ಭಾರತದಲ್ಲಿರುವ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮೀಯರು ಭಾರತೀಯರಲ್ಲವೇ?

ಭಾರತದಲ್ಲಿರುವ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮೀಯರು ಭಾರತೀಯರಲ್ಲವೇ?

Comments

ಬರಹ

ಹಾಸನದಲ್ಲಿ ಮೊನ್ನೆ ಒಂದು ಕಾರ್ಯಕ್ರಮ. ಚಿತ್ರದುರ್ಗದ ಮುರಘಾ ಮಠದ ಸ್ವಾಮೀಜಿ ಪೂಜ್ಯ ಶ್ರೀ ಶಿವ ಶರಣರೊಂದಿಗೆ ಮುಕ್ತಚಿಂತನ.ವಾಮ ಪಂಥೀಯ ಚಿಂತಕರೇ ಹೆಚ್ಚು ಸಂಖ್ಯೆಯಲ್ಲಿದ್ದರೂ ನಮ್ಮಂಥಹ ವಾಮ ಪಂಥೀಯರಲ್ಲದವರೂ ಇದ್ದೆವು.  ಹಿಂದು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದವರಿಗೆ ಸ್ವಾಮೀಜಿ ಧ್ವನಿಯಗಿರುವುದು ನನಗೆ ಸಂತೋಷವನ್ನು ಕೊಟ್ಟ ವಿಚಾರ. ಮುಕ್ತಚಿಂತನೆಯನ್ನು ಪೂರ್ಣವಾಗಿ ಕೇಳಿದಮೇಲೆ ನನ್ನಲ್ಲಿ ಕೆಲವು ಸಂಶಯಗಳು ಹಾಗೆಯೇ ಉಳಿದವು. ಮುಕ್ತ ಚಿಂತನೆ -ಎಂಬುದು ಕಾರ್ಯಕ್ರಮದ ಹೆಸರಾಗಿದ್ದರೂ ಸಂವಾದದಲ್ಲಿ ಪಾಲ್ಗೊಳ್ಳುವವರ ಒಂದು ಪಟ್ಟಿ ಮುದ್ರಣವಾಗಿದ್ದರಿಂದ ಪ್ರಶ್ನೆಯನ್ನು ಅಲ್ಲಿ ಕೇಳುವುದು ನನಗೆ ಉಚಿತವಾಗಿ ಕಾಣಲಿಲ್ಲ. ಅದರೆ ಸಂಪದ ವಾದರೋ ಸಾವಿರಾರು ಜನರು ಓದುವ ,ಪ್ರತಿಕ್ರಿಯಿಸುವ ಒಂದು ವೇದಿಕೆ ಆಗಿರುವುದರಿಂದ ನನ್ನ ಸಂದೇಹವನ್ನು ವಾಮಪಂತೀಯ ವಿಚಾರ ವಾದಿಗಳಾದರೂ ಪರಿಹರಿಸಬಹುದು, ಅಥವಾ ಓದುಗರಾದರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದೆಂದು ಈ ವೇದಿಕೆಯಲ್ಲಿ ಬರೆದಿರುವೆ.

೧.ಸಂವಾದದಲ್ಲಿ ಪಾಲ್ಗೊಂಡಿದ್ದವರಲ್ಲಿ ಒಬ್ಬರು ಕೇಳಿದ ಪ್ರಶ್ನೆ-ಮುಸಲ್ಮಾನರು ಶುಕ್ರವಾರ ಮಸೀದಿಯಲ್ಲಿ ಸೇರಿ ಒಟ್ಟಾಗಿ ಪ್ರಾರ್ಥನೆ ಮಾಡುತ್ತಾರೆ. ಕ್ರೈಸ್ತರು ಒಟ್ತಾಗಿ ಭಾನುವರ ಚರ್ಚ್ ನಲ್ಲಿ ಸೇರುತ್ತಾರೆ. ಹಿಂದುಗಳಿಗಾದರೋ ಆರೀತಿ ವ್ಯವಸ್ಥೆಯೇ ಇಲ್ಲವಲ್ಲಾ?

