ಏರೇರಿ ನೋಡಿ ಬಂದೆ ಶಿವನೇರಿ
ಹೊಸವರ್ಷದ ದಿನ. ಎಲ್ಲೆಲ್ಲೂ ಯಗಾದಿ ಆಚರಣೆಯ ಸಂಭ್ರಮ ತಯಾರಿ. ಎಲ್ಲರರೂ ಬೆಳಿಗ್ಗೆ ಎದ್ದು ಎಣ್ಣೆ ಸ್ನಾನ ಮಾಡುವ ಆತುರದ ಸಡಗರ.ನಾನು ಬೆಳಗಿನಜಾವ ನಾಲ್ಕುಗಂಟೆಗೆ ಎದ್ದು ಪಕ್ಕದ ಕೋಣೆಯಲ್ಲಿದ್ದ ಗೆಳೆಯ ಬಾಲಕೃಷ್ಣನನ್ನು ಎಬ್ಬಿಸಲು ಆಗದಷ್ಟು ಆಲಸ್ಯ ಮೈಯಲ್ಲಿ ಇನ್ನೂ ತುಳುಕಾಡುತಿತ್ತು.ಅಲ್ಲಿಂದಲೇ ದೀರ್ಘವಾದ ಮಿಸ್ ಕಾಲ್ ಕೊಟ್ಟು ಅವನನ್ನು ಎಬ್ಬಿಸಿದೆ. ನನಗಿಂತ ಮೊದಲು ಹಾಸಿಗೆಯಿಂದ ಎದ್ದುಬಂದು ಸ್ನಾನದ ಕೊಠಡಿಯ ಎದುರಿಗಿರುವ ಕನ್ನಡಿಯಲ್ಲಿ ತನ್ನ ನಿದ್ರೆತುಂಬಿದ ಮುಖವನ್ನು ನೋಡಿಕೊಳ್ಳುತ್ತಿದ್ದ. ನನ್ನ ಕೋಣೆಯಿಂದಲೇ ರಾಜಾ ನಿದ್ದ ಮುಗಿತೇನೋ.! ಗಾಡಿ ಎಷ್ಟೊತ್ತಿಗೆ ಬರುವುದು ಎಂದು ಕೇಳಿದೆ. ಸೊಳ್ಳೆಗಳೆಲ್ಲ ಒಮ್ಮೆಲೇ ನುಗ್ಗಿಬಿಡುವಂತೆ ಬಾಯಿ ಅಗಲಿಸಿ ಆಕಳಿಸುತ್ತ ಅಲ್ಲಿಂದಲೇ ಇನ್ನು ಹಾಸಿಗೆಯಲ್ಲೇ ಒದ್ದಾಡುತಿಯಲ್ಲೋ ಮಂಗ್ಯಾ ಎಂದು ಗುನುಗಿದ.
ನಂತರ ನಾನು ಎದ್ದು ನನ್ನ ವಲ್ಲಿ ಮತ್ತು ನನ್ನ ಒಳ ಉಡುಪುಗಳನ್ನು ತಂದು ಸ್ನಾನದ ಕೊಠಡಿಯಲ್ಲಿ ನೇತುಹಾಕಿ ಬಕೀಟ್ ತೊಳೆದು ನಳತಿರುವಿದೆ. ನೀರು ತುಂಬಿಕೊಳ್ಳುವ ಮೊದಲು ಹಿಂದಿನ ದಿನವೇ ಮನೆಯ ಮಾಲಿಕರಿಂದ ಇಸುಕೊಂಡು ಬಂದಿದ್ದ ಬೇವಿನ ಎಲೆಯನ್ನು ನೀರಿಗೆ ಹಾಕಿ ಮೈಗೆ ಎಣ್ಣೆ ಸವರಿಕೊಳ್ಳುತ್ತಿದ್ದೆ. ಎಂದಿನಂತೆ ನಾನು ತಣ್ಣೀರಿನಲ್ಲೇ ಸ್ನಾನ ಮುಗಿಸಿದೆ.ಬಿಸಿನಿರಿನ ಜಳಕ ಮಾಡುವ ರೂಡಿಯಿದ್ದ ಬಾಲು ನೀರು ಕಾಯಿಸಲು ಒಲೆಯ ಮೇಲೆ ಪಾತ್ರೆಯಲ್ಲಿ ನೀರುತುಂಬಿಸಿಟ್ಟ.
ಎಣ್ಣೆ ಹಚ್ಚಿಕೊಂಡು ಬೇವಿನ ಎಲೆ ನೀರಿಗೆ ಸೇರಿಸಿ ಜಳಕ ಮುಗಿಸಿ ಭಾರತಿಯ ಸಂಪ್ರದಾಯದಂತೆ ಹೊಸವರ್ಷದ ಎಲ್ಲಾ ನಿಯಮಗಳನ್ನು ಪಾಲಿಸಿದೆವು. ಹಣೆಗಿಷ್ಟು ವಿಭೂತಿ ಗಂಧ ಬಳಿದುಕೊಂಡ ನಾನು ಕೋಣೆಯಲ್ಲಿ ನಾಕುತಂತಿ ಕವನ ಸಂಕಲವನ್ನಿಡಿದುಕೊಂಡು ಕುಳಿತೆ. ಬಾಲು ಏನೇನೋ ತಾಯಾರಿ ಮಾಡೆಂದು ಜಳಕ ಮಾಡುತ್ತಲೇ ಹೇಳುತ್ತಿದ್ದ. ಬ್ಯಾಗಿಗೆ ಅಂಗಿ ಮಡಿಚಿಡು, ಕ್ಯಾಮರವನ್ನು ಬಾಕ್ಸ್ ನಲ್ಲಿಟ್ಟು ಬ್ಯಾಗಿನಲ್ಲಿಡು ಎಂದು ಗುನುಗುತ್ತಿದ್ದರೂ ಯಾವುದನ್ನೂ ಕೇಳಿಸಿಕೊಳ್ಳದೆ ನಾಕುತಂತಿಯ ಜೊತೆ ಐದನೆಯ ತಂತಿ ನಾನಾಗಿ ಮಿಡಿಯುತ್ತ ಕುಂತಿದ್ದೆ. ನಾಕುತಂತಿಯನ್ನು ಹಿಡಿದಿದ್ದ ನನ್ನ ಮನಸ್ಸಿನ ಭಾವತಂತಿ ಮಿಡಿಯಿತು.ನನ್ನ ಒಳವಿನ ಗೆಳತಿಯ ನೆನಪು ತುಂಬಿಬಂತು. ಅದೆ ನೆನಪಿನ ಗುಂಗಿನಲ್ಲಿಕವನ ಗೀಚುವ ಮನಸ್ಸಾಯಿತು. ನೆನಪಿನಲ್ಲೇ ನೆನಪಿನ ಕವಿತೆ ಗೀಚಿದೆ.
ನೆನಪು ಅದೇ ನೆನಪು
ಅವಳ ಕಣ್ಣೋಟದ ನೆನಪು
ಈಗೇ ಸಾಗಿತ್ತು ನನ್ನ ಹರಕು ಮುರುಕು ಕಾವ್ಯದ ಸಾಲುಗಳ ಯಾತ್ರೆ. ಮನೆಯ ಹಿಂದಿರುವ ಮಾವಿನ ಮರದಲ್ಲಿ ಕೋಗಿಲೆ ಕುಹೂ..ಕುಹೂ ಎಂದು ಹಿರಿ ಸಿರಿ ಕಂಠದಲ್ಲಿ ಕಿವಿಯಲ್ಲಿ ಮಾರ್ದನಿಸುವಂತೆ ಕೂಗತೊಡಗಿತು. ತಕ್ಷಣ ನನ್ನ ಕವಿತೆಯಲ್ಲಿ ಮತ್ತೊಂದು ಸಾಲು ಸೇರಿತು.
ಈ ನೆನಪಿನ ಕವಿತೆ ಮುಗಿಯುವವರೆಗೂ ನನಗೆ ಯಾರು ಏನೇ ಹೇಳಿದರೂ ಯಾವುದೇ ಪರಿವಿರಲಿಲ್ಲ. ಕವಿತೆಯನ್ನು ಮುಗಿಸಿ ಎಂದಿನಂತೆ ಬಾಲುವಿನ ಮುಂದೆ ಹಿಡಿದು ಹಲ್ಲು ಕಿಸಿದೆ. ನಾನು ಬೇಸರಿಸಿಕೊಳ್ಳಬಾರ-ದೆಂದು ಬಾಲು ಕವನದ ಮೇಲೊಮ್ಮೆ ಕಣ್ಣಾಡಿಸಿದ. ಕವನದ ಬಗ್ಗೆ ಏನೂ ಹೇಳದಿದ್ದಾಗ ನನಗೆ ಗೊತ್ತಾಯಿತು ಅವನ ಮನಸ್ಸು ಇನ್ನೇನೋ ಲೆಕ್ಕಚಾರದಲ್ಲಿ ಮುಳುಗಿದೆ ಎಂದು. ಆಗ ಬಾಲುವಿನ ಗೆಳಯ ಕೃಷ್ಣಸ್ವಾಮಿ ಮುಂಬೈಯಿಂದ ಬಂದ. ಬಾಲುವಿನ ಜಳಕವಾದನಂತರ ಎಲ್ಲರೂ ಜಳಕ ಮುಗಿಸಿದರು.ನಾನು ಒಂದೆರಡು ಅಂಗಿ ಮಡಿಚಿ ಬ್ಯಾಗಿಗೆ ತುರುಕಿದೆ.ಅಷ್ಟರಲ್ಲಿ ಬಾಲು ರಾತ್ರಿ ಕಟ್ಟಿಟ್ಟಿದ್ದ ಖಾರಮಂಡಕ್ಕಿ, ಚಕ್ಕುಲಿ ಮತ್ತೇನೇನೋ ತಿಂಡಿ ತಿನಿಸುಗಳನ್ನ ಬ್ಯಾಗಿಗೆ ಹಾಕಿದ.
