ಕರ್ಣ ರಸಾಯನ

ಕರ್ಣ ರಸಾಯನ

ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ನಾನು ನಾಟಕವೊಂದನ್ನು ಬರೆದು ಆಡಿಸಿದ್ದೆ. ಇದೊಂದು ತರಹದ ಹೊಸ ಪ್ರಯೋಗವಾಗಿತ್ತು. ಕರ್ನಾಟಕ ಎರಡು ಕಲೆಗಳಾದ ಗಮಕ ವಾಚನ ಮತ್ತು ಯಕ್ಷಗಾನ ಇವೆರಡೂ ಬೆರೆಸಿ ಮಾಡಿಸಿದ ನೃತ್ಯನಾಟಕ ಇದು.

ಕಾವ್ಯ ವಾಚನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ವಾಲ್ಮೀಕಿ ಬರೆದ ರಾಮಾಯಣವನ್ನು ರಾಮನ ಮುಂದೇ ಲವ-ಕುಶರು ವಾಚಿಸಿದರು ಎಂದು ಉತ್ತರಕಾಂಡದಲ್ಲಿ ಬರುತ್ತದೆ. ನೂರಾರು ವರ್ಷಗಳಿಂದ ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಗದುಗಿನ ಭಾರತ, ಜೈಮಿನಿ ಭಾರತವನ್ನು ವಾಚನ ಮಾಡುವ ಪದ್ಧತಿ ನಡೆದುಕೊಂಡು ಬಂದಿತ್ತು.ಇನ್ನು ಯಕ್ಷಗಾನವೂ ಕೂಡ ಕರ್ನಾಟಕಕ್ಕೇ ವಿಶಿಷ್ಟವಾದೊಂದು ಕಲಾಪ್ರಕಾರ ಎಂದು ಹೇಳುವ ಅಗತ್ಯವೇ ಇಲ್ಲ.

ಕುಮಾರವ್ಯಾಸನ ಬಗ್ಗೆ ಒಂದು ಕಾಲ್ಪನಿಕ ಪ್ರಸಂಗವನ್ನೂ, ಮತ್ತು ಅವನ ಗದುಗಿನ ಭಾರತದಿಂದ ಆಯ್ದ ಕೆಲವು ಭಾಗಗಳನ್ನೂ ಆಯ್ದು ಬರೆದ ನಾಟಕವಿದು. ಇಲ್ಲಿ ಬರುವ ಪದ್ಯಗಳೆಲ್ಲಾ ನಾರಣಪ್ಪನದ್ದೇ. ಅಲ್ಲದೆ, ಕೃಷ್ಣ, ಕರ್ಣ, ಅರ್ಜುನರ ಸಂಭಾಷಣೆಯಲ್ಲಿ ಬರುವ ಹಲವಾರು ಸಾಲುಗಳೂ ಕೂಡ ಕುಮಾರವ್ಯಾಸನ ಪದ್ಯಗಳ ರೂಪಾಂತರಗಳೇ ಆಗಿವೆ.

ಈ ನಾಟಕದ ರಂಗ ಪ್ರಯೋಗದಲ್ಲಿ ಸಂದರ್ಭಕ್ಕೆ ತಕ್ಕ ಕೆಲವು ಯಕ್ಷಗಾನದ ಹಾಡುಗಳನ್ನು ಕೂಡಾ ಬಳಸಲಾಗಿತ್ತು.

ಇನ್ನು ಓದಿ - ಕರ್ಣ ರಸಾಯನ; ಏನೆನ್ನಿಸಿತೆಂದು, ಸಾಧ್ಯವಾದರೆ ಒಂದೆರಡು ಸಾಲು ಬರೆಯಿರಿ :)

 

---------------------------------------------------------------------------------------------------------------------------------------------

 

ಕರ್ಣ ರಸಾಯನ

ಪಾತ್ರವರ್ಗ (ರಂಗದ ಮೇಲೆ ಬರುವ ಕ್ರಮದಲ್ಲಿ)

ಲಕ್ಷ್ಮೀ                   
ನಾರಣಪ್ಪ                 
ಪಾರುಪತ್ತೇದಾರ          
ಗ್ರಾಮಸ್ಥರು (೮-೧೦ ಜನ)  
ನರ್ತಕಿಯರು                   
ದೂರ್ವಾಸ               
ಕುಂತಿ                     
ಅತಿರಥ                
ಆಕೆ                      
ಆತ                     
ಕರ್ಣ                     
ಕೃಷ್ಣ                     
ಅತ್ತೆ                    
ಸೊಸೆ                    
ನೆರೆಯಾಕೆ                 

ಅರ್ಜುನ                  

ಊರ ಗಾಮುಂಡ   

ಹಿಮ್ಮೇಳದಲ್ಲಿ, ಇಬ್ಬರು ಗಮಕಿಗಳ ಕೊರಲುಗಳು (ಒಂದು ಗಂಡು, ಒಂದು ಹೆಣ್ಣು ಕಂಠವಾದರೆ ಹೊಂದುವುದು) . ವಾದ್ಯಗಳ ಸಹಕಾರವಿದ್ದರೆ ಮತ್ತೂ ಸೊಗಸುವುದು.   
*********************************************************************************************************************************************

ದೃಶ್ಯ-೧

( ಕೋಳಿವಾಡ ಗ್ರಾಮದಲ್ಲಿ ಒಂದು ಮುಂಜಾವು. ತೆರೆ ಸರಿಯುವ ಮೊದಲೇ ಹಕ್ಕಿಗಳ
ಚಿಲಿಮಿಲಿ. ಜೊತೆಯಲ್ಲೇ ಮುಂಜಾವಿಗೆ ಸೂಕ್ತವಾದ ವಾದ್ಯ ಸಂಗೀತ ಸಣ್ಣಗೆ
ಕೇಳಿಬರುತ್ತಿದೆ. ಅದರ ಜೊತೆಗೇ ಗುಡಿಯಲ್ಲಿ ಯಾರೋ ಭಕ್ತರು ಹಾಡುತ್ತಿರುವ ಸುಪ್ರಭಾತವೂ
ಮೆಲ್ಲಗೆ ಕೇಳಿಬರುತ್ತಿರುವಂತೆ ತೆರೆ ನಿಧಾನವಾಗಿ ತೆರೆಯುತ್ತದೆ. ರಂಗದಲ್ಲಿ
ಮಬ್ಬುಗತ್ತಲು ಇದ್ದು ಬೆಳಗಿನ ಜಾವದ ವಾತಾವರಣವನ್ನು ತರಬೇಕು. ನಿಧಾನವಾಗಿ ಬೆಳಕು
ಹೆಚ್ಚಿಸುತ್ತಾ ಹೋಗಬೇಕು. ಆದರೆ ಇನ್ನೂ ಪೂರ್ಣ ಬೆಳಕಾಗಿರಬಾರದು. ರಂಗ ನಾರಣಪ್ಪನ ಮನೆಯ
ಜಗುಲಿಗೆ ತೆರೆದುಕೊಳ್ಳುತ್ತದೆ. ಜಗುಲಿಯ ಒಂದು ಬದಿಯ ಮೇಲೆ ನಾರಣಪ್ಪನ ಮಲಗಿರುವ ಆಕೃತಿ
ಗೋಚರವಾಗಬೇಕು. ಅಷ್ಟರಲ್ಲಿ ಒಳಗಿನಿಂದ ಲಕ್ಷ್ಮಿ ರಂಗದ ನಡುವೆ ಇರುವ ಬಾಗಿಲಿನಿಂದ
ಬಂದು, ರಂಗದ ಮುಂದೆ-ಎಡಮೂಲೆಗೆ (ಮನೆಯ ಮುಂಭಾಗ) ಬಂದು  "ಏಳು ನಾರಾಯಣಾ ಏಳು
ಲಕ್ಷ್ಮೀರಮಣ ಏಳು ಗಿರಿಯೊಡೆಯ ವೇಂಕಟೇಶ - ಏಳಯ್ಯ ಬೆಳಗಾಯಿತು" ಎಂಬ ದೇವರನಾಮವನ್ನು
ಮೆದುವಾಗಿ ಹಾಡುತ್ತಾ ರಂಗೋಲಿ ಹಾಕಿ ಒಳಗೆ ಹೋಗುವಳು. ಅಲ್ಲೇ ಒಂದೆಡೆ ಒಂದು ತುಳಸೀ
ಕಟ್ಟೆಯೂ ಇರಬೇಕು. ಬೆಳಕು ನಿಧಾನವಾಗಿ ಹೆಚ್ಚುತ್ತಿರುವಂತೆ ಮತ್ತೆ ಹೊರಬರುವಳು.
ಕೈಯಲ್ಲಿ ಒಂದು ಸಣ್ಣ ಕಲಶದೊಡನೆ ಬಂದು ತುಳಸೀಕಟ್ಟೆಗೆ ಮೂರುಬಾರಿ ಪ್ರದಕ್ಷಿಣೆ
ಹಾಕುತ್ತಾ "ಎಲ್ಲಾ ವಸ್ತುಗಳಿದ್ದೂ ತುಳಸಿ ಇಲ್ಲದ ಪೂಜೆ ಒಲ್ಲನೋ ಹರಿ ಕೊಳ್ಳನೋ" ಎಂಬ
ಹಾಡನ್ನು ಗುನುಗುತ್ತಾ, ತುಳಸಿಗೆ ನೀರು ಹಾಕಿ ಹೋಗುತ್ತಿರುವಷ್ಟರಲ್ಲಿ ರಂಗದ ಮೇಲೆ
ಪೂರ್ಣ ಬೆಳಕು ) 

ನಾರಣಪ್ಪ: (ಬೆಚ್ಚಿ ಏಳುತ್ತ) ಲಕ್ಷ್ಮೀ !

ಲಕ್ಷ್ಮೀ : (ಹತ್ತಿರ ಓಡಿ) ಏನಾಯ್ತು ? ಏಕೆ ಹೀಗೆ ಬೆಚ್ಚಿ ಏಳುತ್ತಿದ್ದೀರಾ ? ಕೆಟ್ಟ ಕನಸೇನಾದರೂ ಕಂಡಿರಾ?

ನಾರಣಪ್ಪ:
ಕನಸು .. (ಭಾವುಕನಾಗಿ) ... ಎಂಥಾ ಕನಸು. ಸಾಕ್ಷಾತ್ ಕೃಷ್ಣ ಪರಮಾತ್ಮನೇ ಕಣ್ಮುಂದೆ
ಬಂದಂತೆ ..ಕೃಷ್ಣಕಥೆಯನ್ನು ಕನ್ನಡದಲ್ಲಿ ಜನರಿಗೆ ಆನಂದವಾಗುವಂತೆ ಹೇಳು ಎಂದಂತೆ ..

ಲಕ್ಷ್ಮೀ : ಆಮೇಲೆ ?

ನಾರಣಪ್ಪ:
ನನ್ನ ಕಣ್ಣಿನ ಮುಂದೇ ಭಾರತದ ಪಾತ್ರಧಾರಿಗಳೆಲ್ಲ ಬಣ್ಣಬಣ್ಣದ ವೇಷ ತಾಳಿ ನರ್ತಿಸಿ
ನಟಿಸಿದಂತೆ.. ಹದಿನೆಂಟು ದಿನಗಳ ಆ ಮಹಾ ಯುದ್ಧದ ಕ್ಷಣ ಕ್ಷಣವೂ  ಕಣ್ಣಿಗೆ ಕಟ್ಟಿದಂತೆ
..ಅಷ್ಟೂ ಸಮಯ ಶ್ರೀಕೃಷ್ಣನು ನನ್ನೊಡನೆಯೇ ನಿಂತಿದ್ದು ನಡೆದದ್ದನ್ನೆಲ್ಲ ವಿವರಿಸಿದಂತೆ
..

