ಶ್ರೀ ಕೃಷ್ಣ ಕನ್ನಡಿಗನೇ?!

ಶ್ರೀ ಕೃಷ್ಣ ಕನ್ನಡಿಗನೇ?!

ನಮ್ಮ ಕನ್ನಡ ನಾಡಿನಲ್ಲಿ ಬಸವಣ್ಣ , ಅಲ್ಲಮಪ್ರಭುಗಳಂತ ಶರಣರು ಓಡಾಡಿದ್ದಾರೆ. ಇದೇ ಪರಂಪರೆಯ ಮಹದೇಶ್ವರ, ಸಿದ್ದಪ್ಪಾಜಿ, ಅಜ್ಜಯ್ಯ , ಮುಂತಾದ ಮಹಾನುಭಾವರು ಓಡಾಡಿದ್ದಾರೆ. ಇವರಿಗೆಲ್ಲರಿಗೂ ಇಂದು ದೈವತ್ಬ ಪ್ರಾಪ್ತಿಯಾಗಿದೆ. ನನ್ನಂತ ಕೆಲವರು ಇವರನ್ನು ನಮ್ಮ ನಿಮ್ಮಂತೆ ಮನುಷ್ಯರು ಅಂತ ಭಾವಿಸಿ ಅವರನ್ನು ಉಲ್ಲೇಖಿಸದರೂ / ಅವರ ಬಗ್ಗೆ ಮಾತನಾಡಿದರೂ, ಹಲವರ / ಜನಸಾಮಾನ್ಯರ ದೃಷ್ಟಿಯಲ್ಲಿ ಅವರು ದೇವರೇ.... ಮತ್ತು ಅವರು ಶಿವನ ಅವತಾರಿಗಳೇ... ಮತ್ತು ಶಿವರೇ!


ಇದು ನಮಗೆ ಇತಿಹಾಸ ಸಿಕ್ಕಲು ಶುರುವಾದ ದಿನಗಳ ನಂತರ ನಡೆದದ್ದು. ಅದಕ್ಕೂ ಮುಂಚೆ?!


ರಾಮಾಯಣ ಮಹಾಭಾರತ (ಜಯ ಪುರಾಣ)ಗಳನ್ನ ಇತಿಹಾಸ ಅಂತ ಹಲವರು ಹೇಳ್ತಾರೆ. ಇತಿಹಾಸ ಹೌದೋ ಅಲ್ವೋ .. ಅವಂತೂ ಮಹಾ ಕಾವ್ಯಗಳೆ ಸೈ.


ರಾಮಾಯಣದಲ್ಲಿ ( ಇದು ಇತಿಹಾಸಾಂತ ಭಾವಿಸೋಣ) ದೈವತ್ವ ಪ್ರಾಪ್ತಿಯಾಗಿದ್ದು ಇಬ್ಬರಿಗೆ. ರಾಮ ಮತ್ತು ಹನುಮಂತರಿಗೆ. ಲಕ್ಷ್ಮಣ ಮತ್ತು ಸೀತೆ ಸಣ್ಣದಾಗಿ ರಾಮನ ಜೊತೆ "ಫೋಟೋ" ಸೇರಿಕೊಂಡುಬಿಟ್ಟರು!.


ಮಹಾಭಾರತದಲ್ಲಿ ದೈವತ್ವ ಪ್ರಾಪ್ತಿಯಾಗಿದ್ದು ಕೃಷ್ಣನಿಗೆ ( ಮತ್ತಾರಿಗೆ ದೈವತ್ವ ಪ್ರಾಪ್ತಿಯಾಯ್ತು ಅಂತ ತಿಳಿದವರು ಬರೆಯಿರಿ.) ಇಂತ ಕೃಷ್ಣ ಕೇವಲ ಮನುಷ್ಯನೇ ಆಗಿದ್ದ. ( ಕೃಷ್ಣ ಮನುಷ್ಯ ಅಂತ ಭಾವಿಸುವವರು ಕೇವಲ ಅಜ್ಞಾನಿಗಳು , ಇತ್ಯಾದಿ ಇತ್ಯಾದಿ ಬರ್ಕೊಂಡಿರುವುದನ್ನು ಓದಿದ್ದೇನೆ :) ). ಮತ್ತು ನಮಗಿಂತ ತುಂಬ ಪ್ರಬಲ ವ್ಯಕ್ತಿತ್ವದ , ಬುದ್ದಿವಂತ ಚಾಣಾಕ್ಷ ವ್ಯಕ್ತಿಯಾಗಿದ್ದ. ತುಂಬ ರಂಗು ರಂಗಿನ ವ್ಯಕ್ತಿ!