ಸ್ವಾಮೀಜಿಯವರು ಉತ್ತರಿಸುತ್ತಾ "ಮುಸಲ್ಮಾನರು ಶುಕ್ರವಾರ ಮಸೀದಿಯಲ್ಲಿ ಸೇರಿ ಒಟ್ಟಾಗಿ ಪ್ರಾರ್ಥನೆ ಮಾಡುತ್ತಾರೆ. ಕ್ರೈಸ್ತರು ಒಟ್ಟಾಗಿ ಭಾನುವರ ಚರ್ಚ್ ನಲ್ಲಿ ಸೇರುತ್ತಾರೆ. ಆದರೆ ನಾವು ಭಾರತೀಯರಿಗೆ ಏನೂ ಇಲ್ಲ ವೆಂದು ಹೇಳುತ್ತಾ ಮಾತು ಮುಂದುವರೆಸಿದರು.

ನನಗೆ ವಿಚಿತ್ರವಾಗಿ ಕಂಡದ್ದು ಆ ಮಾತಿನಲ್ಲೇ. "ನಾವು ಭಾರತೀಯರು" ಎಂದು ಸ್ವಾಮೀಜಿ ಸಂಭೋದಿಸಿದ್ದು ಹಿಂದುಗಳ ಕುರಿತಾಗಿ. ಆದರೆ ಹಿಂದು ಎಂಬ ಶಬ್ದವನ್ನು  ಅವರ ಮಾತಿನಲ್ಲಿ ಉಪಯೋಗಿಸಬಾರದೆಂಬ ಬರದಲ್ಲಿ ಅವರ ಮಾತಿನ ಸಾರಾಂಶದಲ್ಲಿ ಹಿಂದುಗಳು ಮಾತ್ರ ಭಾರತೀಯರು, ಕ್ರೈಸ್ತರು, ಮುಸಲ್ಮಾನರು ಭಾರತೀಯರಲ್ಲವೆಂಬ ಅರ್ಥ ಬರುವಂತಿತ್ತು.  ಒಟ್ಟಾರೆ ಭಾರತದಲ್ಲಿ ಕ್ರೈಸ್ತ,ಮುಸಲ್ಮಾನರ ಹೆಸರು ಹೇಳಿದ ಮೇಲೆ ಉಳಿದ ಬಹುಸಂಖ್ಯಾತರು ಹಿಂದುಗಳೇ ಅಲ್ಲವೇ! ಹಿಂದುಗಳನ್ನು "ಹಿಂದುಗಳೆಂದರೆ" ಇವರು ಕೋಮುವಾದಿ ಯಾಗಿಬಿಡುತ್ತಾರಾ? ಹಿಂದು ಪದಕ್ಕೆ ಇಷ್ಟೊಂದು ನಿಷೇಧ ಬೇಕೆ? ಅಥವಾ ಕ್ರೈಸ್ತ, ಮುಸಲ್ಮಾನರನ್ನು  ನೀವೂ ಕೂಡ ಈ ಮಣ್ಣಿನ ಮಕ್ಕಳೇ ಎಂಬ ದೇಶಾಭಿಮಾನವನ್ನು ಅವರಿಗೂ ಹೇಳ ಬೇಡವೇ?

೨.ಮತ್ತೊಬ್ಬರು ಕೇಳೀದ ಇನ್ನೊಂದು ಪ್ರಶ್ನೆ: ಸ್ವಾಮೀಜಿ, [ಅವರ ಮಾತಿನಲ್ಲಿ ಶರಣರೇ] ನೀವು ದಲಿತರಿಗೆ ಲಿಂಗ ದೀಕ್ಷೆ ಕೊಡುವ ಕೆಲಸ ಮಾಡುತ್ತಾ ಎಲ್ಲಿ ನೀವು ಹಿಂದು ಧರ್ಮವನ್ನು ಗಟ್ಟಿ ಮಾಡುವ ಕೆಲಸ ಮಾಡಿ ಬಿಡುತ್ತೀರೋ? ಎಂಬ ಸಂಶಯ ನನಗೆ ಕಾಡುತ್ತಿದೆ.

