ಇಂದು ಓದಿದ ವಚನ: ಘನ: ಘಟ್ಟಿವಾಳಯ್ಯ

ಇಂದು ಓದಿದ ವಚನ: ಘನ: ಘಟ್ಟಿವಾಳಯ್ಯ

ಭೂಮಿ ಘನವೆಂಬೆನೆ
ಪಾದಕ್ಕೊಳಗಾಯಿತ್ತು
ಗಗನ ಘನವೆಂಬೆನೆ
ಕಂಗಳಿಗೊಳಗಾಯಿತ್ತು
ಮಹವು ಘನವೆಂಬೆನೆ
ಮಾತಿಂಗೊಳಗಾಯಿತ್ತು
ಘನವೆಂಬುದಿನ್ನೆಲ್ಲಿಯದೆಲವೋ
ಅರಿವಿಂಗಾಚಾರವಿಲ್ಲ ಕುರುಹಿಂಗೆ ನೆಲೆಯಿಲ್ಲ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಎಂದೆನು

ಇದು ಘಟ್ಟಿವಾಳಯ್ಯನ ಇನ್ನೊಂದು ವಚನ.

ಭೂಮಿ ಘನವಲ್ಲ.  ಯಾಕೆಂದರೆ ಪಾದಕ್ಕೆ ಒಳಗಾಗುತ್ತದೆ ಅದು. ಆಕಾಶ ಘನವಲ್ಲ. ಯಾಕೆಂದರೆ ಪುಟ್ಟ ಕಣ್ಣಿನೊಳಗೇ ಅಡಗುತ್ತದೆ  ಅದು. ಮಹಾನ್' ಅನ್ನುವುದೂ ಘನವಲ್ಲ. ಯಾಕೆಂದರೆ ಅದು ಮಾತಿಗೆ ಒಳಪಡುತ್ತದೆ. ಹಾಗಿದ್ದ ಮೇಲೆ ಘನ ಅನ್ನುವುದು ಎಲ್ಲಿದೆ. ಘನ ಎಂಬುದು ಕೂಡ ಕಲ್ಪನೆಯೇ ಆಗಿರಬಹುದೇ?ಯಾಕೆಂದರೆ ಅರಿವಿಗೆ ಆಚಾರವಿಲ್ಲ, ಕುರುಹಿಗೆ ನೆಲೆ ಇಲ್ಲ ಎಂದು ಘಟ್ಟಿವಾಳಯ್ಯ ಕೇಳುತ್ತಾನೆ.

ಎಂಥ ದೊಡ್ಡ ಆಧ್ಯಾತ್ಮಿಕ ಕಲ್ಪನೆಯಾದರೂ ಅದು  ಮನುಷ್ಯ ಮನಸ್ಸಿನ, ದೇಹದ, ಭಾಷೆಯ ಮಿತಿಗೆ ಒಳಪಟ್ಟದ್ದೇ ಎಂದು ಹೇಳುತ್ತಾನೆ  ಘಟ್ಟಿವಾಳಯ್ಯ.

Rating
No votes yet

Comments