ಲಕ್ಷ್ಮೀ : (ಕುತೂಹಲದಿಂದ) ಆಮೇಲೆ ಏನಾಯಿತು ?

ನಾರಣಪ್ಪ : ಶ್ರೀ
ಕೃಷ್ಣನು ಕುರುಕ್ಷೇತ್ರದ ಯುದ್ಧರಂಗದಿಂದ ನನ್ನ ಕೈಹಿಡಿದುಕೊಂಡು ನೇರವಾಗಿ ಬಂದು
ಗದುಗಿನ ವೀರನಾರಾಯಣನ ದೇಗುಲದ ಗರ್ಭಗೃಹದೊಳಕ್ಕೇ ಕರೆತಂದ ... ಒಳಹೋಗುತ್ತಿದ್ದಂತೆ
ಕಣ್ಣು ಕೋರೈಸುವ ಪ್ರಭೆ... ಆ ದಿವ್ಯಪ್ರಭೆ ಯಲ್ಲಿ ಒಂದು ಕ್ಷಣ ಕಣ್ಣು ಮುಚ್ಚಿ
ತೆಗೆಯುವಷ್ಟರಲ್ಲಿ ಎಲ್ಲ ಮಾಯ .. ನೋಡಿದರೆ ನಾನು ಇಲ್ಲಿ.. ಎಲ್ಲಾ ಮಾಯ
(ಸ್ವಲ್ಪ ದುಃಖದಿಂದ) ಎಲ್ಲಾ ಮಾಯ ....ಅಯ್ಯೋ ...

ಲಕ್ಷ್ಮೀ
: ಮುಂಜಾವಿನ ಕನಸುಗಳು ಸತ್ಯವಾಗುವುದೆಂದು ಹಿರಿಯರು ಹೇಳುವುದು ನಿಮಗೆ ತಿಳಿಯದೇ?
ನಿಮ್ಮ ಕನಸಿನಲ್ಲಿ ಕೃಷ್ಣ ನಿಮ್ಮನ್ನು ವೀರನಾರಾಯಣನ ದೇವಾಲಯಕ್ಕೆ ಕರೆದೊಯ್ದದ್ದರಲ್ಲಿ
ಏನೋ ಸಂಕೇತವಿದೆ. ನೀವು ನಿರ್ಮಲ ಮನದಲ್ಲಿ ವೀರನಾರಾಯಣನ ಗುಡಿಗೆ ಹೋದರೆ ಅವನು ನಿಮಗೆ
ಮಹಾಕಾವ್ಯ ರಚಿಸುವ ಶಕ್ತಿ ಖಂಡಿತ ಕೊಡುತ್ತಾನೆ ಎಂದು ನನ್ನ ಮನಸ್ಸು ನುಡಿಯುತ್ತಿದೆ.

ನಾರಣಪ್ಪ
: ಆದರೂ ವರಕವಿಗಳಾದ ಪಂಪ ರನ್ನ ನಂತಹವರು ಮಹಾಭಾರತ ಕಥೆಯನ್ನು ನಮ್ಮ ಕನ್ನಡ ನುಡಿಯಲ್ಲೇ
ಬರೆದಿರಬೇಕಾದರೆ ನಾನು ಮತ್ತೊಂದು ಭಾರತಕಥೆಯನ್ನು ಬರೆದರೆ ಅಧಿಕ ಪ್ರಸಂಗವೆನಿಸದೇ ?

ಲಕ್ಷ್ಮೀ
: ಅಂತಹದ್ದೇನೂ ಆಗದು. ಈಗ ಪಂಪ ಭಾರತ ನಿಮ್ಮಂತಹ ಪಂಡಿತರಿಗೆ ಮಾತ್ರ ಅರ್ಥವಾದೀತು.
ನನ್ನಂತಹ ಲೋಕಸಾಮಾನ್ಯರಿಗೂ ತಿಳಿಯುವ ಶೈಲಿಯಲ್ಲಿ ನಿಮ್ಮ ಕಾವ್ಯ ಇದ್ದರೆ, ಇನ್ನೂ
ನೂರಾರು ವರ್ಷ ಜನರು ಅದನ್ನೋದಿ ಆನಂದಿಸುವುದರಲ್ಲಿ ಸಂಶಯವಿಲ್ಲ.  ನಿಮಗೆ ಇದೇನೂ ಆಗದ
ಮಾತಲ್ಲ..

ನಾರಣಪ್ಪ : (ನಗುತ್ತ)  ಸರಿ., ಭಗವದಿಚ್ಛೆಯೂ ಪತ್ನಿಯ ಆಜ್ಞೆಯೂ ಒಂದೇ ಆಗಿದ್ದರೆ ಈ ಹುಲುಮಾನವ ಮಾಡುವುದೇನಿದೆ ?

ಲಕ್ಷ್ಮೀ :  ನಿಮಗೆ ? ನಾನು ಆಜ್ಞೆ ನಾನು ಮಾಡುವೆನೇ ? ಆದರೆ ಪ್ರೀತಿಯಿಂದ ಒಂದು ಕೋರಿಕೆ ನಡೆಸಿಕೊಡುವಿರಾ ?

ನಾರಣಪ್ಪ : (ಮತ್ತೂ ನಗುತ್ತಾ) ಶಿರಸಾವಹಿಸಿ ಪಾಲಿಸುತ್ತೇನೆ  (ಬಗ್ಗುವನು)

ಲಕ್ಷ್ಮೀ
: ಮಹಾಭಾರತದ ಕಥೆ ಬರೆದವರಲ್ಲಿ, ಬಹಳ ಕವಿಗಳು ಕರ್ಣನನ್ನು ಖಳನನ್ನಾಗಿಯೇ
ಚಿತ್ರಿಸಿದ್ದಾರೆ. ಆದರೆ, ಅವನಲ್ಲಿದ್ದ ಸದ್ಗುಣಗಳು ಯಾರಿಗೂ ಕಾಣಲೇ ಇಲ್ಲವೇ ?
ನೀವಾದರೂ ಅವನ ಪಾತ್ರಕ್ಕೆ ನ್ಯಾಯ ಒದಗಿಸುತ್ತೀರಾ ?

ನಾರಣಪ್ಪ : ಗದುಗಿನ ವೀರನಾರಾಯಣ ಹಾಗೇ ಬಯಸಿ, ನಿನ್ನ ಬಾಯಲ್ಲಿ ಈ ಕೋರಿಕೆ ಬರುವಂತೆ ಮಾಡಿದ್ದರೆ, ಅದನ್ನು ಆಗದು ಎನ್ನಲು ನಾನೆಷ್ಟರವನು?  ..

ಲಕ್ಷ್ಮೀ:
ಸರಿ. ಮತ್ತೆ ವಿಳಂಬವೇಕೆ ? ಕೃಷ್ಣಕಥೆಯನ್ನು ಹೇಳಹೊರಟರೆ, ಕೃಷ್ಣನೇ ಅದು
ಮುಗಿಯುವವರೆಗೂ ನಿಮ್ಮ ಬೆಂಗಾವಲಾಗಿದ್ದು ನೋಡಿಕೊಳ್ಳುವುದು ಖಂಡಿತ. ತಡಮಾಡದೇ ಹೊರಡಿ
ಮತ್ತೆ ವೀರನಾರಾಯಣನ ಗುಡಿಗೆ .. 

(ಇಬ್ಬರೂ ನಡುವಿನಲ್ಲಿರುವ ದ್ವಾರದ ಮೂಲಕ ಮನೆಯೊಳಕ್ಕೆ ಹೋಗುತ್ತಿದ್ದಂತೆ ರಂಗದ ಮೇಲೆ ಬೆಳಕು ಕಡಿಮೆಯಾಗುತ್ತ ಹೋಗುತ್ತದೆ)

---------------------------------------------------------------------------------------------------------------------------------------------------------------------------------

ದೃಶ್ಯ -೨

(ಬೆಳಕು ಬಂದಾಗ ರಂಗದಲ್ಲಿ ದೇವಾಲಯವೊಂದರ ಮುಖ ಮಂಟಪ. ತೆರೆದಿರುವ ಗರ್ಭಗೃಹದೊಳಗೆ
ವೀರನಾರಾಯಣನೂ ಗೋಚರಿಸುತ್ತಿರುವಂತೆ, ಒಳಗಿಂದ ಕೃಷ್ಣಪ್ಪ ಹೊರಬಂದು, ಕೊಳಲನ್ನು
ನುಡಿಸುತ್ತಿದ್ದನ್ನು ನಿಲ್ಲಿಸಿ ಅದನ್ನು ಪಕ್ಕಕ್ಕಿಟ್ಟು, ಹೊರಗೆ ಹೋಗಿ ಮರೆಯಾಗುವನು.
ಆಗ ಇನ್ನೊಂದು ಬದಿಯೊಂದ ನರ್ತಕಿಯರು ಒಳಗೆ ಬಂದು ದೇವರಿಗೆ ನಮಸ್ಕರಿಸಿ ಹೂ ಕಟ್ಟುತ್ತಾ
ಕೂಡುವರು. ಆ ವೇಳೆಗೆ ಅದೇ ಕಡೆಯಿಂದ ನಾರಣಪ್ಪ ಮತ್ತು ಪತ್ನಿಯ ಆಗಮನ. ನಾರಣಪ್ಪ
ಕಂಬವೊಂದರ ಪಕ್ಕ ಒರಗಿ ಕುಳಿತುಕೊಳ್ಳುವಷ್ಟರಲ್ಲೇ ಕೃಷ್ಣಪ್ಪ ಪಕ್ಕದಿಂದ ಒಳಗೆ ಬಂದು
ಬಿಂದಿಗೆಯೊಂದನ್ನು ತಂದುಕೊಟ್ಟು)

ಪಾರುಪತ್ತೆದಾರ : ನನ್ನ ಹೆಸರು ಕೃಷ್ಣಪ್ಪ ಅಂತ ಸ್ವಾಮೀ - ಇಲ್ಲಿನ ಪಾರುಪತ್ತೇದಾರ. ತೊಗೊಳ್ಳಿ. ಮಡಿ ಉಟ್ಟುಕೊಂಡು ಬನ್ನಿ ದೇವರ ದರ್ಶನಕ್ಕೆ ...

