿ.ಕದ ಸುದ್ದಿಯನ್ನು ಮತ್ತು ಅದರ ವಿಶೇಷ ಜನಪ್ರಿಯ ಅಂಕಣಗಳ ಸವಿಯನ್ನು ಸವಿಯಬಹುದು.

ನಮ್ಮ ಪತ್ರಿಕೆಗಳು ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಹಳೇ ಮೈಸೂರು ಪ್ರದೇಶಗಳಲ್ಲಿರುವ ಅಭಿವೃದ್ಢಿ ಕೆಲಸಗಳ ಬಗ್ಗೆ ಸರಕಾರದ ಬಗ್ಗೆ ಬರೆಯುತ್ತವೆ. ಆದರೆ ತಾವು ಅಂತರ್ಜಾಲದಲ್ಲಿ ಕೊಡುವದು ಬೆಂಗಳೂರು ಆವೃತ್ತಿಯನ್ನು ಮಾತ್ರ, ಇವರು ಮಾಡುತ್ತಿರುವದು ಆಚಾರ ಹೇಳಿ ಬದನೆಕಾಯಿ ತಿಂದಂತಹ ಕೆಲ್ಸವಲ್ಲವೇ?
ಇದು ವಿಜಯ ಕರ್ನಾಟಕಕ್ಕೆ ಮಾತ್ರ ಸಿಮೀತವಾಗಿಲ್ಲ ಅಂತರ್ಜಾಲದಲ್ಲಿರುವ ಬೇರೆ ಪತ್ರಿಕೆಗಳಿಗೂ ಅನ್ವಯವಾಗುತ್ತದೆ, ಇದಕ್ಕೆ ಅಪವಾದ ಕನ್ನಡಪ್ರಭ ಪತ್ರಿಕೆ, ಇದರ ಮುಖಪುಟದಲ್ಲೇ ಬೇರೆ ಬೇರೆ ಪ್ರದೇಶಗಳ ಸುದ್ದಿ ಕೊಂಡಿಗಳು ಕಾಣಬರುತ್ತವೆ ಮತ್ತು ಜಿಲ್ಲಾವಾರು ಸುದ್ದಿಯೂ ಕೂಡ ಸಿಗುತ್ತದೆ.  ಇದೇ ರೀತಿ ಬೇರೆ ಪತ್ರಿಕೆಗಳೂ ಸಹ ಬೇರೆ ಆವೃತ್ತಿಗಳನ್ನು ಸಹ ಪ್ರಕಟಿಸಲಿ, ಇದರೊಂದಿಗೆ ತಾವು ಬರೀ ಆಚಾರ ಹೇಳುವವರಲ್ಲ ಬದನೆಕಾಯಿಯನ್ನು ತಿನ್ನುವದಿಲ್ಲ ಎಂದು ತೋರಿಸಲಿ.

Rating
No votes yet

Comments