ನಾ ಕಂಡಂತೆ...ಕನ್ನಡ ರಾಜ್ಯೋತ್ಸವ...ನಮ್ಮಾಫೀಸ್ನಲ್ಲಿ!

ನಾ ಕಂಡಂತೆ...ಕನ್ನಡ ರಾಜ್ಯೋತ್ಸವ...ನಮ್ಮಾಫೀಸ್ನಲ್ಲಿ!

ಕಾರ್ಯಕ್ರಮ ಯಾವತ್ತು ಮಾಡೋದು? ಹೊಸದಾಗಿ ಏನೇನು ಮಾಡಬಹುದು? ಯಾವ್ಯಾವ ಸ್ಪರ್ಧೆಗಳು? ಮತ್ತು ಯಾರ್ಯಾರು ನಡೆಸಿಕೊಡ್ತಾರೆ…..ಆಸಕ್ತಿ ಇರೋವರೆಲ್ಲಾ ಸೇರಿಕೊಂಡು ಒಂದು ತಿಂಗಳು ಮುಂಚೆನೇ ಮಂತ್ರಾಲೋಚನೆ(discuss) ಮಾಡಿದ್ವಿ. :)

ಈ ಸಲ ಹೊಸದಾಗಿ ಮಾಡಿದ್ದರ ಬಗ್ಗೆ ಹೇಳ್ಬೇಕು ಅಂದ್ರೆ.......ನಮ್ಮ ಕನ್ನಡ ಮಹನೀಯರ ಬಗ್ಗೆ ತಿಳಿದುಕೊಳ್ಳುವ/ತಿಳಿಸುವ ಕೆಲಸ! ಮಂತ್ರಾಲೋಚನೆಯಲ್ಲಿ ಕೆಳಗಿನ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಕನ್ನಡ ಮಹನೀಯರ ಒಂದು ದೊಡ್ಡ ಪಟ್ಟಿ ಮಾಡಿದ್ವಿ, ರಾಜ/ರಾಣಿಯರು,ದಾಸರು,ವಚನಗಾರರು,ಸಾಹಿತಿಗಳು,ಕವಿಗಳು(ಹಳ/ನಡು/ಹೊಸಗನ್ನಡದ), ವಿಜ್ಞಾನಿಗಳು,ತಂತ್ರಜ್ಞರು, ಕ್ರೀಡಾಳುಗಳು,ಸಂಗೀತಗಾರರು, ಚಲನಚಿತ್ರಗಾರರು……ಮುಂತಾದವರು. ಆ ಮಹನೀಯರ ಫೋಟೋದೊಂದಿಗೆ, ಅವರ ಕಿರು ಪರಿಚಯ ಮತ್ತು ಸಾಧನೆಗಳ ಬಗ್ಗೆ ಒಂದು ಹಾಳೆಯಷ್ಟು ವಿಚಾರವನ್ನ ಚಿಕ್ಕದಾಗಿ ಚೊಕ್ಕವಾಗಿ ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಬರೆಯೋದು/ಸಂಗ್ರಹಿಸೋದು.

ನಾವೆಲ್ಲರೂ ನಮ್ಮ ಮೆಚ್ಚಿನ ಮಹನೀಯರನ್ನ ಆಯ್ಕೆ ಮಾಡ್ಕೊಂಡು ಬರೆದು ಮುಗಿಸಿದ್ವಿ. ನಾನು ಮೊದಲು ಬರೆದದ್ದು ನನ್ನ ನೆಚ್ಚಿನ ಕೆ.ಎಸ್.ನ.ರ ಬಗ್ಗೆ, ನಂತರ ಶಿಶುನಾಳ ಶರೀಫ, ಬಿ.ಎಂ.ಶ್ರೀ, ಮಾಸ್ತಿಯವರ ಬಗ್ಗೆ ಬರೆದೆ.