ಎಲ್ಲರ ತಯಾರಿ ಜೋರಾಗಿ ನಡೆದಿತ್ತು. ಎಂದಿನಂತೆ ನಾನು ಫೋಟೊ ತೆಗೆಸಿಕೊಳ್ಳುವ ಗುಂಗಿನಲ್ಲಿ ಕೃಷ್ಣನಿಗೆ ಹಾಗೆ ಕೀಟಲೆ ಮಾಡುತ್ತ ಹೇಳಿದೆ. ಇತ್ತೀಚಿಗೆ ನೀನು ತುಂಬಾ ಚನ್ನಾಗಿ ಫೋಟೊ ತೆಗೆಯುವುದನ್ನ ಕಲಿತಿರುವೆಯಂತೆ ನಿನ್ನ ಕೈಚಳಕ ತೋರಿಸಲು ನನ್ನದೊಂದು ಫೋಟೋ ತೆಗೆ ನೋಡೋಣ ಎಂದೆ. ಆದರೆ ಅವಯ್ರಾರು ನನ್ನ ಮಾತು ಕೇಳುವಂತಿರಲಿಲ್ಲ.


ಬಾಲು ಕನ್ನಡ, ತೆಲುಗು,ಹಿಂದಿ,ಇಂಗ್ಲೀಷ್ ಹೀಗೆ ನಲ್ಕಾರು ಭಾಷೆಗಳನ್ನು ಮಾತನಾಡುವ ಬಹುಭಾಷಿ. ನಾನು ಮತ್ತು ಬಾಲುವನ್ನು ಹೊರೆತುಪಡಿಸಿ ಎಲ್ಲರು ತೆಲುಗು ಮಾತನಾಡುವವರೆ. ಒಬ್ಬಿಬ್ಬರು ತಮಿಳು ಮಾತನಾಡುವವರೂ ಇದ್ದರು. ಬಹುಸಂಖ್ಯಯಲ್ಲಿದ್ದ ತೆಲುಗಿನವರು ತೆಲುಗಿನಲ್ಲಿ ಅದು ಇದು ಎಂದು ಏನೇನೋ ಹರಟುತಿದ್ದರು. ತಲೆ ಬೋಳಿಸಿಕೊಂಡು ಗುಂಡು ಗುಂಡಾಗಿ ಕಾಣಿಸುತ್ತಿದ್ದ ಬಾಲುವಿನ ಗೆಳೆಯನನ್ನು ಗುಂಡನೆಂದೇ ಕರೆಯುತ್ತಿದ್ದೆವು. ಅವನ ಮಾತಿನ ಶೈಲಿಯೋ ಥೇಟ್ ಗುಂಡನಂತೆ ಗಟ್ಟಿಯಾಗಿ ಹೆದರಿಸುವಂತೆ ಗಡುಸಾಗಿರುತ್ತಿದ್ದವು. ಹರಕು ಮುರುಕು ಅಷ್ಟಿಷ್ಟು ತೆಲುಗು ತಿಳಿಯುತ್ತಿದ್ದ ನನಗೆ ಅವರ ಮಾತುಗಳನ್ನು ಕೇಳುತ್ತಾ ಬೇಸರಿಕೆ ಹತ್ತಿತು. ಹಾಗೆ ನಾನು ಮೌನದ ಜಾಡುಹಿಡಿದೆ. ನನ್ನ ಒಲವಿನ ಗೆಳತಿಯ ನೆನಪಿನಲ್ಲಿ ಏನೇನೋ ಕನಸು ಕಟ್ಟುತ್ತ ಕುಳಿತೆ.ಅದೇ ಗುಂಗಿನಲ್ಲಿ ಹತ್ತಾರು ಕವಿತೆಗಳನ್ನ ಕಲ್ಪಿಸಿಕೊಂಡೆ. ಅಷ್ಟು ಹೊತ್ತಿಗೆ ಮೂಡಣದಲ್ಲಿ ರವಿ ಕೆಂಪೇರಿ ತಿಳಿನೀಲ ಆಗಸದಲ್ಲಿ ರಂಗಿನೋಕುಳಿ ಆಡುತ್ತ ಉದಯಿಸುತ್ತಿದ್ದ.


ಮತ್ತೆ ಗಾಡಿ ಏರಿ ಕುಳಿತೆವು. ಗಾಡಿ ದಾರಿಯನ್ನು ನುಂಗುತ್ತ ಮುನ್ನೆಡೆದಿತ್ತು. ಮರಾಠಿಯವನಾಗಿದ್ದ ಗಾಡಿಯ ಚಾಲಕ ಮಹೇಶ ಮಹರಾಷ್ಟದಲ್ಲಿ ಯುಗಾದಿಯನ್ನು ಆಚರಿಸುವ ಪದ್ಧತಿಯಬಗ್ಗೆ ವಿವರವಾಗಿ ಹೇಳತೊಡಗಿದ. ನಮ್ಮೂರಿನ ಯುಗಾದಿ ಮಹರಾಷ್ಟದಲ್ಲಿ ಗುಡಿಪಾಡ್ವ. ಬ್ರಹ್ಮನು ಬ್ರಹ್ಮಾಂಡವನ್ನು ಸೃಷ್ಠಿದ ದಿನ. ಗುಡಿ ಎಂದರೆ ಬಾವುಟ (ದ್ವಜ). ರಾಮನು ರಾವಣನಿಂದ ಲಂಕೆಯನ್ನು ಗೆದ್ದು ಅಯೋಧ್ಯಗೆ ಮರಳಿದ ದಿನ. ಆ ವಿಜಯದ ಸಂಕೇತವಾಗಿ ಪ್ರತಿಮನೆಯ ಮೇಲೂ ಹೊಸ ಸೀರೆ ಅಥವ ಯಾವುದಾದರೊಂದು ಸುಂದರವಾದ ಬಣ್ಣದ ಬಟ್ಟೆಯನ್ನು ತಂದು ಅದನ್ನು ಬಿದುರಿನ ಅಥವ ಯಾವುದಾದರೊಂದು ಗಳದ ಒಂದು ತುದಿಗೆ ಕಟ್ಟಿ ಮೇಲೊಂದು ತಾಮ್ರದ ತಾಲಿಯನ್ನು ಬೋರಲಾಕಿ ಮೇಲೇರಿಸುವರು. ಮಾವು ಬೇವಿನ ತೋರಣದಿಂದ ಭೂಷಿತವಾಗಿ ಸುಂದರವಾಗಿ ಮನೆಯಮೇಲೆ ನೇತಾಡುವ ಗುಡಿ ಗಾಳಿಬಂದಾಗ ಹಾರಾಡುತ್ತದೆ. ವಿಧಿವತ್ತಾದ ಪೂಜೆನೂ ಗುಡಿಗೆ ಸಲ್ಲಿಸಿ ಎಲ್ಲರು ಬೇವು ಬೆಲ್ಲವನ್ನು ಮೆಲ್ಲುತ್ತಾರೆ. ದೀರ್ಘವಾದ ವಿವರಣೆ ಕೊಡುತ್ತ ಚಾಲಕ ಮಹೇಶ್ ಗಾಡಿಯನ್ನ ಓಡಿಸುತ್ತಿದ್ದ.ಜೊತೆಗೆ ನಮ್ಮೂರಲ್ಲಿ ಯುಗಾದಿಯನ್ನು ಹೇಗೆ ಆಚರಿಸುತ್ತಾರೆಂದು ಕೇಳಿ ತಿಳಿದುಕೊಂಡ. ಗುಡಿಪಾಡ್ವ ಹಬ್ಬವನ್ನು ಯಾವ ಹೆಸರಿನಿಂದ ಕರೆಯುತ್ತಾರೆಂದು ಕೇಳಿ ತಿಳಿದುಕೊಂಡ. ಗುಟುಕ ಹಾಕುವ ವ್ಯಸನವಿಲ್ಲದ ಮಹೇಶ್ ಜೊತೆ ನನ್ನ ಒಡನಾಟ ಬೇಗನೆ ಬೆಳೆಯಿತು.
ಎಲ್ಲರು ತಮಗೆ ಬೇಕಾದುದ್ದನ್ನು ತರಿಸಿಕೊಂಡು ಗಡದ್ದಾಗಿ ತಿನ್ನತೊಡಗಿದರು. ನಾನು ಮೊದಲು ಅವಲಕ್ಕಿ ತರಿಸಿಕೊಂಡು ತಿಂದೆ. ತುಂಬಾ ರುಚಿಯಾಗಿತ್ತು. ತಾಳಲಾರದೆ ಮತ್ತೇ ಇನ್ನೊಂದು ಅವಲಕ್ಕಿ ತರಿಸಿಕೊಂಡು ತಿಂದೆ. ಜೊತೆ ಉಪ್ಪಿಟ್ಟು, ಇಡ್ಲಿ, ವಡ ಎಲ್ಲವನ್ನೂ ತಿಂದೆ. ಮೈಗೆ ಆಲಸ್ಯ ಹೆಚ್ಚುವಷ್ಟ ಹೊಟ್ಟೆ ಭಾರವಾಯಿತು. ಕೆಲವರು ಎರಡು, ಇನ್ನೂ ಕೆಲವರು ಮೂರು ಪ್ಲೇಟ್ ತಿಂದರು. ಅಷ್ಟೊಂದು ಸೊಗಸಾಗಿತ್ತು ನಾರಾಯಣಗಾವ್ನ ತಿಂಡಿ.
ಸುಮಾರು ವರ್ಷಗಳೇ ಆಗಿದ್ದವು ಅಷ್ಟೊಂದು ರುಚಿಯಾದ ತಿಂಡಿ ತಿಂದು. ಹಾಗೆ ತಿನ್ನುತ್ತ ನನ್ನ ಮನಸ್ಸು ನೆನಪುಗಳನ್ನು ಕೆದಕುತ್ತ ಇಂಜಿನೇರಿಂಗ್ ಓದುವಾಗ ನಡೆಸಿದ ಜೀವನದ ಕಡೆ ನುಸುಳಿತು. ದಾವಣಗೆರೆಯಲ್ಲಿ ಸಿಗುತಿದ್ದ ಅವಲಕ್ಕಿ, ಮಂಡಕ್ಕಿ, ಪುಲಾವ್, ಪುಳಿಯೊಗರೆ, ಚಿತ್ರನ್ನ, ಮಂಡಕ್ಕಿ ಒಗ್ಗರಣೆ, ಇಡ್ಲಿ, ವಡ ಬೆಣ್ಣೆದೋಸೆ ಎಲ್ಲವನ್ನು ನೆನೆದು ಬಾಯಿ ನೀರೊಡೆಯತೊಡಗಿತು. ಪಕ್ಕದಲ್ಲೇ ತಿಂಡಿತಯಾರಿ ಮಾಡುತಿದ್ದ ಕೋಣೆಯ ಕಡೆ ಹೋಗಿ ತುಂಬಾ ಚನ್ನಾಗಿ ತಿಂಡಿ ಮಾಡಿದ್ದೀರೆಂದು ಹೇಳಿದೆ. ನನ್ನ ಮಾತು ಕೇಳಿ ಅವನ ಮುಖ ಖುಷಿಯಿಂದ ಅರಳಿತು.