(ನಾರಣಪ್ಪ
ಕೊಡದೊಂದಿಗೆ ಎದ್ದು ಹೋಗಿ ಒಂದು ನಿಮಿಷ ಮರೆಯಾಗುವನು. ಕೃಷ್ಣಪ್ಪ ಅಲ್ಲೇ ಇದ್ದು ತಾಳೆ
ಗರಿಯ ಗಂಟೊದನ್ನು,  ಸಣ್ಣ ಮೇಜು ಒಂದನ್ನೂ ತಂದು ಗುಡಿಯ ಜಗುಲಿಯ ಮೇಲೆ ಇಡುವನು.
ಪಕ್ಕದಲ್ಲೇ ತಾಮ್ರದ ಚೊಂಬು ಒಂದರಲ್ಲಿ ನೀರು ತಂದು ಇಡುವನು. ನೇಪಥ್ಯದಲ್ಲಿ ನೀರು
ಸುರಿಯುವ ಶಬ್ದ. ನಾರಣಪ್ಪ ಬರುವಾಗ ಬಟ್ಟೆ ಒದ್ದೆಯಾಗಿರುವುದು ಸೂಚಿತವಾಗಬೇಕು.
ನಾರಣಪ್ಪ ಬಂದು ದೇವರಿಗೆ ನಮಸ್ಕರಿಸಿ, ಕಂಬಕ್ಕೊರಗಿ ಕೂಡುವನು. ಲಕ್ಷೀ ಮತ್ತು
ಕೃಷ್ಣಪ್ಪ ಅಲ್ಲೇ ಪಕ್ಕದಲ್ಲಿ ನಿಲ್ಲುವರು. ನಾರಣಪ್ಪ ಒಂದೆರಡು ಕ್ಷಣ
ಯೋಚಿಸುತ್ತಿರಬೇಕು)

ನಾರಣಪ್ಪ : ಶ್ರೀ ವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ ....

(ಒಂದೆರಡು ಬಾರಿ ಹೇಳಿಕೊಂಡು) ಮತ್ತೆ ಲೇಖನಿಯನ್ನು ಶಾಯಿಯಲ್ಲದ್ದಿ ಓಲೆಗರಿಯ ಮೇಲೆ ಬರೆಯುವನು)

ಜಗಕತಿ ಪಾವನನೆ ಸನಕಾದಿ ಸಜ್ಜನ ನಿಕರ ದಾತಾರಾ
ರಾವಣಾಸುರ ಮಥನ ಶ್ರವಣಸುಧಾ ವಿನೂತನ ಕಥನ ಕಾರಣ
ಕಾವುದು ಆನತ ಜನವ ಗದುಗಿನ ವೀರ ನಾರಯಣ

(ಬರೆಯುವ
ನಟನೆಯನ್ನು ಮುಂದುವರೆಸುತ್ತಿರುವಾಗ ಹಿಮ್ಮೇಳದ ಸಂಗೀತಗಾರನ ಕಂಠದಲ್ಲಿ ಇದೇ ಷಟ್ಪದಿ
ಆರಂಭವಾಗುತ್ತದೆ. ಹಾಡನ್ನು ಕೇಳುತ್ತಿರುವ ನರ್ತಕಿಯರು, ಒಂದು ಕ್ಷಣ ಆಲಿಸಿ, ನಂತರ
ಪದ್ಯಕ್ಕೆ ಸರಿಯಾಗಿ ಅಭಿನಯಿಸತೊಡಗುತ್ತಾರೆ. ಆ ಕಡೆಗೆ ಸ್ಪಾಟ್ ಲೈಟ್ ಬೀಳುತ್ತದೆ.

(ಗಂ): ವರ ಮಣಿಗಳೆಂದೆಸೆವ ಮೌಳಿಯ ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರ ಭಾಳದಿ ಕುಣಿವ ಕುಂತಲದ
ಕರಿನಿಭಾಕೃತಿಯೆನಿಪ ವದನದ ಕರದ ಪಾಶದ ಮೋದಕದ
ವಿಸ್ತರದ ಗಣಪದಿ ಮಾಡೆಮಗೆ ನಿರ್ವಿಘ್ನ ದಾಯಕವ

(
ಈ ಷಟ್ಪದಿಗೆ ನರ್ತಕಿಯು ನರ್ತಿಸುವಾಗಲೇ ಇನ್ನೊಂದು ಕಡೆಯಿಂದ ಕೆಲವು ಗ್ರಾಮಸ್ಥರು ಬಂದು
ನೋಡುತ್ತಾ ಕುಳಿತುಕೊಳ್ಳುವರು. ಅದೇ ಸಮಯದಲ್ಲಿ ನಾರಣಪ್ಪ ಒಂದು ತಾಳೆ ಗರಿಯನ್ನು
ಪತ್ನಿಗೆ ಕೊಡುವನು. ಆಕೆ ಅದನ್ನು ಹಿಡಿದು ರಂಗದ ಮುಂದೆ ಬಂದು ಓದುವ ಅಭಿನಯ ಮಾಡುವಳು)

(ನಡುನಡುವೆ ಸಹಾಯಕ ಬಂದು ನೀರು, ಹಣ್ಣು ಇತ್ಯಾದಿಗಳನ್ನು ತಂದು ಕೊಡುತ್ತಿರುವುದು ಪ್ರೇಕ್ಷಕರ ಗಮನಕ್ಕೆ ಬರುವಂತಿರಬೇಕು)

ಲಕ್ಷ್ಮೀ : (ಹಾಡು ಹಿಮ್ಮೇಳದಲ್ಲಿ)

ವಾರಿಜಾಸನೆ ಸಕಲಶಾಸ್ತ್ರ ವಿಚಾರದುದ್ಭವೆ ವಚನರಚನೋದ್ಧಾರೆ
ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೇ
ಶೌರಿ ಸುರಪತಿ ಸಕಲ ಮುನಿಜನ ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆಮ್ಮ ಜಿಹ್ವೆಯಲಿ

( ಈ ಷಟ್ಪದಿಗೂ ನರ್ತಕಿಯರ ಅಭಿನಯ ಮುಂದುವರೆಯಬೇಕು. ಇದಾಗುವಾಗಲೂ ಮತ್ತೆ ಕೆಲವು ಗ್ರಾಮಸ್ಥರು ಬಂದು ಕೂರುವರು)

(ನಾರಣಪ್ಪ ಜಗುಲಿಯಿಂದಿಳಿದು ರಂಗದ ಮುಂದಕ್ಕೆ ಬರುತ್ತಾ - ಹಿಮ್ಮೇಳದಲ್ಲಿ ಬರುವ ಸಂಗೀತಕ್ಕೆ ಅಭಿನಯಿಸುವನು)

ನಾರಣಪ್ಪ : ವೀರ ನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ
ಕೇಳುವ ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು
ಚಾರುಕವಿತೆಯ ಬಳಕೆಯಲ್ಲ ವಿಚಾರಿಸುವಡಳವಲ್ಲ ಚಿತ್ತವಧಾರು
ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ

(ಹೋಗಿ ಜಗುಲಿಯ ಮೇಲೆ ಕುಳಿತು)

ನಾರಣಪ್ಪ: ಲಕ್ಷ್ಮೀ ..

ಲಕ್ಷ್ಮೀ : ಏನಂದಿರಿ ?

ನಾರಣಪ್ಪ : ನಿನ್ನ ಬಯಕೆಯಂತೆಯೇ, ನನ್ನ ಮಹಾಭಾರತ ಕಥೆಯನ್ನು ಕರ್ಣನ ಕಥೆಯಿಂದಲೇ ಆರಂಭಿಸುತ್ತಿದ್ದೇನೆ

ಲಕ್ಷ್ಮೀ: ನಿಮ್ಮ ಚಿತ್ತ

(ರಂಗ ಪೂರ್ತಿ ಕತ್ತಲಾಗುತ್ತದೆ. ರಂಗದ ಬಲಗಡೆ ನಿಧಾನವಾಗಿ ಬೆಳಕು ಬರುವಾಗ ಅಲ್ಲಿ ದೂರ್ವಾಸ ನಿಂತಿರುತ್ತಾನೆ
ರಂಗದ
ಎಡಗಡೆಯ ಜಗಲಿ ಮರೆಯಾಗಿರಬಹುದು. ಇದ್ದರೂ, ಆ ಕಡೆಗೆ ಬೆಳಕು ಬೀಳಬಾರದು. ನಾರಣಪ್ಪ,
ಪತ್ನಿ, ಕೃಷ್ಣಪ್ಪ ಮತ್ತು ಗ್ರಾಮಸ್ಥರು ಯಾರೂ ಕಾಣಿಸಿಕೊಳ್ಳಬಾರದು. ತೆರೆಯ ಮೇಲೆ
ಅರಮನೆಯೊಂದರ ದೃಶ್ಯ)

------------------------------------------------------------------------------------------------------------------------------------------------------------

ದೃಶ್ಯ-೩

(ಹಿಮ್ಮೇಳದಲ್ಲಿ)

(ಗಂ) :
ಒಂದು ದಿನ ದೂರ್ವಾಸಮುನಿ ನೃಪ ಮಂದಿರಕೆ ಬರಲಾ ಮಹೀಪತಿ
ಬಂದ ಬರವಿನಲವರ ಮರೆತನು ರಾಜಕಾರ್ಯದಲಿ
ಇಂದು ಕುಂತೀಭೋಜನೊಡೆತನ ಬೆಂದುಹೋಗಲಿಯೆಂಬ ಶಾಪವ
ಇಂದುಮುಖಿ ನಿಲಿಸಿದಳು ಹೊರಳಿದವಳವರ ಚರಣದಲಿ

(ಪದ್ಯಕ್ಕೆ ಸರಿಯಾದ ಅಭಿನಯ ದೂರ್ವಾಸ ಮತ್ತೆ ಕುಂತಿಯಿಂದ)

(ಹೆಂ):
ತರುಣಿ ಒಡಗೊಂಡೊಯ್ದು ಕನ್ಯಾ ಪರಮ ಭವನದಲಾ ಮುನಿಯನು
ಉಪಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ
ಹರ ಮಹಾದೇವೀ ಮಗುವಿನಾದರಣೆಗೀ ವಿನಯೋಪಚಾರಕೆ
ಹಿರಿದು ಮೆಚ್ಚಿದೆನೆಂದು ತಲೆತೂಗಿದನು ದೂರ್ವಾಸ

(ಗಂ):
ಮಗಳೆ  ಬಾ ಕೊಳ್ ಐದು ಮಂತ್ರ್‍ಆಳಿಗಳನಿವು ಸಿದ್ಧಪ್ರಯೋಗವು
ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು
ಮಗನು ಜನಿಸುವನೆಂದು ಮುನಿ ಕುಂತಿಗೆ ರಹಸ್ಯದೊಳರುಹಿ
ಮುನಿ ಮೌಳಿಗಳ ಮಣಿ ಮರಳಿದನು ನಿಜಾಶ್ರಮಕೆ

(ದೂರ್ವಾಸ
ಹೊರಡುವನು. ಕುಂತಿ ನಮಸ್ಕರಿಸುವಳು. ಒಂದು ಕ್ಷಣದ ಕತ್ತಲೆ  - ಬೆಳಕಾದಾಗ ನದೀತೀರದಲ್ಲಿ
ಕುಂತಿ ಆಟವಾಡುತ್ತಿರುತ್ತಾಳೆ. ಹಿನ್ನಲೆಯಲ್ಲಿ ಷಟ್ಪದಿ ಆರಂಭವಾಗುತ್ತದೆ. ಕುಂತಿ
ಕಣ್ಮುಚ್ಚಿ ಧ್ಯಾನಿಸುವಾಗ ಅವಳ ಮೇಲೆ ಚಿನ್ನದ ಬಣ್ಣದ ಸ್ಪಾಯ್ಟ್ ಲೈಟ್ ಬೀಳುವುದು)

(ಹೆಂ):
ಮಗುವುತನದಲಿ ಬೊಂಬೆಯಾಟಕೆ ಮಗುವನೇ ತಹೆನೆಂದು ಬಂದಳು
ಗಗನನದಿಯಲಿ ಮಿಂದಳುಟ್ಟಳು ಲೋಹಿತಾಂಬರವ 
ವಿಗಡ ಮುನಿಪನ ಮಂತ್ರವನು ನಾಲಗೆಗೆ ತಂದಳು ರಾಗರಸದಲಿ
ಗಗನ ಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ

