ಇಂದು ಓದಿದ ವಚನ: ಚಿಂತೆ ಎಂಬ ಹೂವಿನ ಗಿಡ: ಘಟ್ಟಿವಾಳಯ್ಯ
ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ
ಹೊಲಗೇರಿಯಲಿ ಬಿತ್ತುವನೆ ನೋಡಿರೆ
ಜಲಶೇಖರನ ಉದಕರವನೆರದಡೆ
ಆಸೆಯೆಂಬ ಹೂವ ಕೊಯ್ದು ಕಾಮಂಗೇರಿಸುವೆನು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ
ಚಿಂತೆಯನ್ನು ಯಾವ ಯಾವದಕ್ಕೋ ಹೋಲಿಸುವುದು ನೋಡಿದ್ದೇವೆ. ಆದರೆ ಇಲ್ಲಿ ಚಿಂತೆ ಅನ್ನುವುದು ಹೂವಿನ ಗಿಡವಾಗಿದೆ. ಅದೇ ಒಂದು ಆಶ್ಚರ್ಯವಲ್ಲವೇ. ಅದರ ಬಿತ್ತ ಹೊಲಗೇರಿಯಲ್ಲಿ ಅನ್ನುವಾಗ ವಿವಿಕಾರಗೊಂಡ ಮನಸ್ಸೇ ಹೊಲೆಯ ಎಂಬ ವಚನಕಾರರ ಮಾತು ನೆನೆದುಕೊಳ್ಳೋಣ. ಚಿಂತೆಯೆಂಬ ಹೂವಿನ ಗಿಡದ ಬೀಜ ಇರುವುದು ವಿಕಾರಗೊಂಡ ಮನಸ್ಸು ಎಂಬ ಹೊಲಗೇರಿಯಲ್ಲಿ. ಜಲಶೇಖರ (ಮೋಡ? ನೀರು ಎಂದರೆ ಮನಸ್ಸು ಅನ್ನುವ ಅರ್ಥವೂ ವಚನಗಳಲ್ಲಿರುವುದರಿಂದ ಮನಸ್ಸು? ಅಥವಾ ದೇವರ ತೀರ್ಥ?) ನೀರು ಎರೆದರೆ ಆಸೆ ಎಂಬ ಹೂ ಬಿಟ್ಟಿತ್ತು. ಚಿಂತೆ ಅನ್ನುವ ಹೂವಿನ ಗಿಡದಲ್ಲಿ ಬಿಡುವ ಹೂವಿನ ಹೆಸರು ಆಸೆ! ಆ ಹೂವನ್ನು ನಾನು ಕಾಮನಿಗೆ ಅರ್ಪಿಸಿದೆ ಅನ್ನುತ್ತಾನೆ.
ವಿಕಾರವೂ ಚಿಂತೆಯೂ ಆಸೆಯೂ ಕಾಮದ ಅಲಂಕಾರಗಳು. ಇಲ್ಲೆಲ್ಲ ದೇವರಿಗೆ ಏನೂ ಕೆಲಸವಿದ್ದಂತಿಲ್ಲ. ಅವನ ಅಂಕಿತಕ್ಕೆ ವಿಶೇಷ ಅರ್ಥ ಪ್ರಾಪ್ತವಾಗುತ್ತದೆ
ಘಟ್ಟಿವಾಳಯ್ಯ ರೂಪಕಗಳ ಮುಖಾಂತರ ದೊಡ್ಡಮ ನೋವೈಜ್ಞಾನಿಕ ಸತ್ಯವನ್ನೂ ಹೇಳುತ್ತಿರುವಂತಿದೆ.
[ಈ ತಿಂಗಳ ಕೊನೆಯವರೆಗೆ ತಿರುಗಾಟದಲ್ಲಿರುತ್ತೇನೆ. ಆದ್ದರಿಂದ ಸಂಪದ ಗೆಳೆಯರಿಗೆಲ್ಲ ಈಗಲೇ ಹೇಳಿಬಿಡುತ್ತೇನೆ-ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಕಳೆದ ವರ್ಷಕ್ಕಿಂತ ಸುಖ, ನೆಮ್ಮದಿ, ಶಾಂತಿ ತರಲಿ.]
Comments
ಉ: ಇಂದು ಓದಿದ ವಚನ: ಚಿಂತೆ ಎಂಬ ಹೂವಿನ ಗಿಡ: ಘಟ್ಟಿವಾಳಯ್ಯ
ಉ: ಇಂದು ಓದಿದ ವಚನ: ಚಿಂತೆ ಎಂಬ ಹೂವಿನ ಗಿಡ: ಘಟ್ಟಿವಾಳಯ್ಯ
ಉ: ಇಂದು ಓದಿದ ವಚನ: ಚಿಂತೆ ಎಂಬ ಹೂವಿನ ಗಿಡ: ಘಟ್ಟಿವಾಳಯ್ಯ