ತಿಂಡಿ ತಿನ್ನುವುದು ಮುಗಿಸಿ ಗಾಡಿ ಹತ್ತಿ ಕುಳಿತೆವು. ಅಲ್ಲಿಂದ ಮುಂದೆ ಓಝರ್ ಹಳ್ಳಿಗೆ ಹೋದೆವು. ಓಝರ್, ಗಣೇಶ ವಿಘ್ನೇಶ್ವರಾನಿ ಅವತರಿಸಿದ ಊರು, ಕುಕುಡಿ ನದಿ ದಂಡೆಯ ಮೇಲಿದೆ. ಪುಣೆಯಿಂದ ಸುಮಾರು ನೂರು ಕಿ.ಮೀ. ದೂರದಲ್ಲಿದೆ. ಪುಣೆ ನಾಸಿಕ್ ಹೆದ್ದಾರಿಯಲ್ಲಿರುವ ನಾರಾಯಣ್ಗಾವ್ ನಿಂದ ಎಡಗಡೆಯ ಚಿಕ್ಕರಸ್ತೆ ಹಿಡಿಯಬೇಕು.


ಅದೇ ಗುಂಗಿನಲ್ಲಿ ಮಲ್ಲೆಹೂವನ್ನು ನನ್ನ ಕವಿತೆಯಲ್ಲಿ ಸೆರೆಹಿಡಿಯಬೇಕೆಂಬ ಕಲ್ಪನೆ ನನ್ನನ್ನಾವರಿಸಿ ತನ್ನ ಹಿಡಿತ ಸಾಧಿಸಿತು. ಮನಸ್ಸು ಆ ಮಲ್ಲೆ ಮೊಗ್ಗಿನ ಸುತ್ತ ಗಿರಿಕಿ ಹೊಡೆಯಲು ಪ್ರಾರಂಬಿಸಿತು. ಹತ್ತಾರು ಕಲ್ಪನಾ ಲಹರಿಯಲ್ಲಿ ತೇಲಿತು. ಅಲ್ಲಿ ಇಲ್ಲಿ ಅಲೆದು ಏನನ್ನೋ ಹುಡುಕುತಿತ್ತು. ಕವಿತೆ ಕಟ್ಟುವ ಆತುರ ತಡೆಯದೆ ಎರಡು ಸಾಲುಗಳನ್ನ ಗೀಚಿದೆ. ಬರಿ ಎರೆಡೇ ಸಾಲು.
ಅರಳಿಬಿಡು ಮಲ್ಲೆ ಹೂವೆ
ನನಗೆಳತಿ ನಗುವ ಮೊದಲು
ಅಲ್ಲಿಂದ ನಮ್ಮ ಪ್ರಯಣ ಲೇಣ್ಯಾದ್ರಿ ಕಡೆಗೆ ಹಾಳಾಗಿ ತಗ್ಗುಗಳಿಂದ ತುಂಬಿದ ಕಿರಿದಾರಿಯಲ್ಲಿ ಧೂಳೆಬ್ಬಿಸುತ್ತ ಸಾಗಿತು. ಸುಮಾರು ೧೦ ಗಾವುದದಷ್ಟು ದೂರ ಇದ್ದ ಲೇಣ್ಯಾದಿ ತಲುಪಲು ಅರ್ಧಗಂಟೆ ಬೇಕಾಯಿತು. ದೂರದಿಂದಲೇ ಬೃಹದಾಕಾರವಾಗಿ ಹಬ್ಬಿದ ಕಲ್ಲಿನ ಬೆಟ್ಟಗಳು ನಮ್ಮ ಕಾಣ್ಣಿಗೆ ಕಾಣಿಸತೊಡಗಿದವು. ಒಣ ಹುಲ್ಲಿನಲ್ಲಿ ಬೆಟ್ಟದ ಮೈ ಮುಚ್ಚಿತ್ತು. ಅಲ್ಲಲ್ಲಿ ಬೋಳಾದ ಮರಗಳು. ಕೆಲವು ಮರಗಳು ವಸಂತದ ತಂಗಾಳಿಗೆ ಚಿಗುರೊಡೆದಿದ್ದವು. ಕಾದ ಹಾಸು ಕರಿಬಂಡೆಗಳು. ಬಿಸಿಲಿನ ಝಳಕ್ಕೆ ಒಣಗಿ ಹುಡಿಯಾಗಿರುವ ಬೆಟ್ಟದ ಹುಲ್ಲು. ಬೇಸಿಗೆಗೆ ಕನ್ನಡಿಹಿಡಿದಂತೆ ತೋರುತ್ತಿದ್ದವು.


ಎಲ್ಲರೂ ಗಾಡಿಯಿಂದ ತಾರಾತುರಿಯಲ್ಲಿಳಿದು ಮೆಟ್ಟಿಲತ್ತಿ ಮೆಲೇರತೊಡಗಿದೆವು. ವಸಂತ ಋತುವಿನ ತಿಳಿ ತೀಕ್ಷ್ಣ ಬಿಸಿಲು ಕಣ್ಣು ಕುಕ್ಕುತ್ತಿತ್ತು. ಬಿಸಿ ಏರಿದ ಗಾಳಿ ಮೈಸುಡುತ್ತಿತ್ತು.ಮೇಲೇರಲು ಕಲ್ಲಿನ ಮೆಟ್ಟಿಲು. ಬೆಟ್ಟದ ಮೇಲೆ ಬರುವ ಯಾತ್ರಿಕರಿಗೆ ಸ್ವಾಗತ ಕೋರುವವರಂತೆ ಅಲ್ಲಲ್ಲಿ ಕೂತಿರುವ ಮಂಗಗಳು. ಅವುಗಳ ಕಣ್ಣೆಲ್ಲ ಯಾತ್ರಿಕರು ತಂದಿರುವ ತಿಂಡಿ ತಿನಿಸು, ಕೊಬ್ಬರಿ, ಹಣ್ಣು ಹಂಪಲಗಳ ಮೇಲೆ. ಬಂದವರೆಲ್ಲರೂ ಅವುಗಳು ತಿಂದು ತಣಿಯುವಷ್ಟು ತಿಂಡಿ, ಹಣ್ಣುಗಳನ್ನ ಕೊಡುತ್ತಿದ್ದರು.






ದಾರಿಯುದ್ದಕ್ಕೂ ತನಗೆ ತೋಚಿದ್ದನ್ನು ಹೇಳುತ್ತಲೇ ಇದ್ದ ಚಾಲಕ ಮಹೇಶ್, ಮದ್ಯೆ ಒಮ್ಮೆ ಅವನ ಮಾತು ರಾಜಕೀಯದ ಕಡೆ ತಿರುಗಿತು. ಕಾಂಗ್ರೇಸ್ನ ಬಗ್ಗೆ ತನಗಿದ್ದ ಸಿಟ್ಟೆನ್ನೆಲ್ಲಾ ಮಾತುಗಳಲ್ಲಿ ತೀರಿಸಿಕೊಂಡ. ಬಿ.ಜೆ.ಪಿ. ಅಧಿಕಾರಕ್ಕೆ ಬಂದರೆ ಒಳ್ಳೆಯ ಕೆಲಸಗಳಾಗಬಹುದೆಂದು ಊಹಿಸಿ ಹೇಳುತ್ತಿದ್ದ. ಗುಜರಾತ್ ಮೋದಿಯನ್ನೊಮ್ಮೆ ಸೈ ಎಂದ. ಕೊನಗೆ ಎಲ್ಲರದು ಅಷ್ಟೇ ಅಧಿಕಾರಕ್ಕೆ ಬಂದ ಮೇಲೆ ಹಣ ದೋಚುವುದೇ ಕಾಯಕವೆಂದು ಮೂದಲಿಸಿದ. ಶಿವನೇರಿ ಪ್ರಸಿದ್ದ ತಾಣವನ್ನಾಗಿ ಮಾಡಲು ಸರಕಾರದವತಿಯಿಂದ ೬೦೦ ಕೋಟಿ ಬಿಡುಗಡೆಯಾಗಿದೆ ಅದರಲ್ಲಿ ೬ ರೂಪಾಯಿಯ ಕೆಲಸ ಕೂಡ ಆಗುತ್ತೋ ಇಲ್ಲವೋ ಎಂದು ಸಂಶಯದಿಂದ ಗುನುಗುತ್ತಿದ್ದ.
ಹಾವಿನ ದಾರಿಯಂತಿದ್ದ ಅಂಕುಡೊಂಕಿನ ದಾರಿಯಲ್ಲೂ ಜೋರಾಗಿ ನಡೆಯುತ್ತಿದ್ದ ಗಾಡಿಗಳು ಬೇಗನೆ ಶಿವನೇರಿ ಬೆಟ್ಟವನ್ನೇರಿದವು. ಸರಸರನೆ ಇಳಿದು ನಾವು ಕೋಟೆಯ ಕಡೆಗೆ ನಡೆದೆವು. ಬಹುದೊಡ್ಡ ಬೆಟ್ಟ. ನೂರಾರು ಅಡಿಗಳೊಷ್ಟು ನೆಲಬಿಟ್ಟು ಎತ್ತರಕ್ಕೇರಿರುವ ಹಾಸು ಬಂಡೆಯ ಬೆಟ್ಟ. ಅಲ್ಲಲ್ಲಿ ಮರಗಳು ವಸಂತ ಸೂಚಕವಾಗಿ ಹಸಿರಿನಿಂದ ಕಂಗೊಳಿಸುತ್ತಿದ್ದವು. ಅರಳಿದ ಹೂವಿನಿಂದ ಭೂಷಿತವಾಗಿದ್ದವು. ಹೊಸವರ್ಷವನ್ನು ಸ್ವಾಗತಿಸಲು ಸಿದ್ದವಾಗಿದ್ದವು.


