ಹರಿಹರಪುರ

ಹರಿಹರಪುರ

ಭಾಗ-೧
ಹರಿಹರಪುರ ಹೆಸರು ಕೇಳುತ್ತಲೇ ಶೃಂಗೇರಿಯ ಸಮೀಪದ ಹರಿಹರಪುರವೇ? ಎಂದು ಅನೇಕರು ನನ್ನನ್ನು ಕೇಳಿದ್ದುಂಟು. ನಮ್ಮೂರಿಗೆ ಶೃಂಗೇರಿಯೊಡನೆ ಒಂದು ಅವಿನಾಭಾವ ಸಂಬಂಧವಿರುವುದಂತೂ ನಿಜ. ಶೃಂಗೇರಿಯ ಪೂಜ್ಯ ಭಾರತೀ ತೀರ್ಥ ಶ್ರೀಗಳು ನಮ್ಮೂರಿಗೆ ಬಂದು ಇಲ್ಲಿನ ಉಡಿಸಲಮ್ಮ ದುರ್ಗಾಪರಮೇಶ್ವರಿ ದೇವಾಲಯದ ಪುನ: ಪ್ರತಿಷ್ಠೆ ಮಾಡಿದಮೇಲಂತೂ ಶಕ್ತಿ ದೇವತೆ ಉಡಿಸಲಮ್ಮನ ಮಹಿಮೆ ದೂರದ ಊರುಗಳಿಗೂ ಹಬ್ಬಿ ಪ್ರತಿನಿತ್ಯವೂ ಭಕ್ತರ ಮಹಾಪೂರವೇ ನಮ್ಮೂರಿಗೆ ಬರುತ್ತಿದೆ. ಹಾಸನ ಜಿಲ್ಲೆಯ ಹೊಳೇನರಸೀಪುರ ಎಂದಾಗ ದೇಶದ ಮಾಜಿ ಪ್ರಧಾನಿಗಳಾದ ದೇವೇಗೌಡರ ಹುಟ್ಟೂರು ಹರದನಹಳ್ಳಿ ನೆನಪಾಗುತ್ತದೆ. ಹರಿಹರಪುರವು ಹೊಳೇನರಸೀಪುರ ತಾಲ್ಲೂಕಿನ ಹಳೇ ಕೋಟೆ ಹೋಬಳಿಗೆ ಸೇರಿದ ಜೋಡಿಗ್ರಾಮ. ಹಳೇಕೋಟೆಯ ಪಕ್ಕದಲ್ಲಿಯೇ ಇರುವ ಮಾವಿನಕೆರೆಯು ರಂಗನಾಥನ ದೇವಾಲಯದಿಂದ ಪುಣ್ಯಕ್ಷೇತ್ರವಾಗಿದ್ದು ಅಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿ ಹರದನಹಳ್ಳಿ, ಅಲ್ಲಿಂದ ಮುಂದೆ ಐದು ಕಿಲೋ ಮೀಟರ್ ದೂರದಲ್ಲಿ ಹರಿಹರಪುರವೂ ಇದೆ. ಹರಿಹರಪುರವನ್ನು ಜನರು ಗುರುತಿಸುವುದು ಅಲ್ಲಿನ ಶಕ್ತಿದೇವತೆ ಉಡುಸಲಮ್ಮ ದುರ್ಗಾಪರಮೇಶ್ವರಿ ದೇವಾಲಯದಿಂದಲೇ. ಬೆಂಗಳೂರಿನಿಂದ ಚನ್ನರಾಯಪಟ್ಟಣ ಮಾರ್ಗವಾಗಿ ಹರಿಹರಪುರದ ಮೂಲಕವೇ ರಾಜ್ಯ ಸಾರಿಗೆ ಬಸ್ಸು ಗೊರೂರಿಗೆ ಹೋಗುತ್ತದೆ. ಹಾಸನದಿಂದಲೂ,ಹೊಳೇನರಸೀಪುರದಿಂದಲೂ ಬಸ್ ಸೌಕರ್ಯವಿದೆ. ಬೆಂಗಳೂರಿನಿಂದ ಸುಮಾರು ೧೬೦ ಕಿ.ಮೀ, ಹಾಸನದಿಂದ ೩೦ ಕಿ.ಮೀ, ಹಾಗೂ ಹೊಳೇ ನರಸೀಪುರದಿಂದ ೮ ಕಿ.ಮೀ. ದೂರದಲ್ಲಿ ಹರಿಹರಪುರವಿದೆ.
