ಇಂದು ಓದಿದ ವಚನ: ಲೀಢವಾಗಿರಬಾರದು: ಸಿದ್ಧರಾಮ

ಇಂದು ಓದಿದ ವಚನ: ಲೀಢವಾಗಿರಬಾರದು: ಸಿದ್ಧರಾಮ

ನೋಡುವುದು ನೋಡಲೇ ಬೇಕು
ಮಾಡುವುದು ಮಾಡಲೇ ಬೇಕು
ನೋಡಿ ಮಾಡಿ ಮನದಲ್ಲಿ ಲೀಢವಾಗಿರಬಾರದು ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ

[ಲೀಢ-ನೆಕ್ಕು, ಆಸ್ವಾದಿಸು, ರುಚಿ ನೋಡು].

ಸಿದ್ಧರಾಮನ ಈ ವಚನ ವೈರಾಗ್ಯವೆಂಬ ಕಲ್ಪನೆಯ ಭಾಷ್ಯದಂತಿದೆ.

ವೈರಾಗ್ಯವೆಂದರೆ ಪಲಾಯನವಾದವಲ್ಲ. ಏನೂ ಮಾಡದೆ ಇರುವುದೂ ಅಲ್ಲ. ಏನೇನನ್ನು ನೋಡಬೇಕೋ ಅದನ್ನೆಲ್ಲ ನೋಡಲೇಬೇಕು, ಮಾಡಬೇಕಾದುದನ್ನೆಲ್ಲ ಮಾಡಲೇ ಬೇಕು. ಆದರೆ ಹಾಗೆ ನೋಡಿದ್ದನ್ನು, ಮಾಡಿದ್ದನ್ನು, ಚಪ್ಪರಿಸುತ್ತಾ, ಮತ್ತೆ ಮತ್ತೆ ನೆನೆಯುತ್ತಾ ಆಸ್ವಾದಿಸುತ್ತಾ ಇರಬಾರದು. ಹಾಗೆ ನೋಡಿಯೂ ಮಾಡಿಯೂ ಅದರೊಳಗಾಗದೆ ಇರುವುದು ನಿಜವಾದ ವಿರಕ್ತಿ ಎಂದು ಸಿದ್ಧರಾಮ ಹೇಳುತ್ತಾನೆ.

ಸುಖವೋ ದುಃಖವೋ, ಮಾಡಿದ್ದೋ, ಮಾಡದೆ ಹೋದದ್ದೋ ನಮ್ಮ ಮನಸ್ಸು ಹಳೆಯದನ್ನು ನೆನೆದುಕೊಳ್ಳುತ್ತಾ ಚಪ್ಪರಿಸುತ್ತಾ ಇರುತ್ತದಲ್ಲ ಅದನ್ನು ಬಿಟ್ಟರೆ, ಅಥವ ನಾಳೆಯ ಸುಂದರ ಕಲ್ಪನೆಯನ್ನು ಚಪ್ಪರಿಸುತ್ತಾ ಇರುತ್ತದಲ್ಲ ಅದನ್ನು ಬಿಟ್ಟರೆ ನಿಜವಾದ ವೈರಾಗ್ಯ ಸಾಧ್ಯವಾದೀತು. ಆ ಕ್ಷಣದ ಅನುಭವವನ್ನು ಆ ಕ್ಷಣವೇ ಪೂರ್ತಿಯಾಗಿ ಅನುಭವಿಸಿ-ಬಿಡುವುದೇ, ಅನುಭವಿಸಿ ’ಬಿಟ್ಟುಬಿಡುವುದೇ’ ಮನಸ್ಸಿನ ನೆಮ್ಮದಿಯ ದಾರಿ ಅನ್ನುವ ಹಾಗಿದೆ ಈ ವಚನ. ಮನೆಯ ಅಟ್ಟದ ಮೇಲೆ ತುಂಬಿಕೊಂಡಿರುವ, ಯಾವತ್ತೋ ಬೇಕಾದೀತು ಎಂದು, ನೆನಪಿಗೆ ಇರಲಿ ಎಂದು, ಬಿಸಾಕದೆ ಸುಮ್ಮನೆ ತುಂಬಿಟ್ಟುಕೊಂಡಿರುವ ವಸ್ತುಗಳ ಹಾಗೆಯೇ ಭಾವಗಳನ್ನೂ ನೆನಪುಗಳನ್ನೂ ಸಂಕಟಗಳನ್ನೂ ಮನಸ್ಸಿನಲ್ಲಿ ತುಂಬಿಟ್ಟುಕೊಂಡು ಮಾಡಬೇಕಾದ್ದನ್ನು ಮಾಡದೆ ಇರುವುದು ವೈರಾಗ್ಯವಲ್ಲ ಅನ್ನುವ ಅರ್ಥ ಮನಸ್ಸಿಗೆ ಹೊಳೆಯುವ ಹಾಗಿದೆ ಈ ವಚನ.

Rating
No votes yet

Comments