ಸ್ವಾಮೀಜಿಯವರು ಅದಕ್ಕೆ ಉತ್ತರಿಸುತ್ತಾ" ಇಲ್ಲ ನಾನು ಹಿಂದುಧರ್ಮವನ್ನು ಗಟ್ಟಿಗೊಳಿಸುವುದಿಲ್ಲ. ಆ ಅಂಜಿಕೆ ನಿಮಗೆ ಬೇಡ.ಇದರಿಂದಾಗಿ ಹಿಂದು ಮಠಾಧಿಪತಿಗಳಲ್ಲಿ ನಾನು ವಿರೋಧ ಕಟ್ಟಿಕೊಂಡಿದ್ದೇನೆ."- ಎಂದು ಸಮಾಧಾನ ಕೊಟ್ಟರು.

ಆಗ ನನಗೆ ಅನ್ನಿಸಿದ್ದು" ಹಿಂದು ಸಮಾಜದಲ್ಲಿರುವ ಅಸ್ಪೃಶ್ಯತೆಯಂತ ಕೊಳಕನ್ನು ಹೋಗಲಾಡಿಸಿ ದಲಿತರನ್ನು ಉಳಿದವರು, ಅಂತೆಯೇ ಉಳಿದವರನ್ನು ದಲಿತರು ಪರಸ್ಪರ ಪ್ರೀತಿಸುವಂತಾ ಕಾರ್ಯವನ್ನು ಮಾಡಿದರೆ ಅದೊಂದು ಅಪರಾಧ ವಾಗುತ್ತಿತ್ತೇ?

ಯಾಕೆ " ಹಿಂದು" ಪದದ ಬಗ್ಗೆ ಇಂತ ಒಂದು ದ್ವೇಷ?

ಮನೆಯಲ್ಲಿದ್ದುಕೊಂಡು ಮನೆಯನ್ನು ಸರಿಮಾಡಬಹುದು ಹೊರತು ಮನೆಯನ್ನು ಕೆಡವಿದ ನಂತರ ಎಲ್ಲೂ ಜಾಗವಿಲ್ಲದ ಪರಿಸ್ಥಿತಿಯಲ್ಲಿ ಮನೆಯನ್ನು ಹೊಸದಗಿ ಕಟ್ಟುವುದು ಜಾಣತನದ ಮಾತೇ?

ವಿಚಾರವಾದ ವೆಂದರೆ ಕೇವಲ ಹಿಂದು ಧರ್ಮದ ವಿರುದ್ಧದ ಚಳುವಳಿಯೇ? ಅಥವಾ ಒಂದು ಒಳ್ಳೆಯ ಸಮಾಜವನ್ನು ಕಟ್ಟುವ ಚಿಂತನೆಯೇ?

ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದು ಧರ್ಮದಲ್ಲಿ ಒಳ್ಳೆಯ ಚಿಂತನೆಗಳು  ಸಿಕ್ಕುವುದೇ ಇಲ್ಲವೇ?

ಕಾರ್ಯಕ್ರಮವನ್ನು ಸಂಘಟಿಸಿದ್ದ ವಿಚಾರವಾದಿ ಕಾಳೇಗೌಡ ನಾಗಾವರ ಅವರು " ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ" ಎಂಬ ಗಾದೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಈ ಗಾದೆಯು ಯಾವ ಉದ್ದೇಶದಿಂದ ನುಡಿಕಟ್ಟಾಯಿತು ಎಂಬುದನ್ನೂ ಚಿಂತಿಸದೆ " ನೋಡಿ ಅಂದೇ ನಮ್ಮ ಜಾನಪದರು ಹೇಳಿದ್ದಾರೆ-ವೇದ ಸುಳ್ಳು" ಎಂಬ ಅಪ್ಪಣೆ ಕೊಡಿಸಿ ಬಿಟ್ಟರು.

ಹಾಗಾದರೆ ಹಿಂದು ಸಮಾಜದಲ್ಲಿರಬಹುದಾದ ದೋಷಗಳನ್ನು ತಿದ್ದುತ್ತಾ ಒಳ್ಳೆಯ ವಿಚಾರಗಳನ್ನು ಒಪ್ಪಿ ಕೊಳ್ಳುವುದು ವಿಚಾರ ವಾದ ವಲ್ಲವೇ? ಏನಂತೀರಾ? 

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet