ಇಂದು ಓದಿದ ವಚನ: ರಸವನರಿವುದಕ್ಕೆ: ಶಿವಲೆಂಕ ಮಂಚಣ್ಣ
ಇಂದು ಓದಿದ ವಚನ
ರಸವನರಿವುದಕ್ಕೆ ಜಿಹ್ವೆಯಾಗಿ ಬಂದು
ಗಂಧವನರಿವುದಕ್ಕೆ ನಾಸಿಕವಾಗಿ ಬಂದು
ರೂಪವನರಿವುದಕ್ಕೆ ಅಕ್ಷಿಯಾಗಿ ಬಂದು
ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು
ಸ್ಪರ್ಶವನರಿವುದಕ್ಕೆ ತ್ವಕ್ಕಾಗಿ ಬಂದು
ಇಂತೀ ಘಟದ ಮಧ್ಯದಲ್ಲಿ ನಿಂದು
ಪಂಚವಕ್ತ್ರನಾದೆಯಲ್ಲ
ಈಶಾನ್ಯ ಮೂರ್ತಿ ಮಲ್ಲಿಕಾರ್ಜುನ ಲಿಂಗವೇ
[ಇದು ಶಿವಲೆಂಕ ಮಂಚಣ್ಣನ ವಚನ. ಈತ ಮೂಲತಃ ಕಾಶಿಯವನು, ಪಂಡಿತ ಪರಂಪರೆಗೆ ಸೇರಿದವನು. ಉರಿಲಿಂಗದೇವ ಎಂಬ ಮತ್ತೊಬ್ಬ ಶರಣನ ಗುರು. ಕಾಲ ಕ್ರಿಶ ೧೧೬೦. ಇವನ ೧೩೨ ವಚನಗಳು ಸಿಕ್ಕಿವೆ.
ಘಟ-ಮಡಕೆ, ಪಾತ್ರೆ, ದೇಹ; ಪಂಚವಕ್ತ್ರ-ಐದು ಮುಖಗಳಿರುವನು, ಶಿವ; ಸದ್ಯೋಜಾತ, ಅಘೋರ, ತತ್ಪುರುಷ, ವಾಮದೇವ, ಈಶಾನ ಇವು ಶಿವನ ಐದು ಮುಖಗಳ ಹೆಸರು]
ದೇವರು ಹೊರಗೆ ಎಲ್ಲೋ ಇಲ್ಲ, ಇರುವುದು ನಮ್ಮೊಳಗೇ ಅನ್ನುವುದು ವಚನಕಾರರ ನಿಲುವು. ಇಲ್ಲಿಯೂ ಅಧೇ ಮಾತು ಇದೆ. ರುಚಿ ತಿಳಿಯುವ ನಾಲಗೆ, ವಾಸನೆ ಹಿಡಿಯುವ ಮೂಗು, ರೂಪವನ್ನು ಕಾಣುವ ಕಣ್ಣು, ಸ್ಪರ್ಶವನ್ನು ಅರಿಯುವ ಚರ್ಮವಾಗಿ ದೇವರು ಈ ಘಟದ ಮಧ್ಯದಲ್ಲಿ ಬಂದು ಪ್ರತ್ಯಕ್ಷನಾಗಿದ್ದಾನೆ.
ಅರಿವುದಕ್ಕೆ ಎಂದು ಮತ್ತೆ ಮತ್ತೆ ಬರುವ ಮಾತು ನೋಡಿ. ದೇವರಿಗೆ ರುಚಿ, ಪರಿಮಳ, ರೂಪ, ಶಬ್ದ, ಸ್ಪರ್ಶ ಇವೆಲ್ಲವೂ ಬೇಕು ಅನ್ನಿಸಿದ್ದರಿಂದ ದೇಹದೊಳಗೆ ಬಂದು ನೆಲೆಸಿದ್ದಾನೆ. ಅವನು ಹಾಗೆ ಬಯಸಿ ಬಂದು ನಿಂತು ಐದು ಇಂದ್ರಿಯಗಳೇ ತಾನಾದ ಕಾರಣ ಅವನು ಪಂಚಮುಖಿ ಆದ. ಶಿವನಿಗೆ ಐದು ಮುಖಗಳು ಅನ್ನುವ ಕಲ್ಪನೆಯನ್ನು ಮನುಷ್ಯನ ಐದು ಇಂದ್ರಿಯಗಳ ಸಾಮರ್ಥ್ಯದೊಂದಿಗೆ ಹೋಲಿಸಿರುವುದು ಚೆನ್ನಾಗಿದೆ.
ಇನ್ನು ಘಟ ಅನ್ನುವುದು ಮಡಕೆ. ಅದು ದುರ್ಬಲವೂ ಹೌದು, ತುಂಬಿಟ್ಟುಕೊಳ್ಳುವುದಕ್ಕೆ ಬಳಕೆಯಾಗುವುದೂ ಹೌದು. ಘಟದ ತುಂಬ ದೇವರೇ ಇರುವಾಗ ಇನ್ನು ಏನು, ಹೇಗೆ ತುಂಬಿಕೊಳ್ಳುವುದು! ಅಥವಾ ಕಾಣುವುದೆಲ್ಲವೂ ದೇವರ ಪ್ರಕಟರೂಪವೇ ಆಗಿದ್ದರೆ ನಮ್ಮೊಳಗೆ ತುಂಬಿಕೊಂಡದ್ದಕ್ಕೆಲ್ಲ ದೈವತ್ವದ ಗುಣ ಇದ್ದೇ ಇರುತ್ತದೆ!
ಇದು ಕೇವಲ ಬುದ್ಧಿಯ ಮಾತೋ? ’ಈ ಘಟಕ್ಕೆ ಬಂದು’ ಅನ್ನುವುದನ್ನು ನೋಡಿದರೆ ಶಿವಲೆಂಕ ಮಂಚಣ್ಣ ತನ್ನೊಳಗೇ ದೇವರನ್ನು ಅನುಭವಿಸಿ ಹೇಳಿರಬಹುದು ಅನ್ನಿಸುತ್ತದೆ.
Rating
Comments
ಉ: ಇಂದು ಓದಿದ ವಚನ: ರಸವನರಿವುದಕ್ಕೆ: ಶಿವಲೆಂಕ ಮಂಚಣ್ಣ
In reply to ಉ: ಇಂದು ಓದಿದ ವಚನ: ರಸವನರಿವುದಕ್ಕೆ: ಶಿವಲೆಂಕ ಮಂಚಣ್ಣ by muralihr
ಉ: ಇಂದು ಓದಿದ ವಚನ: ರಸವನರಿವುದಕ್ಕೆ: ಶಿವಲೆಂಕ ಮಂಚಣ್ಣ
ಉ: ಇಂದು ಓದಿದ ವಚನ: ರಸವನರಿವುದಕ್ಕೆ: ಶಿವಲೆಂಕ ಮಂಚಣ್ಣ
ಉ: ಇಂದು ಓದಿದ ವಚನ: ರಸವನರಿವುದಕ್ಕೆ: ಶಿವಲೆಂಕ ಮಂಚಣ್ಣ