ಹೀಗೆ ಸಂಗ್ರಹಿಸಿದ ಲೇಖನಗಳನ್ನ ದಿನಕ್ಕೆ ಒಂದರಂತೆ ನವೆಂಬರ್ ತಿಂಗಳಿಡೀ ಕನ್ನಡ ಮಹನೀಯರ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿರೋ ಲೇಖನವನ್ನ ನಮ್ಮಾಫೀಸ್ನಲ್ಲಿರೋವ್ರಿಗೆಲ್ಲಾ (ಸುಮಾರು 4 ಸಾವಿರ ಜನ ಅಂದ್ಕೊಳ್ಳಿ!) ಕಳಿಸೋದು. ಇದಕ್ಕೆ ತುಂಬಾ ಒಳ್ಳೆಯ ಪ್ರತಿಕ್ರಿಯೆಗಳು ಬಂದವು. ಕನ್ನಡಿಗರಷ್ಟೇ ಅಲ್ದೆ ಎಲ್ಲರಿಂದಲೂ ಪ್ರತಿಕ್ರಿಯೆ ಬಂದದ್ದು ಕಂಡು ಬಹಳ ನಲಿವಾಯ್ತು.

ಒಂದು ವಿಚಾರ ಮರೀದೆ ಬರೆಯಬೇಕು ಅದೇನಂದ್ರೆ ಈ ಲೇಖನಗಳನ್ನ ಸಂಗ್ರಹಿಸುವಾಗ ನೆರವು ತೆಗೆದುಕೊಂಡದ್ದು ಕನ್ನಡ ವಿಕಿಪೀಡಿಯಾದಿಂದ.ಅಲ್ಲಿ ಬರೆದ ಎಲ್ಲಾ ಲೇಖಕರಿಗೂ ಮತ್ತು ಕನ್ನಡ ವಿಕಿಪೀಡಿಯಾದ ಬೆನ್ನೆಲುಬಾದ ನಮ್ಮ ಹರಿಪ್ರಸಾದ್ ನಾಡಿಗರಿಗೆ ವಂದನೆಗಳು. ಮತ್ತೆ ಈವತ್ತು (18 ನವೆಂಬರ್) ಹರಿ ಪ್ರಸಾದರ ಹುಟ್ಟು ಹಬ್ಬ so ಮತ್ತೊಮ್ಮೆ ಶುಭಾಶಯಗಳು :)

(ಕಳೆದ ವರ್ಷದ ವಿಚಾರ ಏನಂದ್ರೆ 'ಕನ್ನಡ coffee' ಅಂತ ‘ಕನ್ನಡ ಕಲಿಸುವ ಕ್ಲಾಸ್’ ನಡೆಸಿದ್ದು. ಸುಮಾರು ಸಹೋದ್ಯೋಗಿಗಳು ಕನ್ನಡ ಮಾತಾಡೋದನ್ನ ಕಲಿತದ್ದು ಸಂತಸದ ವಿಚಾರ. :) )

------------------------------------------------------------

ನವೆಂಬರ್ ಮೊದಲ ವಾರದಿಂದ ಯೋಜನೆಯಂತೆ ಎಲ್ಲಾ ಸ್ಪರ್ಧೆಗಳು ಸಾಂಗವಾಗಿ ನಡೆದವು.

ಸ್ಪರ್ಧೆಗಳಲ್ಲಿ,

1. ಶತ ಪ್ರತಿಶತ ಕನ್ನಡ - ಇದು ಒಂದು ನಿಮಿಷದ ಸ್ಪರ್ಧೆ. ಪ್ರಶ್ನೆಗಳನ್ನ ಕನ್ನಡ/ಇಂಗ್ಲೀಷ್/ಕಂಗ್ಲೀಷ್ನಲ್ಲಿ ಕೇಳಲಾಗುತ್ತೆ….ಆದ್ರೆ ಉತ್ತರ ಮಾತ್ರ ಪೂರ್ತಿ ಕನ್ನಡದಲ್ಲೆ ಹೇಳ್ಬೇಕು :D ಸಕತ್ ಮಜಾ ಇತ್ತು!

2. ಕವನ, ಹನಿಗವನ, ಚುಟುಕ ಸ್ಪರ್ಧೆ

3. ಚುಕ್ಕಿ ಚಿತ್ತಾರ - ರಂಗೋಲೆ ಸ್ಪರ್ಧೆ

4. ಬರವಣಿಗೆ - ಕನ್ನಡ/ಕರ್ನಾಟಕದ ಬಗ್ಗೆ ಕೊಡುವ ಚಿತ್ರಪಟದ ಬಗ್ಗೆ ಒಂದು ನಿಮಿಷದಲ್ಲಿ ಲೇಖನ ಬರೆಯುವುದು.

