ಪಾಕಿಸ್ತಾನದೊಂದಿಗೆ ಯುದ್ಧ ಬೇಡ.

ಪಾಕಿಸ್ತಾನದೊಂದಿಗೆ ಯುದ್ಧ ಬೇಡ.

ಶೇಖಡ ೯೦ ರಷ್ಟು ಭಾರತೀಯರು ಪಾಕಿಸ್ತಾನದ ಮೇಲೆ ಯುದ್ದ ಸಾರಲು ಸಮ್ಮತಿಸುತ್ತಾರೆ ಎಂದು ಓದಿ ಆತಂಕವಾಯಿತು. ಇಂತಹ ಸಮಯದಲ್ಲಿ ಉದ್ರೇಕಗೊಳ್ಳದಿರುವುದು ಕರ್ತವ್ಯಲೋಪವೇನೋ ಎನ್ನುವಂತೆ ನಮ್ಮಲ್ಲಿ ಅನೇಕ ಜನರು ತೊಡೆತಟ್ಟಲು ಶುರು ಮಾಡಿಬಿಡುತ್ತಾರೆ. ಇನ್ನು ನಾವು ತೊಡೆತಟ್ಟಿದ ಮೇಲೆ ಅವರು ಸುಮ್ಮನಿರಲು ಸಾಧ್ಯವೆ? ತನ್ನ ಮರ್ಯಾದೆ ಉಳಿಸಿಕೊಳ್ಳಲು ನಾನೇನು ಕಮ್ಮಿ ಎನ್ನುತ್ತಾ ತನಗೆ ನೋವಾಗುವಷ್ಟು ಜೋರಾಗಿ ತೊಡೆ ತಟ್ಟುತ್ತಾನೆ. ಅಲ್ಲಿಗೆ ಯುದ್ದ ಮತ್ತು ಸಾವು ನೋವಿನ ಸುಳಿಯಲ್ಲಿ ಸಿಕ್ಕಿಬಿದ್ದಂತೆ.

ಯುದ್ಧವನ್ನು ಜಗತ್ತು ಹೇಗೆ ಗಂಭೀರವಾಗಿ ಪರಿಗಣಿಸಿ ಆತುರದಿಂದ ಕಾರ್ಯಶೀಲವಾಗುತ್ತದೆ ಎನ್ನುವುದಕ್ಕೆ ಇದು ಒಳ್ಳೆ ಉದಾಹರಣೆ. ಮುಂಬೈನಲ್ಲಿ ನಡೆದ ಘಟನೆಯ ಬಗ್ಗೆ ನಮ್ಮ ಪ್ರತಿಕ್ರೆಯ ಬಗ್ಗೆ ಎಚ್ಚರವಹಿಸುವುದು ಅಗತ್ಯ. ನವೆಂಬರ್ ೨೮ರಂದು ಭಾರತದ ವಿದೇಶಾಂಗ ಸಚಿವರಾದ ಪ್ರಣಬ್ ಮಖರ್ಜಿ ಅವರು ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಜರದಾರಿ ಅವರಿಗೆ ಪೋನ್ ಮೂಲಕ ಮಾತನಾಡಿ ಭಾರತ ಪಾಕಿಸ್ತಾನದ ವಿರುದ್ದ ಯುದ್ಧ ಮಾಡುವುದಾಗಿ ಬೆದರಿಸದರೆಂದು ಪಾಕಿಸ್ತಾನ ಯುದ್ದಕ್ಕೆ ಸಿದ್ದವಾಗತೊಡಗಿತು. ಹಾಗು ಅಮೇರಿಕದ ನಾಯಕರನ್ನು ಸಂಪರ್ಕಿಸಿ ೮೦ ಸಾವಿರ ಸೈನಿಕರನ್ನು ಆಫ್ಗನ್ ಗಡಿಯಿಂದ ಭಾರತದ ಗಡಿಯ ದಿಕ್ಕಿನಲ್ಲಿ ಕಳಿಸುವುದಾಗಿ ಹುಸಿ ಬೆದರಿಕೆ ಹಾಕಿತು. ಅಮೇರಿಕಗೆ ತಾಲೀಬಾನ್ ಮೇಲಿನ ಯುದ್ದದಲ್ಲಿ ಪಾಕಿಸ್ತಾನಿ ಸೇನೆಯ ಸಹಾಯದ ಅಗತ್ಯವಿರುವುದರಿಂದ ಅಮೇರಿಕದ ಡಾ. ಕಾಂಡೊಲಿಸ ರೈಸ್ ಮಧ್ಯರಾತ್ರಿಯಲ್ಲಿ ಕಾಲ್ ಮಾಡಿ ಮಲಗಿದ್ದ ಪ್ರಣವ್ ಮುಖರ್ಜಿಯವರನ್ನು ವಿಚಾರಿಸಿದಾಗ ಅವರು ಆ ರೀತಿ ಬೆದರಿಸಿಲ್ಲವಷ್ಟೆ ಅಲ್ಲ, ಅವರು ಜರದಾರಿಗೆ ಫೋನ್ ಸಹ ಮಾಡಿಲ್ಲ ಎನ್ನುವುದು ತಿಳಿದುಬಂತು. ಬೇರೆ ಯಾರೊ ಪ್ರಣವ್ ಹೆಸರು ಹೇಳಿಕೊಂಡು ಪಾಕಿಸ್ತಾನದ ಅಧ್ಯಕ್ಷರ ಕಾರ್ಯಾಲಕ್ಕೆ ಮಂಕುಬೂದಿ ಎರಚುವುದಲ್ಲದೇ ಸ್ವತಹ ಅಧ್ಯಕ್ಷರನ್ನೆ ಏಮಾರಿಸಿದ್ದಾರೆ.