ವೈಯಕ್ತಿಕವಾಗಿ ನಾನು ಕೃಷ್ಣನನ್ನು (ಮತ್ತೆ ಯಾವುದೇ ಸಾಕಾರ ರೂಪವನ್ನು) ದೇವರು ಅಂತ ಒಪ್ಪುವುದಿಲ್ಲವಾದರೂ ಈ ಕೃಷ್ಣ ಅನ್ನೋ ವ್ಯಕ್ತಿ ನನ್ನನ್ನು ಬಹು ವರ್ಷಗಳಿಂದಲೂ ಬಹಳವಾಗಿ ಆಕರ್ಷಿಸಿದ ವ್ಯಕ್ತಿ. ಈತನನ್ನು ಇಗ್ನೋರ್ ಮಾಡಿವುದು ಸ್ವಲ್ಪ ಕಷ್ಟವೇ.

ಇಂತ ಕೃಷ್ಣ ಕನ್ನಡಿಗನೇ ? ಅಂತ ಒಂದು ಬರಹ ತುಂಬ ಇಂದೇ ತರಂಗದಲ್ಲಿ ಪ್ರಕಟವಾಗಿತ್ತು. ಅವುಗಳ ಕೆಲ ಅಂಶಗಳನ್ನು ಸೇರಿಸಿಕೊಂಡು ಇಲ್ಲಿ ಬರೀತಾ ಇದ್ದೇನೆ.

ಕಾಣಾ..ಕಣಾ..ಕಣ್ಲಾ..ಕಣೆ ಬರಹದಲ್ಲಿ ಶ್ರೀನಿವಾಸ ವೀ. ಬ೦ಗೋಡಿ ಅವರು 'ಕೃಷ್ಣ ಕನ್ನಡಿಗನೇ? ಸ್ವಲ್ಪ ಇದರ ಬಗ್ಗೆ ಹೆಚ್ಚಿಗೆ ಹೇಳ್ತಿರಾ?' ಅಂತ ಕೇಳಿದರು. ಮಹೇಶ ಅವ್ರು ತಮ್ಮ ತರ್ಕವನ್ನು ಹರಿಬಿಟ್ರು. ಶ್ರೀಕಾಂತ್ ಮಿಶ್ರಿಕೋಟಿ ಅವ್ರು ಶಂಬಾ ಜೋಶಿವರ "ಕಂ" ಮಾಡಿನ ಬಗ್ಗೆ ಹೇಳಿದರು.


ಇದರ ಬಗ್ಗೆ ಸ್ವಲ್ಪ ವಿವರವಾಗಿ ಬರೀಬೇಕು ಅಂತ ಅನ್ಕೊಳ್ತಾನೆ ಇದ್ದೆ. ಈಗ ಸ್ವಲ್ಪ ಮೂಡ್ ಮತ್ತು ಸಮಯ ಸಿಕ್ಕಿದೆ. ನೋಡುವ... ಬರವಣಿಗೆ ಹೇಗೆ ಹೊರಬರುತ್ತೆ ಅಂತ!