ಅಲ್ಲಲ್ಲಿ ಕೋಟೆಯ ಗೋಡೆ ಕದಡಿ ಬಿದ್ದ ದೃಶ್ಯಗಳು. ಬಿದ್ದ ಗೋಡೆಗಳ ಮೇಲೆ ಅಡರಿ ನಾನು ಫೋಟೋ ತೆಗೆಸಿಕೊಂಡೆ. ಮದ್ಯೆ ಅಲ್ಲಲ್ಲಿ ಹಸಿರು ತುಂಬಿರು ಸಣ್ಣ ಸಣ್ಣ ಉದ್ಯಾನಗಳನ್ನ ಮಾಡಿದ್ದಾರೆ. ಚಿಕ್ಕದಾದರು ಚೊಕ್ಕವಾಗಿಟ್ಟುಕೊಂಡಿರುವ ಆ ಉದ್ಯಾನಗಳು ಸೀರೆಯ ಮೇಲೆ ಹೂವಿನ ಚಿತ್ತಾರ ಬಿಡಿಸಿದಂತೆ ಆ ಬೆಟ್ಟದ ಮೇಲೆ ಗೋಚರಿಸುತಿದ್ದವು. ಇಷ್ಟೊತ್ತಿಗೆ ನಾವು ಬಟ್ಟದ ತುದಿ ತಲುಪಿದ್ದೆವು. ಏರು ದಿನ್ನೆ ಕೊನೆಗೊಂಡು ಅಂಕುಡೊಂಕಿನ ರಸ್ತೆ ಮುಗಿದಿತ್ತು. ಎಲ್ಲರು ನೇರವಾದ ಸಲೀಸಾದ ರಸ್ತೆಯಲ್ಲಿ ನಡೆದು ಹೋಗತೊಡಗಿದರು. ಆ ರಸ್ತೆಯಲ್ಲಿ ಹೋಗಲು ಮನಸುಬಾರದೆ ನಾನು ಅಡ್ಡ ಅಡ್ಡವಾಗಿ ಮತ್ತೊಂದು ದಿನ್ನೆಯನ್ನು ಹಿಡಿದು ಅಡರತೊಡಗಿದೆ.

ಹೊಸವರ್ಷದ ದಿನ. ಎಲ್ಲದಕ್ಕೂ ಹೊಸತನ. ಪ್ರಕೃತಿನೇ ಹೊಸತನ್ನು ಎಲ್ಲದರಲ್ಲೂ ಮೂಡಿಸಿರುವ ದಿನ. ವಸಂತದ ಹೊಸ ಎಲೆಗಳು, ಚೈತ್ರದ ಚಿಗುರು, ಬಣ್ಣ ಬಣ್ಣದ ಹೂವುಗಳು. ಈ ಪ್ರಕೃತಿಯ ಸಿರಿ ಹೊಸವರ್ಷಕ್ಕೆ ಸ್ವಾಗತ ಕೋರುವಂತೆ ಬಾಸವಾಗುತ್ತಿತ್ತು. ರೈತರು ಒಕ್ಕಲುತನವನ್ನು ಪೂಜೆ ಪುರಸ್ಕಾರಗಳಿಂದ ಪ್ರಾರಂಬಿಸುವ ದಿನ. ಹೊಸವರ್ಷದ ದಿನದಂದು ಹೊಸಮೋಡಗಳ ದಂಡು ಬರುವುದು ಸಹಜ. ಬಿಸಿಲೇರಿದ ಮಧ್ಯಾಹ್ನದಲ್ಲಿ ಬೆಟ್ಟವೇರುವ ಮೈ ತಣಿಯುತ್ತಿತ್ತು. ಒಮ್ಮೆ ತಿಳಿನೀಲಿಯಿಂದ ಮೇಲೆ ಕಾಣಿಸುತ್ತಿದ್ದ ಆಗಸ ನೋಡಿದೆ. ಸುತ್ತ ಮೇಘಗಳ ಸಾಲು. ಚಿತ್ತಾರ ಬಿಡಿಸುತ್ತ ಮೇಲೇರುತ್ತಿದ್ದವು. ಸುತ್ತ ಎತ್ತ ನೊಡಿದರು ಬೆಟ್ಟಗಳು, ಪ್ರಕೃತಿಯ ಸಿರಿ. ಬಿಳಿಮೋಡಗಳ ಚಿತ್ತಾರ ನೊಡಿದ ಮನಸ್ಸು ಗೆಳತಿಯ ನೆನಪಿನ ಹಾದಿ ತುಳಿಯತೊಡಗಿತು.
ಆಗಸದಲ್ಲಿ ಅವಳ ಮುಖವನ್ನೇ ಬಿಂಬಿಸುವ ಮುಗಿಲ ಒಂದು ದೃಶ್ಯ. ಕ್ಷಣದಲ್ಲಿ ಬದಲಾಗುವ ಅದರ ಸೋಜಿಗದ ಮಾಟ. ಮರುಗಳಿಗೆಯಲ್ಲಿ ಅವಳ ಮುಂಗುರುಳೋ ಎನ್ನುವಂತೆ ಭಾಸ. ನಗು, ಅವಳದೇ ನಗುವಿನ ಮುಖಮಾಟದ ನೋಟ. ಅವಳು ನನ್ನ ನೋಡಿ ಬಂದೆ ಎಂದು ಕೂಗಿಹೇಳವಂತೆ ಬಿಂಬಿಸುವ ಭಾವಭಂಗಿ. ಮತ್ತೆ ಕ್ಷಣದಲ್ಲಿ ಅವಳು ಕಣ್ಮರೆಯಾಗಿ ಹೋದ ಕನವರಿಕೆ. ಅಲ್ಲೆ ಒಂದು ಮರದಲ್ಲಿ ಕುಳಿತು ಕುಕೂಉ ಕುಕೂಉ ಎಂದು ಕೂಗುವ ಬೆಳವನ ಕೂಗು. ಅವಳ ದ್ವನಿಯಂತೆ ಕೇಳಿಸುವ ಭ್ರಮೆ ನೀರಸ. ಸುತ್ತೆಲ್ಲ ಹಾರಾಡುವ ಬಾನಾಡಿಯ ಬಳಗ. ಬೇಟೆಯನರಸಿ ನಭದಲ್ಲಿ ರೆಕ್ಕೆ ಬಿಚ್ಚಿ ದೃಷ್ಟಿಯಿಟ್ಟು ಹಾರಾಡುವ ಗಿಡುಗ. ನಿಲುಕದ ಕಲ್ಪನೆಯಲ್ಲಿ ತೇಲಾಡಿತ್ತು ಮನಸ್ಸು. ಅಲ್ಲೊಂದು ಮರ. ಈಗತಾನೆ ತಿಳಿಹಸಿರಿನಿಂದ ಚಿಗಿತು ಬಳುಕುವ ತಳಿರು ಬೀಸುವ ಗಾಳಿಗೆ ಬಳುಕಿ ಮಗುವಂತೆ ನಕ್ಕು ನರ್ತಿಸುತ್ತಿತ್ತು.

ಅಲ್ಲಿಂದ ನಿಧಾನವಾಗಿ ಕೆಳಗಿಳಿದು ಬಂದು ಎಲ್ಲರನ್ನು ಕೂಡಿಕೊಂಡೆ. ಬೆಟ್ಟದ ತುದಿಯಲ್ಲೊಂದು ಮಸೀದಿ ಅಥವ ಗುಂಬಾಜ್ ಇದೆ ಅದರ ಮೇಲೆ ಉರ್ದುನಲ್ಲಿ ಬರೆದ ವಿವರಣೆ ಇತ್ತು. ಜೊತೆಗೆ ಯಾತ್ರಿಗಳು ತಮ್ಮ ಹೆಸರನ್ನೋ ತನ್ನ ಪ್ರೇಮಿಗಳ ಹೆಸರನ್ನೋ ಬರೆದಿದ್ದರು. ಶಿವಾಜಿ ಜನ್ಮಸ್ಥಳವನ್ನು ಕಣ್ಣು ತುಂಬಾ ನೋಡಿದೆ. ಆ ಸ್ಥಳದಲ್ಲಿ ಶಿವಾಜಿಯ ಸ್ಮಾರಕ, ಜೊತೆಗೆ ಶಿವಾಜಿಯ ಮೂರ್ತಿ ಇದೆ.



ಅಷ್ಟರಲ್ಲಿ ಸುಮಾರು ಅರವತ್ತು ಗಾವುದ ದೂರವಿರುವ ಭೀಮಶಂಕರಗೆ ಹೋಗುವ ನೆನಪಾಗಿ ಇಳಿದು ಹೋಗೋಣವೆಂದು ಎಲ್ಲರು ಸರಸರನೆ ನಡೆಯತೊಡಗಿದರು. ನನಗೋ ಅಲ್ಲಿಂದ ಇಳಿದು ಬರುವ ಮನಸ್ಸಾಗಲಿಲ್ಲ. ಸಣ್ಣವನಿರುವಾಗ ಶಾಲೆಯಲ್ಲಿ ಶಿವಾಜಿಯ ಬಗ್ಗೆ ಓದಿದ್ದ ಹತ್ತಾರು ವಿವರಣೆಗಳನನ್ನು ನೆನಸಿಕೊಳ್ಳುತ್ತ ಎಲ್ಲವನ್ನೂ ನೊಡುತ್ತಿದ್ದೆ. ಮತ್ತೆ ಮತ್ತೆ ತಿರುಗಿ ನೋಡುತ್ತಿದ್ದೆ. ಗತವನ್ನು ನೆನದು ಹೆಮ್ಮೆಯಿಂದ ಬೀಗುತ್ತಿದ್ದೆ. ಈಗೆ ಎಲ್ಲರ ಜೊತೆ ಹೆಜ್ಜೆಯಲ್ಲಿ ಹೆಜ್ಜೆಯನ್ನು ಸೇರಿಸುತ್ತ ಇಳಿದು ಹೋಗುತ್ತಿದ್ದೆ. ದಾರಿಯಲ್ಲಿ ತಿಳಿ ನೇರಳೆ ಹೂವು ತುಂಬಿದ ಮರ ಕಂಡಾಗ ಮನಸ್ಸು ಮತ್ತೇ ಅವಳ ನೆನಪಿನಲ್ಲಿ ಮುತ್ತಿ ಮೈಮರೆಯಿತು. ಮೂತ್ರ ವಿಸರ್ಜನೆಗೆ ಹೊಗುವನಂತೆ ನಟಿಸಿ ಹಿಂದುಳಿದುಕೊಂಡೆ. ಎಲ್ಲರು ಮುಂದೆ ಮುಂದೆ ತಮ್ಮ ಪಾಡಿದೆ ಎನೇನೋ ಹರಟುತ್ತ ನಡೆದೊಗುತ್ತಿದ್ದರು. ಬಂದಾಗಿನಿಂದಲೂ ಅಲ್ಲಿ ಇಲ್ಲಿ ಒಬ್ಬನೇ ಹೋಗಿ ತಿರುಗಾಡುತ್ತಿದ್ದ ನನ್ನ ಕಡೆ ಯಾರು ಅಷ್ಟೊಂದು ಗಮನ ಕೊಡಲಿಲ್ಲ. ಎಲ್ಲರೂ ಒಂದೊಷ್ಟು ದೂರ ನಡೆದೋದಮೇಲೆ ಅವರಿಗೆ ನನ್ನ ಕೂಗು ಕೇಳಿಸುವುದಿಲ್ಲ ಅನ್ನುವುದು ಕಾತರಿ ಮಾಡಿಕೊಂಡೆ. ಆ ಬೆಟ್ಟದಮೇಲೆ ಬೀಸುತ್ತಿದ್ದ ತಂಗಾಳಿಗೆ ಮತ್ತೇ ಮೈಯೊಡ್ಡಿದೆ. ಆಗಸದಲ್ಲಿ ತೇಲುತ್ತಿದ್ದ ಮುಗಿಲಿನಲ್ಲಿ ಅವಳ ನಗುವನ್ನು ಕಂಡಂತೆ ಭಾಸವಾಗಿ ಗಂಗಾ ಎಂದೊಮ್ಮೆ ಮೈಮನಸು ಬಿಚ್ಚಿ ಕೂಗಿದೆ.ಮಾರ್ದನಿಯಾಗಿ ಮತ್ತೆ ಮತ್ತೆ ಕಿವಿಯಲ್ಲಿ ಗುನುಗುತ್ತಿದ್ದ ಅವಳ ಹೆಸರನ್ನು ಕೇಳಿ ಭಾವಾವೇಷಿತನಾಗಿ ಕೆಳಗಿಳಿಯತೊಡಗಿದೆ. ಸಮಯ ೧೨.೩೦ ರಿಂದ ಮುಂದೆ ಮುಂದೆ ಸಾಗುವ ಅತುರದಲ್ಲಿತ್ತು.