5. ಕನ್ನಡ ಮಹನೀಯರ ಚಿತ್ರ, ಪರಿಸರದ ಚಿತ್ರ, ವ್ಯಂಗ್ಯ ಚಿತ್ರ ಬಿಡಿಸುವ ಸ್ಪರ್ಧೆ

------------------------------------------------------------

ಇನ್ನು ಕಾರ್ಯಕ್ರಮದ ದಿನ 14 ನವೆಂಬರ್ 2008ರ ಬಗ್ಗೆ ಹೇಳ್ಬೇಕು ಅಂದ್ರೆ ಒಂಥರಾ ಹಬ್ಬದ ವಾತಾವರಣ. ರಂಗೊಲೆ,ಮಾವಿನ ತೋರಣದಿಂದ ಅಲಂಕೃತಗೊಂಡ ಸಭಾಂಗಣ ನಮ್ಮೆಲ್ಲರ ಸಡಗರವನ್ನ ಹಿಮ್ಮಡಿಗೊಳಿಸುತ್ತಿತ್ತು. ದ್ವಾರದಲ್ಲೇ ಕರ್ನಾಟಕದ ನಕಾಶೆಯನ್ನ ಬಣ್ಣಗಳಿಂದ ಬಿಡಿಸಿದ್ದರು. ಎಲ್ಲಾ ಹೆಣ್ಮಕ್ಕಳು ರೇಷ್ಮೆ ಸೀರೆಯಲ್ಲಿದ್ದರೆ ಗಂಡುಮಕ್ಕಳು ಅಂಗಿ,ಪಂಚೆ ಶಲ್ಯದಲ್ಲಿದ್ದರು. ಕಾರ್ಯಕ್ರಮ ಶುರುವಾಗೋ ಹೊತ್ತಿಗೆ ಸಭಾಂಗಣ ಪೂರ್ತಿ ತುಂಬಿ ತುಳುಕುತ್ತಿತ್ತು.

ನಡೆದ ಕಾರ್ಯಕ್ರಮಗಳು ಹೀಗಿದ್ದವು:

1. 'ತಾಯೆ ಶಾರದೆ ಲೋಕ ಪೂಜಿತೆ' ಪ್ರಾರ್ಥನೆಯಿಂದ ಶುರುವಾದದ್ದು,

2. 'ಹಚ್ಚೇವು ಕನ್ನಡದ ದೀಪಾ' ನೃತ್ಯ

3. 'ತಾಯೆ ಬಾರಾ ಮೊಗವ ತೋರ' ಹಾಡು, (ಈ ಹಾಡಿನ ಸಾಹಿತ್ಯ ಕೊಟ್ಟ ಸಂಪದಿಗರಿಗೆಲ್ಲಾ ಧನ್ಯವಾದಗಳು)

4. ಹಳೆ ಕನ್ನಡ ಚಲನಚಿತ್ರದ ಹಾಡುಗಳಿಗೆ ನೃತ್ಯ.

5. ಹುಡುಗರು ಮತ್ತು ಮೇಷ್ಟ್ರ ಇಸ್ಕೂಲಿನ ಕಿರು ಹಾಸ್ಯ ನಾಟಕ.

6. ಕೈಲಾಸಕ್ಕೂ recession ತಪ್ಪಿದ್ದಲ್ಲ ಅನ್ನೋ ಒಂದು ಕಿರು ಹಾಸ್ಯ ನಾಟಕ… :D :D

7. ನಮ್ಮಾಫೀಸಿನ 'ಬೀಚಿ' ಅಂತಲೇ ಪ್ರಸಿದ್ದಿಯಾಗಿರುವ ರಾಘವೇಂದ್ರರಿಂದ ಹಾಸ್ಯ ಭಾಷಣ. ಅದೆಷ್ಟು ನಕ್ಕಿದ್ದು ಅಂತೀರಿ...ಚಪ್ಪಾಳೆ ಮೇಲೆ ಚೆಪ್ಪಾಳೆ :D

ಚಿತ್ರಕಲೆ ಪ್ರದರ್ಶನ ಇತ್ತು. ಅಲ್ಲಿ ನನ್ನ ದ್ಯುತಿ ಸಂಶ್ಲೇಷಣೆ ಕ್ರಿಯೆ ಚಿತ್ರ ಕೂಡ ಇತ್ತು :)

ಮೂರು ದಿನಗಳವರೆಗೆ ಟೋಟಲ್ ಕನ್ನಡ ಡಾಟ್ ಕಾಂ ಅವರ ಕನ್ನಡ ಪುಸ್ತಕಗಳು,T ಅಂಗಿ,ಹಾಡು,ಚಲನ ಚಿತ್ರಗಳ ಸಿಡಿ/ಡಿವಿಡಿಗಳ ಮಾರಾಟ ಮಳಿಗೆ ಇಟ್ಟಿದ್ರು.