(ಮಿಂಚು ಬಂದ ಅನುಭವ - ಕುಂತಿಯ ಕೈಯಲ್ಲಿ ಮಗುವಿರುತ್ತದೆ - ಮಗುವಿನ ಅಳು ಕೇಳಿಬರುತ್ತದೆ)

ಹೆಂ: ಅಳುವ ಶಿಶುವನು ತೆಗೆದು ತೆಕ್ಕೆಯ ಪುಳಕ ಜಲದಲಿ ನಾದಿ ಹರುಷದ
ಬಳಿಯ ಲಜ್ಜೆಯ ಭಯದ ಹೋರಟೆಗಳುಕಿ ಹಳುವಾಗಿ
ಕುಲದ ಸಿರಿ ತಪ್ಪುವುದಲಾ ಸಾಕಿಳುಹ ಬೇಕೆಂದೆನುತ
ಗಂಗಾ ಜಲದೊಳಗೆ ಹಾಯ್ಕಿದಳು ಜನಾಪವಾದ ಭೀತಿಯಲಿ

(ನಾಲ್ಕೂ ಕಡೆ ನೋಡುತ್ತಾ, ತಳಮಳದಿಂದ ಮಗುವನ್ನು ನೀರಿನಲ್ಲೇ ಬಿಟ್ಟು ಹೋಗುವಳು)
(ಕುಂತಿ
ಹೋಗುತ್ತಿದ್ದಂತೆ ಇನ್ನೋದೆಡೆಯಿಂದ ಅತಿರಥ ಬರುತ್ತಾನೆ. ಮಗುವಿನ ಅಳು ಕೇಳಿ
ಆಶ್ಚರ್ಯದಿಂದ ತಿರುಗಿ ಹುಡುಕುವನು. ಕಂಡೊಡನೆ ಮಗುವನ್ನು ಎತ್ತಿ ಮುದ್ದಿಸುವನು)

ಗಂ : ತರಣಿ ಬಿಂಬದ ಮರಿಯೋ ಕೌಸ್ತುಭ ಖಂಡದ ಕಣಿಯೋ
ಮರ್ತ್ಯರಿಗೆ ಮಗನಿವನಲ್ಲ ಮಾಯಾ ಬಾಲಕನೊ ಮೇಣು
ಇರಿಸಿ ಹೋದವಳಾವಳೋ ಶಿಶುವರನ ತಾಯ್ ನಿರ್ಮೋಹೆಯೈ
ಹರಹರ ಮಹಾದೇವೆನುತ ಬಿಗಿದಪ್ಪಿದನು ಬಾಲಕನ

(
ಕತ್ತಲಾಗುತ್ತಿದ್ದಂತೆ ತೆರೆ ಸರಿಯುವುದು - ಹಿಮ್ಮೇಳದಲ್ಲಿ ವಾದ್ಯ ಸಂಗೀತ -
ಮಧ್ಯದಲ್ಲಿ ಬೇರೆ ಬೇರೆ ಧ್ವನಿಗಳಲ್ಲಿ ಬೇರೆ ಬೇರೆ ಶ್ರುತಿಯಲ್ಲಿ - ಒಂದೊಂದು ಪದವು
೨-೩ ಸಲ ಕೇಳಿ ಬರುತ್ತಿರುವಂತೆ ಆ ಹೆಸರುಗಳು ತೆರೆಯಮೇಲೆ ಕಾಣಿಸಿಕೊಳ್ಳಬೇಕು.
ಹಿನ್ನಲೆಯಲ್ಲಿ ಹಾಡು ಬರುತ್ತಿರುತ್ತದೆ - ಗುಂಪುಗಾಯನದಲ್ಲಿ)

ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು ಭಾರತ ಕಣ್ಣಲಿ ಕುಣಿಯುವುದು ..

(ಇದೇ ಸಮಯದಲ್ಲಿ  ಈ ಪದಗಳೂ ತೆರೆಯ ಮೇಲೆ ಬರುತ್ತಿರುವಂತೆ, ಬೇರೊಂದು ಕಂಠದಲ್ಲಿ ಕೇಳುತ್ತಲೂ ಇರುತ್ತವೆ

ಆದಿಪರ್ವ - ಸಭಾಪರ್ವ - ವನಪರ್ವ - ವಿರಾಟಪರ್ವ - ಉದ್ಯೋಗಪರ್ವ ..... )

(ಹಾಡು ಮುಗಿದು ನಿಶ್ಶಬ್ದವಾಗುತ್ತಿದ್ದಂತೆ ...)
(ತೆರೆಯ ಮುಂದೆ ಎಡಗಡೆಯಿಂದ ಇಬ್ಬರು ಹಳ್ಳಿಗರ ಪ್ರವೇಶ)

--------------------------------------------------------------------------------------------------------------------------------------------------------------------------------

ದೃಶ್ಯ - ೪

ಆಕೆ: ಬ್ಯಾಗ ಬ್ಯಾಗ ಹಾಕು ಹೆಜ್ಜೆ. ಹಿಂಗೇ ನಿದಾನವಾಗಿ ಓಯ್ತಿದ್ದರೆ ಇವತ್ತಿನ ಕಥೆ ಎಲ್ಲಾ ಮುಗಿದೀತು

ಆತ: ( ನಿರುತ್ಸುಕನಾಗಿ) ಬರ್ತಿದೀನಿ ಕಣಮ್ಮೀ ..

ಆಕೆ:
ಐ, ನಿಂಗೆ ಯಾವುದರಾಗೂ ಆಸಕ್ತಿನೇ ಇಲ್ಲ . ಆ ಕೋಳಿವಾಡದ ನಾರಣಪ್ಪ ಬಾರತದ ಕತೆ ಏಳ್ತಾನೆ
ಅಂತ ಅತ್ತು ಅಳ್ಳಿ ಜನವೆಲ್ಲ ಹೋಗ್ತತಿ. ನೀನು ಮಾತ್ರ ಒಂದು ದಿನಾನೂ ಬರಾಣಿಲ್ಲ.

ಆತ : ಅಂತೂ ಬಂದೀವ್ನಲ್ಲ ಇವತ್ತು .. ಆದ್ರೂ ಯಾಕೆ ಇಂಗೆ ಕೂಕ್ಕೋತೀ ?

ಆಕೆ
: (ಆಡಿಕೊಳ್ಳುತ್ತಾ) ಆಹಹ .. ಬಂದೆ ಬಂದೆ - ಆ ಕೃಷ್ಣ ಪರಮಾತ್ಮನೇ ಸಂದಾನ
ಮಾಡಕ್ಕಾಗದೆ, ಇನ್ನೇನು ನಾಕು ದಿವಸಕ್ಕೆ ಪಾಂಡವರಿಗೂ ಕೌರವರಿಗೂ ಯುದ್ದ ಆಗಿ ಕತೆನೇ
ಮುಗೀತತಿ ಅನ್ನೋವಾಗ.. ನೆನ್ನೆ ಅಂತೂ ಏನಾಯ್ತು ಅಂತೀಯ ? ಆ ದುರ್ಯೋದನ, ಆ ಕೃಷ್ಣ
ಪರಮಾತ್ಮನ್ನೇ ಕಟ್ಟಿಹಾಕಕ್ಕೆ ನೋಡ್ತಾವ್ನಲ್ಲ ?  ... ಸರಿ ಸರಿ , ಮಾತಾಡ್ತಾ ಓದ್ರೆ
ಒತ್ತಾಗ್ತತಿ.. . ಬಿರ್ರ ಬಿರ್ರನೆ ನಡಿ ( ಧಾವಿಸುತ್ತ ಇಬ್ಬರೂ ನಿರ್ಗಮನ)

--------------------------------------------------------------------------------------------------------------------------------------------------------------------------------

ದೃಶ್ಯ - ೫

(ತೆರೆ ಸರಿಯುವುದು - ಹಸ್ತಿನಾವತಿಯಲ್ಲಿ ಒಂದು ಸಂಜೆ - ಸಂಜೆ ಬೆಳಕು
ವ್ಯಕ್ತವಾಗಬೇಕು.  ಹಿನ್ನಲೆಯಲ್ಲಿ ಸಂಗೀತ ಬರುತ್ತಿರುವಂತೆ ಕರ್ಣ ಮತ್ತು ಕೃಷ್ಣ
ಪ್ರವೇಶಿಸುತ್ತಾರೆ)

ಕೃಷ್ಣ ರಂಗದೊಳಗೆ ಬರುತ್ತಿರುವಂತೆ , "ಬಂದನೊ ದೇವರ ದೇವ" ಎಂಬ ಗೀತೆಗೆ ನರ್ತಿಸುತ್ತ ಬರುವನು. ನರ್ತನ ಮುಗಿದ ಮೇಲೆ ಕರ್ಣ ರಂಗದೊಳಗೆ ಬರುವನು)
ಹಿನ್ನಲೆಯಲ್ಲೆ ಪದ್ಯ:

(ಗಂ) :
ಇನತನೂಜನ ಕೂಡೆ ಮೈದುನತನದ ಸರಸವೆಸಗಿ
ರಥದೊಳು ದನುಜರಿಪು ಬರಸೆಳೆದು ಕುಳ್ಳಿರಿಸಿದನು ಪೀಠದಲಿ
ಎನಗೆ ನಿನ್ನಡಿಯೊಳಿ ಸಮಸೇವನೆಯೆ ದೇವ ಮುರಾರಿಯಂಜುವೆನೆನಲು
ತೊಡೆ ಸೋಂಕಿನಲಿ ಸಾರಿದು ಶೌರಿಯಿಂತೆಂದ

ಕೃಷ್ಣ : ಕರ್ಣ, ಕೌರವರಲ್ಲೂ ಯಾದವರಲ್ಲೂ ಯಾವ ಭೇದವನ್ನೂ ನಾನರಿಯೆ. ಮೇದಿನೀ ಪತಿ ನೀನು - ಆದರೆ ಅದರ ಅರಿವಿಲ್ಲ ನಿನಗಷ್ಟೆ.

ಕರ್ಣ : ದಾನವಾಂತಕಾ, ವಂಶವಿಹೀನನು ನಾನು.  ನಿಮ್ಮಡಿಗಳಲಿ ಸಮಾನಿಸುವರೇ ?  ಸಾಕು ಸಾಕು ( ಕೈಮುಗಿಯುತ್ತ ಹಿಂದೆಗೆಯುವನು)

ಕೃಷ್ಣ
: ಮಾನನಿಧಿಯೇ, ಯಾರು ವಂಶವಿಹೀನ ? ಸೂರ್ಯವಂಶಲಲಾಮ ನೀನು ಶ್ರೀರಾಮನಿಗೆ ಸಮ ನೀನು.
ದಿವಾಕರ ತನಯ, ನಿನ್ನಯ ಕುಲವನರಿಯದೇ ಸುಯೋಧನನಲ್ಲಿ ವೃಥಾ ಸೇವಕತನದಲ್ಲಿರುವುದು
ಉಚಿತವಲ್ಲ.