ಸ್ಥೀಮಿತ ತಪ್ಪಿದ ಮನಸ್ಸು ಮತ್ತೆ ಸಹಜ ಸ್ಥಿತಿಗೆ ಮರಳದೆ ಕವಿತೆಯ ಲಹರಿಯಲ್ಲಿ ಜಾರತೊಡಗಿತು. ನನಗರಿವಾಗದಂತೆ ಭೀಮಶಂಕರ್ ಜಾಡುಹಿಡಿದ ಗಾಡಿಯಲ್ಲಿ ಬಂದು ಕುಳಿತಿದ್ದೆ. ಆಗಲೇ ಬರಿ ಎರಡು ಸಾಲು ಬರೆದು ನಿಲ್ಲಿಸಿದ್ದ ಕವಿತೆಯನ್ನು ಮುಂದುವರಿಸತೊಡಗಿದೆ.
ಅರಳಿಬಿಡು ಮಲ್ಲೆ ಹೂವೆ!
ಅವಳ ನಗುವಿನ ತೆರೆಯಲ್ಲಿ
ಅವಳು ಕಣ್ಣು ತೆರೆವ ಮೊದಲು
ಚನ್ನಾಗಿ ಅಗಲವಾಗಿದ್ದ ದೂರದಾರಿಯನ್ನು ಬಳಸಿ ಭೀಮಶಂಕರ್ ದಾರಿಯನ್ನು ಕೂಡುವ ಬದಲು ಕುಣಿ, ಧೂಳಿನಿಂದ ತುಂಬಿದ ಕಿರಿದಾರಿಯಲ್ಲಿ ಗಾಡಿಯನ್ನು ತಿರುಗಿಸಿದರು. ಕುಲುಕುತ್ತ ಸಾಗಿದ್ದ ಗಾಡಿಯಲ್ಲಿ ಬರೆಯಲು ಯತ್ನಿಸಿ ಆಗದೆ ಬರೆಯುವುದನ್ನು ಅಷ್ಟಕ್ಕೆ ನಿಲ್ಲಿಸಿ ಬರಿ ಕಲ್ಪನೆ ಲಹರಿಯಲ್ಲಿ ಸೇರಿಬಿಟ್ಟೆ. ದಾರಿಯುದ್ದಕ್ಕೂ ಹೊಲಗಳಲ್ಲಿ ಕಬ್ಬು ಕಟಾವು ಮಾಡುವ ದೃಷ್ಯ. ಕಬ್ಬು ನೋಡಿ ಬಾಯಲ್ಲಿ ನೀರೂರುತ್ತಿತ್ತು. ಗುಂಡ ಕಬ್ಬು ಕೇಳಿ ಇಸುಕೊಂಡು ಬರೋಣವೆಂದು ಎಲ್ಲರಲ್ಲೂ ಗೋಗರೆಯುತ್ತಿದ್ದ. ಆದರೆ ಗಾಡಿ ಕೊನೆಯವರೆಗೂ ಎಲ್ಲಿ ನಿಲ್ಲಿಸಲೇ ಇಲ್ಲ. ದ್ರಾಕ್ಷಿ ತೊಟಗಳಿಂದ ಹೊಲಗಳು ಕಂಗೊಳಿಸುತ್ತಿದ್ದವು. ದ್ರಾಕ್ಷಿಹಣ್ಣಿನ ಸುಗ್ಗಿಯಾಗಿದ್ದರಿಂದ ಬಳ್ಳಿಯಲ್ಲಿ ಹಣ್ಣುಗಳು ಪಿಳಿಗುಟ್ಟುತ್ತಿದ್ದವು. ತೋಟದಲ್ಲೇ ಮನೆ, ಮರಾಠಿ ಶೈಲಿಯಲ್ಲಿ ವೀರಗಚ್ಚೆಯಲ್ಲಿ ಸೀರೆವುಟ್ಟ ಗೃಹಿಣಿಯರು, ಮನೆಗಳಲ್ಲಿ ಇದ್ದ ದೊಡ್ಡ ದೊಡ್ಡ ಕೆಂದು ಬಣ್ಣದ ಎತ್ತರವಾದ ಹಸುಗಳು ದಾರಿಯುದ್ದಕ್ಕೂ ಕಾಣಿಸುತ್ತಿದ್ದವು. ಇಬ್ಬರು ತರುಣಿಯರು ಮಾವಿನ ಕಾಯಿಯನ್ನು ಮರದಿಂದ ಬಿಳಿಸಲು ಕಲ್ಲು ಬೀರುತ್ತಿದ್ದುದ್ದನ್ನು ನೋಡಿ ನಾನು ಹೋ... ಎಂದು ಕೂಗಿದಾಗ ನಾಚಿ ಗಿಡದ ಮರೆಯಲ್ಲಿ ಅಡಗಿಕೊಂಡರು.
ಇನ್ನೇನು ಘೋಡೆಗಾವ್ ಬಂದೇಬಿಟ್ಟಿತು. ಘೋಡೆಗಾವ್ನಲ್ಲಿ ಊಟಮಡುವುದಾಗಿ ಎಲ್ಲರು ಮಾತನಾಡಿಕೊಳ್ಳುತ್ತಿದ್ದರು. ದಾರಿಯಲ್ಲಿ ಹೋಟೆಲೊಂದನು ನೋಡಿದ ನೊಡಿದ ಚಾಲಕ ಮಹೇಶ್ ಇಲ್ಲೇ ಊಟ ಮಾಡೋಣವೆಂದು ಹೇಳಿದ. ಮುಂದೆ ಎಲ್ಲು ಹೋಟೆಲ್ ಸಿಕ್ಕುವುದಿಲ್ಲ ಇಲ್ಲೇ ಊಟ ಮುಗಿಸಿಕೊಂಡು ಹೋಗೋಣವೆಂದು ಬಿರುಸು ದ್ವನಿಯಿಂದ ಹೇಳುತ್ತ ಗಾಡಿಯನ್ನು ಹೊಟೆಲ್ ಕಡೆ ತಿರುಗಿಸ ತೊಡಗಿದನು. ಅಷ್ಟರಲ್ಲಿ ಅಲ್ಲೊಬ್ಬ ದಾರಿಯಲ್ಲಿ ತನ್ನ ಪಾಡಿಗೆ ತಾನು ನಡೆದೋಗುತ್ತಿದ್ದ. ನಮ್ಮ ಮಾತುಗಳನ್ನು ಕೇಳಿಸಿಕೊಂಡ ಅವನು ಮುಂದೊಂದು ಹೋಟೆಲ್ ಇದೆ. ಸ್ವಲ್ಪ ಮುಂದೆ ಹೋದರೆ ಪೆಟ್ರೋಲ್ ಪಂಪ್ ಸಿಕ್ಕುತ್ತೆ ಅದರ ಪಕ್ಕದಲ್ಲೇ ಹೋಟೆಲ್ ಇರುವುದು. ಓಂ ಹೋಟೆಲ್ ಎಂದು ಅದರ ಹೆಸರು ಎಂದು ಮರಾಠಿಯಲ್ಲಿ ಹೇಳಿದ. ಅವನಿಗೆ ಧನ್ಯವಾದ ಹೇಳಿ ಹೋಟೆಲ್ ಕಡೆ ಗಾಡಿ ತಿರುಗಿಸಿಕೊಂಡು ಹೊರಟೆವು.
ಘೊಡೆಗಾವ್ ಊರ ಹೊರಗಿದ್ದ ಹೊಟೆಲ್ ಎರಡು ನಿಮಿಷದಲ್ಲಿ ಸಿಕ್ಕಿತು. ಗಾಡಿ ನಿಲ್ಲಿಸಿ ಹೋಟೆಲ್ ಹೊಳಗಡೆ ನುಗ್ಗಿದೆವು. ಗಾರ್ಡನ್ ಹೋಟೆಲ್ ಚೊಕ್ಕಟವಾಗಿತ್ತು.