------------------------------------------------------------

ಇಷ್ಟೆಲ್ಲಾ ಓದಿದ ಮೇಲೆ ನಿಮ್ಮಲ್ಲಿ ಕೆಲವು ಪ್ರಶ್ನೆಗಳು ಕಾಡಿರಬಹುದು.ಉತ್ತರಗಳನ್ನ ಮೊದಲೇ ತಿಳಿಸುವೆ. :)

ಇಲ್ಲ ಬಹಳ ವರ್ಷಗಳಿಂದ ಅಲ್ಲ…ಕನ್ನಡ ರಾಜ್ಯೋತ್ಸವದ ಆಚರಣೆಯನ್ನ ಮೂರು ವರ್ಷಗಳ ಹಿಂದೆ ಅಷ್ಟೆ ಶುರು ಮಾಡಿದ್ದು.

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಮತ್ತು ಯುಗಾದಿ ಹಬ್ಬಕ್ಕೊಂದು ಕನ್ನಡದ ನಾಟಕ ಇವೆರಡನ್ನ ಮಾತ್ರ ವಿಶೇಷವಾಗಿ ಆಚರಿಸಲಾಗತ್ತೆ.

ಸ್ಪರ್ಧೆಗಳನ್ನ ಆಫೀಸ್ ಕೆಲಸದ ಸಮಯ ಮುಗಿದ ನಂತರವೇ ನಡೆಸಿದ್ದು.

ಇಷ್ಟೆಲ್ಲಾ ಕಾರ್ಯಕ್ರಮ ನಡೆಸೋದಕ್ಕೆ ಬೇಕಾದ ಹಣ...ಎಲ್ಲಾ ಸಹೃದಯ ಸಹೋದ್ಯೋಗಿಗಳ ಇಚ್ಛೆಯಂತೆ ನೀಡಿದ ದೇಣಿಗೆಯ ರೂಪದಲ್ಲಿ ಬಂದದ್ದು. ಕನ್ನಡಿಗ,ತಮಿಳ,ಹಿಂದಿ,ತೆಲುಗ,ಮಲೆಯಾಳಿ ಅನ್ನೋ ಭಾವವೇನೂ ಇರಲಿಲ್ಲ! ಹತ್ತಿರ ಹತ್ತಿರ ಒಂದು ಲಕ್ಷ ರೂಪಾಯಿಗಳು ಸಂಗ್ರಹವಾಯ್ತು...ಕಾರ್ಯಕ್ರಮಕ್ಕೆ ಮಿತವಾಗಿ ಖರ್ಚು ಮಾಡಿ ಉಳಿದಷ್ಟು ಹಣವನ್ನ ಇತ್ತೀಚೆಗೆ ರಸ್ತೆ ಅಫಘಾತದಲ್ಲಿ ದುರ್ಮರಣ ಹೊಂದಿದ ನಮ್ಮ ಸಹೋದ್ಯೋಗಿಯ ಕುಟುಂಬಕ್ಕೆ ನೀಡಿದೆವು.

ಆಫೀಸಿನ ಮ್ಯಾನೇಜ್ಮೆಂಟ್ ನವೆಂಬರ್ ತಿಂಗಳಿನ 14ನೇ ತಾರೀಖಿನ ಮಧ್ಯಾಹ್ನದ ಎರಡು ಗಂಟೆಗಳಷ್ಟು ಕಾಲವನ್ನ ಎಲ್ಲಾ ಸಹೋದ್ಯೋಗಿಗಳೂ ಕಾರ್ಯಕ್ರಮದಲ್ಲಿ (ಆಯೋಜಿಸಲು) ಭಾಗವಹಿಸಲು ….ಅನುಮತಿ/ಅನುಕೂಲ ಮಾಡಿಕೊಟ್ಟಿದ್ದರು.ಅದಕ್ಕೆ ನಾವುಗಳು ಋಣಿ.

------------------------------------------------------------

ಧನ್ಯವಾದಗಳು

-ಸವಿತ :)

Rating
No votes yet

Comments