ಈ ಸತ್ಯವನ್ನು ಪತ್ತೆ ಮಾಡಿ ವರದಿ ಮಾಡಿದ್ದು ಪಾಕಿಸ್ತಾನದ ಪ್ರಮುಖ ಪತ್ರಿಕೆ DAWN. ಇದು ಅಂದು ರೀತಿ ಹಾಸ್ಯಮಯವಾಗಿದ್ದರು ಎಂತಹ ಗಂಡಾಂತರ ಕಾದಿತ್ತು ಎನ್ನುವುದು ಗಮನಾರ್ಹ. ಅಕಸ್ಮಾತ್ ಈ ಸುಳ್ಳು ಪ್ರಣವ್ ಮುಖರ್ಜಿ ಆಣುಬಾಂಬ್ ಹಾಕುತ್ತೇವೆ ಎಂದು ಪಾಕಿಸ್ತಾನವನ್ನು ಹೆದರಿಸಿ, ಅವರು ನಂಬಿಯೋ ಅಥವ ನಂಬದಿದ್ದರೂ ಕೇಡಿತನಕ್ಕೆ ಇದು ಒಳ್ಳೆ ಅವಕಾಶ ಎಂದು ದುಷ್ಟ ಸೇನಾದಿಕಾರಿಗಳು ಅಣು ಬಾಂಬ್ ಪ್ರಯೋಗಿಸಿಬಿಟ್ಟಿದ್ದರೆ? ಊಹಿಸಲೂ ಮೈ ನಡುಗುತ್ತದೆ.

ಪಾಕಿಸ್ತಾನೀಯರಿಗೆ ಇದರಿಂದ ತಲೆ ತಗ್ಗಿಸುವಂತಾಗಿದ್ದರೂ ಅಲ್ಲಿಯ ಜರ್ನಲಿಸ್ಟ್ ಗಳು ಈ ಅಚಾತುರ್ಯವನ್ನು ಬಹಿರಂಗಗೊಳಿಸಿರುವುದು ನನಗೇನೊ ಒಂದು ರೀತಿಯ ವಿಶ್ವಾಸ ಮೂಡಿಸುತ್ತಿದೆ. ಅಲ್ಲಿರುವ ಇಂತಹ ಇನ್ವೆಸ್ಟಿಗೇಟಿವ್ ವರದಿಗಾರರಿಗೆ ಮತ್ತು ಮಾಡರೇಟ್ ಪ್ರಜೆಗಳಿಗೆ ಪ್ರಪಂಚದ ಬೇರೆ ದೇಶಗಳು ಬೆಂಬಲ ನೀಡಿ ಈ ನೀಚ ಉಗ್ರಗಾಮಿಗಳನ್ನು ಹೊಸಕಿಹಾಕಲು ಸಾಧ್ಯವಿದೆ ಎಂದು ನಂಬಿದ್ದೇನೆ. ಇದರಿಂದ ಪಾಕಿಸ್ತಾನಕ್ಕೆ ಸಹ ಒಳ್ಳೆಯದಾಗುವುದು ಎಂದು ಅಲ್ಲಿಯ ಅನೇಕ ಸಜ್ಜನರು ಮೌನವಾಗಿದ್ದರೂ ಒಪ್ಪುತ್ತಾರೆ ಎಂದು ನಾವು ನಂಬಿ ಭಾರತ ಕಾರ್ಯಚರಣೆ ಶುರುಮಾಡುವುದರಲ್ಲಿ ತಪ್ಪೇನಿಲ್ಲ ಎನಿಸುತ್ತದೆ.

