ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ

ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ

ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ
ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ
ಇರಿಯಬಲ್ಲರೆ ನೂರಕ್ಕೊಬ್ಬ ಸಹಸ್ರಕ್ಕೊಬ್ಬ
ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ ರಾಮನಾಥ
 
[ತೀವಿ-ತುಂಬಿ]
 
ಜೇಡರ ದಾಸಿಮಯ್ಯ ಆದ್ಯ ವಚನಕಾರ. ಬಸವ ಮೊದಲಾದ ಸುಪ್ರಸಿದ್ಧ ಶರಣೆರಲ್ಲರಿಗಿಂತ ಹಿಂದಿನವನು. ಗುಲಬರ್ಗಾ ಜಿಲ್ಲೆಯ ಮುದನೂರು ಈತ ಹುಟ್ಟಿದ ಊರು. ತಂದೆ-ಕಾಮಯ್ಯ, ತಾಯಿ-ಶಂಕರಿ, ಹೆಂಡತಿ-ದುಗ್ಗಳೆ. ನೇಯ್ಗೆಯ ಕಸುಬಿನ ವಚನಕಾರ ಈತ. ರಾಮನಾಥ ಅನ್ನುವುದು ಜೇಡರ ದಾಸಿಮಯ್ಯನ ಅಂಕಿತ. ಈತನ ೧೭೬ ವಚನಗಳು ದೊರೆತಿವೆ.
 
ಸಭೆಯಲ್ಲಿ ಸಾವಿರ ಜನ ಇರಬಹುದು. ಆದರೆ ಅವರೆಲ್ಲರೂ ದಾನಕೊಡುವುದಕ್ಕೆ ಮುಂದೆಬರುವವರಲ್ಲ. ಯುದ್ಧಕ್ಕೆ ಲಕ್ಷ ಜನ ಹೋಗಬಹುದು. ಹಾಗೆ ಹೋದವರೆಲ್ಲ ಸಾಯುವವರಲ್ಲ. ಯುದ್ಧದಲ್ಲಿ ಶತ್ರುವನ್ನು ಇರಿಯಬಲ್ಲವರು ನೂರರಲ್ಲಿಯೋ ಸಾವಿರದಲ್ಲಿಯೋ ಒಬ್ಬರಿದ್ದರೆ ಹೆಚ್ಚು. ಹುಣಿಸೆಯ ಮರದಲ್ಲಿ ಬಿಟ್ಟ ಹೂಗಳೆಲ್ಲ ಹುಣಿಸೆಯ ಕಾಯಿ ಆಗುವುದೇ? ಇದು ಜೇಡರ ದಾಸಿಮಯ್ಯ ಕೇಳುವ ಪ್ರಶ್ನೆ. ಇಲ್ಲ ಅನ್ನುವ ಉತ್ತರ ಕೇಳುವ ಧಾಟಿಯಲ್ಲಿಯೇ ಹೊಳೆಯುತ್ತದೆ.
 
ಹೀಗೆ ದಾನ ನೀಡದ ಜನ, ಯುದ್ಧದಲ್ಲಿ ಸಾಯದ ಸೈನಿಕ, ಶತ್ರವನ್ನು ಕೊಲ್ಲದ ವೀರ ಇವರು ತಿರಸ್ಕಾರಕ್ಕೆ ಅರ್ಹರೇನು? ದಾಸಿಮಯ್ಯನ ಧೋರಣೆ ಹಾಗೆ ಇದ್ದಂತಿಲ್ಲ. ಸಫಲತೆ, ಯಶಸ್ಸು ಇವೇ ಬಲು ದೊಡ್ಡ ಮೌಲ್ಯಗಳು ಎಂಬ ಭ್ರಮೆಗೆ ಸಿಲುಕಿರುವ ಈ ಕಾಲಕ್ಕೆ ಅಗತ್ಯವಾಗಿ ಬೇಕಾದ ಮಾತು ಇಲ್ಲಿದೆ ಎಂದೆನಿಸುತ್ತಿದೆ.
 
ಸಫಲತೆ ಅಪೂರ್ವ. ಹಣ್ಣಾಗದ ಹೂಗಳು, ಕೊಲ್ಲದ, ಸಾಯದ ವೀರರು, ದಾನಕೊಡದೆ ಇರುವ ಸಾವಿರ ಜನ ಇವರೆಲ್ಲ ವ್ಯರ್ಥವೆಂದಲ್ಲ.  ‘ಲೀಲೆಯಲಿ ಯಾವುದೂ ವಿಫಲವಲ್ಲ' ಅನ್ನುವ ಮಾತು ನೆನಪಿಗೆ ಬರುತ್ತಿದೆ. ಅರ್ಥವಿರುವ ಒಂದು ಮಾತಿಗೆ ಅರ್ಥವಿರದ ಸಾವಿರ ಮಾತುಗಳು, ಒಂದು  ಸಫಲತೆಗೆ ಸಾವಿರ ವಿಫಲತೆಗಳು ಇದು ನಿಸರ್ಗದ ನಿಯಮವೇ ಇರಬಹುದು. 
Rating
No votes yet

Comments