(ಹಿನ್ನಲೆಯಲ್ಲಿ ಷಟ್ಪದಿ ಬರುವಾಗ ಕೃಷ್ಣ ಅಭಿನಯಿಸುವನು): 

ಲಲನೆ ಪಡೆದೀಯೈದು ಮಂತ್ರಂಗಳಲಿ ಮೊದಲಿಗ ನೀನು
ನಿನ್ನಯ ಬಳಿ ಯುಧಿಷ್ಟಿರದೇವ ಮೂರನೆಯಾತ ಕಲಿಭೀಮ
ಫಲುಗುಣನು ನಾಲ್ಕನೆಯಲಿ. ಐದನೆಯಲಿ ನಕುಲ
ಸಹದೇವರಾದರು ಬಳಿಕ ಮಾದ್ರಿಯಲೊಂದು ಮಂತ್ರದೊಳಿಬ್ಬರುದಿಸಿದರು

ಹಾಗಾಗಿ, ಪಾಂಡವರೈವರಿಗೆ ನೀನು ಮೊದಲಿಗ. ನಾನು ನಿನ್ನ ಅಭ್ಯುದಯವನ್ನೇ ಬಯಸುವನು. ನಡೆ ನನ್ನ ಸಂಗಾತ. ಆ ಐವರನ್ನೂ ನಿನ್ನ ಪಾದಕ್ಕೆ ಕೆಡಹುವೆನು

( ಕರ್ಣ ಆಶ್ಚರ್ಯ ಚಕಿತನಾಗುವನು)

(ಮುಂದುವರಿಸುತ್ತಾ) ನೀನು ಹಸ್ತಿನಾಪುರದ ಅಧಿಪತಿಯಾದರೆ, ಪಾಂಡವ ಕೌರವರಿಬ್ಬರೂ ನಿನಗೆ
ಕಿಂಕರರಾಗುವರಲ್ಲವೇ ? ಅದು ಬಿಟ್ಟು ನೀನು ದುರ್ಯೋಧನನ ಬಾಯ್ದಂಬುಲಕೆ ಕೈಯೊಡ್ದಬಹುದೆ ?
ಎಡಗಡೆಯಲ್ಲಿ ಕೌರವೇಂದ್ರನ ಗಡಣ, ಬಲಬದಿಯಲ್ಲಿ ಪಾಂಡುಪುತ್ರರ ಗಡಣವಿದ್ದು, ಎದುರಲ್ಲಿ
ಮದ್ರ ಮಾಗಧ ಯಾದವಾದಿಗಳು ಇರುವಾಗ, ನಡುವೆ ನೀನು ಒಡ್ಡೋಲಗದಲ್ಲಿ ರುವ ವೈಭವವನ್ನೊಮ್ಮೆ
ಮನಕ್ಕೆ ತಂದುಕೊಂಡು ನೋಡು.

(ಕರ್ಣ ಇನ್ನೂ ಸ್ವಲ್ಪ ಆಶ್ಚರ್ಯ ಸ್ವಲ್ಪ ಖೇದ ವ್ಯಕ್ತ ಪಡಿಸುತ್ತಲಿರುವನು)

( ಮುಂದುವರೆಸುವನು) ನೀನು ಸೂರ್ಯ ಪುತ್ರ. ನಿನ್ನೊಡನೆ ಐವರು ಮಹಾವೀರರಾದ
ಪಾಂಡವರಿರುವಾಗ ನಿನ್ನ ವೈಭವಕ್ಕಾರು ಎಣೆ ? ನಡೆ ನಡೆ. ಧಾರುಣೀಪತಿಯಾಗು.  ನೀನಿರಲು
ಇನ್ನು ವೈರದ ಮಾತೆಲ್ಲಿ ?

ಕರ್ಣ: (ಸ್ವಗತದಲ್ಲಿ ) ಅಯ್ಯೋ ! ಕುರುಪತಿಗೆ ಕೇಡಾಯಿತಲ್ಲಾ !  ಈ ಹರಿಯು ನನ್ನ ವಂಶ ವೃತ್ತಾಂತವನ್ನರುಹಿ ಕುರುಪತಿಯನ್ನು ಕೊಂದುಬಿಟ್ಟನಲ್ಲಾ !

ಕಾದಿ ಕೊಲುವೊಡೆ ಪಾಂಡುಸುತರು ಸಹೋದರರು
ಕೊಲಲಿಲ್ಲ ಕೊಲದೆ ಹೋದೆನಾದೊಡೆ ಕೌರವಂಗವನಿಯೊಳು ಹೊಗಲಿಲ್ಲ
ಭೇದದಲಿ ಹೊಕ್ಕಿರಿದನೋ ಮಧುಸೂದನನು ತಾನಕಟಾ
ಎನುತ ಘನ ಚಿಂತೋದಧಿಯೊಳದ್ದಿದವೊಲು ಮೌನದೊಳಿದ್ದನಾ ಕರ್ಣ

ಕೃಷ್ಣ: ಏನು ಹೇಳೈ ಕರ್ಣ, ಚಿತ್ತಗ್ಲಾನಿಯಾವುದು ? ಮನಕೆ ಕುಂತೀಪುತ್ರರ ಬೆಸಕೈಸಿಕೊಳ್ಳುವುದು ನಿನಗೆ ಸೇರದೇ?
ನನ್ನಾಣೆ, ನಿನಗೆ ಹಾನಿಯಾಗದು. ಮೌನ ಬೇಡ.. ನುಡಿ ನುಡಿ . ಮರುಳುತನ ಬಿಡು. ನಾನು ನಿನ್ನ ಅಪದೆಸೆಯನ್ನು ಬಯಸುವವನಲ್ಲ !

ಕರ್ಣ: 
(ವಿಷಾದದಿಂದ) ಮರುಳು ಮಾಧವ ! ನಾನು ರಾಜ್ಯದ ಸಿರಿಗೆ ಸೋಲುವನಲ್ಲ. ಕೌಂತೇಯರು
ಸುಯೋಧನರು ಒಗ್ಗೂಡುವುದರಲ್ಲಿ ನನಗೆ ಮನವೂ ಇಲ್ಲ!  ಹೊರೆದ ದಾತಾರನಿಗೆ ಹಗೆಗಳ ಶಿರವನು
ತರಿದು ಒಪ್ಪಿಸುವೆನೆಂಬ ಭರದಲ್ಲಿದ್ದೆನು.  ಒಡಹುಟ್ಟಿದವರೆಂಬ ಈ ಮಾತನ್ನು ಹೇಳಿ ನೀನು
ಕೌರವೇಂದ್ರನನ್ನು ಕೊಂದೆ. ಅಯ್ಯೋ .. ಆ ಸುಯೋಧನನಾದರೋ ಎಂತಹವನು ?

(ಹಿನ್ನಲೆಯಲ್ಲಿ ಷಟ್ಪದಿ ಬರಲು ಕರ್ಣ ಅಭಿನಯಿಸುವನು)

ನೋಡಿ ದಣಿಯನು ಬಿರುದ ಹೊಗಳಿಸಿ ಹಾಡಿ ದಣಿಯನು
ನಿಚ್ಚಲುಚಿತವ ಮಾಡಿ ದಣಿಯನು ಮಾನನಿಧಿಯನೆಂತು ಮರೆದಪೆನು ?
ಕಾಡಲಾಗದು ಕೃಷ್ಣ ಖಾತಿಯ ಮಾಡಲಾಗದು ಬಂದೆನಾದೊಡೆ
ರೂಢಿ ಮೆಚ್ಚದು ಕೌರವನ ಹಗೆ ಹರಿಬ ತನಗೆಂದ

ಹೆಚ್ಚು ಮಾತೇಕೆ? ಕೌರವೇಶ್ವರನನ್ನು ಬಿಟ್ಟು ಈ ಜಗದಲ್ಲಿ ನನಗಾರು ಆಪ್ತರು? ಮನ್ನಣೆಯಿತ್ತು ಸಲಹಿದ ಹೌರವೇಂದ್ರನ ನಾನು ಹೇಗೆ ತಾನೇ ಮರೆಯಲಿ ?

ಕೃಷ್ಣ,
ನಾಳಿನ ಭಾರತ ಯುದ್ಧ ಮಾರಿಗೌತಣವಾಗುವುದು ನಿಶ್ಚಯ. ರಣದಲ್ಲಿ ಕೋಟಿ ಕೋಟಿ ಭಟರನ್ನು
ತೀರಿಸಿ ನನ್ನ ಋಣವನ್ನು ತೀರಿಸಿಕೊಳ್ಳುವೆ . ನಿನ್ನ ಐವರು ವೀರರನ್ನು ನೋಯಿಸೆನು
(ಮತ್ತೊಮ್ಮೆ) ನಿನ್ನ ಐವರು ವೀರರನ್ನು ನೋಯಿಸೆನು - ಆ ಸೂರ್ಯನಾಣೆ.
( ರಂಗದ ಮೇಲೆ ಬೆಳಕು ತುಸು ಕಡಿಮೆಯಾಗಬೇಕು)

ಕೃಷ್ಣ:
ಕರ್ಣ, ನೀನು ಪಾಂಡವರೊಡನೆ ಬಂದರೊಳ್ಳಿತು. ಬಾರದಿದ್ದರೆ, ಆ ಮಂದಮತಿ ಕೌರವೇಶ್ವರನಿಗೆ
ತಿಳಿಹೇಳಿ ತಮ್ಮಂದಿರಿಗೆ ರಾಜ್ಯವನ್ನು ಕೊಡಿಸುವುದು ಉಚಿತ.  ನಿನ್ನ ಮಾತನ್ನು ಸುಯೋಧನ
ಕಡೆಗಣಿಸನು.

ಕರ್ಣ: ಇಂದು ನಾನು ನೀತಿಯುಸಿರಿದರೆ ಸುಯೋಧನ ಮನಗಾಣನೇ ? ಈ
ಸಂಧಿಯನ್ನರಿಯೆ ನಾನು . ನಡೆ ಕೃಷ್ಣಾ ! ಆ ಸೂರ್ಯ ಸಾಗರಕ್ಕಿಳಿಯುತ್ತಿದ್ದಾನೆ. ಈ
ವೇಳೆಯಲ್ಲಿ ವೈರಿ ಪಾಳಯದ ನೀನು ನನ್ನ ಬಳಿಯಲ್ಲಿರುವುದು ಉಚಿತವಲ್ಲ (ಎಂದು ನಮಸ್ಕರಿಸಿ
ಬೀಳ್ಕೊಡುತ್ತಿರುವಂತೆ ರಂಗದ ಮೇಲೆ ಕತ್ತಲೆ ಮುಸುಕುವುದು)

(ಒಂದು ಕ್ಷಣ ರಂಗ
ಪೂರ್ಣ ಕತ್ತಲಾಗುವುದು. ನಂತರ ಮೊದಲ ದೃಶ್ಯದಲ್ಲಿ ಬಂದಂತೆ, ಬೆಳಗಿನ ಸೂಚನೆಗಳು -
ಹಕ್ಕಿಗಳ ಚಿಲಿಪಿಲಿ - ಕರ್ಣನು ನದೀ ತೀರದಲ್ಲಿ ಸೂರ್ಯನಿಗೆ ಅರ್ಘ್ಯವನ್ನು
ಕೊಡುತ್ತಿರುವಂತೆ ಬೆಳಕು ನಿಧಾನವಾಗಿ ಹೆಚ್ಚುತ್ತದೆ. ಬೆಳಕು ಎಳೆಬಿಸಿಲನ್ನು
ಸೂಚಿಸಬೇಕು. ತೆರೆಯ ಮೇಲೆ ನದಿ, ಮತ್ತು ಕೆಲವು ಬಂಡೆಗಳು ಕಾಣುತ್ತಿರುತ್ತವೆ)

(ಹಿನ್ನೆಲೆಯಲ್ಲಿ ಹಾಡು ಬರುತ್ತಿರುವಂತೆ, ಕುಂತಿ ರಂಗದೊಳಕ್ಕೆ ಪ್ರವೇಶಿಸುವಳು. ಬಿಳೀ ಶಾಲೊಂದನ್ನು ಹೊದ್ದಿರುವಳು)

(ಹೆಂ) :
ವೀರ ರವಿಸುತನೊಂದು ದಿನ ರವಿವಾರದಲಿ ಪರಿತೋಷ ಮಿಗೆ
ಭಾಗೀರಥೀ ತೀರದಲಿ ತಾತಂಗರ್ಘ್ಯವನು  ಕೊಡುವ
ಸಾರಮಂತ್ರವ ಜಪಿಸುತಿರಲು ಔದಾರಿಯದ ಸುರತರುವ
ಕುಂತೀ ನಾರಿ ಕಾಣಲು ಬಂದಳಾತ್ಮಜನಿದ್ದ ನದಿಗಾಗಿ

ಕರ್ಣ ಕುಂತಿಯನ್ನು ಕಂಡು ಬಂದು ಬಗ್ಗಿ ನಮಸ್ಕರಿಸುವನು. ಕುಂತಿ ಆಶೀರ್ವದಿಸುತ್ತಿರುವಂತೆ ದುಃಖವಾಗುವುದು ಧ್ವನಿಯಲ್ಲೂ, ಮುಖದಲ್ಲೂ ವ್ಯಕ್ತವಾಗಬೇಕು).

