ಸ್ವರ್ಗದ ನೀರು -ಒಂದು ದರವೇಶಿ ಕತೆ

ಸ್ವರ್ಗದ ನೀರು -ಒಂದು ದರವೇಶಿ ಕತೆ

ಗೌರಿ ಲಂಕೇಶ್ ಅವರ ’ದರವೇಶಿ ಕತೆಗಳು’ ಎಂಬ ಸೂಫಿ ಸಂಪ್ರದಾಯದ ಕತೆಗಳ ಸಂಗ್ರಹದ ಅನುವಾದವನ್ನು ಕೊಂಡು ಓದಿದೆ.

ಅಲ್ಲಿನ ಒಂದು ಕತೆ ಕೇಳಿ .
ಮರುಭೂಮಿಯಲ್ಲೊಬ್ಬ ನೀರ್‍ಅಡಿಕೆಯಿಂದ ಬಳಲಿ ನೀರನ್ನು ಹುಡುಕುತ್ತಿರುವಾಗ ಒಂದು ಓಯಸಿಸ್ ಅವನಿಗೆ ಸಿಗುತ್ತದೆ . ಆ ನೀರು ಅವನಿಗೆ ಬಹಳೇ ರುಚಿ ಎನಿಸಿ , ’ನೀರು ಇಷ್ಟು ಸಿಹಿ ಇರಬೇಕಾದರೆ ಸ್ವರ್ಗದ ನೀರೇ ಇರಬೇಕು. ಅದನ್ನು ಸುಲ್ತಾನನಿಗೆ ಕಾಣಿಕೆಯಾಗಿ ಕೊಡಬೇಕೆಂದು ’ ತೆಗೆದುಕೊಂಡು ಬಲುದೂರ ಪ್ರಯಾಣ ಮಾಡಿ ಸುಲ್ತಾನನ ಬಳಿಗೆ ಬಂದು ’ಜಹಾಂಪನಾ , ನಿಮಗಾಗಿ ಸ್ವರ್ಗದ ನೀರು ತಂದಿದ್ದೇನೆ’ ಅಂತ ಒಪ್ಪಿಸುತ್ತಾನೆ. ಸುಲ್ತಾನನು ಅದನ್ನು ಒಂದೆರಡು ಹನಿ ಮಾತ್ರ ಕುಡಿದು ರುಚಿ ನೋಡಿದ.

ನೀರು ಕಹಿಯಾಗಿತ್ತು.

ಆದರೆ " ಹೌದು, ನಿಜಕ್ಕೂ ಬಲು ರುಚಿಯಾಗಿದೆ" ಅಂತ ಹೇಳಿ ಅನೇಕ ನಗನಾಣ್ಯಗಳನ್ನು ಅವನಿಗೆ ಬಹುಮಾನ ನೀಡಿ , ಆ ಓಯಸಿಸ್ ಅನ್ನು ನೀನೇ ಕಾದುಕೊಂಡು , ನೀರಡಿಸಿ ಬಂದವರಿಗೆ ನೀರುನಿಡಿ ಕೊಟ್ಟು ಉಪಚಾರ ಮಾಡು’ ಎಂದು ಹೇಳಿ ಜತೆಗೆ ಸೈನಿಕರನ್ನ ಕಳಿಸುತ್ತಾನೆ. ಈ ಸೈನಿಕರಿಗೆ ಮರೆಯಲ್ಲಿ ಏನು ಹೇಳಿರುತ್ತಾನೆಂದರೆ ‘ಕೂಡಲೆ ಹೊರಡಿ, ಇವನನ್ನು ಆ ಓಯಸಿಸ್ ಗೆ ತಲುಪಿಸಿ . ನಡುವೆ ಎಲ್ಲಿಯೂ ನಿಲ್ಲಬೇಡಿ , ತಪ್ಪಿಯೂ ಪಕ್ಕದಲ್ಲೆ ಹರಿಯುತ್ತಿರುವ ಟೈಗ್ರಿಸ್ ನದಿಯನ್ನು ಇವನು ನೋಡದ ಹಾಗೆ , ಆ ನದಿಯ ನೀರಿನ ರುಚಿಯನ್ನು ಇವನು ತಿಳಿಯದ ಹಾಗೆ ನೋಡಿಕೊಳ್ಳಿ’ ಅಂತ !

ನಾವಾಗಿದ್ರೆ ಏನ್ ಮಾಡ್ತಿದ್ವಿ?
ಕಹಿ ನೀರು ತಂದಿದ್ದೀಯ ಅಂತ ನಿಜ ಹೇಳ್ತಿದ್ವಿ.
ಅವನಿಗೆ ಬೈದೋ ಹೊಡೆದೋ ಕಳಿಸ್ತಿದ್ವಿ.
ಅವನ ದೃಷ್ಟಿಯಿಂದ ವಿಚಾರ ಮಾಡಿ ನೋಡ್ತಿರ್ಲಿಲ್ಲ ,
ನನಗೆ ಸ್ವರ್ಗದ ನೀರು ಸಿಕ್ಕಿದೆ , ಸುಲ್ತಾನನಿಗೆ ಕೊಡಬೇಕು ಅಂತ ಕಷ್ಟ ಪಟ್ಟು ಬಂದವನ ಮನಸ್ಸನ್ನ ತಿಳೀತಿರ್ಲಿಲ್ಲ ,
ಅಲ್ಲವೆ?

ಇಲ್ಲಿ ಇನ್ನೊಂದು ಕತೆಯೂ ನನಗೆ ಬಹಳ ಸೇರಿತು . ಹುಡುಗಿಯೊಬ್ಬಳಿಗೆ ಒಂದರ ಹಿಂದೊಂದು ಕಷ್ಟಗಳ ಸರಮಾಲೆಯೇ ಬಂದರೂ , ಆ ಕಷ್ಟಗಳ ಸಮಯದಲ್ಲಿ ಅವಳು ಬಾಳಿದ ರೀತಿ , ಕಲಿತ ವಿದ್ಯೆ , ವಿನಯಗಳು ಕೊನೆಯಲ್ಲಿ ಅವಳನ್ನು ಚೀನಾ ದೇಶದ ರಾಣಿಯನ್ನಾಗಿ ಮಾಡುವಲ್ಲಿ ನೆರವಾಗುತ್ತವೆ ಎಂಬುದನ್ನು ನಿರೂಪಿಸುವ ಕತೆ ಅದು.

Rating
No votes yet

Comments