ಪಕ್ಕದಲ್ಲಿ ಕಾಳುತುಂಬಿ ಮಾಗಿದ ಗೋದಿ ಬೀಸುವ ಗಾಳಿಗೆ ತಲೆದೂಗುತ್ತಿತ್ತು. ಯಾರ್ಯಾರಿಗೆ ಏನೇನು ಬೇಕೆಂದು ಮೊದಲಿಗೆ ಪಟ್ಟಿಮಾಡಿ ಮಾಣಿಗೆ ತಿಳಿಸಿದೆವು. ತಂದೂರಿ ಊಟ. ದಾಲ್ ತಡಕ, ಬೆಂಡೆ ಫ್ರೈ, ಪನ್ನೀರ್ ಮಸಾಲ, ಜೀರ ರೈಸ್, ಬಿರಿಯಾನಿ, ಕಾಶ್ಮೀರಿ ಪುಲಾವ್ ಇತ್ಯಾದಿ ಜೊತೆಗೆ ಐವತ್ತು ತಂದೂರಿ ರೋಟಿಯ ದೊಡ್ಡ ಪಟ್ಟಿ . ಪಟ್ಟಿ ತೆಗೆದುಕೊಂಡ ಮಾಣಿ ನೀವು ಸುಮಾರು ಹದಿನೈದು ನಿಮಿಷವಾದರು ಕಾಯಬೇಕಾಗುವುದೆಂದು ಹೇಳಿ ಅಡುಗೆ ಕೋಣೆಯೊಳಗೆ ಸೇರಿಕೊಂಡ.
ನನ್ನ ಮನಸ್ಸು ಕವಿತೆಯ ಲಹರಿಯಲ್ಲೇ ತೇಲಿತ್ತು. ಗಾಡಿಯಿಂದ ಕೊನೆಯಲ್ಲಿ ಇಳಿದುಬರುತ್ತಿದ್ದ ರಾಮ ಕೃಷ್ಣನಿಗೆ ಬ್ಯಾಗಿನಲ್ಲಿದ್ದ ಹಾಳೆ ಮತ್ತು ಪೆನ್ನು ತೆಗೆದುಕೊಂಡು ಬರಲು ಕೂಗಿ ಹೇಳಿದೆ. ರಾಮ ತಂದುಕೊಟ್ಟ ನಂತರ ನಾನು ಅಲ್ಲೇ ಕುಳಿತು ಅರ್ಧಕ್ಕೆ ನಿಂತಿದ್ದ ಕವನ ಗೀಚುತ್ತ ಮುಂದುವರಿಸತೊಡಗಿದೆ.
ನನ ಗೆಳತಿ ನಗುವ ಮೊದಲು
ಅವಳ ನಗುವಿನ ತೆರೆಯಲ್ಲಿ
ಅವಳು ಕಣ್ಣು ತೆರೆವ ಮೊದಲು
ಅವಳು ದೂರ ಹೊಗುವ ಮೊದಲು
ಅಷ್ಟರಲ್ಲಿ ಮಾಣಿ ದಾಲ್ ತಡ್ಕ, ಬೆಂಡೆ ಫ್ರೈ, ಪನ್ನೀರ್ ಮಸಾಲ ಜೊತೆಗೆ ಐವತ್ತು ರೊಟಿ ತಂದಿಟ್ಟ. ಕೋಟೆ ಹತ್ತಿ ದಣಿದು ಹಸಿವಿನಿಂದ ತಳಮಳಿಸುತ್ತ ಊಟಕ್ಕೆ ಕಾದು ಕುಳಿತ್ತಿದ್ದ ಎಲ್ಲರು ಮಾಣಿ ಊಟವನ್ನು ತಂದಿಟ್ಟ ಕೂಡಲೆ ಗಬಗಬನೆ ತಿನ್ನತೊಡಗಿದರು. ಕಾಶ್ಮೀರಿ ಪುಲಾವ್, ಜೀರ ರೈಸ್, ಬಿರಿಯಾನಿ ಎಲ್ಲವನ್ನು ತಿಂದು ಮುಗಿಸಿದೆವೆ. ಊಟ ತುಂಬಾ ಚೆನ್ನಾಗಿದ್ದುದ್ದರಿಂದ ಕೆಲವರು ಬೇಕೆನಿಸಿದ್ದನ್ನು ಇನ್ನಷ್ಟು ತರಿಸಿಕೊಂಡು ತಿಂದರು. ಬೇಗನೆ ಊಟ ಮುಗಿಸಿದ ನಾನು ಅಡುಗೆಯ ಮನೆಯ ಒಳಗಡೆ ಹೋಗಿ ಅಡುಗೆ ಮಾಡುತ್ತಿದ್ದವನಿಗೆ ತುಂಬಾ ರುಚಿಯಾಗಿ ಅಡುಗೆ ಮಾಡಿದ್ದೀರಿರೆಂದು ಹೇಳಿಬಂದೆ.
ಸ್ವಲ್ಪ ಸಮಯ ನಿದ್ರೆಮಾಡಿದ ನಂತರ ನನಗೆ ಎಚ್ಚರವಾಯಿತು. ಯಾಕೋ ಸರಿಯಾಗಿ ನಿದ್ದೆ ಬರಲಿಲ್ಲ. ತೆರೆದ ಕಿಟಕಿಯಿಂದ ಇಣುಕಿ ಹೊರಗಡೆ ನೊಡುತ್ತ ಕುಳಿತೆ. ಹಾಗೆ ಮತ್ತೆ ಶಿವನೇರಿ ಕಿಲ್ಲೆಯ ನೆನಪಿನಲ್ಲಿ ಜಾರಿದೆ. ಸುತ್ತಲು ಹಬ್ಬಿದ ಬೆಟ್ಟಗಳನ್ನು ನೊಡುತ್ತಿದ್ದೆ. ಸ್ವಲ್ಪ ಕಡಿಮೆ ಮರಗಳಿದ್ದ ಬರಿ ಕಲ್ಲುಗಳಿಂದ ತುಂಬಿದ್ದ ಶಿವನೇರಿ ಬೆಟ್ಟ. ಆದರೆ ಭೀಮಶಂಕರ ಸಮೀಪಿಸುತ್ತಿದ್ದಂತೆ ಪ್ರಕೃತಿಯ ಚಿತ್ರಣ ಬೇರೆಯಾಗುತ್ತಿತ್ತು. ಸುತ್ತಲೂ ಹಬ್ಬಿದ ಕಾಡು. ಬೆಟ್ಟವೆಲ್ಲ ಹಸಿರು ಮರ, ಅರಳಿದ ಹೂವುಗಳಿಂದ ರಂಜಿಸುತ್ತಿತ್ತು. ಗುಡ್ಡವನ್ನು ಸೀಳಿ ಮಾಡಿರುವ ರಸ್ತೆಗಳು. ದಾರಿಯ ಎರಡೂ ಬದಿಗಳಲ್ಲಿ ಬೆಳೆದಿರುವ ದೊಡ್ಡ ಮರಗಳು ಹಾದಿಯನ್ನು ನೆರಳಿನಿಂದ ಮುಚ್ಚಿದ್ದವು. ಎತ್ತ ನೊಡಿದರೂ ಪ್ರಕೃತಿ ಸಿರಿವಂತಿಕೆಯಿಂದ ಬೀಗುತ್ತಿತ್ತು.
ಭೀಮಶಂಕರ ಮಂದಿರ (ಗುಡಿ) ದಟ್ಟವಾದ ಕಾಡಿನ ನಡುವೆ ಇದೆ. ನಮ್ಮ ನಾಡಿನ ಮಲೆನಾಡನ್ನು ನೆನಪಿಗೆ ತಂದುಕೊಡುವಷ್ಟು ದಟ್ಟವಾದ ಕಾಡು. ಭೀಮ ನದಿ ಹುಟ್ಟುವುದು ಇಲ್ಲೆ. ಶಿವನು ತ್ರಿಪುರಾಸುರನನ್ನು ಸಂಹಾರ ಮಾಡಲು ಭೀಮನಾಗಿ ಅವತರಿಸಿದ್ದು ಇಲ್ಲೇ. ತ್ರಿಪುರಾ ಸುರನ ಜೊತೆ ಯುದ್ಧನಡೆಯುವಾಗ ಶಿವನ ಮೈಯಿಂದ ಭೂಮಿಯ ಮೇಲೆ ಬಿದ್ದ ಬೆವರು ಭೀಮಾನದಿಯಾಯಿತೆಂದು ನಂಬಿಕೆ. ಯದ್ಧದ ಸಮಯದಲ್ಲಿ ಶಿವನಿಗೆ ಸಹಾಯ ಮಾಡಲು ಕಮಲಾಜಳಾಗಿ ಅವತರಿಸಿದ ಪಾರ್ವತಿ ಇಲ್ಲಿ ಪೂಜಿಸಲ್ಪಡುತ್ತಾಳೆ. ದಿನಾಲು ಮೂರು ಬಾರಿ ಇಲ್ಲಿ ಪೂಜೆ ನಡೆಯುತ್ತದೆ. ಮಹಾಶಿವರಾತ್ರಿಯ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಅಂದು ಭೀಮಾಶಂಕರ ಲಕ್ಷ ಲಕ್ಷ ಶಿವಭಕ್ತರಿಂದ ತುಂಬಿ ತುಳುಕುತ್ತದೆ.