ಕರ್ಣ :  ತಾಯೆ, ಬಿಜಯಗೈದ ಕಾರಣವನ್ನುಸಿರಬೇಕು

ಕುಂತಿ
: ಮಗನೆ,  ವಿಗಡತನವನು ಬಿಡು. ನೀನಾರೆಂದು ತಿಳಿದ ಮೇಲೂ ಕುರುಪತಿಯನ್ನು ಓಲೈಸುವುದು
ಸರಿಯೇ ? ನಿನ್ನ ತಮ್ಮಂದಿರನು ಪಾಲಿಸು. ನನ್ನೀ ವಚನವನ್ನು ಸಲಿಸು.

ಕರ್ಣ:
ತಾಯೇ, ಪಾಂಡುಪುತ್ರರು ನನ್ನ ತಮ್ಮಂದಿರು ಎಂಬುದನ್ನು ನಾನು ಬಲ್ಲೆ. ಪಾಂಡವ
ಕೌರವರಿಬ್ಬರಿಗೂ ನಾನೇ ಹಿರಿಯ.  ಆದರೆ ದುರ್ಯೋಧನ ರಾಜನು ನನ್ನನು ನೆಚ್ಚಿ
ಹೊರೆದಿರಬೇಕಾದರೆ,  ಸಾಯಲು ಅಳುಕುವುದೇ ? ಸುಡಬೇಕು ಅಂತಹ ಕೃತಘ್ನತೆಯ ಬಾಳನ್ನು.
ಒಡೆಯನಿಗೆ ಸೇರಿದ ರಾಜ್ಯಲಕ್ಷ್ಮಿಯನ್ನಿ ಬಯಸಿದರೆ ಅದನ್ನಾರು ಮೆಚ್ಚುವರು ? ಜಯಲಕ್ಷ್ಮಿ
ಹೇಸಳೇ ?

ಕುಂತಿ : (ನಿರುತ್ತರಳಾಗಿ ನೋಡುವಳು)

ಕರ್ಣ: ಇಂದು
ನೀವರುಹಿದ ನಂತರ ತಾನೇ ನಾನು ರವಿ ನಂದನನೆಂದರಿತಿದ್ದು? ಹಿಂದೆ ದುರ್ಯೋಧನನು
ಅದಾವುದನ್ನು ಕಂಡು ಸಲಹಿದನು ? ಈಗ ಪಾಡವರೊಡನೆ ಬಂದು ಸೇರಿದರೆ ನಗದೇ ಲೋಕ ? ನಿಮ್ಮ
ಪಾದ ಬೆಳೆಸಿದ ಕಾರ್‍ಅಣವನ್ನರುಹಿ.

ಕುಂತಿ: ಕರ್ಣ, ನಿನಗೆ ಈ ದುರಾಗ್ರಹವು
ಒಪ್ಪುವುದಿಲ್ಲ. ನನಗೊಂದು ವಚನ ನೀಡು. ಆಗುವುದಾದರೆ, ಐದು ಮಕ್ಕಳನ್ನು ಕಾಯ್ದು
ತೋರು.ಕೌರವನ ಸೇನೆಯಲ್ಲಿರುವಾಗ ತೊಟ್ಟ ಬಾಣವನ್ನು ಮತ್ತೆ ತೊಡದಿರು.

ಕರ್ಣ:
ನಿಮ್ಮ ಆಣತಿಯಂತಾಗಲಿ.  ತೊಟ್ಟ ಬಾಣವನ್ನು ಮತ್ತೆ ತೊಡಲಾರೆ ( ಎಂದು
ನಮಸ್ಕರಿಸುತ್ತಿರಲು ರಂಗದ ಬೆಳಕು ಕಡಿಮೆಯಾಗುತ್ತಲೇ ಇಬ್ಬರೂ ನಿರ್ಗಮನ - ತೆರೆ
ಬೀಳುವುದು )

---------------------------------------------------------------------------------------------------------------------------------------------------------------------------

ದೃಶ್ಯ -೬

( ತೆರೆ ಬೀಳುತ್ತಿದ್ದಂತೆ. ಮೂವರು ಹೆಂಗಸರು ಒಂದು ಕಡೆಯಿಂದ ತೆರೆಯ ಮುಂದೆ ಪ್ರವೇಶ, ಒಬ್ಬಾಕೆ ತರುಣಿ, ಇನ್ನಿಬ್ಬರದು ನಡುವಯಸ್ಸು)

ನೆರೆಯಾಕೆ: ನೋಡ ಯವ್ವSSS, ನಾರಣಪ್ಪ ಕಥಿ ಏನ್ ಛಂದಾಗ ಹೇಳಕ ಹತ್ಯಾನ ನೋಡು, ಊರಾಗಿನ್
ಮಂದಿಯೆಲ್ಲ ಮುಂಜಾನಿ ಮುಂಜಾನಿ ಹೇಗೆ ಹೋಗಿ ಕುಂತಾರ ನೋಡು ಗುಡಿ ಅಂಗಳದಾಗ. ನನಗಂತೂ
ಒಂದು ದಿವ್ಸಾನು ತಪ್ಪಿಸಾಕ್ ಮನಸಿಲ್ಲ

ಅತ್ತೆ: ಹೌದಾ ಮತ್ತ . ಅವ ಬೆಳಗಾಗ ಒದ್ದೆ ದಟ್ಟಿ ಉಟ್ಟು ಕಥಿ ಹೇಳಾಕ್ ಹತ್ತಿದ ಅಂದ್ರ
ಸರಿ, ಆ ಬಟ್ಟೆ ಒಣಗುತನ ಅದೇನು ಕಥಿ ಹೇಳ್ತಾನ ಅದೇನು ಹಾಡ್ತಾನ - ಎರ್ಡು ಕಿವಿ ಸಾಲ್ದು
ಕೇಳಾಕ ..

ನೆರೆಯಾಕೆ: ಖರೆ ಹೇಳ್ದಿ ನೋಡ - ಕಥಿ ಕಣ್ಣ್ ಮುಂದಾ ಕಂಡಂಗಿರತೈತಿ.. ಕೇಳೊ ಮಂದೀನ್ ದ್ವಾಪರ ಯುಗಕ್ಕ ಕರ್ಕೊಂಡು ಹೋಗ್ತಾನ ಅವ ನಾರಣಪ್ಪ

ಸೊಸೆ: ಅಲ್ರೀ ಅತ್ತ್ಯಾರ, ಅಂದ ಹಾಗ ಕಥಿ ಎಲ್ಲಿಗೆ ಬಂದೈತವ್ವ ? ನಿಮ್  ಮಗಂತೂ ನಿತ್ಯ
ನನಗ್ ಅದು ಇದು ಕೆಲಸ ಹಚ್ಚಿ ಇಲ್ಲಿಗ್ ಬರಾಕ್ಕೆ ಬಿಡೂದಿಲ್ಲ.ನಾನಂತೂ ಗುಡೀಗ್ ಬಂದು
ಅದೆಷ್ಟು ದಿನ ಆತು ಅಂತ...

ಒಬ್ಬಾಕೆ: ಹೌದೇನಬೇ ? ಅದೇನ್ ಕೆಲಸ ಹಚ್ತಾನವ ಕಮಲವ್ವ ನಿನ್ನ ಮಗ? ಸುಡ್ಲಿ ಅವನ ಕೆಲ್ಸ
ಅಷ್ಟು...ನಾನಂತೂ ಈ ಯುದ್ಧದ ಕಥಿ ಸುರುವಾದ ಮ್ಯಾಲ ನನ್ನ ಗಂಡಗ ಎಚ್ಚರಿಕಿ   ಕೊಟ್ಟೀನಿ
ನೋಡ - ನನ್ಗ ಮುಂಜಾನಿ ಏನಾದ್ರು  ಕೆಲಸ ಹಚ್ಚಿದ್ರ ನಿನ್ನ ಗತಿ ನೆಟ್ಟಗಿರೂದುಲ್ಲ ಅಂತ

ಅತ್ತೆ:(ಸಮಾಧಾನ ಪಡಿಸುತ್ತಾ) ಹೋಗ್ಲಿ ಬಿಡ ಯವ್ವ, ನಾ ದಿವ್ಸಾ ಕಥಿ ಕೇಳಿ ಬಂದು ನಿನಗೆ
ಹೇಳ್ತೀನಲ್ಲವ್ವ - ಆಗ್ಲ ಹದಿನೈದು ದಿನ ಯುದ್ಧ ಆದ್ದು,    ಭೀಷ್ಮ, ದ್ರೋಣ ಎಲ್ಲರ
ಯುದ್ದ ಮುಗ್ದು, ಕರ್ಣ ಸೇನಾಪತಿ ಆದ್ದು, ಆಮ್ಯಾಗ , ಕರ್ಣ ಅರ್ಜುನ ಘಟಾನುಘಟಿ ಯುದ್ಧ
ಹಚ್ಕೊಂಡಿರೂದು  ಎಲ್ಲಹೇಳಿದ್ನಲ್ಲವ್ವ ..

ನೆರೆಯಾಕೆ: ಆ ಶಲ್ಯ ಅಂತೂ ಅದೇನ್ ಮೋಸ್ಗಾರ ನೋಡು, ಯುದ್ಧ ಮಾಡುಮುಂಚೆ ಹಿಂಗೆ ಕೈ ಕೊಟ್ಟು ಹೋಗೂದಾ ? ಸಾರಥಿ ಇಲ್ಲದ ಆ ಕರ್ಣ ಅದೇನ್ ತಾನ್ ಯುದ್ಧ ಮಾಡ್ಯಾನ ?

