ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ

ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ

ಕಾಲಿಲ್ಲದ ಕುದುರೆ

ಕಾಲಿಲ್ಲದ ಕುದುರೆಯೇರಿ ರಾವುತಿಕೆಯಮಾಡಬೇಕು
ಕಡಿವಾಣವಿಲ್ಲದ ಕುದುರೆಯ ನಿಲ್ಲಿಸಬೇಕು
ಕಾಲಿಲ್ಲದ ಕುದುರೆಯ ಬೀದಿಯಲ್ಲಿಕುಣಿಸಾಡಬಲ್ಲಡೆ
ಇಹಲೋಕಕ್ಕೆ ವೀರನೆಂಬೆ ಪರಲೋಕಕ್ಕೆ ಧೀರನೆಂಬೆ
ಆಮುಗೇಶ್ವರಲಿಂಗಕ್ಕೆ ಅಧಿಕನೆಂಬೆ

[ಅಮುಗೆ ರಾಯಮ್ಮನ ವಚನ ಇದು. ಅಮುಗೆ ರಾಯಮ್ಮನ ೧೧೫ ವಚನಗಳು ದೊರೆತಿವೆ. ವರದಾನಿಯಮ್ಮ ಎಂಬುದು ಇವಳ ಇನ್ನೊಂದು ಹೆಸರು. ಅಮುಗೆ ದೇವಯ್ಯ ಎಂಬಾತನ ಹೆಂಡತಿ. ಈ ಗಂಡಹೆಂಡಿರು ಸೊನ್ನಲಾಪುರದಲ್ಲಿ ನೇಯ್ಗೆಯ ಕೆಲಸಮಾಡಿಕೊಂಡಿದ್ದವರು. ಬದುಕಿನ ವಿವರ ಹೆಚ್ಚು ತಿಳಿಯದು. ಅಮುಗೆ ರಾಯಮ್ಮ ಎಂಬ ಹೆಸರಿನ ಇನ್ನೊಬ್ಬ ವಚನಕಾರ್ತಿ, ರಾಯಸದ ಮಂಚಣ್ಣನ ಹೆಂಡತಿ ಕೂಡ ಇದ್ದಾಳೆ. ಈ ಹೆಸರಿನವರು ಇಬ್ಬರೋ ಒಬ್ಬರೋ ಅನ್ನುವ ಬಗ್ಗೆ ವಿದ್ವಾಂಸರಲ್ಲಿ ಚರ್ಚೆ ನಡೆದಿದೆ. ರಾಯಮ್ಮ ಎಂಬ ಹೆಸರಿನ ಇನ್ನೂ ಇಬ್ಬರು ವಚನಕಾರ್ತಿಯರು ಇದ್ದಾರೆ.]  

ಇಲ್ಲಿರುವ ಸಂಕೇತ ತೀರ ಸ್ಪಷ್ಟವಾಗಿಯೇ ಇದೆ. ಕುದುರೆಯ ಸವಾರಿಕಷ್ಟವಿರಬಹುದು ಆದರೆ ಅಸಾಧ್ಯವಲ್ಲ. ಕಲಿತುಕೊಂಡರೆ ಯಾರು ಬೇಕಾದರೂ ರಾವುತರಾಗಬಹುದು. ಕಲಿತುಕೊಂಡರೆಯಾರು ಬೇಕಾದರೂ ಕುದುರೆಯನ್ನುಕುಣಿಸಬಹುದು. ಓಡುತ್ತಿರುವ ಕುದುರೆಯನ್ನು ನಿಲ್ಲಿಸಲೂಬಹುದು.

ಆದರೆ ಮನಸ್ಸು ಅನ್ನುವುದು ಕಾಲಿಲ್ಲದಕುದುರೆ, ಅದರ ಸವಾರಿ (ರಾವುತಿಕೆ)ಸಾಧ್ಯವಾಗುವುದಾದರೆ


ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ,ಆದ್ದರಿಂದಲೇ ಎತ್ತ ಹೋಗುವುದೆಂದು ಅರಿವಾಗದು.ಅದನ್ನು ನಿಲ್ಲಿಸಲು ಸಾಧ್ಯವಾಗುವುದಾದರೆ,


ಮನಸ್ಸು ಅನ್ನುವುದು ಕಾಲಿಲ್ಲದ ಕುದುರೆ,ಅದು ನಮ್ಮಿಚ್ಛೆಯಂತೆ ಬೀದಿಯಲ್ಲಿ, ಇತರರಿಗೂ ತಿಳಿಯುವಂತೆ, ಕುಣಿಸಲು ಆಗುವುದಾದರೆ,

ಆಗ ಅಂಥವರನ್ನು ಈ ಲೋಕದ ವೀರರು, ಪರಲೋಕದ ವಿವೇಕಿಗಳು (ಧೀರ-ಧೀ=ವಿವೇಕ, ಬುದ್ಧಿ) ಎನ್ನುತ್ತೇನೆ ಅನ್ನುವುದು ರಾಯಮ್ಮನ ಮಾತು.

ನಾವು ಬಹಳಷ್ಟು ಜನ ಮನಸ್ಸಿನ ಕುದುರೆಯ ಸವಾರರಲ್ಲ, ಕುದುರೆಗೆ ವಶರಾಗಿರುವುದು ಕೂಡ ಗೊತ್ತಿರದಂತೆ ಅದರಿಚ್ಛೆಯಂತೆ ನಡೆಯುತ್ತಾ ಸ್ವತಂತ್ರರೆಂಬ, ಧೀರರೆಂಬ, ವೀರರೆಂಬ ಭ್ರಮೆಯಲ್ಲಿರುವವರು,ಅಲ್ಲವೇ?

ಈ ವಚನದೊಂದಿಗೆ ಅಲ್ಲಮನ ಸುಪ್ರಸಿದ್ಧವಾದ ಕೊಟ್ಟ ಕುದುರೆಯನೇರಬಹುದುಅನ್ನುವ ವಚನವನ್ನು ಜ್ಞಾಪಿಸಿಕೊಳ್ಳಿ. ಅಲ್ಲೂ ಕುದುರೆಯ ರೂಪಕ ಬಳಕೆಯಾಗಿದೆ, ಬೇರೆಯರೀತಿಯಲ್ಲಿ, ಬೇರೆಯ ಉದ್ದೇಶಕ್ಕೆ.

Rating
No votes yet

Comments