ಸುಂದರವಾದ ಶಿಲ್ಪಕಲೆಯಲ್ಲಿ ನಿರ್ಮಿಸಿರುವ ಸಣ್ಣ ದೇವಸ್ಥಾನ. ಆದರೆ ಸುತ್ತೆಲ್ಲ ಇಕ್ಕಟ್ಟಾದ ಜಾಗ. ಗುಡಿಯ ಹಿಂದೆ ಒಂದು ಕೊಳೆವೆ ಬಾವಿ ಇದೆ ಬೇಸಿಗೆಯ ಬಿರುಬಿಸಿಲಿನಲ್ಲಿ ಕೂಡ ಅದರಲ್ಲಿ ಬರುವ ನೀರು ಯಾವ ಶೈತ್ಯಾಗಾರದಲ್ಲಿಟ್ಟು ತಣ್ಣಗೆ ಮಾಡಿದ್ದರೋ ಎನ್ನುವಷ್ಟು ತಂಪಾಗಿತ್ತು. ಎಲ್ಲರು ಮುಖ ತೊಳೆದುಕೊಂಡು ಶಿವಲಿಂಗ ದರ್ಶನ ಪಡೆದೆವು. ಅಲ್ಲೇ ಪಕ್ಕದಲ್ಲಿದ್ದ ’ರಾಮ ಸೀತೆ’ ಗುಡಿಗೆ ಹೋಗಿ ದರ್ಶನ ಮಾಡಿದೆವು. ಸ್ವಲ್ಪಹೊತ್ತು ದೇವಸ್ಥಾನದಲ್ಲಿ ಕುಳಿತು ಮೆಟ್ಟಿಲೇರಿ ಗಾಡಿಗಳ ಕಡೆ ನಡೆದು ಬಂದೆವು. ದೇವಸ್ಥಾನದ ಬಗ್ಗೆ ನಮ್ಮಲ್ಲೇ ಹತ್ತಾರು ಮಾತನಾಡಿಕೊಳ್ಳುತ್ತಿರುವಾಗ ದಕ್ಷಿಣ ಭಾರತದ ಶಿಲ್ಪಕಲೆಯ ವೈಭವದ ವಿಚಾರ ಬಂತು. ಬೇಲೂರು, ಹಳೆಬೀಡು, ಹಂಪಿ, ಬಾದಾಮಿ, ಐಹೋಳೆ, ಮಧುರೈ, ಕಂಚಿ ಇತ್ಯಾದಿ ಒಂದೊಂದನ್ನು ಜ್ಞಾಪಿಸಿಕೊಳ್ಳುತ್ತ ಅಲ್ಲಿನ ವೈಭವವನ್ನು ನೆನಸಿಕೊಂಡಾಗ ಭೀಮಶಂಕರ ಅಷ್ಟೊಂದು ವೈಭವ ತುಂಬಿದ ಮಂದಿರವೇನಲ್ಲ ಅನ್ನಿಸಿತು. ಭೀಮಶಂಕರ ಸಹ್ಯಾದ್ರಿ ಶಿಕರದಲ್ಲಿದೆ. ಪ್ರಕೃತಿಯ ಸಿರಿಯಲ್ಲಿ ಕಂಗೊಳಿಸುವ ಸಿರಿವಂತ ತಾಣ. ಮುಂಗಾರಿನ ನೋಟ ಮೈಮನ ಸೆಳೆಯುತ್ತದೆ. ವನ್ಯಮೃಗಳಿಗೂ ಆಶ್ರಯ ಕೊಟ್ಟು ಕಾಪಿಟ್ಟ ಕಾಡು ಇಲ್ಲಿದೆ. ದಾರಿಗೆ ಅಡ್ಡ ಬರುವಷ್ಟು ಚಿರತೆಗಳು ಈ ಕಾಡಲ್ಲಿವೆ. ವಿಶ್ವ ಪ್ರಸಿದ್ದಿ ಬಂಗಾರ ಬಣ್ಣದ ’ಸೆಕೃ’ ಅಳಿಲು ಜಾತಿ ಇಲ್ಲಿ ಕಂಡುಬರುತ್ತವೆ. ದಟ್ಟ ಕಾಡು ಹಸುರಿನಿಂದ ಕಂಗೊಳಿಸುತ್ತಿರುತ್ತದೆ. ಅಮೂಲ್ಯ ಮೂಲಿಕೆಗಳು ಇಲ್ಲಿ ಸಿಗುತ್ತವೆ. ವಿಧವಿಧ ಹೂವುಗಳು ಬಗೆ ಬಗೆಯ ಪಕ್ಷಿಗಳು ಎಲ್ಲರನ್ನು ಆಕರ್ಷಿಸುತ್ತವೆ. ಅಲ್ಲಲ್ಲಿ ಜಿನುಗುತ್ತ ಹರಿಯುವ ಜಲಪಾತಗಳು ಮನಸನ್ನ ಉಲ್ಲಾಸಿತಗೊಳಿಸುತ್ತವೆ. ಮುಂಗಾರಿನಲ್ಲಿ ಮುದನೀಡುವಂತ ಪ್ರವಾಸಸ್ಥಾನ ಭೀಮಾಶಂಕರ.
ನಾವು ಭೀಮಾಶಂಕರನ ದರ್ಶನ ಮುಗಿಸಿಕೊಂಡು ಅಲ್ಲೊಂದು ಹೋಟೆಲ್ನಲ್ಲಿ ಮಜ್ಜಿಗೆ ಸೇವಿಸಿ ಗಾಡಿಹತ್ತಿ ಕುಳಿತೆವು. ಹೋಟೆಲ್ ಪಕ್ಕದಲ್ಲಿ ಎರಡು ಗೋಲಿ ಸಿಕ್ಕವು. ಮಜ್ಜಿಗೆ ಕುಡಿಯುವ ಸಮಯದಲ್ಲಿ ಕೃಷ್ಣ ಹಾಗು ರಾಮ ಇಬ್ಬರು ಅಲ್ಲಿ ಸಿಕ್ಕ ಗೋಲಿಗಳನ್ನು ತೆಗೆದುಕೊಂಡು ಆಟವಾಡತೊಡಗಿದರು. ಅವರು ಮೈಮರೆತು ಆಡುವ ಭಂಗಿ ಸಣ್ಣ ಮಕ್ಕಳೇನೋ ಅನ್ನುವಂತ್ತಿತ್ತು. ಬಾಲ್ಯದಲ್ಲಿ ಎಲ್ಲರ ಗೋಲಿ ತುಂಡಾಗುವಂತೆ ಸೂಟಿ ಇಟ್ಟು ಹೊಡೆಯುತ್ತಿದ್ದ ನನ್ನ ಗೋಲಿ ಆಟದ ಗತ್ತನ್ನು ನೆನಪಿಗೆ ತಂದಿತು. ಮರಳಿ ಗಾಡಿಗಳ ಕಡೆ ಮೆಟ್ಟಿಲು ಹತ್ತಿ ಬರುವಾಗ ಒಂದಿಬ್ಬರು ನವದಂಪತಿಗಳು ಹೋಗುತ್ತಿದ್ದರು. ನಮ್ಮ ಗೆಳೆಯರೆಲ್ಲ ಮಾತನಾಡುತ್ತಿದ್ದ ತೆಲುಗು ಕೇಳಿಸಿಕೊಂಡು ಆಂಧ್ರಪ್ರದೇಶನಾ ಎಂದು ಸಹಜ ದಾಟಿಯಲ್ಲಿ ಕೇಳಿದರು .ತೆಲುಗು ಮಾತನಾಡುವರು ಸಿಕ್ಕಿದ ಕಾರಣ ಅವರಲ್ಲಿ ಸಂತಸ ಹುಕ್ಕುತ್ತಿತ್ತು. ಅಲ್ಲಿಗೆ ಸಮಯ ಸಂಜೆ ಐದಾಕ್ಕಿತ್ತು. ಹೆಚ್ಚಿನ ಹೊತ್ತು ಅಲ್ಲಿರಲು ಸುತ್ತೆಲ್ಲ ತಿರುಗಾಡಲು ಮನಸ್ಸು ಕೇಳುತ್ತಿದ್ದರು ಸಮಯ ನಿಲ್ಲದೆ ಮುಂದೋಡುತ್ತಿದ್ದುದ್ದರಿಂದ ಅಲ್ಲಿಂದ ಹೊರಡಲೇ ಬೇಕಾಯಿತು.
ಗಾಡಿಗಳು ಪುಣೆ ದಾರಿಯಿಡಿದು ಮಂಚರ್ ಕಡೆ ಓಡತೊಡಗಿದವು. ಸಂಜೆ ಬಿಸಿಲಿನ ತೀಕ್ಷ್ಣ ಕಡಿಮೆಯಾಗಿತ್ತು. ಹಕ್ಕಿಗಳ ಗಾನ ಸುತ್ತೆಲ್ಲ ಕೊಂಚ ಹೆಚ್ಚಾಯಿತು. ಬಿಸಿಲಿನಲ್ಲಿ ಸುತ್ತಾಡಿ ದಣಿದು ಬಳಲಿದ್ದ ದೇಹಗಳು ಬೀಸಿ ಬರುತ್ತಿದ್ದ ತಣ್ಣನೆಯ ಗಾಳಿಗೆ ಮೈ ಒಡ್ಡುತ್ತಿದ್ದವು. ಹಾಗೆ ಕಣ್ಣಲ್ಲಿ ನಿದ್ದೆನೂ ಆವರಿಸುತ್ತಿತ್ತು. ಸುಮಾರು ಮುವ್ವತ್ತು ಕಿ.ಮೀ. ದಾರಿ ಸಾಗಿದಮೇಲೆ ದಾರಿಯಲ್ಲಿ ಒಂದು ಆಣೆಕಟ್ಟು ಸಿಗುತ್ತದೆ. ಘೋಡ್ ನದಿಗೆ ಕಟ್ಟಲಾದ ಡಿಂಬಾ ಆಣೆಕಟ್ಟು ಅದು. ಘೋಡ್ ನದಿ ದಾರಿಯ ಪಕ್ಕದಲ್ಲೇ ಅಗಲವಾಗಿ ಮೈಚಾಚಿ ನಿಧಾನವಾಗಿ ಹರಿಯುತ್ತಿತ್ತು. ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಎಲ್ಲರೂ ನೀರಿಗಿಳಿದೆವು. ನೀರಿಗೆ ಸಿಕ್ಕು ಸವೆದು ನುಣುಪಾದ ಬಗೆ ಬಗೆಯ ಆಕಾರದ ರಾಸಿ ಕಲ್ಲುಗಳು ದಂಡಯಲ್ಲಿದ್ದವು. ನೀರು ತಿಳಿಯಾಗಿ ಕಾಣುತ್ತಿದ್ದರು ತಳದಲ್ಲಿದ್ದ ಹಸಿರು ಜೊಂಡು ಕಾಲಿಗೆ ಸಿಕ್ಕಿಹಾಕಿಕೊಳ್ಳುತ್ತಿತ್ತು. ಜೊಂಡುನಿಂದ ನೀರಿನಲ್ಲಿ ಸರಾಗವಾಗಿ ನಡೆದಾಡಲು ಸ್ವಲ್ಪ ಆತಂಕ ಜೊತೆಗೆ ಮುಜುಗರವಾಗುತ್ತಿತ್ತು. ಆದರು ಬಾಲು ನೀರಿಗಿಳಿದು ಸ್ನಾನ ಮಾಡಿದ. ನದಿಗೆ ನಮಸ್ಕರಿಸಿದ. ನಾನು ನುಣುಪಾದ ಕಲ್ಲಿನ ಮೇಲೆ ಕುಳಿತು ಸುತ್ತೆಲ್ಲ ನೋಡುತ್ತಿದ್ದೆ. ನೀರಿನಲ್ಲಿ ಕಲ್ಲೆಸೆಯುವ ಆಟದಲ್ಲಿ ಎಲ್ಲರೂ ತಲ್ಲೀನರಾದರು.