ಸೊಸೆ: ಮತ್ತೆ ನಡೀರಿ ಲಗೂನ ಲಗೂನSS .. ಹೋಗಿ ಕೇಳೋಣು

--------------------------------------------------------------------------------------------------------------------------------------------------------------------------------

ದೃಶ್ಯ -೭

(ಹಿನ್ನಲೆಯಲ್ಲಿ ಹಾಡು ಪ್ರಾರಂಭವಆಗುತ್ತಿದ್ದಂತೆ ಹೆಂಗೆಳೆಯರು
ನಿರ್ಗಮಿಸುವರು.ಹಿನ್ನೆಲೆಯಲ್ಲಿ ಯುದ್ಧದ ಶಬ್ದಗಳು - ಶಂಖ ಮೊಳಗುವುದು ಇತ್ಯಾದಿ- ರಂಗದ
ಒಂದು ಕಡೆ ಕೃಷ್ಣ, ಅರ್ಜುನ ; ಇನ್ನೊಂದು ಕಡೆ  ಕರ್ಣ ನಿಂತಿದ್ದು ಈ ಪದ್ಯಗಳಿಗೆ
ಸೂಕ್ತವಾದ ಅಭಿನಯ ನೀಡಬೇಕು)

(ಗಂ):
ಸಕಲ ದನುಜ ಭುಜಂಗ ವೃಂದಾರಕ ಮಹಾಭೂತಾದಿ
ಲೋಕ ಪ್ರಕರವೆರಡು ಒಡ್ಡಾಯ್ತುಕರ್ಣಾರ್ಜುನರ ಕದನದಲಿ

(ಹೆಂ):
ಶಿವ ಶಿವಿದು ತಾರಕನ ಗುಹನಾಹವೋ ಮೇಣ್ ರಾವಣನ ರಾಮನ
ಬವರವೋ ಹೊಸತಾಯ್ತು ಕರ್ಣಾರ್ಜುನರ ಸಂಗ್ರ್‍ಆಮ

ಕರ್ಣ : ಎಲವೋ ಪಾರ್ಥ, ಕೊಳ್ಳು ಈ ಸರ್ಪಾಸ್ತ್ರವನ್ನು. ಇದರ ಗುರಿಯಿಂದ ನೀನು ತಪ್ಪಿಸಿಕೊಳ್ಳಲಾರೆ
(ಬಾಣ ಹೊಡೆಯುವುದನ್ನು ಅಭಿನಯಿಸುವನು)

(ಹಿನ್ನಲೆಯಲ್ಲಿ ಸರ್ಪ ಫೂತ್ಕರಿಸುವ ದ್ವನಿ, ಅಥವಾ ಹಾವಾಡಿಗರು ನುಡಿಸುವಂಥ ಸಂಗೀತ)

ಕೃಷ್ಣ: ಅರ್ಜುನ, ಬರುತ್ತಿರುವ ಆ ಸರ್ಪಾಸ್ತ್ರವನ್ನು ನೋಡು (ಎಂದು  ಅರ್ಜುನನನ್ನು ಕೆಳಗೆ ದೂಡುವನು, ಅರ್ಜುನನ ಕಿರೀಯ್ಟ ಮಾತ್ರ ಉರುಳುತ್ತದೆ)

ಕರ್ಣ: ಇದೇನಿದು ಅಚ್ಚರಿ, ನಾನು ಹೂಡಿದ ಅಸ್ತ್ರ ನನ್ನ ಬತ್ತಳಿಕೆಯಲ್ಲಿ ಮತ್ತೆ ? (ಶಸ್ತ್ರವನ್ನು ಕೈಯಲ್ಲಿ ಹಿಡಿದು ನೋಡುವನು)

(ಹಿನ್ನಲೆಯಿಂದ)
: ಕರ್ಣ, ನಾನು ನಿನ್ನ ಸರ್ಪಾಸ್ತ್ರ. ಆ ಕೃಷ್ಣನ ಕುತಂತ್ರದಿಂದ ನನ್ನ ಗುರಿ ತಪ್ಪಿತು.
ಇನ್ನೊಮ್ಮೆ ನನ್ನನ್ನು ಪ್ರಯೋಗಿಸು. ಆ ಪಾರ್ಥನು ಮೂರು ಲೋಕದಲ್ಲಿ ಎಲ್ಲೇ ಹೋದರೂ
ಅವನನ್ನು ಬಿಡದೆ ಕೊಲ್ಲುವೆ ಈ ಬಾರಿ.

ಕರ್ಣ : ತೊಟ್ಟ ಬಾಣವ ತೊಡದಿಹೆನೆಂಬ ಭಾಷೆ ಇತ್ತಿರುವೆ ಮಾತೆಗೆ.
(ಹಿನ್ನಲೆಯ ಸಂಗೀತಕ್ಕೆ ಅಭಿನಯಿಸುವನು):

ಮಾತೆಗಿತ್ತೆನು ಭಾಷೆಯನು ನಿನ್ನಾತಗಳೊಳೈವರಗಾರಿದಿರಾತಡೆಯು
ತಲೆಗಾದು ಬಿಡುವೆನು ಕೊಲುವುದಿಲ್ಲೆಂದು

ಹೂಡಿದ ಅಸ್ತ್ರವನ್ನು ಮತ್ತೆ ತೊಡಲಾರೆ . (ಬಾಣವನ್ನು ಬತ್ತಳಿಗೆಕೆ ಮರಳಿಸುವನು)

ಅರ್ಜುನ : ಎಲೋ ರಾಧೇಯಾ. ವೃಥಾ ಬಾಯಿಬಡುಕತನದ ಮದವೇಕೆ ನಿನಗೆ ? ನೋಡು ಈಗ ನನ್ನ ಶಸ್ತ್ರ ಚಮತ್ಕಾರವನ್ನು
( ಬಾಣಗಳನ್ನು ಬಿಡುವ ಅಭಿನಯ ತೋರುವನು)

ಹಿನ್ನಲೆಯಲ್ಲಿ ಷಟ್ಪದಿ:

ಗಾಲಿಯೆದ್ದವು ಕೂಡೆ ಯಂತ್ರದ ಕೀಲುಗಳು ಕಳಚಿದವು (೨-೩ ಬಾರಿ)

(ಕರ್ಣ
ತನ್ನ ರಥಕ್ಕೆ ಬಂದ ಸ್ಥಿತಿಯನ್ನು ನೋಡಿ,  ಬತ್ತಳಿಕೆಯನ್ನು ಪಕ್ಕಕ್ಕಿಟ್ಟು
ಅಚ್ಚರಿಯಿಂದ ಕೆಳಗೆ ಇಳಿಯುವ ಅಭಿನಯ ಮಾಡುತ್ತಿರಲು, ಅರ್ಜುನ ಮೀಸೆ ತಿರುವುತ್ತಿರುವನು.
ಕೃಷ್ಣ ಮುಗುಳ್ನಗೆ  ಬೀರುತ್ತ ಇಬ್ಬರನ್ನೂ ನೋಡುತ್ತಿರುತ್ತಾನೆ)

ಕರ್ಣ : (ಮಂಡಿಯೂರಿ ಕುಳಿತು - ರಥವನ್ನೆತ್ತಲು ಪ್ರಯತ್ನಿಸುತ್ತಿತ್ತಾ)

ಧನಂಜಯ, ಒಂದು ಘಳಿಗೆ ಸೈರಿಸಿಕೊ. ರಥವನ್ನು ಕೆಸರಿನಿಂದೆತ್ತಿ ಕಾಳಗಕ್ಕೆ ಮರಳುವೆನು.
ಪಂಥದ ಪಾಡು ಬಲ್ಲವನು ನೀನು. ರೂಢಿಸಿದ ಭಟ. ಶಸ್ತ್ರಹೀನರ, ವಾಹನ ಹೀನರ ಮೇಲೆ
ಕೈಮಾಡಬಾರದೆಂಬ ಮಾರ್ಗವನ್ನು ಅರಿತಿರುವೆ.
(ರಥದ ಗಾಲಿಗಳ ದುರಸ್ತಿ ಕಡೆಗೆ ಗಮನ ಕೊಡುತ್ತಿರುವನು)

ಅರ್ಜುನ : (ತಲೆಯಾಡುತ್ತ ಸಮ್ಮತಿ ಸೂಚಿಸುವನು)   

ಕೃಷ್ಣ
: (ಕ್ಷಣಾರ್ಧದಲ್ಲಿ ಅರ್ಜುನನನ್ನು ತಿವಿಯುತ್ತ) ಅಯ್ಯೋ ಮರುಳು ಗಾಂಡೀವಿ,  ವೈರಿಗಳು
ಆಪತ್ತಿನಲ್ಲಿರುವಾಗಲೇ ಅವರನ್ನು ಗೆಲ್ಲಬೇಕೆಂಬುದು ರಾಜನೀತಿ. ಈ ಕಲಿವೀರ ಕರ್ಣನನ್ನು
ಮುಗಿಸಲು ಇದೇ ಸದವಕಾಶ.

ಅರ್ಜುನ: (ಅಸಮ್ಮತಿಯಿಂದ) ಈ ಕರ್ಣ ಹಗೆಯೇನೋ ನಿಜ.
ಆದರೆ, ಸಾರಥಿ ಬಿಟ್ಟು ಹೋಗಿರುವಾಗ, ರಥದ ಗಾಲಿ ಮುರಿದಿರುವ  ಈ ಸಂದರ್ಭದಲ್ಲಿ ಅವನನ್ನು
ಹೊಡೆಯಲು ನನ್ನ ಮನವೊಪ್ಪುತ್ತಿಲ್ಲ. ಇವನು ಹಗೆಯಾಗಿದ್ದರೂ,  ಇವನ ಮೇಲೆ ಬಿಲ್ಲೆತ್ತಲು
ಕೈ ಏಳುತ್ತಿಲ್ಲ. ಇವನು ಯಾವ ಜನ್ಮದ ಸಖನೋ ಎಂದು ಮನಸ್ಸು ಹೇಳುತ್ತಿದೆಯಲ್ಲ ?
ನಿಜವನ್ನು ನುಡಿ ಕೃಷ್ಣ . ಯಾರೀ ಕರ್ಣ ? ಇವನಲ್ಲಿ ಸೋದರ ಭಾವವು ಬರುತ್ತಿದೆಯಲ್ಲ? 
ಸೋದರರ ನಡುವಿನ ಈ ಯುದ್ಧವನ್ನು ನಿಲ್ಲಿಸಿ, ನಾವು ವನಾಂತರಕ್ಕೆ ಹೋಗಿಬಿಡುವ
ಮನಸ್ಸಾಗುತ್ತಿದೆ. ಈ ರಾಜ್ಯವು ಕೌರವರಿಗೇ ಇರಲಿ. (ಎಂದು ವಿಷಾದವನ್ನು ತೋರುವನು)

ಕೃಷ್ಣ:
ಈ ಸೂತಪುತ್ರನ ಮೇಲೆ ಈ ಕರುಣೆಯೇಕೆ? ಇವನು ಅಭಿಮನ್ಯುವಿನ ಮರಣಕ್ಕೆ ಕಾರಣವಾದುದ್ದನ್ನು
ಮರೆತೆಯಾ ? ಇವನನ್ನು ಬಿಟ್ಟರೆ ಧರ್ಮಜನನ್ನು, ಭೀಮನನ್ನು ತನ್ನ ಬಿಲ್ಲಿನಲ್ಲೆ ಕೊಲ್ಲನೇ
ಇವನು ?