ನಾನು ಮಹಾಭಾರತವನ್ನು (ಮತ್ತು ರಾಮಾಯಣವನ್ನು) ತುಂಬ ಅಂದ್ರೆ ತುಂಬ ಸಲವೇ ಓದಿದ್ದೇನೆ. .. ಕಡಿಮೆ ಅಂದ್ರೂ ಹತ್ತಾರು ಬಾರಿ!... ಆದ್ರೆ ಆಗ ನನಗೆ ಯಾವತ್ತೂ ಅಲ್ಲಿ ( ಮಹಾಭಾರತ ಕಥೆಯಲ್ಲಿ) ಕೃಷ್ಣ ಒಬ್ಬ ಮನುಷ್ಯನಾಗಿ ಕಂಡನೆ ಹೊರತು ಅತಿ ಮಾನುಶನಾಗಿ ಕಾಣಲಿಲ್ಲ. ಇದು ಹಲ ಓದುಗರ ಅನಿಸಿಕೆಯೂ ಇರಬಹುದು. ಮಹಾಭಾರತದಲ್ಲಿ ಚಿತ್ರಿತನಾದ ಕೃಷ್ಣ ಒಬ್ಬ ಮನುಷ್ಯ, ಒಬ್ಬ ರಾಜ ( king maker!). ಅಷ್ಟೆ!

ಇಂತ "ಮನುಷ್ಯ" ನಿಗೆ ಒಂದು ಭಾಷೆ ಇದ್ದೆ ಇರುತ್ತೆ. ಅದು ಅವನ, ಅವನ ಸಮಾಜದ ಭಾಷೆಯಾಗಿರುತ್ತೆ. ಅದು ಕನ್ನಡವಾಗಿತ್ತು ಅನ್ನುವುದೇ ಈ ಬರಹದ ಹಲ ಅಂಶಗಳ ಸಾರಾಂಶ!




ಮರಾಠಿ ಸಾಧು ಸಂತರಾದ ಜ್ಞಾನೇಶ್ವರ , ಏಕನಾಥ ಮುಂತಾದವರು ಕೃಷ್ಣನನ್ನು "ವಿಠಲ ಕರ್ನಾಟಕು ", "ಕಾನಡವೋ ಹೋ ವಿಠಲ ಕಾನಡ " ಎಂದು ಉದ್ಗರಿಸಿದ್ದಾರೆ.

ಪಂಡರಾಪುರದ ವಿಠಲನು ವಿಷ್ಣುವೆಂದೂ, ಕೃಷ್ಣನೆಂದೂ ಭಾಗವತರು ಪೂಜಿಸಿದ್ದರು / ಪೂಜಿಸುತ್ತಾ ಇದ್ದಾರೆ. ಪುರಂದರ ದಾಸರಂತೂ ತಮ್ಮ ಅಂಕಿತ ನಾಮದಲ್ಲೇ ಪುರಂದರ ವಿಠಲ ನನ್ನು ಸೇರಿಸಿಕೊಂಡು ಕೃಷ್ಣನ್ನು ಧ್ಯಾನಿಸಿದ್ದಾರೆ. ಇಲ್ಲಿ ಒಂದು ತರ್ಕ ಏನೆಂದರೆ ವಿಠಲ ಕನ್ನಡಿಗ ಅಂತ ಏಕನಾಥ ರಂತ ಸಂತರು ಭಾವಿಸಿದ್ದಾರೆ. ಅಂದ್ರೆ ( ವಿಠಲ ಮತ್ತು ಕೃಷ್ಣ ಒಬ್ಬರೇ ಆದರೆ) ಕೃಷ್ಣನು ಕನ್ನಡಿಗ ಅನ್ನೋ ಹಂಗಾಗುತ್ತೆ..



ಕ್ರಿಸ್ತ ಪೂರ್ವ ೫೦೦-೪೦೦ ವರ್ಷಗಳ ಹಿಂದೆ ಇದ್ದ ಪಾಣಿನಿ ತನ್ನ ಅಷ್ಟಾಧ್ಯಾಯಿ ಗ್ರಂಥದ ಒಂದು ಸೂತ್ರದಲ್ಲಿ ವಾಸುದೇವನನ್ನು ಪೂಜಿಸುತ್ತಿದ್ದ ಒಂದು ಪಂಗಡದವರಿದ್ದರು ಎಂದು ಸೂಚಿಸಿದ್ದಾನೆ. ಮುಂದೆ ಪಾಣಿನಿಯ ಈ ಗ್ರಂಥಕ್ಕೆ ಭಾಷ್ಯ (ಮಹಾ ಭಾಷ್ಯ?!) ಬರೆದ ಪತಂಜಲಿ ಮಹರ್ಷಿ (ಕ್ರಿ. ಪೂ. ೨೦೦ -೧೫೦ ) ವಾಸುದೇವ ಜನಪ್ರಿಯವಾದ ದೇವತೆ ಎಂದು ಹೇಳಿ, ಅಷ್ಟೆ ಅಲ್ಲದೆ ತಾನೆ ಕೃಷ್ಣನೆಂದು ಹೇಳಿದ್ದಾನೆ. ವಾಸುದೇವ ( ಕೃಷ್ಣ), ಬಲದೇವ (ಬಲರಾಮ) ಇಬ್ಬರೂ ವೃಷ್ಣಿ ವಂಶದವರೆಂದು ಹೇಳಿದ್ದಾನೆ.