ಶಾಸನ ಏನು ತಿಳಿಸುತ್ತದೆ?
ವಿಜಯ ನಗರದ ಅರಸನಾದ ಎರಡನೇ ಹರಿಹರನು ಮಾಧವಾಧ್ವರಿ ಎಂಬ ಬ್ರಾಹ್ಮಣನಿಗೆ ಈ ಗ್ರಾಮವನ್ನು ದಾನವಾಗಿ ನೀಡಿರುವುದರಿಂದ ಇದಕ್ಕೆ ಹರಿಹರಪುರವೆಂದು ನಾಮಕರಣವಾಗಿದೆ. ಅಲ್ಲದೆ ಮಾಧವಾಧ್ವರಿಯ ನೆನಪಿನಲ್ಲಿ ಊರಿನಲ್ಲಿ ಸುಂದರವಾದ ಮಾಧವಕೃಷ್ಣ ದೇವಾಯಲವೂ ಇದೆ.
ಎರಡನೇ ಹರಿಹರ:
ಯಧುವಂಶದ ಸಾಲಿನಲ್ಲಿ’ ಸಂಗಮ"ನೆಂಬ ಅರಸು. ಅವನಿಗೆ ಹರಿಹರ, ಕಂಪರಾಯ,ಬುಕ್ಕಮಹೀಪತಿ,ಮಾರಪ, ಮತ್ತು ಮುದ್ದಪನೆಂಬ ಐದು ಜನ ಪುತ್ರರು. ಮಧ್ಯಮಪಾಂಡವ ಅರ್ಜುನನಂತೆ ಐವರಲ್ಲಿ ಮಧ್ಯಮನೇ ಬುಕ್ಕ ಮಹೀಪತಿ. ಅತ್ಯಂತ ಪರಾಕ್ರಮಿ. ಈತನ ಪತ್ನಿ ಗೌರಾಂಬಿಕಾ. ಬುಕ್ಕ-ಗೌರಾಂಬಿಕೆಯ ಪುತ್ರನೇ ಹರಿಹರ. ಈತನ ದೊಡ್ದಪ್ಪನೂ ಹರಿಹರನೇ ಆಗಿರುವುದರಿಂದ ಈತನನ್ನು ಎರಡನೇ ಹರಿಹರನೆಂದು ಕರೆಯಲಾಗಿದೆ. ಅಪ್ಪನಂತೆ ಮಗನೂ ಬಹು ಪರಾಕ್ರಮೀ ಹಾಗೂ ಮಹಾದಾನಿ. ದಾನ-ಧರ್ಮಗಳನ್ನು ಮಾಡುತ್ತಾ,ವಿದ್ವಾಂಸರುಗಳಿಗೆ ಗೌರವಿಸುತ್ತಾ ಅವರ ಪ್ರೀತಿಗೆ ಪಾತ್ರನಾಗಿದ್ದ.