ಈ ಉಗ್ರಗಾಮಿಗಳು ಪಾಕಿಸ್ತಾನದಿಂದ ಬಂದಿದ್ದರೂ ನಮ್ಮ ದೇಶದ ನಾಯಕರು ಮತ್ತು ಡಿಪ್ಲೋಮ್ಯಾಟ್ಸ್ ಅದನ್ನೆ ಹಿಡಿದು ಕಡೆಯಬಾರದು. ಅಂತರ್ರಾಷ್ಟ್ರೀಯ ರಾಜಕಾರಣದಲ್ಲಿ ಡಿಪ್ಲೋಮೆಸಿ ಅಂದರೆ ಬರೀ ಗಿಲೀಟು ಮಾತಾಡಿಕೊಂಡಿರುವುದಲ್ಲ. ಈ ಕೆಲಸದಲ್ಲಿ ಆಡುವ ಮಾತುಗಳೂ ಮತ್ತು ಭಾಷೆಯ ಪ್ರಯೋಗವನ್ನು ಚೆನ್ನಾಗಿ ತೂಗಿ-ಮಾಡಿ ಬಳಸಬೇಕು. ಉದಾಹರಣೆಗೆ "ಮುಂಬೈ ಕೃತ್ಯಕ್ಕೆ ಪಾಕಿಸ್ತಾನ ಜವಾಬ್ದಾರಿ" ಎಂದು ಪದೆ ಪದೆ ಹೇಳುತ್ತಿದ್ದರೆ ಪಾಕಿಸ್ತಾನದ ದುಷ್ಕರ್ಮಿಗಳು, ಭಾರತೀಯರು ಪಾಕಿಸ್ತಾನಿಯರನ್ನೆಲ್ಲ ಜರೆಯುತ್ತಿದ್ದಾರೆ ಎಂದು ಸ್ಪಿನ್ ಮಾಡಿ ಅಲ್ಲಿರುವ ಮಾಡರೇಟ್ ವರ್ಗವನ್ನು ಭಾರತದ ವಿರುದ್ದ ತಿರುಗಿಸಬಹುದು. ಅಥವ ಅವರ ಪ್ರಭಾವವನ್ನು ಬಲವನ್ನು ಕುಂದುವಂತೆ ಮಾಡಬಹುದು. ಈ ಎರಡೂ ದೇಶಗಳ ವೈಶಮ್ಯವನ್ನೂ ಮುಂದುವರೆಸಲು ಉಪಯೋಗಿಸಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದುದು ಪಾಕಿಸ್ತಾನ ಭೌಗೋಳಿಕವಾಗಾಗಲಿ ಅಥವಾ ಸೈದ್ಧಾಂತಿಕವಾಗಾಗಲಿ ಸಮಾನ ಚಿಂತನೆ ಮಾಡುವಂತಹ ದೇಶವಲ್ಲ. ಅನೇಕ ಪಾಕಿಸ್ತಾನಗಳಿವೆ. ಬಾಂಬೆಯಂತೆ ವ್ಯಾಪಾರಿ ಮನೋಭಾವದ ಕರಾಚಿಯ ಸಿಂಧಿ ಪ್ರಾಂತ್ಯ ಒಂದಾದರೆ, ಜೀವನದಲ್ಲಿ ಪಾರ್ಟೀ ಮಾಡಿಕೊಂಡು ಬಾಲಿವುಡ್ ಸಿನೆಮ ನೋಡುತ್ತ ಮಜಾ ಮಾಡಬೇಕು ಎನ್ನುವ ಲಾಹೋರಿ ಪಂಜಾಬಿಗಳೂ, ಭಾರತದಿಂದ ವಲಸೆ ಹೋದ ’ಮೊಹಾಜಿರ್’ ಎಂದು ಕರೆಸಿಕೊಳ್ಳುವ ಮಿಸ್ಲಿಮರು, ಸರಹದ್ದ್ ನ್ ಹಿಂದುಳಿದ ಗುಡ್ಡಗಾಡು ಜನರು ಮತ್ತು ಇವರೆಲ್ಲರ ನಡುವೆ ಬೆರೆತು ಹೋಗಿರುವಂತೆ ಇಸ್ಲಾಮಿಕ್ ಮೂಲಭುತವಾದಿಗಳೂ, ಬಿನ್ ಲಾಡನ್ ಬಗ್ಗೆ ಒಲವಿರುರುವವರೂ, ಬೇರೇ ದೇಶದಿಂದ ಬಂದಿರುವ ಹಿಂಸೆಯನ್ನೆ ವೃತ್ತಿ ಮಾಡಿಕೊಂಡಿರುವ ಜಿಹಾದಿಗಳು - ಈ ರೀತಿ ಬೇರೆ ಬೇರೆ ಪಾಕಿಸ್ತಾನಗಳೂ ಇವೆ.