ಬೌದ್ದರ "ನಿದ್ದೇಸ" ( ಕ್ರಿ ಪೂ ೪೦೦, ಪಾಳಿ ಭಾಷೆ ) ವಾಸುದೇವನಲ್ಲಿ ಭಕ್ತಿಯನ್ನಿಟ್ಟ ಪಂಥವೊಂದಿತ್ತೆಂದು ಹೇಳಿದೆ.

ಈಗ ದೊರೆತಿರುವ ಶಾಸನಗಳಲ್ಲಿ , ಕ್ರಿ ಪೂ ೩೦೦-೨೦೦ ವರ್ಷಗಳ ಮೊದಲು ಮದ್ಯಪ್ರದೇಶದ ವಿದಿಶೆ (ಭೂಪಾಲದ ಹತ್ತಿರ ) ಭಾಗವತ ಧರ್ಮದ ಕೇಂದ್ರವಾಗಿತ್ತೆಂದು ಹೇಳಲು ಆಧಾರಗಳಿವೆ. ದ್ವಾರಕೆ ಮಥುರೆ ಚಿತ್ತೂರು ಗಳಲ್ಲಿಯೂ ಕ್ರಿ ಪೂ ಮೊದಲು ಭಾಗವತ ಪಂಥಕ್ಕೆ ಸಂಬಂಧಿಸಿದ ಶಾಸನಗಳು ಸಿಕ್ಕಿವೆ.

ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಈ ವೃಷ್ಣಿ ಪಂಗಡದವರು ಆರ್ಯ ಸಮಾಜದಿಂದ ಹೊರಗಿದ್ದವರು ಅನ್ನೋದು. ಮತ್ತು ಈ ಆರ್ಯ ಸಮಾಜದಿಂದ ಹೊರಗಿದ್ದ ವೃಷ್ಣಿ , ಅಂಧಕ ಮುಂತಾದ ಪಂಗಡದವರೇ ಮೊದಲು ಭಾಗವತ ಪಂಥವನ್ನು ರೂಪಿಸಿ ರೂಡಿಗೆ ತಂದು ವಾಸುದೇವ ಕೃಷ್ಣ ನ ಪೂಜೆಗೆ ವಿಶೇಷ ಪ್ರೋತ್ಸಾಹವನ್ನು ಒದಗಿಸಿದರು ಎಂಬುದು.... ಇದು ಆಧುನಿಕ ಪಂಡಿತರ ತರ್ಕ.



ಕೃಷ್ಣನನ್ನು ಅನಾರ್ಯ ಅಂತ ಮೂದಲಿಸುವ ಮಾತು ಮಹಾಭಾರತದ ಸಂದರ್ಭದಲ್ಲಿ ಬರುತ್ತೆ. ( ಶಿಶುಪಾಲ ಹೇಳ್ತಾನೆ ಅನ್ನಿಸುತ್ತೆ .. ರಾಜಸೂಯ ಯಾಗದ ಕೊನೆಯಲ್ಲಿ... ಅಗ್ರ ಪೂಜೆ ಯಾರಿಗೆ ಸಲ್ಲಬೇಕು ಅನ್ನುವ ವಿಷಯಕ್ಕೆ ಬಂದಾಗ ....)


<
ಇಲ್ಲಿ ಕನ್ನಡ ದಕ್ಷಿಣದ ಭಾಷೆ ಮತ್ತು ಅದು ಅನಾರ್ಯ ಭಾಷೆಯಾಗಿತ್ತು ಅನ್ನುವುದನ್ನು ನಾವು ಗಮನಿಸಬೇಕು.