(ಹಿಮ್ಮೇಳದಲ್ಲಿ ಪದ್ಯ ಬರಲು ಕೃಷ್ಣ ಅರ್ಜುನರಿಂದ ಸೂಕ್ತ ಅಭಿನಯ. ಕರ್ಣ ತನ್ನ ರಥದ ಕೆಲಸದಲ್ಲಿ ವ್ಯಸ್ತನಾಗಿರಬೇಕು)

(ಗಂ):
ಬೀಸಿದನು ನಿಜ ಮಾಯೆಯನು ಡೊಳ್ಳಾಸದಲಿ ಹರಹಿದನು ತನುವನು
ರೋಷವನು ಬಿತ್ತಿದನು ಮನದಲಿ ನರನ ಕಲಿಮಾಡಿ

(ಅರ್ಜುನ ಬಿಲ್ಲನ್ನೆತ್ತಿ ಕರ್ಣನೆಡೆಗೆ ಬಾಣಗಳ ಮಳೆ ಸುರಿಸುವನು)

ಕರ್ಣ
: (ಚಕಿತನಾಗಿ) ಅಯ್ಯೋ ಸುಯೋಧನನಿಗಿನ್ನಾರು ಗತಿ ? ಆದರೂ ಸಲಹಿದ ಒಡೆಯನಿಗೆ ತಲೆಯ
ಕೊಡುವ ಪುಣ್ಯದ ಫಲ,  ಮರಣದ ವೇಳೆ ಕೃಷ್ಣನನ್ನು ಕಾಣುವ ಸುಕೃತ ಇಳೆಯ ಮೇಲಿನ್ನಾರಿಗುಂಟು
? (ಕೃಷ್ಣನಿಗೆ ನಮಸ್ಕರಿಸುತ್ತಾ ಕೆಳಗೆ ಬೀಳುವನು)

(ರಂಗ ಕತಲಾಗುತ್ತದೆ. ಕರ್ಣನ ದೇಹದ ಮೇಲೆ ಸ್ಪಾಟ್‍ಲೈಟ್.  ಅವನ ದೇಹದಿಂದ ಜ್ಯೋತಿಯೊಂದು ಹೊರಟು ಆಕಾಶಕ್ಕೆ ಹೋಗಿ ಸೂರ್ಯನೊಡನೆ ಒಂದಾಗುವುದು)

ಹಿನ್ನಲೆಯಲ್ಲಿ (ಹೆಂ):

ಕರ್ಣನೊಡಲಲಿ ತೇಜ ಪುಂಜವೊದೆದುಪ್ಪರಿಸಿ ಹಾಯ್ದುದು
ಹೊಳೆದು ದಿನ ಮಂಡಲದ ಮಧ್ಯದಲಿ

(ಬೇರೆ ಬೇರೆ ದೇವತೆಗಳ ಧ್ವನಿಗಳು) : ಭಾಪುರೆ ಕರ್ಣ  ! ಭಲೆ ! ಭಲೆ !  ನಿನ್ನ ಸರಿದೊರೆ ಎರಡು ಯುಗದಲಿ ಕಾಣೆ! ನೀನೇ ಧನ್ಯ

(ರಂಗವು ಪೂರ್ಣ ಕತ್ತಲಾಗುವುದು)

--------------------------------------------------------------------------------------------------------------------------------------------------------------------------------

ದೃಶ್ಯ -೮

ಕರ್ಣನ ಕಥಾನಕ ಆದ ನಂತರ ರಂಗದ ಮೇಲೆ ಬೆಳಕು ಕಡಿಮೆಯಾಗುವುದು.  ಬೆಳಕು ಬಂದಾಗ
ಮತ್ತೆ ಮೊದಲಿನ ದೇವಾಲಯದ ಜಗುಲಿಯ ಮೇಲೆ ಕುಮಾರ ವ್ಯಾಸ ಬರೆಯುತ್ತಾ ಕುಳಿತಿದ್ದಾನೆ.
ಪಕ್ಕದಲ್ಲೇ ಪಾರುಪತ್ತೇದಾರ ನಿಂತಿರುವನು. ತಾಳೆ ಗರಿಯನ್ನೆತ್ತಿ ಪಕ್ಕಕ್ಕಿಡುವ ಅಭಿನಯ
ಮಾಡುತ್ತಿರುವನು ) ಕೆಳಗೆ ಹತ್ತಾರು ಗ್ರಾಮಸ್ಥರು ಕುಳಿತಿರುತ್ತಾರೆ)

(ಊರ ಪ್ರಮುಖ ಒಳಗೆ ಬರುತ್ತಿದ್ದಂತೆ ಕುಳಿತ ಜನರೆಲ್ಲಾ ಎದ್ದು ನಿಂತು, ನಮಸ್ಕರಿಸಿ, ಮತ್ತೆ ಕೂಡುವರು )

ಪಾರುಪತ್ತೇದಾರ
: ಊರ ಗಾಮುಂಡರು ಬರಬೇಕು. ಮಹಾಕವಿ ಕುಮಾರವ್ಯಾಸ ವೀರನಾರಾಯಣನ ಗುಡಿಯಲ್ಲಿ ಕುಳಿತು
ಹಾಡಿ ಬರೆಯುತಿದ್ದ ಕರ್ಣಾಟ ಭಾರತ ಕಥಾ ಮಂಜರಿ ಎಂಬ ಭಾರತ ಕಥೆ ಇಂದೇ ತಾನೇ
ಮುಕ್ತಾಯವಾಗಿದೆ.

ಊರ ಪ್ರಮುಖ :  (ನಾರಣಪ್ಪನನ್ನು ಉದ್ದೇಶಿಸಿ )
(ಹಾಡು ಹಿಮ್ಮೇಳದಲ್ಲಿ)

ನಾರಣಪ್ಪ ಮಹಾಕವಿಗಳ ಕವಿತ್ವವನ್ನು ನಾವು ಕೇಳಿ ಬಲ್ಲೆವು. ಅಷ್ಟಲ್ಲದೇ ಇವರಿಗೆ ಕುಮಾರವ್ಯಾಸನೆಂಬ ಅಭಿಧಾನವಿರುವುದೇ ?

(ಹಾಡು ಹಿಮ್ಮೇಳದಲ್ಲಿ ಗಂ:)

ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆ
ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದವುಲುಹುಗೊಡದೊಂದಗ್ಗಳಿಕೆ
ಎಂಬೀ ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ

(ಈ
ಹಾಡು ಬರುತ್ತಿದ್ದಂತೆ ನಾರಣಪ್ಪ ಜಗುಲಿಯಿಂದ ಎದ್ದು ಮುಂದೆ ಬರುತ್ತಿರುವಂತೆ,
ಪಾರುಪತ್ತೇದಾರ ಕೊಳಲನ್ನು ಜಗುಲಿಯ ಮೇಲೆ ಕಾಣುವಂತಿಟ್ಟು ನಿಧಾನವಾಗಿ, ಗುಡಿಯೊಳಗೆ
ಪ್ರವೇಶ ಮಾಡುವನು.  ಹಾಡು ಮುಗಿದ ಮೇಲೆ ಮುಖಂಡ ನಾರಣಪ್ಪನಿಗೆ ನಮಸ್ಕರಿಸಿ ಶಾಲು
ಹೊದೆಸುವನು)

ನಾರಣಪ್ಪ : ಮುಖಂಡರೆ, ನಾನು ಕೈಗೊಂಡ ಕಾರ್ಯ ಇಂದಿಗೆ
ಪೂರ್ಣವಾಯಿತು. (ಪಕ್ಕಕ್ಕೆ ತಿರುಗಿ,) ಕೃಷ್ಣಪ್ಪ, ಕರ್ಣಾಟ ಭಾರತ ಕಥಾ ಮಂಜರಿಯ
ಹೊತ್ತಿಗೆಯನ್ನು ತಂದು ತೋರಿಸುವೆಯಾ ಊರ ಗಾವುಂಡರಿಗೆ ?

( ಒಂದು ಕ್ಷಣ ನಿಶ್ಶಬ್ದ - ನಾರಣಪ್ಪ ತಾನೇ ಜಗುಲಿಗೆ ಹೋಗಿ ನೋಡುವನು. ಕೊಳಲು ಮತ್ತು ಶಂಖ ಮಾತ್ರ ಕಾಣಲು ಏನೋ ಹೊಳೆದವನಂತೆ ಅಲ್ಲೇ ಮಂಡಿಯೂರಿ)

ನಾರಣಪ್ಪ
: ಕೃಷ್ಣಾ, ತಿಳಿಯ ಹೇಳುವೆ ಕೃಷ್ಣ ಕಥೆಯನು - ಇಳೆಯ ಜಾಣರು ಮೆಚ್ಚುವಂತಿರೆ ನೆಲೆಗೆ
ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ ಎಂದು ನಾನು ಹೇಳಿದ್ದಕ್ಕೆ ಕೃಪೆದೋರಿ
ನೀನೇ ಬಂದು ಪೊರೆದೆಯಾ ನನ್ನನ್ನು (ಎಂದು ಮತ್ತೆ ನಮಸ್ಕರಿಸುವನು)

ಲಕ್ಷ್ಮೀ: (ಮುಂದೆ ಬಂದು) 

(ಹಾಡು ಹಿಮ್ಮೇಳದಲ್ಲಿ - ನೃತ್ಯ ಗಾತಿಯರು ನೃತ್ಯ ಮಾಡುತ್ತಾರೆ)

ವೇದ ಪಾರಾಯಣದ ಫಲ ಗಂಗಾದಿ ತೀರ್ಥ ಸ್ನಾನಫಲ
ಕೃಚ್ಚಾದಿ ತಪಸಿನ ಫಲವು ಜ್ಯೋತಿಷ್ಟೋಮ ಯಾಗಫಲ
ಮೇದಿನಿಯನೊಲಿದಿತ್ತ ಫಲ ವಸ್ತ್ರಾದಿ ಕನ್ಯಾ ದಾನ ಫಲವಹುದು
ಆದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ

(ಎಲ್ಲರೂ ಕೈಮುಗಿದುಕೊಂಡು ರಂಗದ ನಡುವೆ ಬರುತ್ತಾರೆ. ನಡುವೆ ನಾರಣಪ್ಪ ಮತ್ತು ಪತ್ನಿ. ಗುಂಪು ಹಿಮ್ಮೇಳದಲ್ಲಿ ಮಂಗಳ. ಕೆಲವು ಪಾತ್ರಗಳು ನರ್ತಿಸುತ್ತವೆ)  

ವೇದ ಪುರುಷನ ಸುತನ ಸುತನ ಸಹೋದರನ ಹೆಮ್ಮಗನ ಮಗನ
ತಳೋದರಿಯ ಮಾತುಳನ ರೂಪನತುಳ ಭುಜಬಲದಿ ಕಾದಿಗೆಲಿದನ
ಅಣ್ಣನ ಅವ್ವೆಯ ನಾದಿನಿಯ ಜಠರದಲಿ ಜನಿಸಿದ
ಅನಾದಿ ಮೂರುತಿ ಸಲಹೋ ಗದುಗಿನ ವೀರನಾರಯಣ

   (ತೆರೆ ಬೀಳುವುದು)

***********************************************************************************************************************************************

 

ಈ ನಾಟಕದ ಕೆಲವು ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಿ - ಧ್ವನಿ ಮುದ್ರಣ ಅಷ್ಟೇನೂ ಚೆನ್ನಾಗಿಲ್ಲ ಅನ್ನುವ ಎಚ್ಚರಕೆ ಮೊದಲೇ ಕೊಡುವೆ :)

 

Rating
Average: 1 (1 vote)

Comments