ಸಂಗೀತಾ..ಆಹಾ..ಉಹೂಂ

ಸಂಗೀತಾ..ಆಹಾ..ಉಹೂಂ

ಈಗಿನ ಮಕ್ಕಳು ಟಿ.ವಿ., ಕಂಪ್ಯೂಟರ್, ಸಿನೆಮಾ, ಸ್ಕೂಲ್, ಕ್ರಿಕೆಟ್‌ಗಳ ನಡುವೆಯೂ ಹಾಡು, ನೃತ್ಯ ಇತ್ಯಾದಿಗಳಲ್ಲಿ ಪರಿಣತರಾಗುವುದನ್ನು ನೋಡುವಾಗ ಸಂತೋಷವಾಗುತ್ತದೆ. ನಾನೂ ಸಂಗೀತಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದೆ! Instalmentನಲ್ಲಿ...


ಕರಾವಳಿ ಜಿಲ್ಲೆಯಲ್ಲಿ ಜನ ನೂರು ಸಲ ‘ದೇವಿ ಮಹಾತ್ಮೆ’ ಯಕ್ಷಗಾನ ನೋಡಿದರೂ ‘ನಾಳೆ ಮಂಗಳೂರಲ್ಲಿ ದೇವಿ ಮಹಾತ್ಮೆ ಇದೆಯಂತೆ’ ಎಂದರೆ ಪುನಃ ನೋಡಲು ಹೊರಡುತ್ತಿದ್ದರು. ಯಕ್ಷಗಾನ ನೋಡಿ ಬಂದು ಎರಡು ದಿನವಾದರೂ ‘ಚಂಡೆ ಶಬ್ದ’ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿರುತ್ತದೆ. ನಾನೂ ಚಂಡೆ ಕಲಿಯಲು ಹೊರಟೆ. ಉತ್ತಮ ಗುರುವೂ ಸಿಕ್ಕಿದರು. ಎರಡು ದಪ್ಪದ ಕೋಲು (ಚಂಡೆ ಕೋಲುಗಳಲ್ಲ-ಮುಷ್ಠಿಯಲ್ಲಿ ಹಿಡಿಯಲು ಆಗದಷ್ಟು ದೊಡ್ಡದು) ಕೈಯಲ್ಲಿ ಕೊಟ್ಟು, ಒಗೆಯುವ ಕಲ್ಲ ಮೇಲೆ ಗೋಣಿಹಾಸಿ, ‘ಕಿ ಟ ತ ಕಿ ಟ ತ’ ಎಂದು ಬಾರಿಸಲು ಹೇಳಿದರು. ಎಷ್ಟು ಬಾರಿಸಿ ತೋರಿಸಿದರೂ ಅವರಿಗೆ ಸಮಾಧಾನವಾಗದು. ಇನ್ನೂ ಉರುಳಬೇಕು ಎನ್ನುತ್ತಿದ್ದರು. ದಿನಗಳುರುಳಿತು ಅಷ್ಟೇ..


ನಂತರ ಶಾಸ್ತ್ರೀಯ ಸಂಗೀತ ಕಲಿಯಲು ಸೇರಿದೆ... ‘ಸಸ ರಿರಿ ಗಗ ಮಮ..’ ಸುತ್ತಮುತ್ತಲೂ ಹುಡುಗಿಯರು ಜಾಸ್ತಿಯಾದರು. ನನ್ನ ಸಂಗೀತ ಕೇಳಲು ಅಲ್ಲಾ.. ಕಲಿಯಲು ಬಂದವರು. ಸ್ವರಗಳು ಕಂಠದಲ್ಲೇ ಸಿಕ್ಕಿಕೊಂಡವು.


ಯಸ್.ಪಿ.ಬಿ.ಯವರು ಶಾಸ್ತ್ರೀಯ ಸಂಗೀತ ಕಲಿಯದೇ ‘ಶಂಕರಾಭರಣ’ ಸಿನೆಮಾದ ಹಾಡು ಹಾಡಲಿಲ್ಲವೆ. ನನಗೂ ಯಾಕಾಗಬಾರದು? ಕ್ಯಾಸೆಟ್ ತಂದು ಹಾಡಲು ಶುರುಮಾಡಿದೆ- ‘ಶಂಕರಾ..ಭರಣಮೂ.. .. (ಶಂಕರ ಇದ್ದ ಬದ್ದ ಉಳಿದಿದ್ದ ಆಭರಣವೆಲ್ಲಾ ಕಿತ್ತು ಬಿಸುಟದ್ದು ಆಗಲೇ ಎಂದು ‘ಗಣೇಶ’ಪುರಾಣ ಭಾಗ ಒಂದರಲ್ಲಿ ಇದೆ )