ಚರಿತ್ರೆಯಲ್ಲಿ ನಾವು ಯಾರನ್ನು ಅನಾರ್ಯ ಅಂತ ಕರೀತೀವೋ ಅವರು ಈ ದೇಶದ ಪೂರ್ವ ನಿವಾಸಿಗಳು ಅನ್ನೋ ವಾದ ಇದೆ. ( ಆರ್ಯ-ದ್ರಾವಿಡ ಅನ್ನೋ ವಾದ..Aryan invasion theory). ಅಂದರೆ ಆರ್ಯ ಜನಾಂಗ ಇಲ್ಲಿಗೆ ಬರುವ ಮುಂಚೆ ಇಲ್ಲಿ ಕೋಟೆ ಕೊತ್ತಲಗಳನ್ನು ನಿರ್ಮಿಸಿಕೊಂಡು ನಗರಗಳಲ್ಲಿಯೋ ಅತ್ವ ಕಾಡುಗಳಲ್ಲಿಯೋ ವಾಸಿಸುತ್ತಿದ್ದ ಜನಾಂಗ .ಬಹುಶ ಇವರನ್ನೇ ನಾವು ದ್ರಾವಿಡರು ಅಂತೀವೋ ಏನೋ?! .



ಕೃಷ್ಣ ಅನಾರ್ಯ .. ಅಂದ್ರೆ ವೇದ ಪೂರ್ವ ಜನಾಂಗ ದವನು**. ವೇದಗಳಲ್ಲಿ ಕೆಲ ಕಡೆ ಕೃಷ್ಣನನ್ನು ದಸ್ಯು ಅಂತ ಸಂಬೋಧಿಸಿದ್ದಾರೆ ಅಂತ ಓದಿದ್ದ ನೆನಪು. ಇಲ್ಲಿ ದಸ್ಯು ಆರ್ಯೇತರರಿಗೆ ಬಳಸುವ ಪದವೇ!

**ಸ್ವಲ್ಪ ಸಂಶಯ!. ಮೊದಲು ವೇದಗಳ ಕಾಲ... ಆಮೇಲೆ ಉಪನಿಷತ್ತುಗಳ ಕಾಲ, ಆಮೇಲೆ ರಾಮನ ಕಾಲ ( ರಾಮಾಯಣ ) ಮುಂದಕ್ಕೆ ಕೃಷ್ಣನ (ಮಹಾಭಾರತದ) ಕಾಲ ಆದ್ರೆ ಇಲ್ಲಿ ಕೃಷ್ಣ ಅನ್ನುವ ವ್ಯಕ್ತಿ ವೇದಗಳಲ್ಲಿಯೇ ಬರುತ್ತಾನೆ! .. ಬಹುಶ ನಂತರ ಜನರು ಕೃಷ್ಣನನ್ನು ವೇದಗಳಿಗೆ ಸೇರಿಸಿರಬಹುದು?!) .
{ಒಂದು ತರ್ಕದ ಪ್ರಕಾರ ....Aryan invasion theory ಪ್ರಕಾರ... ಮಹಾಭಾರತ ದ ನಂತರ ರಾಮಾಯಣ ನಡೆಯಿತು!} .



ಋಗ್ವೇದದ ಒಂದು ಮಂತ್ರದಲ್ಲಿ ( ೭- ೫ -೮೩) . ಭೇದನೆಂಬ ಅನಾರ್ಯ ರಾಜನಿಗೂ ಸುದಾಸನಿಗೂ ಯಮುನಾ ನದಿ ತೀರದಲ್ಲಿ ನಡೆದ ಯುದ್ಧದ ಪ್ರಸ್ತಾಪ ಇದೆ. ಯದು ರಾಜನೊಬ್ಬನು ಸುದಾಸನಿಗೆ ಸಹಾಯ ಮಾಡಿದ ವಿಷಯ ಅಲ್ಲಿ ದಾಖಲಾಗಿದೆ. ಮತ್ತು ಆ ಯದು ರಾಜನನ್ನು ಅನಾರ್ಯನೆಂದೆ ಆ ಮಂತ್ರ ಸೂಚಿಸುತ್ತದೆ ಯಂತೆ. ಯದುವಿನ ಮುಂದುವರಿದ ಸಂತಾನವೇ ಯಾದವರು ಎಂದು ಪುರಾಣಗಳು ಹೇಳುತ್ತವೆ. ( ಈ ಪುರಾಣಗಳಲ್ಲಿ ಸಾಕಷ್ಟು ಇತಿಹಾಸವೂ ಇದೆ ಅನ್ನುವುದನ್ನು ನಾವು ಗಮನಿಸಬೇಕು.)



