ಕನ್ನಡ ಭಾಷೆಯ ಕೆಲವು ಸ್ಥಿತ್ಯಂತರಗಳು

ಕನ್ನಡ ಭಾಷೆಯ ಕೆಲವು ಸ್ಥಿತ್ಯಂತರಗಳು

Comments

ಬರಹ

ಕನ್ನಡ ಭಾಷೆ ಹಲವು ಬದಲಾವಣೆಗಳನ್ನು ಕಂಡಿದೆ. ಎಲ್ಲರಿಗೂ ಗೊತ್ತಿರುವಂತೆ ವ->ಬ, ಪ->ಹ, ಮಧ್ಯದಲ್ಲಿ ರ್, ಲ್, ೞ್ ಕೆಲವು ವೇಳೆ ಳ್ ಗಳೆಲ್ಲ ಲೋಪವಾಗುವುದು ಕಾಣುತ್ತದೆ. ವ->ಬ ಆಗಿದ್ದು ತೀರಾ ಹೞೆಯ ವಿಚಾರ. ಕನ್ನಡದಲ್ಲಿ ವಕಾರದಿಂದ ಪ್ರಾರಂಭವಾಗುವ ಪದಗಳೇ ಇಲ್ಲವೇನೋ ಭ್ರಮೆಯಾಗುವಷ್ಟು ವಕಾರ ಬಕಾರವಾಗುವುದನ್ನು ಕಾಣುತ್ತೇವೆ. ಇದಕ್ಕೆ ಕನ್ನಡದ ಕವಿಗಳೆಲ್ಲ ಜೈನರಿದ್ದು ಅವರಿಗೆ ಪ್ರಾಕೃತ ಗೊತ್ತಿದ್ದು ಅದಱಿಂದ ವಕಾರಗಳೆಲ್ಲ ಬಕಾರವಾಗಿರುವ ಸಾಧ್ಯತೆಯಿದೆ. ಯಾಕೆಂದರೆ ಸಂಸ್ಕೃತ ವಕಾರಗಳು ಬಕಾರವಾಗುವುದನ್ನು ಕಾಣಬಹುದು. ಉದಾಹರಣೆಗೆ ವಾರಿಸು=ಬಾರಿಸು=ನಿವಾರಿಸು. ವಾಚಿಸು=ಬಾಜಿಸು. ವ್ಯಾಘ್ರ=ಬಗ್ಗ ಇತ್ಯಾದಿ ಇತ್ಯಾದಿ. ಇದಱ ಪ್ರಭಾವವನ್ನು ತುಳುವಿನಲ್ಲೂ ಕಾಣಬಹುದು. ತುಳುವಿನಲ್ಲಿ ಕನ್ನಡದಂತೆ ವಕಾರದಿಂದ ಪ್ರಾರಂಭವಾಗುವ ಪದಗಳನ್ನು ಕಾಣೆವು. ಆದರೂ ವೇಮಾಱು=ಮೋಸಹೋಗು(ಏಮಾಱು ಕೂಡ ಇದೆ), ವರಿ=ಸುಂಕ, ವರಮಾನ=ಆದಾಯ, ವಾಡಿಕೆ, ವಂದರಿ ಇವೆಲ್ಲ ವಕಾರದಿಂದ ಪ್ರಾರಂಭವಾಗುವ ಕನ್ನಡದ ಪದಗಳು. ಇನ್ನೂ ಇರಬಹುದು
ಪಕಾರ ಹಕಾರವಾಗುವುದನ್ನು ಮತ್ತು ಮಧ್ಯದ ಲ್, ರ್, ೞ್, ಳ್ (ಕೆಲವು ವೇಳೆ) ಲೋಪವಾಗುವುದನ್ನು ಶಿವಶರಣರ ಕಾಲಕ್ಕೆ ಕಾಣಬಹುದು. ೞಕಾರ ಬೞಕೆಯಲ್ಲಿ ಕಡಿಮೆಯಾಗಿ ನಂತರ ನಿಂತುಹೋಗಿದ್ದನ್ನು ೧೨ನೇ ಶತಮಾನದಿಂದೀಚೆಗೆ ಕಾಣಬಹುದು.

