ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?

ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?

ಹೇಳಿದ್ದ ಕೇಳಲೊಂದು ಶಬುದವಾಯಿತ್ತಯ್ಯ
ತೋರಿದ್ದ ಹಿಡಿಯಲೊಂದು ರೂಪಾಯಿತ್ತಯ್ಯ
ನಚ್ಚಿನ ಮಚ್ಚಿಕೆ ಅದು ನಿಶ್ಚಿಂತವೆಂತಪ್ಪುದು
ಸಿಮ್ಮಲಿಗೆಯ ಚೆನ್ನರಾಮಲಿಂಗನೆಂಬನ್ನಕ್ಕ
 
ಚಂದಿಮರಸನ ವಚನ ಇದು. ಈತ ಬಸವಣ್ಣನವರ ಹಿರಿಯ ಸಮಕಾಲೀನ. ಕಾಲ, ಕ್ರಿಶ. ಸುಮಾರು ೧೧೬೦. ಕೃಷ್ಣಾ ನದಿಯ ತೀರದ ಚಿಮ್ಮಲಿಗೆ ಇವನ ಊರು. ಹುಟ್ಟಿನಿಂದ ಬ್ರಾಹ್ಮಣನಾದ ಚಂದಿಮರಸ ನಿಗುಣಯೋಗಿ ಎಂಬ ಗುರುವಿನಿಂದ ದೀಕ್ಷೆ ಪಡೆದು ಶರಣನಾದ. ಸಿಮ್ಮಲಿಗೆಯ ಚೆನ್ನರಾಮ ಇವನ ಅಂಕಿತ. ಇವನ ೧೫೭ ವಚನಗಳು ದೊರೆತಿವೆ.
ಬೇರೆಯವರು ಹೇಳಿದ್ದು, ನಾನು ಹೇಳಿದ್ದು ಎಲ್ಲವೂ ಬರಿಯ ಶಬ್ದ. ತೋರಿದ್ದನ್ನು ಹಿಡಿದರೆ ಅದು ಬರಿಯ ರೂಪ. ಎರಡೂ ನಂಬಿಕೆಯ ಕಾರಣದಿಂದ ಹುಟ್ಟಿಕೊಂಡ ಪ್ರಿಯ ಸಂಗತಿಗಳು ಅಷ್ಟೆ. ಹೀಗಿರುವಾಗ ನಿಶ್ಚಿಂತವಾಗುವುದು ಹೇಗೆ? 
 
ಗುರುವೇ ಆಗಲಿ ಆತ ಹೇಳಿದ್ದು ಕೇವಲ ಶಬ್ದ. ಅದರ ಅರ್ಥವೆಲ್ಲ ನಾವು ಊಹಿಸಿಕೊಂಡದ್ದು. ಕಣ್ಣಿಗೆ ಕಂಡದ್ದು ಕೇವಲ ರೂಪ. ಅರ್ಥ ರೂಪ ಎರಡೂ ನಮ್ಮ ನಮ್ಮ ನಂಬಿಕೆಯನ್ನು, ನೆಚ್ಚಿಕೆಯನ್ನು ಆಧರಿಸಿದವು. ಅವು ನಿಜ ಹೌದೋ ಅಲ್ಲವೋ ಗೊತ್ತಿಲ್ಲ. 
 
ಕೇವಲ ಅರ್ಥವಿರುವ ಶಬ್ದ ಮಾತ್ರವಲ್ಲದ, ನಂಬಿಕೆಗೆ ಮಾತ್ರ ಪ್ರಿಯವಾಗಿ ಕಾಣುವ ರೂಪಮಾತ್ರವಲ್ಲದ ದೇವರು ಅನುಭವಕ್ಕೆ ಬರುವವರೆಗೆ ಚಿಂತೆ ಇದ್ದೇ ಇರುತ್ತದೆ.
ಈ ವಚನ ಸತ್ಯದ ಸ್ವರೂಪದ ಬಗ್ಗೆಯೇ ನಡೆದ ಚಿಂತನೆಯಂತಿದೆ. ನಂಬಿಕೆ ಅನ್ನುವುದು ದಣಿದ ಮನಸ್ಸಿನ ಅಥವ ಶ್ರಮಪಡಲೊಲ್ಲದ ಮನಸ್ಸಿನ ಒಂದು ಊರುಗೋಲು. ನಂಬಿಕೆ ನಿಜವಾಗಿರಲೇಬೇಕೆಂದಿಲ್ಲ ಅಲ್ಲವೇ? ಹಾಗೆಯೇ ಅಪನಂಬಿಕೆ ನಂಬಿಕೆ ಅನ್ನುವುದಕ್ಕೆ ವಿರುದ್ಧವಾದ ಸ್ಥಿತಿಯಲ್ಲ. ಅಪನಂಬಿಕೆಯೂ ಒಂದು ಬಗೆಯ ನಂಬಿಕೆಯೇ ಅಲ್ಲವೇ? ಅರ್ಥವಾಗಲೀ ರೂಪವಾಗಲೀ ನಮ್ಮ ಮನಸ್ಸಿನ ಪ್ರೀತಿಯನ್ನು ಅನುಸರಿಸಿ 'ಮಹತ್ವ'ಪಡೆಯುತ್ತವೆ. 
 
ಕೇವಲ ನಂಬಿಕೆ ಮಾತ್ರವಲ್ಲದ ಸತ್ಯ ಅರಿವಿಗೆ ಬರುವವರೆಗೆ ಚಿಂತೆ ಕಳವಳ ತಪ್ಪಿದ್ದಲ್ಲ. ಆದರೆ ನಂಬಿಕೆಗಳನ್ನೇ ಸತ್ಯವೆಂದು ಒಪ್ಪಲು ಬಯಸುವ ಮನಸ್ಸು ಚಂದಿಮರಸನದಲ್ಲ. ನಂಬಿಕೆಗೆ ವಿರುದ್ಧ ಸ್ಥಿತಿ ಇದ್ದರೆ ಅದು ಸಂಶಯದ್ದು. ಸಂಶಯಾತ್ಮರು ವಿನಾಶ ಹೊಂದುವುದಿಲ್ಲ, ಬೆಳೆಯಲು ತೊಡಗುತ್ತಾರೆ. 
 
ಕೇವಲ ಶಬ್ದ-ಅರ್ಥಗಳನ್ನು, ಅಥವ ರೂಪವನ್ನು ನಂಬಲೊಲ್ಲದೆ ಸಂಶಯಪಡುತ್ತಾ ನಿಜಕ್ಕೆ ಕಾತರಿಸುವ ತಳಮಳ ಈ ವಚನದಲ್ಲಿದೆ.
Rating
No votes yet

Comments