ಇಂದು ಓದಿದ ವಚನ:ಗೆಲುವೋ ಸೋಲೋ ಚಿಂತೆ ಬೇಡ:ಸಗರದ ಬೊಮ್ಮಣ್ಣ

ಇಂದು ಓದಿದ ವಚನ:ಗೆಲುವೋ ಸೋಲೋ ಚಿಂತೆ ಬೇಡ:ಸಗರದ ಬೊಮ್ಮಣ್ಣ

ಗೆಲ್ಲ ಸೋಲ ಬಲ್ಲವರಿಗೇಕೆ
ಅದು ಬೆಳ್ಳರ ಗುಣ
ಪಥವೆಲ್ಲರಲಿ ನಿಹಿತನಾಗಿ
ಅತಿಶಯದ ವಿಷಯದಲ್ಲಿ ಗತನಾಗದೆ
ಸರ್ವವನರಿತು
ಗತಮಯಕ್ಕೆ ಅತೀತನಾಗು
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ
'ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ' ಎಂಬುದು ಸಗರದ ಬೊಮ್ಮಣ್ಣ ಎಂಬ ವಚನಕಾರನ ಅಂಕಿತನಾಮ. ಗುಲ್ಬರ್ಗಾ ಜಿಲ್ಲೆಯ ಸಗರದವನು ಈತ. ಕಾಲ ಸುಮಾರು ಕ್ರಿಶ. ೧೧೬೦. ಈತನ ಹೆಂಡತಿ ಶಿವದೇವಿ. ಈತ ಗಣಾಚಾರ ಪ್ರವೃತ್ತಿಯವನು (ಇಂದಿನ ಅರ್ಥದ ಮಿಲಿಟೆಂಟ್) ಎಂಬ ಮಾತಿದೆ. ಆತ ವಿಶೇಷವಾಗಿ ಜೈನ ವಿರೋಧಿಯಾಗಿದ್ದ ಎಂಬ ಮಾತಿದೆ.
ಗೆಲುವು ಸೋಲು ಎಂಬುದರ ಬಗ್ಗೆ ಬಲ್ಲವರು ತಲೆಕೆಡಿಸಿಕೊಳ್ಳಬಾರದು. ಹಾಗೆ ಚಿಂತೆ ಮಾಡುವುದು ಮೂರ್ಖರ (ಬೆಳ್ಳರ) ಗುಣ. ಸರಿಯಾದ ದಾರಿ ಹಿಡಿದು, ಎಲ್ಲರೊಡನೆ ಒಂದಾಗಿ ಸಾಗಬೇಕು, ಆದರೆ ಯಾವ ವಿಷಯದಲ್ಲೂ ಮುಳುಗಿ ಕಳೆದುಹೋಗಬಾರದು. ಎಲ್ಲವನ್ನೂ ಅರಿಯಬೇಕು, ಗತಕಾಲದ ಚಿಂತೆಯಲ್ಲಿ ಮುಳುಗದೆ ಅದಕ್ಕೆ ಅತೀತನಾಗಬೇಕು, ಇದು ಬದುಕುವ ದಾರಿ ಅನ್ನುತ್ತಾನೆ.
ಗೆಲುವಿನ ಆತಂಕಕ್ಕೆ ಸಿಲುಕಿರುವ, ಮಾಡಬಹುದಾಗಿದ್ದ, ಮಾಡದೆ ಹೋದ ಕೆಲಸಗಳ ಬಗ್ಗೆಯೇ ಚಿಂತೆಮಾಡುತ್ತ ನರಳುವವರಿಗೆ ಔಷಧದಂಥ ಮಾತು ಹೇಳಿದ್ದಾನೆ. 

 

ಈ ವಚನದಲ್ಲಿ ನಿಹಿತನಾಗಿ, ಅತಿಶಯ ವಿಷಯ, ಗತಮಯ ಅನ್ನುವ ಬಳಕೆಗಳು ಗಮನಸೆಳೆಯುತ್ತವೆ. ‘ನಿಹಿತ’ ಎಂದರೆ ‘ಇಡಲ್ಪಡು’ ಎಂದು ಅರ್ಥವಾಗುತ್ತದೆ. ಉಗ್ರ ಮನೋಧರ್ಮದವನು ಎಂದು ಹೇಳಲಾಗುವ ಬೊಮ್ಮಣ್ಣ ಎಲ್ಲ/ಎಲ್ಲರ ದಾರಿಗಳಲ್ಲಿ ಹೊಂದಿಕೊಂಡು ಹೋಗುವ ಮಾತನಾಡುವುದು ಆಶ್ಚರ್ಯ. ಆದರೂ ಅವನ ಒಳಮನಸ್ಸು ಗೆಲುವಿಗೆ ಸೋಲಿಗೆ ಹೋರಾಟ ಮಾಡುವುದು ಅನಗತ್ಯ ಎಂಬ ವಿವೇಕ ಹೇಳಿರಬಹುದು.‘ಅತಿಶಯ ವಿಷಯ’ ಅನ್ನುವಾಗ ವಿಷಯ ಅನ್ನುವುದು ಕಾಮಾಸಕ್ತಿ ಅನ್ನುವ ಅರ್ಥವನ್ನೂ ಸೂಚಿಸೀತು. ಅಥವ ಯಾವುದೇ ಒಂದು ವಿಷಯದ ಬಗ್ಗೆ ಅತಿಯಾಗಿ ಗೀಳಿಗೆ ಒಳಗಾಗುವ ಅನ್ನುವ ಅರ್ಥವೂ ಇದ್ದೀತು. ಯಾವುದಾದರೂ ಸರಿ, ಅವು ಗತಕಾಲದ ಕಾಡುವ ನೆನಪುಗಳೇ ಆಗಿರುತ್ತವೆ. ಮನಸ್ಸಿನ ವಿಕಾಸಕ್ಕೆ ಗತದಿಂದ ಬಿಡುಗಡೆ ಪಡೆಯುವುದು ಮುಖ್ಯವಲ್ಲವೇ? ಮುಕ್ತಿ ಅನ್ನುವ ಮಾತು ಕೂಡ ನಾವು ಬಿಡಲಾಗದ ಗತಸ್ಮರಣೆಗಳಿಂದ ಬಯಸುವ ಬಿಡುಗಡೆಯೇ ಅಲ್ಲವೇ? ಗತಮಯ ಅನ್ನುವ ಮಾತನ್ನು ‘ಆನಂದಮಯ’ ಅನ್ನುವಂಥ ರಚನೆಗಳೊಂದಿಗೆ ಮನಸ್ಸಿಗೆ ತಂದುಕೊಂಡರೆ ನಮ್ಮ ಮನಸ್ಸುಗಳು ಸಾಮಾನ್ಯವಾಗಿ ಗತದಲ್ಲೇ ಮುಳುಗಿ ಹೋಗಿರುವುದು ಅರಿವಾಗುತ್ತದಲ್ಲವೇ?
Rating
No votes yet

Comments