ಮಾಧವಾಧ್ವರಿ ಗೆ ದಾನವಾಗಿ ಬಂದ ಹರಿಹರಪುರ:
ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ವಿದ್ವಾಂಸರುಗಳಲ್ಲಿ " ಮಾಧವಾಧ್ವರಿ " ಕೂಡ ಒಬ್ಬ. ಯಜುಶ್ಶಾಖೆಯ, ಆತ್ರೇಯಸ ಗೋತ್ರದ, ಆಪಸ್ತಂಭ ಸೂತ್ರಕ್ಕೆ ಸೇರಿದ ಕಲ್ಲುಮಾಳಿಗೆ ಕೇಶವರು ಇವನ ತಂದೆ. ಮಾಧವಾಧ್ವರಿಯು ಅತ್ಯಂತ ಶ್ರೋತ್ರೀಯನೂ, ಸದ್ಗುಣಸಂಪನ್ನನೂ, ಸಂತಸ್ವಭಾವದವನೂ, ತತ್ವಶಾಸ್ತ್ರ-ತರ್ಕಶಾಸ್ತ್ರ ಮತ್ತು ವ್ಯಾಕರಣಗಳಲ್ಲಿ ಮಹಾನ್ ವಿದ್ವಾಂಸನೂ ಆಗಿದ್ದನು. ಇಂತಹ ವಿದ್ವಾಂಸನನ್ನ ಗುರುತಿಸಿದ ಎರಡನೇ ಹರಿಹರ ಮಹಾರಾಜನು ಸೂರ್ಯದೇವನನ್ನು ತೃಪ್ತಿಪಡಿಸಲು ಶಾಲಿವಾಹನ ಶಖೆ ೧೩೧೭ ರ ಯುವನಾಮ ಸಂವತ್ಸರದ ಮಾಘ ಶುಕ್ಲ ಸಪ್ತಮಿ[ ರಥ ಸಪ್ತಮಿ] ದಿನದಂದು ಅಂದರೆ ೧೩೯೬ ನೇ ಇಸವಿ ಜನವರಿ ಹದಿನಾರರಂದು ಸೋಮವಾರ ತುಂಗಭದ್ರಾ ತೀರದ ಹಂಪೆಯ ವಿರೂಪಾಕ್ಷ ಸನ್ನಿಧಿಯಲ್ಲಿ ನಾರಸಿಂಹಪುರ ಸೀಮೆಗೆ ಸೇರಿದ "ತವನಿಧಿ" ಎಂಬ ಅಗ್ರಹಾರವನ್ನು " ಹರಿಹರಪುರ" ವೆಂದು ಪುನರ್ನಾಮಕರಣ ಮಾಡಿ ಹೊಸಹಳ್ಳಿ, ಶಿಗರಹಳ್ಳಿ, ಬೈರಹಳ್ಳಿ, ಮತ್ತು ಕಾಚನಹಳ್ಳಿ ಎಂಬ ಉಪಗ್ರಾಮಗಳ ಸಹಿತ ದಾನ ಮಾಡಿದನೆಂದು ಶಾಸನದಿಂದ ತಿಳಿದುಬರುತ್ತದೆ.ಕಾಲಕ್ರಮದಲ್ಲಿ ಉಪಗ್ರಾಮಗಳಲ್ಲಿ ಬದಲಾವಣೆಯಾಗಿರುವುದು ಕಂಡುಬರುತ್ತದೆ. ಮೂಲ ಅಗ್ರಹಾರವಾಗಿದ್ದ ತವನಿಧಿಯು ತವನಂದಿಯಾಗಿ, ಶಿಗರನಹಳ್ಳಿಯು ಸಿಗರನಹಳ್ಳಿಯಾಗಿ, ಬೈರಹಳ್ಳಿಯು ಬೀರನಹಳ್ಳಿಯಾಗಿ ಕರೆಯಪಡುತ್ತಿದೆ. ಹರಿಹರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗ ಬೋರನಹಳ್ಳಿ ಮತ್ತು ಚಾಕೇನಹಳ್ಳಿ ಎಂಬ ಎರಡುಹಳ್ಳಿಗಳು ಸೇರಲ್ಪಟ್ಟಿವೆ. ಶಾಸನದಲ್ಲಿರುವ ಕಾಚನಹಳ್ಳಿಯೇ ಇಂದಿನ ಚಾಕೇನಹಳ್ಳಿ ಇರಬಹುದೇ? ಅಥವಾ ಈಗ ಪಕ್ಕದ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿರುವ ಕಾಚೇನಹಳ್ಳಿ ಗ್ರಾಮವು ಅಂದು ಉಪಗ್ರಾಮವಾಗಿ ಹರಿಹರಪುರಕ್ಕೆ ಸೇರಿದ್ದಿರಬಹುದೇ ? ಎಂಬುದನ್ನು ಅಧ್ಯಯನ ಮಾಡಬೇಕಾಗಿದೆ.