ಋಗ್ವೇದದ ಇನ್ನೂ ಒಂದು ಮಂತ್ರದಲ್ಲಿ ( ೭-೧೮-೧೩) ಪರ ಭಾಷೆಯನ್ನು ಮಾತನಾಡುವ ಪೂರು, ಯದುವನ್ನು ವಿದಥ ದಲ್ಲಿ ಸೋಲಿಸೋಣ ಎಂದು ಪ್ರಾರ್ಥಿಸಲಾಗಿದೆ.


ನಿರುಕ್ತದಲ್ಲಿ ಯದವಃ ಶಬ್ದಕ್ಕೆ "ಕುಮಾರ್ಗದಲ್ಲಿದ್ದವರು" , "ಆಚಾರ್ಯ ಅತ್ವ ರಾಜನಿಂದ ಶಿಕ್ಷಿಸಲ್ಪಡುವವರು"
ಎಂದಿದೆ.

ಈ ತರ್ಕದ ಪ್ರಕಾರ ಯದುವಂಶ ತಿಲಕನಾದ ಕೃಷ್ಣ ಈ ಪರಭಾಷೆಯವರಾದ ಅನಾರ್ಯ ವಂಶದಲ್ಲಿ ಹುಟ್ಟಿ ಬಂದು ಚರಿತ್ರೆಯಲ್ಲಿ ಮಹಾ ಪುರುಷನಾದವನು.



ಆರ್ಯ ಜನಾಂಗದ ವೇದಕಾಲದ ಭಾಷೆ ವೇದಕಾಲೀನ ಸಂಸ್ಕೃತ. ಆದರೆ ಇವರಿಗೆ ಮೊದಲು ಇಲ್ಲಿದ್ದ ಜನಾಂಗದ ಭಾಷೆ ಯಾವುದು?. ವೇದ ಸಾಹಿತ್ಯದಲ್ಲಿ ಈ ಹೆಸರಿನ ಭಾಷೆಯ ಹೆಸರಿನ ಪ್ರಸ್ತಾಪವಿಲ್ಲ.

ಸಿಂಧು ನಾಗರೀಕತೆಯ ( ಸಿಂಧು - ಸರಸ್ವತಿ ನದಿ ತೀರದಿಂದ ಗುಜರಾತ್ ವರೆಗೆ ) ಅವಶೇಷದಲ್ಲ್ಲಿ ದೊರೆತಿರುವ ಮಣ್ಣಿನ ಫಲಕದಲ್ಲಿನ ಚಿತ್ರಲಿಪಿ ಸೂಚಿಸುವ ಭಾಷೆಯ ಬಗ್ಗೆ ಪಂಡಿತರಲ್ಲಿ ಒಮ್ಮತವಿಲ್ಲ. ಆದರೆ ಹೆನ್ರಿ ಹೆರಾಸ್
ಅವರು ಮೊಹೆಂಜೋದಾರೋ ಚಿತ್ರ ಲಿಪಿಯನ್ನು ಓದಿ ಅರ್ಥೈಸುವ ರೀತಿಯಲ್ಲಿ ಅಲ್ಲಿದ್ದ ಜನಾಂಗ ಕನ್ನಡರಾಗಿ ಪರಿಣಮಿಸುತ್ತಾರೆ. (ಹೆಚ್ಚಿನ ವಿವರಣೆ ಯಾರಾದರೂ ಸೇರಿಸಿ).

.........ಮುಂದುವರಿಯುತ್ತೆ

Rating
No votes yet

Comments