ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ

ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ

ನಾಯ ಕುನ್ನಿಯ ಕಚ್ಚಬೇಡ ಬಗುಳಬೇಡವೆಂದಡೆಮಾಣ್ಬುದೆ

ಹಂದಿಯನಶುದ್ಧವ ತಿನಬೇಡ ಹೊರಳಬೇಡವೆಂದಡೆಮಾಣ್ಬುದೆ

ನಯದಿ ಬುದ್ಧಿಗಲಿಸಿದಡೆ ಮಾಣ್ಬವೆ ತಮ್ಮ ಸಹಜವ

ದುರ್ವಿಷಯಿಗೆ ಸದ್ಗುರು ಬೋಧೆಯಿಂದ ನಿರ್ವಿಷಯವಪ್ಪುದೆ ಹೇಳಾ

ಸಿಮ್ಮಲಿಗೆಯ ಚೆನ್ನರಾಮಾ

ಬಸವಣ್ಣನಿಗಿಂತ ವಯಸ್ಸಿನಲ್ಲಿ ಹಿರಿಯನಾಗಿದ್ದ ಚಂದಿಮರಸ ಎಂಬಾತನ ವಚನವಿದು. ಕೃಷ್ಣಾ ನದಿಯ ದಡದ ಚಿಮ್ಮಲಿಗೆ ಎಂಬ ಊರಿನವನು. ಬಹುಶಃ ಒಬ್ಬ ಅರಸನಿದ್ದರೂ ಇರಬಹುದೆಂದು ಕೆಲವರ ಊಹೆ. ಈ ವಚನ ತೀರ ಚರ್ಚಾಸ್ಪದವಾದ ಒಂದು ಸಂಗತಿಯನ್ನು ಹೇಳುತ್ತಿದೆ.ಕಚ್ಚಬೇಡ, ಬೊಗಳಬೇಡ ಎಂದರೆ ನಾಯಿ ಮರಿ ಸುಮ್ಮನೆಇರುವುದಿಲ್ಲ, ಕೊಳಕು ತಿನ್ನಬೇಡ,ಕೊಳಕಿನಲ್ಲಿ ಹೊರಳಬೇಡ ಎಂದರೆ ಹಂದಿ ಕೇಳುವುದಿಲ್ಲ.ಹಾಗೆಯೇ ದುಷ್ಟರಿಗೆ ಸದ್ಗುರು ಬುದ್ಧಿ ಹೇಳಿದರೆ ಅವರು ಬದಲಾಗುವುದಿಲ್ಲ ಎಂಬ ನಿಲುವನ್ನು ಪ್ರತಿಪಾದಿಸುತ್ತದೆಈ ವಚನ. ಈ ಪ್ರಾಣಿಗಳು ಮತ್ತು ದುಷ್ಟರು ನಯದಿಂದ ಬುದ್ಧಿ ಕಲಿಸಿದರೆ ತಮ್ಮ `ಸಹಜ'ವನ್ನು ಬಿಡುವುದುಂಟೇ ಎಂಬ ಪ್ರಶ್ನೆಯನ್ನು ಕೇಳುತ್ತದೆ, ಇಲ್ಲ ಎಂಬ ಉತ್ತರವನ್ನೂ ಸೂಚಿಸುತ್ತದೆ.