ಭಾಗ-೨
ಈ ಮುಂದಿನ ವಿಚಾರಗಳೆಲ್ಲಾ ಏಳೂ ಹಳ್ಳಿಯ ಜನರು ಮನದಾಳದಿಂದ ನಂಬಿ ಬದುಕುತ್ತಿರುವ ವಿಚಾರ. ತರ್ಕಕ್ಕಾಗಿ ಓದಬಾರದಾಗಿ ಮೊದಲೇ ವಿನಂತಿಸುವೆ
ಏಳು ಹಳ್ಳಿಗಳಿಗೆ ಒಂದೇ ಗ್ರಾಮ ದೇವತೆ:
ಹರಿಹರಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಸಿಗರನಹಳ್ಳಿ,ತವನಂದಿ,ಬೋರನಹಳ್ಳಿ, ಅರೇಕಲ್ಲು ಹೊಸಹಳ್ಳಿ, ಚಾಕೇನಹಳ್ಳಿ ಮತ್ತು ಬೀರನಹಳ್ಳಿ ಎಂಬ ಹಳ್ಳಿಗಳಿವೆ. ಹರಿಹರಪುರವೂ ಸೇರಿದಂತೆ ಈ ಏಳೂ ಹಳ್ಳಿಗಳಿಗೂ ಒಬ್ಬಳೇ ಗ್ರಾಮ ದೇವತೆ-ಉಡಸಲಮ್ಮ ಅಥವಾ ದುರ್ಗಾಪರಮೇಶ್ವರಿ. ಈ ಏಳೂ ಹಳ್ಳಿಯ ಎಲ್ಲಾ ಜನರಿಗೂ ದೇವಿಯಲ್ಲಿ ಅಗಾಧ ಶ್ರದ್ಧಾ-ಭಕ್ತಿ. ಏನೊಂದು ಕೆಲಸ ಮಾಡಬೇಕಿದ್ದರೂ ದೇವಿಗೆ ಭಕ್ತಿಯಿಂದ ಕೈಮುಗಿದು ಕೆಲಸಕ್ಕೆ ಕೈ ಹಾಕಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಯಾರ ಮನೆಯಲ್ಲಿಯೇ ಆಗಲೀ ಮಕ್ಕಳ ವಿದ್ಯಾಭ್ಯಾಸ, ಅರೋಗ್ಯದ ವಿಷಯ, ಮದುವೆ, ಮುಂಜಿ, ನೌಕರಿ ಇತ್ಯಾದಿ ಯಾವ ಕೆಲಸವಾಗಲೀ ದೇವಿಯಿಂದಲೇ ಪರಿಹಾರ. ದೊಡ್ದದೊಡ್ದ ವ್ಯಾಪಾರ, ಉದ್ಯೋಗ ಇತ್ಯಾದಿಗಳಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾದರೆ ದೇವಿಯ ಅಪ್ಪಣೆ ಪಡೆದ ನಂತರವಷ್ಟೇ ಮುಂದಿನ ವಿಚಾರ.
ದೇವಿಯಲ್ಲಿ ಪ್ರಸಾದ ಕೇಳುವ ಭಕ್ತ:
ಇಲ್ಲಿನ ಜನರು ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗೆ ವಿಶಿಷ್ಠ. ಮದುವೆ, ವ್ಯಾಪಾರ,ಉದ್ಯೋಗಗಳಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾದ ಭಕ್ತನು ಸಾಮಾನ್ಯವಾಗಿ ಶುಕ್ರವಾರಗಳಲ್ಲಿ ಶುಚಿರ್ಬೂತನಾಗಿ ದೇವಾಲಯಕ್ಕೆ ಹೋಗುತ್ತಾನೆ. ತಾನು ಅಮ್ಮನಲ್ಲಿ ಪ್ರಸಾದ ಕೇಳಬೇಕೆಂದು ಅರ್ಚಕರಲ್ಲಿ ತಿಳಿಸುತ್ತಾನೆ. ಅರ್ಚಕರು ದೇವಿಗೆ ಅಭಿಶೇಕ ಮಾಡಿದ ನಂತರ ಅಲಂಕಾರ ಮಾಡುವಾಗ ಶಿಲೆಯ ಮೇಲೆ ದೇವಿಯು ಮೂಡಿಬಂದಿರುವುದರಿಂದ ದೇವಿಯ ಆಕಾರದ ಮೇಲೆ ಹೂ ಅಂಟಿಸುತ್ತಾರೆ.