‘ವಾಹ್ ತಾಜ್’ ಕಾಲ. ತಬ್ಲಾ ಮೋಡಿಗೆ ಒಳಗಾದೆ. ವಾರದಲ್ಲಿ ಒಂದು ದಿನ ಪರ ಊರಿಂದ ಬಂದು ತಬ್ಲಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಗುರುಗಳ ಬಳಿ ಕಲಿಯಲು ಸೇರಿದೆ. ತಿಂಗಳು ನಾಲ್ಕಾದರೂ ‘ದಾ ದಿನ್ ದಾ ದಾ ತಿನ್ ತಾ’ ದಿಂದ ಮುಂದೆ ಹೋಗಲೇ ಇಲ್ಲ. ಗುರುಗಳಿಗೆ ತಿಳಿಯದಂತೆ ಸೀನಿಯರ್‌ನಿಂದ ಮುಂದಿನ ಪಾಠಗಳನ್ನು ಕಲಿತು ಬಾರಿಸುತ್ತಿದ್ದೆ. ಹೀಗೆ ಒಮ್ಮೆ ಬಾರಿಸುತ್ತಿರುವಾಗ ಗುರುಗಳು ಬಂದುದು ಗೊತ್ತೇ ಆಗಲಿಲ್ಲ. ಬಹಳ ಮೆಚ್ಚಿದರು! ಹೋಗುವಾಗ ‘ನೀನು ಜಾಣ. ನಿನಗೆ ಗುರುವಿನ ಅಗತ್ಯವೇ ಇಲ್ಲ. ನಾಳೆಯಿಂದ..’ಅಂದರು. :(


ಕಲಿಯುವ ಹಠವಿದ್ದರೆ ಯಾವ ವಾದ್ಯವಾದರೇನು? ಇನ್ನೊಂದು ಕಡೆ ಕೊಳಲು ಕಲಿಯಲು ಸೇರಿದೆ. ‘ಗ ಗ ಪಾ ಪ ದ ಪ ಸಾ ಸ’ ಬಾರಿಸಲು ಕಲಿತೆ. ಈ ಸಲ ಕಳೆದ ಬಾರಿಯ ತಪ್ಪು ಮಾಡಲಿಲ್ಲ. ಪುನಃ ಪುನಃ ಅದನ್ನೇ ಪರ್ಫೆಕ್ಟ್ ಮಾಡಲು ಬಾರಿಸುತ್ತಲೇ ಇದ್ದೆ. ಪಾಪ ‘ಗಗ ಪಾಪ’ ಕೇಳಿ ಕೇಳಿ ಸಾಕಾದ ಮನೆಯವರೆಲ್ಲಾ ಸಂಚು ಮಾಡಿ ‘ಸ್ಕೂಲ್ ಪರೀಕ್ಷೆ ಮುಗಿಯಲಿ, ಮತ್ತೆ ಕಲಿ’ ಎಂದರು. ಅಲ್ಲಿಗೆ ಕೊಳಲನ್ನು ಗೋಡೆಯ ಮೊಳೆಗೆ ನೇ(ಣು)ತು ಹಾಕಿದೆ.


ಯಾವುದೋ ಒಂದು ನೆವನ ಮಾಡಿ ಸಂಗೀತವಾಗಲಿ, ವಾದ್ಯಸಂಗೀತವಾಗಲಿ ನನ್ನನ್ನು ಒಂದು ತರಹ ‘ಅಸ್ಪೃಶ್ಯ’ನಂತೆ ದೂರ ತಳ್ಳಿತು. ಇದರಿಂದ ರೋಸಿ ಹೋದ ನಾನು ಮತಾಂತರ ಮಾಡಬೇಕೆಂದಿದ್ದೇನೆ. ಮೈಕೈಲಿ ಯಾಕ್ಷನ್..ಮೈಕೆಲ್ ಜಾಕ್ಸನ್ ಸಂಗೀತ ಕಲಿಯೋಣ ಎಂದಿದ್ದೆ.. ಅವನೂ ಮತಾಂತರ ಮಾಡಿದ.. ನನ್ನಿಂದ ತಪ್ಪಿಸಿಕೊಳ್ಳಲ್ಲಿಕ್ಕಾ? ಎಲ್ಲಾ ರೀತಿಯ ಸಂಗೀತಕ್ಕೂ ನಾನು ಅಸ್ಪೃಶ್ಯನೇ :( ?


-ಗಣೇಶ.

Rating
No votes yet

Comments