೨೧ನೆ ಶತಮಾನದಲ್ಲಿ ಭಾರತ ಬಲಿಶ್ಟ ರಾಷ್ಟ್ರವಾಗುವ ಸನ್ನಾಹದಲ್ಲಿದೆ. ಅಂತಹ ನಮ್ಮ ಭಾರತ ಈ ಎಲ್ಲ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು ಅದನ್ನು exploit ಮಾಡಬೇಕು. ತನ್ನ ಹಾಗು ತನ್ನ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಶಾಂತಿ ಕಾಪಾಡುವುದು ಮತ್ತು ಮುಂದಾಳತ್ವ ವಹಿಸುವುದು ತನ್ನ ಜವಾಬ್ದಾರಿ ಕೂಡ ಎಂದು ಅರಿತುಕೊಂಡು ಆತ್ಮವಿಶ್ವಾಸವಿರುವ ಒಂದು ಪ್ರಗತಿಪರ ಪ್ರೌಢ ದೇಶದಂತೆ ವರ್ತಿಸಬೇಕಾಗಿದೆ.

ನಮ್ಮ ದೇಹದಲ್ಲೂ ಬಿಸಿರಕ್ತ ಹರಿಯುತ್ತಿದೆ ಎನ್ನುವುದನ್ನು ಪ್ರೂವ್ ಮಾಡಲು ಯುದ್ದಕ್ಕೆ ಹೋಗುವುದು ಎಳೆ ನಿಂಬೇಕಾಯಿಗಳು ಮಾಡುವ ಕೆಲಸ. ವೈರಿಯನ್ನು ಬಗ್ಗುಬಡೆಯುವುದಕ್ಕಿಂತಲೂ ವೈರತ್ವವನ್ನು ಹೂತು ಹಾಕುವುದಕ್ಕೆ ಹೆಚ್ಚಿನ ಎದೆಯ ಕೆಚ್ಚು ಬೇಕು. ಈ ಕೆಲಸವನ್ನು ಮಾಡಲು ನಮ್ಮ ರಾಜಕಾರಣಿಗಳು ಮತ್ತು ಸಮಾಜದ ಗಣ್ಯರು ಮುಂದಾಗಬೇಕು. ಎದುರಾಳಿಯೊಂದಿಗೆ ಜಾಣತನದಿಂದ ವ್ಯವಹರಿಸಿದರೆ ಹೇಡಿತನವಾಗುತ್ತದೇನೊ ಎನ್ನುವ ಭಯ ತೊರೆಯಬೇಕು.

ಒಂದು ದಿನ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತ ಮಾರನೇ ದಿನವೇ ಕೈ ಕುಲುಕಿ ’ಸಹಪಾರ್ಟಿಗಳಾಗುವ’ ನಮ್ಮ ನೇತಾರರಿಗೆ ಇದೇನೂ ಕಷ್ಟಗುವುದಿಲ್ಲ. "ಅದಕ್ಕೆ ಬೇಕಾದ ಇದು ಅವರ ಬಳಿ ಖಂಡಿತ ಇದೆ ." -:))

ಮೇಲೆ ಉಲ್ಲೇಖಿಸಿದ ಆ ವರದಿ ಇಲ್ಲಿದೆ. http://www.dawn.com/2008/12/06/top2.htm

ಅದರ ಬಗ್ಗೆ ಸಂಪಾದಕೀಯ ಇಲ್ಲಿದೆ.
http://www.dawn.com/2008/12/07/ed.htm

ಧನ್ಯವಾದಗಳು
ಮಧು

Rating
No votes yet

Comments