[ಕೆತ್ತಿರುವ ವಿಗ್ರಹವಲ್ಲ. ಚಿತ್ರವನ್ನು ಝೂಮ್ ಮಾಡಿನೋಡಿದಾಗ ದೇವಿಯ ರೂಪ ಚೆನ್ನಾಗಿ ಕಾಣುತ್ತದೆ] ನಂತರ ಒಮ್ಮೆ ಆರತಿ ಬೆಳಗುತ್ತಾರೆ. ಭಕ್ತನು ತನಗೆ ಆಗಬೇಕಾಗಿರುವ ಬಗ್ಗೆ ತನ್ನ ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡು ಆ ಕೆಲಸಕ್ಕೆ ಕೈ ಹಾಕ ಬೇಕಾದರೆ ಬಲಬದಿಯಲ್ಲಿ ಪ್ರಸಾದ ವಾಗಬೇಕೆಂದೂ ಬೇಡವೆನ್ನುವುದಾದರೆ ಎಡಬದಿಯಲ್ಲಿ ಪ್ರಸಾದ ವಾಗಬೇಕೆಂದೂ ಅಮ್ಮನಲ್ಲಿ ಕೋರುತ್ತಾನೆ. ಅರ್ಚಕರು ಅಮ್ಮನಿಗೆ ಮಂಗಳಾರತಿ ಮಾಡುತ್ತಾರೆ. ಭಕ್ತನು ತದೇಕ ಚಿತ್ತದಿಂದ ನೋಡುತ್ತಿರುತ್ತಾನೆ. ನೆರದಿರುವ ಭಕ್ತರೂ ಗಮನಿಸುತ್ತಿರುತ್ತಾರೆ. ಮಂಗಳಾರತಿ ಮಾಡಿದ ಮೇಲೆ ಮಂಗಳಾರತಿಯನ್ನು ದೂರವಿಟ್ಟು ಅರ್ಚಕರು ದೇವಿಯನ್ನು ಭಕ್ತರು ಪೂರ್ಣವಾಗಿನೋಡುವಂತೆ ಬೆಳಕು ಮಾಡುತ್ತಾರೆ. ನೋಡ ನೋಡುತ್ತಿದ್ದಂತೆಯೇ ದೇವಿಯ ವಿಗ್ರಹದ ಮೇಲಿಂದ ಹೂ ಕೆಳಗೆ ಬೀಳುತ್ತದೆ. ಹಲವು ಭಾರಿ ಒಂದು ಮಗ್ಗಲಿನ ಹತ್ತಾರು ಹೂಗಳು ಒಮ್ಮೆಲೇ ಉದುರಿದ ಉದಾಹರಣೆಯೂ ಉಂಟು. ಪ್ರಸಾದವು ಎಡಗಡೆಯಾದರೆ ಭಕ್ತನು ಆ ಕೆಲಸದಲ್ಲಿ ಮುಂದುವರೆಯುವುದಿಲ್ಲ ಬಲಗಡೆಯಾದರೆ ಮುಂದುವರೆಯುತ್ತಾನೆ, ಯಶಸ್ಸು ಪಡೆದು ಆನಂದದ ಜೀವನ ಸಾಗಿಸುತ್ತಾನೆ. ಹಿಂದೆ ಪ್ರತೀ ಶುಕ್ರವಾರ ಮಾತ್ರ ಪೂಜಿಸಲ್ಪಡುತ್ತಿದ್ದ ದೇವಿಗೆ ಈಗ ನಿತ್ಯಾರ್ಚನೆ. ಸಾಲು ಗಟ್ಟಿದ ಭಕ್ತರು. ಈಗಂತೂ ರಾಜ್ಯದ ಹಲವೆಡೆಗಳಿಂದ ಭಕ್ತರು ಬಂದು ದೇವಿಯ ದರ್ಶನ ಪಡೆದು ಸಾರ್ಥಕ್ಯ ಪಡೆಯುತ್ತಾರೆ. ಮುಂದಿನ ಭಾಗದಲ್ಲಿ ಇಲ್ಲಿ ನಡೆಯುವ ಜಾತ್ರೆ, ಕೆಂಡ-ಕೊಂಡ, ಸಿಡಿ ಬಗ್ಗೆ ಬರೆಯುವೆ. ಸಂಪದದ ಚಿತ್ರಪುಟದಲ್ಲಿ ಇದರ ಒಂದಿಷ್ಟು ಚಿತ್ರಗಳನ್ನು ಹಾಕುವೆ, ಈಗಾಗಲೇ ಕೆಲವನ್ನು ಹಾಕಿರುವೆ.
