ಮಸಣದ ಮಾತು

ಮಸಣದ ಮಾತು

ಮಸಣದ ಮಾತು

ನಾನು ನಿನ್ನಂತಲ್ಲ
ನನಗೆ ಯಾರಿಲ್ಲ
ಒಂಟಿ ಬಡಕ
ಆದರೂ ನನ್ನವರೇ ಎಲ್ಲ
ಬರಲೇ ಬೇಕಲ್ಲ
ಒಂದಲ್ಲ ಒಂದು ದಿನ.

ರಾಕ್ಷಸಾಕಾರವಿಲ್ಲ
ಭಯವ್ಯಾಕೆ ಚಿನ್ನ?
ಮಾರು ದೂರ ಹಾಯ್ದು
ಹೋಗಲ್ಯಾಕೋ ಕಂಪನ?

ತೊಗಲೇನು? ವ್ಯಾಧಿಯೇನು?
ಬಣ್ಣ ಜಾತಿ, ಭಾಷೆ ಗೀಷೆ
ನೋಡುವುದಿಲ್ಲ ನಾ
ದೂರುವುದಿಲ್ಲ ಬಯ್ಯುವುದಿಲ್ಲ
ಬಾರಯ್ಯ ೊಂದು ದಿನ
ಕುಳಿತು ಮಾತನಾಡೋಣ.

ಹಣ ಗುಣ ಗುಣಿಸಿ
ಎಷ್ಟಿದೆ ಬ್ಯಾಲೆನ್ಸು
ತೂಗುವುದಿಲ್ಲ ಕಣೋ
ಅಳುವವರಿದ್ದಾರೆಯೇ
ಹಾರ ತುರಾಯಿಯಿದೆಯೇ
ಯಾವ ಕಟ್ಟಿಗೆ ತಂದಿದ್ದಾರೋ
ನೋಡುವುದಿಲ್ಲ ಮಾರಾಯಾ
ನಂಬು ನನ್ನ.

ಭೂತ ಪ್ರೇತದ ಹೆಸರ
ನನ್ನೊಂದಿಗೆ ಜೋಡಿಸಿದರೆ
ಹೆದರಬೇಡ
ಅದು ಬರೀ ಬೂದಿ
ಹಾರಿದೆ ಆಕಾಶದತ್ತ
ಜೊತೆಯಲ್ಲ ನನಗೆ.

ದೆವ್ವವಿರಲಿ ದೇವರನು
ನಂಬುವೆಯಾ?
ಯಾವ ದೇವರು ನಿನ್ನ
ಕಾಯುವನೋ ಮಳ್ಳ
ಎಲ್ಲ ದೇವರು ನನ್ನ ಬಳಿ
ಬಿಸುಟುವರು ನಿನ್ನ.

ನಾನು ಸುಟ್ಟರೆ ಬೂದಿ
ಹೂತರೆ ಮಣ್ಣು
ನನಗಿಲ್ಲ ಬೇಧ
ನಿಧಾನವಾಗಿ ಬಾ
ಅವಸರವೇನಿಲ್ಲ
ಬಂದು ಹಿಂತಿರುಗುವಂತಿಲ್ಲ
ಯಾವಾಗ ಬಂದರೂ
ನಾನಿರುವೆ ಇಲ್ಲಿಯೇ
ನಿನಗಾಗಿಯೇ.

Rating
No votes yet

Comments