ನನ್ನದೇ ಜಾಸ್ತಿ ನನ್ನದು ಮುರು ಬಾರಿ ಕಲ್ಲು ಪುಟಿದು ನೀರಿನಿಂದ ಮೇಲೆ ಬಂತು, ನನ್ನದು ನಾಲ್ಕುಬಾರಿ ಈಗೆ ಅವರೆಲ್ಲರ ಮಾತಿನ ಹಾಗು ಆಟದ ಮೋಜು ಸಂತಸದಲ್ಲಿ ಸಾಗಿತ್ತು. ನಾನು ಒಂದೆರಡು ಕಲ್ಲು ಬೀಸಿ ಮೌನವಾಗಿ ಕುಳಿತೆ. ಸಂಜೆ ಆರರ ಸಮಯ. ಸುತ್ತೆಲ್ಲ ಹಕ್ಕಿಗಳ ಹಾರಾಟ. ಬಗೆ ಬಗೆಯ ಹಾಡು ಹೊಮ್ಮಿ ಬರುತ್ತಿತ್ತು. ಬೆಳ್ಳಕ್ಕಿಗಳು ಮೀನಿನ ಬೇಟೆಗಾಗಿ ತವಕಿಸುತ್ತಿದ್ದವು. ಸೂರ್ಯ ಪಡುವಣದಲ್ಲಿ ಕೆಂಪೇರಿ ಜಾರುತ್ತಿದ್ದ. ನನ್ನ ಮನಸ್ಯಾಕೋ ಯಾವುದೋ ಗುಂಗಿನಲ್ಲಿ ಮೌನಿಯಾಗಿ ಎಲ್ಲೋ ಅಲೆಯುತ್ತಿತ್ತು. ಬಾಲು ಎಲ್ಲರಿಗೂ ನೀರುಗ್ಗುತ ತಮಾಷೆಮಾಡುತ್ತಿದ್ದ. ಹಾಗೆ ಒಂದೆರಡು ಫೋಟೋಗಳನ್ನೂ ಕ್ಲಿಕ್ಕಿಸಿಕೊಂಡ. ಸವೆದು ನುಣುಪಾದ ಕಲ್ಲಿನಮೇಲೆ ಕುಳಿತ ನಾನು ಒಂದಾದ ನಂತರ ಒಂದು ಬದಲಿಸುತ್ತಿದ್ದೆ. ಯಾವುದೋ ನೆನಪಿನ ಬೆನ್ನತ್ತಿದ ಮನಸ್ಸು ಮುಖವಾಗಿ ಕೆಂಪೇರಿದ ಮುಗಿಲ ನೋಡುತ್ತಿತ್ತು. ಆಕಾಶದಲ್ಲಿ ಮುಗಿಲಿನ ಚಿತ್ತಾರ ಸೊಗಸಾಗಿತ್ತು. ಮೋಡಗಳ ನುಡುವಿನಿಂದ ಬರುತ್ತಿದ್ದ ಸೂರ್ಯನ ಕಿರಣಗಳು ಭೂಮಿಯನ್ನು ಮುತ್ತಿಕ್ಕಲು ತವಕಿಸುತ್ತಿವೆ ಎನ್ನುವಂತಿತ್ತು. ಕೆಂಪೇರಿದ ಮುಗಿಲಮಾರಿ ಮೋಡಗಳ ಸೋಜಿಗದ ಚಿತ್ತಾರ ಅದರ ಎದುರಿಗೆ ಒಂದು ಜೋಡಿಹಕ್ಕಿ ನನ್ನನ್ನು ನೋಡು ಎನ್ನುವ ಗತ್ತಿನಲ್ಲಿ ರೆಕ್ಕೆ ಬಿಸುತ್ತಿದ್ದವು. ಆ ಜೋಡಿ ಹಕ್ಕಿಯನ್ನು ನೊಡಿದ ಮನಸ್ಸು ಗಂಗಳನ್ನ ನೆನೆಯಿತು. ಹಿಂದೊಮ್ಮೆ ಅವಳ ಹುಟ್ಟುಹಬ್ಬ ದಿನದಂದು ಶ್ರೀರಂಗಪಟ್ಟಣಕ್ಕೆ ಹೋಗಿದ್ದೆವು. ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಹತ್ತಿರ ಹರಿಯುತ್ತಿದ್ದ ನದಿಯಲ್ಲಿ ಅವಳ ಜೊತೆಗಾತಿಯರು ನಾನು ಸೇರಿ ನದಿಯಲ್ಲಿ ಆಟವಾಡಿದ ನೆನಪು ಹೊಮ್ಮಿಬಂತು. ಎಂತಹ ಮಧುರ ನೆನಪು! ಹಾಗೆ ಜಗವನ್ನೊಮ್ಮೆ ಮರೆತು ಬಿಟ್ಟೆ. ಬಾಲು ದಡಕ್ಕೆ ಬಂದು ಫೋಟೋ ತೆಗೆಯಲು ಹೇಳಿದಾಗ ನಾನು ನೆನಪಿನ ಲೋಕದಿಂದ ಹೊರಬಂದೆ.
ಕತ್ತಲಾಗ ತೊಡಗಿತು. ಎಲ್ಲರು ಗಾಡಿಗಳತ್ತಿರ ಬಂದೆವು. ಸೂರ್ಯಾಸ್ತಮಾನದ ಕೆಲವು ಚಿತ್ರಣಗಳನ್ನ ಕ್ಯಾಮರದಲ್ಲಿ ಸೆರೆಹಿಡಿದು ಗಾಡಿಯಲ್ಲಿ ಕುಳಿತೆವು. ತಂದಿದ್ದ ಖಾರಮಂಡಕ್ಕಿ, ಚಕ್ಕುಲಿ, ಉಂಡೆ ಬ್ಯಾಗು ಬಿಚ್ಚಿ ಬಾಲು ಎಲ್ಲರಿಗೂ ಕೊಟ್ಟ. ಎಲ್ಲರು ಮೆಲ್ಲುತ್ತ ಮಾತನಾಡುತ್ತ ದಾರಿ ಸಾಗಿಸುತ್ತಿದ್ದರು. ಆದರೆ ನನ್ನ ಮನಸ್ಸು ಗಂಗಳ ನೆನಪಿನಲ್ಲೇ ಲೀನವಾಗಿತ್ತು. ಪುಣೆ ನಾಸಿಕ್ ಹೆದ್ದಾರಿ ಸಿಕ್ಕಮೇಲೆ ಗಾಡಿಗಳು ತುಂಬಾ ಜೋರಾಗಿ ಓಡತೊಡಗಿದವು. ಅವಳ ನೆನಪಲ್ಲೇ ನನಗೆ ನಿದ್ದೆ ಹತ್ತಿದಂತಾಗಿ ಕಣ್ಣು ಮುಚ್ಚಿದೆ. ಕಣ್ಣುತೆಗೆದಾಗ ಪುಣೆ ತಲುಪಿದ್ದೆವು. ಗುಂಡ ಮತ್ತು ರಾಮು ನನ್ನ ಕವನದ ಬಗ್ಗೆ ಕೇಳತೊಡಗಿದರು. ನಾನು ಬಾಲುವಿಗೆ ಭಾಷಾಂತರಿಸಲು ಹೇಳಿದೆ. ಕವಿತೆಯಿದ್ದ ಆಳೆಯನ್ನು ತೆಗೆದುಕೊಂಡು ಬಾಲು ತೆಲುಗಿನಲ್ಲಿ ಅವರಿಗೆ ಅರ್ಥ ಹೇಳುತ್ತಿದ್ದ. ಅಷ್ಟರಲ್ಲಿ ನಮ್ಮ ಮನೆ ಬಂತು. ನಾವೆಲ್ಲ ಬ್ಯಾಗ್ ತೆಗೆದುಕೊಂಡು ಇಳಿದು ಚಾಲಕ ಮಹೇಶ್ಗೆ ಧನ್ಯವಾದಗಳನ್ನ ತಿಳಿಸಿ ರಸ್ತೆಯಿಂದ ಕೊಂಚ ಒಳಗಡೆಯಿದ್ದ ಮನೆಯಕಡೆ ನಡೆಯತೊಡಗಿದೆವು. ಕವಿತೆಯ ಭಾಷಾಂತರ ಮುಗಿದ ಮೇಲೆ ಗುಂಡ ನೀ ಕವಿತ ನಾಕು ಬಾಗ ನಚ್ಚಿಂದಿ ಎಂದು ತೆಲುಗಿನಲ್ಲೇ ನನಗೆ ಹೇಳಿದ. ಸ್ಫೂರ್ತಿಯ ಚಿಲುಮೆ, ಒಲುಮೆಯ ಗೆಣತಿ ಗಂಗ ನನ್ನ ಮನದಲ್ಲಿದ್ದರೆ ಸಾಕು ಇಂತಹ ಸಾವಿರ ಕವಿತೆಗಳನ್ನು ರಚಿಸ ಬಲ್ಲೆ ಎಂದು ಹೇಳಿ ನಕ್ಕು ನನ್ನ ಕೋಣೆ ಸೇರಿದೆ.
ಕುಮಾರಸ್ವಾಮಿ.ಕಡಾಕೊಳ್ಳ (ಕುಕೂಊ...)
ಪುಣೆ
http://baaladaari.blogspot.com/
http://gubbacchi-goodu.blogspot.com/
Comments
ಉ: ಏರೇರಿ ನೋಡಿ ಬಂದೆ ಶಿವನೇರಿ
In reply to ಉ: ಏರೇರಿ ನೋಡಿ ಬಂದೆ ಶಿವನೇರಿ by ಅರವಿಂದ್
ಉ: ಏರೇರಿ ನೋಡಿ ಬಂದೆ ಶಿವನೇರಿ
ಉ: ಏರೇರಿ ನೋಡಿ ಬಂದೆ ಶಿವನೇರಿ
ಉ: ಏರೇರಿ ನೋಡಿ ಬಂದೆ ಶಿವನೇರಿ
In reply to ಉ: ಏರೇರಿ ನೋಡಿ ಬಂದೆ ಶಿವನೇರಿ by savithasr
ಉ: ಏರೇರಿ ನೋಡಿ ಬಂದೆ ಶಿವನೇರಿ
In reply to ಉ: ಏರೇರಿ ನೋಡಿ ಬಂದೆ ಶಿವನೇರಿ by kadakolla05
ಉ: ಏರೇರಿ ನೋಡಿ ಬಂದೆ ಶಿವನೇರಿ