Aperture ಮತ್ತು Depth of Field
Shutter Speed ಅಲ್ಲದೇ ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಲು ಸಹಾಯಕವಾಗುವ ಇನ್ನೊಂದು ಅಂಶ "Aperture" ಅಥವಾ ಬೆಳಕಿಂಡಿ. ಚಿತ್ರ ತೆಗೆಯುವಾಗ ಲೆನ್ಸನ ತೆರವು ಎಷ್ಟು ದೊಡ್ಡದಿರುತ್ತ ದೋ ಅದೇ ಬೆಳಕಿಂಡಿ. ಈ ತೆರವು ದೊಡ್ಡದಾದಷ್ಟೂ ಕ್ಯಾಮರಾದ ಸೆನ್ಸರ್ಗೆ ತಲುಪುವ ಬೆಳಕಿನ ಪ್ರಮಾಣ ಅಧಿಕವಾಗಿರುತ್ತದೆ. ಬೆಳಕಿಂಡಿಯನ್ನು ಛಾಯಾಗ್ರಹಣದಲ್ಲಿ f/2.8, f/4, f/5.2, f/8 ಎಂದು 'f-stops'ಎಂಬ ಮಾನ ದಂಡದಿಂದ ಅಳೆಯುತ್ತಾರೆ. ಇಲ್ಲಿ 'f-stops'ನ ಬೆಲೆ ಜಾಸ್ತಿಯಾದಂತೆ ಬೆಳಕಿಂಡಿಯ ಗಾತ್ರ ಕಿರಿದಾಗುತ್ತದೆ ಮತ್ತು ಸೆನ್ಸರ್ಗೆ ತಲುಪುವ ಬೆಳಕಿನ ಪ್ರಮಾಣ ಕಡಿಮೆಯಾಗುತ್ತದೆ. ಉದಾಹರಣೆಗೆ f/8 ಗಿಂತ f/2.8ನ ಬೆಳಕಿಂಡಿ ದೊಡ್ಡದು.
ಆದರೆ ಈ ಬೆಳಕಿಂಡಿ ಕೇವಲ ಬೆಳಕನ್ನು ನಿಯಂತ್ರಿಸುವುದೂ ಅಲ್ಲದೇ "Depth of Field"ನ ಮೇಲೂ ತನ್ನ ಪರಿಣಾಮ ಬೀರುತ್ತದೆ. ಪಕ್ಕದ ಚಿತ್ರದಲ್ಲಿ ಮರದೆಲೆಯ ಚಿಗುರು ಸ್ಪುಟವಾಗಿ ಕಾಣಿಸಿ ಹಿಂದಿನ ಗುಡ್ಡವು ಅಸ್ಪಷ್ಟವಾಗಿದೆ. ಅಂದರೆ ಈ ಚಿತ್ರದಲ್ಲಿ "Depth of Field"ಕಡಿಮೆಯಿದೆ. ಇಲ್ಲಿ ಚಿಗುರು ನನ್ನ ಪ್ರಧಾನ ವಿಷಯವಾಗಿದ್ದು, ಚಿತ್ರ ನೋಡುವವರ ಗಮನ ಹಿನ್ನೆಲೆಗೆ ಸರಿಯುವುದನ್ನು ತಡೆಯಲು ಅದನ್ನು ಅಸ್ಪಷ್ಟವಾಗಿಸಲು ನಾನು ಬಳಸಿದ ಬೆಳಕಿಂಡಿ f/3.5. ಅಂದರೆ ಬೆಳಕಿಂಡಿ ಹೆಚ್ಚಾದಂತೆಲ್ಲಾ "Depth of Field" ಕಡಿಮೆಯಾಗುತ್ತದೆ. ಇದೇ ಚಿತ್ರವನ್ನು f/8 ನಿಂದ ತೆಗೆದಿದ್ದರೆ "Depth of Field" ಜಾಸ್ತಿಯಾಗಿ ಗುಡ್ಡವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಈ ಮೇಲಿನ ಎರಡು ಚಿತ್ರಗಳಲ್ಲಿ ಮಿಡತೆ ನನ್ನ ವಿಷಯ. ಆದರೆ ಸೂಕ್ಷವಾಗಿ ಗಮನಿಸಿದಾಗ ಇವೆರಡರ ನಡುವಿನ "Depth of Field" ವ್ಯತ್ಯಾಸ ತಿಳಿಯುತ್ತದೆ. ಮೊದಲ ಚಿತ್ರದಲ್ಲಿ ಕಣ್ಣು, ಮುಖ ಮಾತ್ರ ಸ್ಪುಟವಾಗಿದ್ದರೆ, ಎರಡನೆಯದರಲ್ಲಿ ಕಣ್ಣು, ಕಾಲು, ರೆಕ್ಕೆ ಎಲ್ಲವೂ ಸ್ಪುಟವಾಗಿದೆ. ಮೊದಲ ಚಿತ್ರಕ್ಕೆ f/3.5 ಹಾಗೂ ಎರಡನೆಯದ್ದಕ್ಕೆ f/8 ಬಳಸಿದ್ದರಿಂದ ಈ ವ್ಯತ್ಯಾಸ.
ಸಾಮಾನ್ಯವಾಗಿ "landscape"ನಲ್ಲಿ ಮುನ್ನೆಲೆ, ನಡುನೆಲೆ('middle ground'ಗೆ ಪರ್ಯಾಯವಾಗಿ), ಹಿನ್ನೆಲೆ ಎಲ್ಲವೂ ಸ್ಪುಟವಾಗಿರಬೇಕಾದ್ದರಿಂದ ಕಡಿಮೆ ಬೆಳಕಿಂಡಿಯನ್ನು ಉಪಯೋಗಿಸಬಹುದು. ಕೆಳಕಿನ ಚಿತ್ರದಲ್ಲಿ ಮುನ್ನೆಲೆಯ ಮಂಟಪ, ನಡುನೆಲೆಯ ಹುಲು ಮಾನವರು, ಹಿನ್ನೆಲೆಯ ಬೆಟ್ಟ ಎಲ್ಲವೂ ಸ್ಪುಟವಾಗಿ ಕಾಣಿಸಲು f/8 ಬಳಸಿದ್ದೇನೆ.
portrait ಮತ್ತು Macro ದಲ್ಲಿ ಕೇವಲ ವಿಷಯಕ್ಕೆ ಮಹತ್ವ ಕೊಡುವುದರಿಂದ ಹೆಚ್ಚಿನ ಬೆಳಕಿಂಡಿಯನ್ನು ಉಪಯೋಗಿಸಿ ಉಳಿದದ್ದನ್ನು ಅಸ್ಪಷ್ಟವಾಗಿಸಬಹುದು. ಈ ಕೆಳಗಿನ ಚಿತ್ರದಲ್ಲಿ ಹಿನ್ನೆಲೆಯನ್ನು ಅಸ್ಪಷ್ಟವಾಗಿಸಲು ನಾನು ಬಳಸಿದ ಬೆಳಕಿಂಡಿ f/3.5