ನಮ್ಮ ಎಲ್ಲ ಸಾಮಾಜಿಕ ಸುಧಾರಣೆಗಳೂ, ಶಿಕ್ಷಣ ಪದ್ಧತಿಯೂ ಮನುಷ್ಯರ `ಸಹಜ' ಸ್ವಭಾವವನ್ನು ಬದಲಿಸುವುದು ಸಾಧ್ಯ ಎಂಬ ನಂಬಿಕೆ, ನಿಲುವನ್ನು ಆಧರಿಸಿದವೇ ಆಗಿವೆ. ಆದರೆ ನಿಜವಾಗಿ ಮನುಷ್ಯರ `ಸಹಜ' ಸ್ವಭಾವಬದಲಾಗದು ಎಂಬುದೇ ನಿಜವಾದರೆ ನಮ್ಮ ಎಷ್ಟೋ ಸಾಮಾಜಿಕ ಚಟುವಟಿಕೆಗಳಿಗೆ ಅರ್ಥವೇ ಇರುವುದಿಲ್ಲ. ಬೋಧನೆಯಿಂದಬದಲಾವಣೆ ಅಸಾಧ್ಯ ಅನ್ನುವುದು ಅನೇಕ ವಚನಕಾರರ ನಿಲುವೂ ಹೌದು. ಬಸವಣ್ಣನ `ಅಂದಣವನೇರಿದ ಸೊಣಗ' ವಚನವನ್ನು ನೆನೆಪುಮಾಡಿಕೊಳ್ಳಿ.

ಆದರೆ ಈ ಮಾತು ಅರ್ಧಸತ್ಯಮಾತ್ರವಾಗಿರಬಹುದು. ಬದಲಾವಣೆ ಹೊರಗಿನಿಂದಬಲವಂತವಾಗಿ ಮೂಡಿದ್ದಾದರೆ ಅದು ಬದಲಾವಣೆಯೇ ಅಲ್ಲ. ಸುಶಿಕ್ಷಿತ ಅನ್ನುವ ಮಾತು ಬಲವಂತವಾಗಿ(ಶಿಕ್ಷೆ!) ಸಮಾಜ ಒಪ್ಪುವಂತೆ ನಡೆದುಕೊಳ್ಳುವ ವ್ಯಕ್ತಿ ಎಂಬುದನ್ನೇ ಹೇಳುತ್ತದಲ್ಲವೇ! ಸುಶಿಕ್ಷಿತನ ಸಹಜ ಸ್ವಭಾವ ದುಷ್ಟವೇ ಆಗಿದ್ದರೆಶಿಕ್ಷಣದಿಂದ ಆತ ಬದಲಾದಂತೆ ಆಗಲಿಲ್ಲ. ಬದಲಾವಣೆಯ ಆಸೆ ಒಳಗಿನಿಂದಲೇ ಮೂಡಿದ್ದಾದರೆ ಆಗ ಸಹಜವೂ ಬದಲಾದೀತು.ಒಳಗಿನಿಂದ ಬದಲಾಗುವ ಜವಾಬ್ದಾರಿ ವ್ಯಕ್ತಿಯದೇ.

ಅಂದರೆ ಬದಲಾವಣೆ ಅಸಾಧ್ಯ ಎಂದಲ್ಲ, ಬೋಧನೆಯಿಂದ ಸಹಜ ಸ್ವಭಾವದ ಬದಲಾವಣೆ ಆಗದು, ಅನುಭವದಿಂದ, ವ್ಯಕ್ತಿಯ ನಿಜವಾದ ಅಪೇಕ್ಷೆಯಿಂದ ಬದಲಾವಣೆ ಆದರೂ ಆದೀತು ಅನ್ನುವಂತಿದೆ ಈ ವಚನ ಅಲ್ಲವೇ?

[ಕುನ್ನಿಯ,
ಹಂದಿಯ ಇತ್ಯಾದಿ ಎಡೆಗಳಲ್ಲಿ ವಿಭಕ್ತಿ ಪಲ್ಲಟವನ್ನು ಗಮನಿಸಬಹುದು. ಈಗಿನ ಬಳಕೆಯಲ್ಲಿ
ಇಂಥ ವಾಕ್ಯಗಳನ್ನು ಬಳಸುವಾಗ ಕುನ್ನಿಗೆ, ಹಂದಿಗೆ ಎಂದು ಬಳಸುತ್ತೇವೆ.
ಮಾಣ್ಬವೆ-ಬಿಡುವವೆ]

Rating
No votes yet

Comments