ನನಗೂ ಡಾಕ್ಟರೇಟ್ ಬೇಕು

ನನಗೂ ಡಾಕ್ಟರೇಟ್ ಬೇಕು

ಗೆ,
.. .. ..ಯುನಿವರ್ಸಿಟಿ,
..ಗನ್,
ಅಮೆರಿಕಾ.

ವಿಷಯ : ನನಗೆ ಡಾಕ್ಟರೇಟು ಕೊಡುವ ಬಗ್ಗೆ

ಮಾನ್ಯರೆ,

ನಾನೂ ಸಾರ್ವಜನಿಕ ಬದುಕಿನಲ್ಲಿ ಗಣನೀಯ ಸೇವೆ ಸಲ್ಲಿಸಿದ್ದೇನೆ. ಅದೇನೆಂದರೆ ನಾನು ರಾಜಕೀಯಕ್ಕೂ ಸೇರಿಲ್ಲ,ಅಧಿಕಾರಿಯೂ ಆಗಿಲ್ಲ. ಅಲ್ಲಿಗೆ ದೇಶಕ್ಕೆ ಕೋಟ್ಯಾಂತರ ರೂ. ಉಳಿತಾಯ ಮಾಡಿದ್ದೇನೆ. ಆರ್ಥಿಕ ಸಂಕಷ್ಟದ ಈ ಕಾಲದಲ್ಲಿ ಕೋಟ್ಯಾಂತರ ರೂ. ಉಳಿತಾಯದ ಮಹತ್ವ ನಿಮಗೆ ಗೊತ್ತಿದೆಯಲ್ಲಾ.

ನನಗೆ ಕಾಂಗೈಯಲ್ಲಾಗಲೀ, ಬಿಜೆ.ಪಿ.ಯಲ್ಲಾಗಲೀ, ಜನತಾದಳದಲ್ಲಾಗಲೀ, ಜನತೆಯಲ್ಲಾಗಲೀ ಯಾರೂ ವಿರೋಧಿಗಳಿಲ್ಲ.ಆದ್ದರಿಂದ ನನಗೆ ಡಾಕ್ಟರೇಟು ಕೊಟ್ಟರೆ ಯಾರೂ ವಿರೋಧಿಸುವುದಿಲ್ಲ. ಅಲ್ಲದೇ ಯಾವ ಯುನಿವರ್ಸಿಟಿಯೂ ಮಾಡದ ಸಾಧನೆ ನೀವು ಮಾಡಿದಂತಾಗುತ್ತದೆ.
ದಯವಿಟ್ಟು ಈ ಬಗ್ಗೆ ಗಮನಿಸುವಿರಾಗಿ ನಂಬುತ್ತೇನೆ.
ನಿಮ್ಮ ವಿಧೇಯ,
ಗಣೇಶ.
*************
(ಮಾನ್ಯ ಸಂಪದಿಗರೇ,
ತಾವೆಲ್ಲಾ ಈ ಮೇಲಿನ ಯುನಿವರ್ಸಿಟಿಗೆ ಈಮೈಲ್ ಮಾಡಿ ನನಗೆ ಡಾಕ್ಟರೇಟು ಕೊಡಲೇ ಬೇಕೆಂದು ಒತ್ತಾಯ ಮಾಡುವಿರಾಗಿ ನಂಬುತ್ತೇನೆ. ವೈಯಕ್ತಿಕವಾಗಿ ನನಗೆ ಡಾಕ್ಟರೇಟು ಬಗ್ಗೆ ಕೊಂಚವೂ ಆಸಕ್ತಿಯಿಲ್ಲ. ನಿಮ್ಮೆಲ್ಲರಿಗಾಗಿ, ಜನತೆಗಾಗಿ ಅನಿವಾರ್ಯ ಕಾರಣದಿಂದ ಬಯಸುತ್ತಿದ್ದೇನೆ :

ಚೌತಿ ಕಳೆದು ತಿಂಗಳಾದ ಮೇಲೆ ನಮ್ಮ ಬೀದಿಯಲ್ಲಿ ಪಡ್ಡೆಗಳು ಬಂದು ‘ಬೀದಿಯಲ್ಲಿ ಗಣೇಶ ಕೂಡಿಸುತ್ತೇವೆ. ೫೦೦ ರೂ. ಕೊಡಿ’ ಎಂದು ರಸೀದಿ ಕೊಡುತ್ತಾ ಅವರಲ್ಲೊಬ್ಬ, ‘ನಮ್ಮದು ಏಕದಂತ ಗಣೇಶ ಅಭಿಮಾನಿ ಸಂಘ ಸರ್, ನೀವು ಬರೀ ಗಣೇಶ’ ಎಂದು ಜೋಕು ಮಾಡಿದ. ೩೨-೧ ದಂತದ ನನಗೇ ಬರೀ ಗಣೇಶ ಅನ್ನೋದೆ.
ಗಣೇಶ ಹಾಲು ಕುಡಿದಾಗಿನಿಂದ ಹಿಡಿದು, ಕ್ರಿಕೆಟರ್ ದೊಡ್ಡಗಣೇಶ, ಶತಾವಧಾನಿ ಗಣೇಶ, ಕಾಮೆಡಿ ಟೈಮ್ ಗಣೇಶ, ಇವರ ವಿಷಯ ಮಾತನಾಡುವಾಗ ‘ನೀವು ಅಲ್ಲ ರೀ, ನೀವು ಬರೀ ಗಣೇಶ’ ಅನ್ನುತ್ತಲೇ ಇರುತ್ತಾರೆ.

ಇನ್ನು ಇನಿಷಿಯಲ್ ‘ಎ, ಬಿ..’ ಏನಾದರೂ ಸೇರಿಸೋಣ ಎಂದರೆ ನ್ಯುಮರೋಲೋಜಿ, ಕೋರ್ಟು, ಪೇಪರ್ ಕೆಲಸ ಬಹಳ ಮಾಡಬೇಕು. ನಂತರ ಪ್ರತಿಯೊಬ್ಬರಿಗೂ ಅದೇನೆಂದು, ಏಕೆ ಸೇರಿಸಿದೆನೆಂದು ವಿವರಿಸಬೇಕು.

ಇದೆಲ್ಲಕ್ಕಿಂತ ಸುಲಭವಾಗಿ ಡಾಕ್ಟರೇಟು ಸಿಗುವಾಗ ಯಾಕೆ ಪ್ರಯತ್ನಿಸಬಾರದು ಅನಿಸಿತು.
ಸುಲಭದಲ್ಲೇ ಇನಿಷಿಯಲ್ ಸಿಗುವುದಲ್ವಾ-ಡಾ.ಗಣೇಶ್.)

-ಗಣೇಶ.

Rating
No votes yet

Comments