ಭಾಗ-೩:
ಭಕ್ತರ ಪೊರೆಯುವ ಉಡುಸಲಮ್ಮ:
[ಮಿತ್ರ ಶ್ರೀನಿವಾಸರ ಪ್ರತಿಕ್ರಿಯೆಗೆ ಉತ್ತರವಾಗಿ]
ಸಾಮಾನ್ಯವಾಗಿ ಅನೇಕ ಊರುಗಳಲ್ಲಿ ಉಡುಸಲಮ್ಮನ ದೇವಾಲಯಗಳಿವೆ. ಗ್ರಾಮವನ್ನು ಕಾಪಾಡುವ ಶಕ್ತಿ ದೇವತೆಗೆ ಎಲ್ಲಾ ಕಡೆಗಳಲ್ಲೂ ಉಡುಸಲಮ್ಮನೆಂದೇ ಕರೆಯುತ್ತಾರೆ. ಗ್ರಾಮೀಣ ಭಾಷೆಯಲ್ಲಿ ಉಡುಸಲಮ್ಮ ನೆಂದರೆ ಉದರವನ್ನು ಪೋಷಿಸುವವಳು, ಗ್ರಾಮವಾಸಿಗರನ್ನು ರಕ್ಷಿಸುವವಳು, ಹಸಿವು-ಬಾಯಾರಿಕೆ ನೀಗುವವಳು. ಊರಿಗೆ ಮಳೆ ಬೆಳೆ ಉಂಟುಮಾಡಿ ಸಮೃದ್ಧಿಯಿಂದ ಇರುವಂತೆ ನೋಡಿಕೊಳ್ಳುವವಳು. ಮಕ್ಕಳಿಗೆ ರೋಗರುಜಿನವು ಬಾರದಂತೆ ತಡೆಯುವವಳು. ದೇವಿಯ ಹೊಟ್ಟೆ ತಣ್ಣಗಿದ್ದರೆ ಊರೆಲ್ಲಾ ತಂಪು-ಎಂದೇ ತಿಳಿದಿರುವ ಜನರು ಅಮ್ಮನಿಗೆ ಮಾಡಿಸುವ ನೈವೇದ್ಯ ಮೊಸರನ್ನ. ಪಾನಕ. ರೈತನು ಬೆಳೆದ ಬೆಳೆಯ ಮೊದಲಪಾಲನ್ನು ದೇವಿಗೆ ಅರ್ಪಿಸಿ ಕೃತಾರ್ಥನಾಗುತ್ತಿದ್ದನೆಂದು ಹಿಂದಿನವರು ತಿಳಿಸುತ್ತಾರೆ.ಸಾಮಾನ್ಯವಾಗಿ ಹಳ್ಳಿಯ ರೈತರು ಬಾಳೆಹಣ್ಣು ,ಬೆಲ್ಲ, ಜೇನು, ತುಪ್ಪ,ತೆಂಗಿನಕಾಯಿ ಯನ್ನು ತಂದು ಹಣ್ಣು-ತುಪ್ಪ [ರಸಾಯಿನ] ಮಾಡಿ ದೇವಿಗೆ ನೈವೇದ್ಯ ಮಾಡುವುದು ರೂಢಿ. ಹರಿಹರಪುರದ ತೇರು-ಜಾತ್ರೆ, ಕೆಂಡ-ಕೊಂಡ, ಸಿಡಿ, ಚೋಮನಕುಣಿತ, ಮುಂತಾದ ವಿವರಣೆಗಳನ್ನೊಳಗೊಂಡಂತೆ ಪ್ರತ್ಯೇಕ ಬ್ಲಾಗ್ ಬರಹ ಬರೆಯುವೆ.

Rating
No votes yet

Comments