ಉದಾಹರಣೆಗೆ ಪಸು->ಹಸು, ಪೇೞ್=ಹೇಳ್, ಪುಸಿ=ಹುಸಿ ಇತ್ಯಾದಿ. ಆದರೂ ಈಗಲೂ ಪೀಚು, ಹೀಚು, ಪಿಳ್ಳೆ, ಹಿಳ್ಳೆ, ಪಲ್ಲಿ, ಹಲ್ಲಿ, ಪುಡಿ, ಹುಡಿ ಇವನ್ನೆಲ್ಲ ಪಕಾರ ಹಕಾರ ಎರಡೂ ಇರುವುದನ್ನು ಕಾಣಬಹುದು. ಅಂತೆಯೇ ಮುಂಚೆ ಪಕಾರಗಳಿಗೆ ಎರಡು ಅರ್ಥವಿದ್ದು ಈಗ ಹಕಾರಕ್ಕೆ ಇನ್ನೊಂದು ಅರ್ಥವಿರುವ ಪದಗಳನ್ನಾಗಿ ಬೞಸಿಕೊಳ್ಳುವುದನ್ನೂ ಕಾಣಬಹುದು ಉದಾಹರಣೆಗೆ ಪಾಡು=ಸ್ಥಿತಿ,ಆನುಭವ, ಹಾಡು. ಈಗ ಪಾಡು=ಸ್ಥಿತಿ, ಅನುಭವ, ಹಾಡು=ಗೀತೆ, ಪಡು=ಅನುಭವಿಸು, ಸಂಭೋಗಿಸು, ಆದರೆ ಈಗ ಹಡು=ಸಂಭೋಗಿಸು. ಪಡೆ=ಹೊಂದು, ಪ್ರಸವಿಸು(ಹಡೆ). ಈಗ ಪಡೆ=ಹೊಂದು, ಹಡೆ=ಪ್ರಸವಿಸು ಅರ್ಥದಲ್ಲಿ ಬೞಕೆ ಕಾಣಬಹುದು.
ಗೆಲ್ದ->ಗೆದ್ದ, ಸೋಲ್ತ=ಸೋತ, ಕಳ್ದ->ಕದ್ದ, ಪೞ್ತಿ->ಹೞ್ತಿ->ಹತ್ತಿ, ಗೞ್ದೆ->ಗರ್ದೆ->ಗದ್ದೆ ಇರ್ದು->ಇದ್ದು,
ಎೞ್ದು->ಎದ್ದು, ಉರ್ದು->ಉದ್ದು ಇತ್ಯಾದಿಗಳಲ್ಲಿ ರ್, ಲ್, ೞ್ ಮತ್ತು ಕೆಲವು ವೇಳೆ ಳ್ ಲೋಪವಾಗಿ ಮುಂದಿನ ವ್ಯಂಜನವೇ ಒತ್ತಾಗುವುದನ್ನು ಕಾಣಬಹುದು.

೧೮ನೇ ಶತಮಾನದ ಸುಮಾರಿಗೆ ’ಱ’ಕಾರವೂ ಬರವಣಿಗೆಯಲ್ಲಿ ಕಣ್ಮಱೆಯಾಗಿದ್ದನ್ನು ನೀವು ಕಾಣಬಹುದು.
ಇದು ನಮಗೆ ನಿಮಗೆ ಗೊತ್ತಿದ್ದ ವಿಷಯ. ಆದರೂ ವಿಚಾರಮಾಡುವಾಗ ಈ ಸಂಗತಿಯ ಬಗ್ಗೆ ತಿಳಿವಿರಲೆಂದು ಈ ಲೇಖನ ಬರೆಯುತ್ತಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet